IPL 2025: ಪಂಜಾಬ್ ವಿರುದ್ದ ಅರ್ಧಶತಕ ಸಿಡಿಸಿ ಡೇವಿಡ್ ವಾರ್ನರ್ ದಾಖಲೆ ಮುರಿದ ವಿರಾಟ್ ಕೊಹ್ಲಿ!
Virat Kohli Breaks David Warner Record: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾ ಮಾಜಿ ಆರಂಭಿಕ ಡೇವಿಡ್ ವಾರ್ನರ್ ದಾಖಲೆಯನ್ನು ಮುರಿದಿದ್ದಾರೆ. ವಿರಾಟ್ ಕೊಹ್ಲಿ 8 ಶತಕಗಳು ಹಾಗೂ 59 ಅರ್ಧಶತಕಗಳನ್ನು ಸಿಡಿಸಿದ್ದಾರೆ. ವಾರ್ನರ್ 4 ಶತಕ ಹಾಗೂ 62 ಅರ್ಧಶತಕಗಳು ಸೇರಿ 66 ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ.



ಆರ್ಸಿಬಿಗೆ 7 ವಿಕೆಟ್ ಭರ್ಜರಿ
ಭಾನುವಾರ ಚಂಡೀಗಢದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಪಂಜಾಬ್ ವಿರುದ್ಧ ಬೆಂಗಳೂರಿನ ಸೋಲಿನ ಸೇಡನ್ನು ತೀರಿಸಿಕೊಂಡಿತು. ಅಲ್ಲದೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

158 ರನ್ಗಳನ್ನು ಚೇಸ್ ಮಾಡಿದ ಆರ್ಸಿಬಿ
ಪಂಜಾಬ್ ಕಿಂಗ್ಸ್ ನೀಡಿದ್ದ 158 ರನ್ಗಳ ಗುರಿಯನ್ನು ಹಿಂಬಾಲಿಸಿದ್ದ ಆರ್ಸಿಬಿ ತಂಡ, ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅರ್ಧಶತಕಗಳ ಬಲದಿಂದ 18.5 ಓವರ್ಗಳಿಗೆ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆದ್ದು ಸಂಭ್ರಮಿಸಿತು. ಆ ಮೂಲಕ ಬೆಂಗಳೂರು ತಂಡ ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ಯಶಸ್ವಿಯಾಗಿ ಚೇಸ್ ಮಾಡಿತು.

ವಿರಾಟ್ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ಆರ್ಸಿಬಿ ತಂಡದ ಪರ ಚೇಸಿಂಗ್ನಲ್ಲಿ ಗಮನ ಸೆಳೆದಿದ್ದು ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್. ಪಡಕ್ಕಲ್ 61 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕೊನೆಯವರೆಗೂ ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ ಅಜೇಯ 73 ರನ್ಗಳನ್ನು ಬಾರಿಸಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

59ನೇ ಅರ್ಧಶತಕ ಸಿಡಿಸಿದ ಕೊಹ್ಲಿ
ಪಂಜಾಬ್ ಕಿಂಗ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿ ಜೀವನದ 59ನೇ ಅರ್ಧಶತಕವನ್ನು ಸಿಡಿಸಿದರು. ಇದರ ಜೊತೆಗೆ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ನಲ್ಲಿ ಈಗಾಗಲೇ 8 ಶತಕಗಳನ್ನು ಬಾರಿಸಿದ್ದಾರೆ. ಇವರು ಐಪಿಎಲ್ ಟೂರ್ನಿಯಲ್ಲಿ ಒಟ್ಟು 8326 ರನ್ಗಳನ್ನು ಪೂರ್ಣಗೊಳಿಸಿದ್ದಾರೆ.

ಡೇವಿಡ್ ವಾರ್ನರ್ ದಾಖಲೆ ಮುರಿದ ಕೊಹ್ಲಿ
ಪಂಜಾಬ್ ವಿರುದ್ದ 73 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ 67 ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ದಿಗ್ಗಜ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಮುರಿದಿದ್ದಾರೆ. ವಾರ್ನರ್ ಐಪಿಎಲ್ನಲ್ಲಿ 66 ಬಾರಿ (4 ಶತಕ, 62 ಅರ್ಧಶತಕ) 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

13000 ಟಿ20 ರನ್ ಗಳಿಸಿದ್ದ ಕೊಹ್ಲಿ
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 13000 ರನ್ಗಳನ್ನು ಪೂರ್ಣಗೊಳಿಸಿದ್ದರು. ಆ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಐದನೇ ಬ್ಯಾಟ್ಸ್ಮನ್. ಕ್ರಿಸ್ ಗೇಲ್ ಅಗ್ರ ಸ್ಥಾನದಲ್ಲಿದ್ದರೆ, ಅಲೆಕ್ಸ್ ಹೇಲ್ಸ್, ಶೋಯೆಬ್ ಮಲಿಕ್ ಹಾಗೂ ಕೈರೊನ್ ಪೊಲಾರ್ಡ್ ಅಗ್ರ ಐದರಲ್ಲಿದ್ದಾರೆ.