DC vs PBKS: ಸಮೀರ್ ರಿಝ್ವಿ ಸ್ಪೋಟಕ ಬ್ಯಾಟಿಂಗ್ನಿಂದ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್!
DC vs PBKS Match Highlights: ಸಮೀರ್ ರಿಝ್ವಿ (58 ರನ್) ಅವರ ಸ್ಪೋಟಕ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ, 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ 6 ವಿಕೆಟ್ಗಳ ಗೆಲುವು ಪಡೆಯಿತು. ಪಂಜಾಬ್ ಕಿಂಗ್ಸ್ ಸೋಲಿನಿಂದ ಆರ್ಸಿಬಿಗೆ ಅಗ್ರ ಎರಡು ಸ್ಥಾನವನ್ನು ಅಲಂಕರಿಸಲು ಹಾದಿ ಸುಲಭವಾಗಿದೆ.
-
ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 66ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಡೆಲ್ಲಿ ಮೊದಲ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಪಂಜಾಬ್ ಕಿಂಗ್ಸ್: 206-8
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಪಂಜಾಬ್ ಕಿಂಗ್ಸ್ ತಂಡ, ತನ್ನ ಪಾಲಿನ 20 ಓವರ್ಗಳಿಗೆ 8 ವಿಕೆಟ್ಗಳ ನಷ್ಟಕ್ಕೆ 206 ರನ್ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 207 ರನ್ಗಳ ಸವಾಲು ದಾಯಕ ಗುರಿಯನ್ನು ನೀಡಿತ್ತು.
ಶ್ರೇಯಸ್ ಅಯ್ಯರ್ ಅರ್ಧಶತಕ
ಪಂಜಾಬ್ ಕಿಂಗ್ಸ್ ತಂಡದ ಪರ ಬ್ಯಾಟಿಂಗ್ನಲ್ಲಿ ಗಮನ ಸೆಳೆದ ನಾಯಕ ಶ್ರೇಯಸ್ ಅಯ್ಯರ್, 34 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 53 ರನ್ಗಳನ್ನು ಕಲೆ ಹಾಕಿದ್ದರು. ಇವರ ಬಳಿಕ ಸ್ಪೋಟಕ ಬ್ಯಾಟ್ ಮಾಡಿದ್ದ ಮಾರ್ಕಸ್ ಸ್ಟೋಯ್ನಿಸ್ ಅವರು ಕೇವಲ 16 ಎಸೆತಗಳಲ್ಲಿ ಅಜೇಯ 44 ರನ್ಗಳನ್ನು ಬಾರಿಸಿದ್ದಾರೆ. ಜಾಶ ಇಂಗ್ಲಿಸ್ ಕೇವಲ 12 ಎಸೆತಗಳಲ್ಲಿ 32 ರನ್ಗಳನ್ನು ಬಾರಿಸಿದ್ದರು.
ಮುಸ್ತಾಫಿಝುರ್ ರೆಹಮಾನ್ಗೆ 3 ವಿಕೆಟ್
ಡೆಲ್ಲಿ ಕ್ಯಾಪಿಟಲ್ಸ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದ ಮುಸ್ತಾಫಿಝುರ್ ರೆಹಮಾನ್ ಅವರು ನಾಲ್ಕು ಓವರ್ಗಳಿಗೆ 33 ರನ್ ನೀಡಿ ಪ್ರಮುಖ 3 ವಿಕೆಟ್ಗಳನ್ನು ಕಬಳಿಸಿದ್ದರು. ಇವರಿಗೆ ಸಾಥ್ ನೀಡಿದ್ದ ವಿಪ್ರಜ್ ನಿಗಮ್ ಮತ್ತು ಕುಲ್ದೀಪ್ ಯಾದವ್ ತಲಾ ಎರಡೆರಡು ವಿಕೆಟ್ ಕಿತ್ತಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ಗೆ 6 ವಿಕೆಟ್
207 ರನ್ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಸಮೀರ್ ರಿಝ್ವಿ ಸ್ಪೋಟಕ ಅರ್ಧಶತಕದ ಬಲದಿಂದ 19.3 ಓವರ್ಗಳಿಗೆ 4 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ 6 ವಿಕೆಟ್ಗಳ ಗೆಲುವು ದಾಖಲಿಸಿತು. ಈ ಜಯದೊಂದಿಗೆ ಡೆಲ್ಲಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿತು.
ಸಮೀರ್ ರಿಝ್ವಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಸಮೀರ್ ರಿಝ್ವಿ, ಕೇವಲ 25 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ 58 ರನ್ ಸಿಡಿಸಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕರುಣ್ ನಾಯರ್ 44 ರನ್ ಗಳಿಸಿದ್ದರೆ, ಕೆಎಲ್ ರಾಹುಲ್ 35 ರನ್ ಕಲೆ ಹಾಕಿದ್ದರು.