ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಸಿರು ಇಂಧನ ವಲಯದಲ್ಲಿ 400 ಬಿಲಿಯನ್ ಡಾಲರ್ ಹೂಡಿಕೆ ಹರಿವಿನ ನಿರೀಕ್ಷೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮಾಹಿತಿ

Pralhad Joshi: BRES 2026 ಭಾರತದಲ್ಲಿ ಈವರೆಗೆ ನಡೆದ ನವೀಕರಿಸಬಹುದಾದ ಇಂಧನ ವಲಯದ ಅತಿದೊಡ್ಡ ಕಾರ್ಯಕ್ರಮವಾಗಿದೆ. ಪರ್ಯಾಯ ಇಂಧನ ವಲಯದಲ್ಲಿ ಭಾರತದ ಮಹತ್ಸಾಧನೆಗೆ ಬೆರಗಾಗಿ 400 ಬಿಲಿಯನ್ ಡಾಲರ್ ಅಷ್ಟು ಹೂಡಿಕೆ ಹರಿವು ಬರುವ ನಿರೀಕ್ಷೆಯಿದೆ. ಈಗಾಗಲೇ 220 ಬಿಲಿಯನ್ ಡಾಲರ್ ಅಷ್ಟು ಒಪ್ಪಂದಗಳು ಆಗಿವೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಹಸಿರು ಇಂಧನ ವಲಯದಲ್ಲಿ 400 ಬಿಲಿಯನ್ ಡಾಲರ್ ಹೂಡಿಕೆ ನಿರೀಕ್ಷೆ: ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (ಸಂಗ್ರಹ ಚಿತ್ರ) -

Profile
Siddalinga Swamy Nov 5, 2026 10:56 PM

ನವದೆಹಲಿ, ನ.05: ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತ ವಿಶ್ವದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ್ದು, ಹಸಿರು ಇಂಧನ ವಲಯಕ್ಕೆ 400 ಬಿಲಿಯನ್ ಡಾಲರ್ ಹೂಡಿಕೆಯ ಹರಿವು ನಿರೀಕ್ಷಿಸಲಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದರು. ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ವಿಶ್ವದ 135ಕ್ಕೂ ಹೆಚ್ಚು ರಾಷ್ಟ್ರಗಳು ಭಾರತವನ್ನು ಮಾದರಿಯಾಗಿ ಅನುಸರಿಸುತ್ತಿವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಸೌರಶಕ್ತಿ ಭಾರತದಲ್ಲಿ ಒಂದು ಬೃಹತ್ ಜನಾಂದೋಲನವಾಗಿ ರೂಪುಗೊಂಡಿದೆ. ಇದು ಜಾಗತಿಕ ಮಟ್ಟದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.

ದೇಶದಲ್ಲಿ ಪ್ರಸ್ತುತ 65 ಲಕ್ಷ ಮನೆಗಳ ಮೇಲೆ ಸೌರ ಮೇಲ್ಛಾವಣಿ ಅಳವಡಿಸಿದ್ದು, ಈಗಾಗಲೇ 21 ಲಕ್ಷ ಕುಟುಂಬಗಳು ಶೂನ್ಯ ವಿದ್ಯುತ್ ಬಿಲ್ ಪಡೆಯುತ್ತಿವೆ. ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗೆ ಮಾರಾಟ ಮಾಡುವುದರಿಂದ ಒಟ್ಟಾರೆ ₹700 ಕೋಟಿ ಆದಾಯವನ್ನೂ ಪಡೆದಿದ್ದಾರೆ ಸೌರ ಶಕ್ತಿ ಫಲಾನುಭವಿಗಳು ಎಂದು ಸಚಿವರು ಅಂಕಿ ಅಂಶ ಸಹಿತ ವಿವರಿಸಿದರು.

800 GW ಶುದ್ಧ ಇಂಧನ ಉತ್ಪಾದನೆ ಗುರಿ

2030-35ರ ವೇಳೆಗೆ ಭಾರತ ಮಹತ್ವಾಕಾಂಕ್ಷೆಯ 800 GW ಶುದ್ಧ ಇಂಧನ ಉತ್ಪಾದನೆ ಗುರಿ ಹೊಂದಿದೆ. ಈ ಹಿಂದಿನ 500 Gw ಗುರಿಯನ್ನು ನಿಗದಿತ ಅವಧಿಗೂ ಮುನ್ನವೇ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ಭಾರತ 100 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸಾಧಿಸಲು ಈ ಹಿಂದೆ ದಶಕಗಳನ್ನೇ ತೆಗೆದುಕೊಂಡಿತ್ತು. ಆದರೆ ಈಗ 2024 ರಿಂದ 2026ರವರೆಗೆ ಕೇವಲ ಎರಡೇ ವರ್ಷದಲ್ಲಿ 3ನೇ 100 gw ಸಾಮರ್ಥ್ಯವನ್ನು ಸಾಧಿಸಿದೆ. ಅಗಾಧ ವಿಸ್ತರಣೆ ವೇಗವನ್ನು ಹೆಚ್ಚಿಸಿಕೊಂಡಿದೆ ಎಂದು ಹೇಳಿದರು.

ಜಾಗತಿಕ ಶೃಂಗಸಭೆ ಅಭೂತಪೂರ್ವ ಯಶಸ್ಸು

ದೆಹಲಿಯ ಭಾರತ್ ಮಂಟಪದಲ್ಲಿ ನಾಲ್ಕು ದಿನಗಳ ಕಾಲ ನಡೆದ BRES 2026 ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದೆ. ವಿಶ್ವದಾದ್ಯಂತದ ಹೂಡಿಕೆದಾರರು, 135 ರಾಷ್ಟ್ರಗಳ ಪ್ರತಿನಿಧಿಗಳು ಮತ್ತು ಉದ್ಯಮ ದಿಗ್ಗಜರು ಭಾಗವಹಿಸಿದ್ದರು. 75,000ಕ್ಕೂ ಹೆಚ್ಚು ಸಂದರ್ಶಕರು, 8 ಪಾಲುದಾರ ದೇಶಗಳು ಮತ್ತು 32 ಅಂತಾರಾಷ್ಟ್ರೀಯ ಸಚಿವರು ಈ ಸಮಾವೇಶದಲ್ಲಿ ಭಾಗಿಯಾಗಿದ್ದು ಹಸಿರು ಇಂಧನ ಬದ್ಧತೆಯಲ್ಲಿ ಭಾರತ ಜಾಗತಿಕ ಮನ್ನಣೆ ಗಳಿಸಿರುವುದಕ್ಕೆ ಸಾಕ್ಷಿಯಾಗಿತ್ತು ಎಂದು ಸಂತಸ ಹಂಚಿಕೊಂಡರು.

ಅತಿದೊಡ್ಡ ಸಮಾವೇಶ

BRES 2026 ಭಾರತದಲ್ಲಿ ಈವರೆಗೆ ನಡೆದ ನವೀಕರಿಸಬಹುದಾದ ಇಂಧನ ವಲಯದ ಅತಿದೊಡ್ಡ ಕಾರ್ಯಕ್ರಮವಾಗಿದೆ ಎಂದ ಸಚಿವರು, ಪರ್ಯಾಯ ಇಂಧನ ವಲಯದಲ್ಲಿ ಭಾರತದ ಮಹತ್ಸಾಧನೆಗೆ ಬೆರಗಾಗಿ 400 ಬಿಲಿಯನ್ ಡಾಲರ್ ಅಷ್ಟು ಹೂಡಿಕೆ ಹರಿವು ಬರುವ ನಿರೀಕ್ಷೆಯಿದೆ. ಈಗಾಗಲೇ 220 ಬಿಲಿಯನ್ ಡಾಲರ್ ಅಷ್ಟು ಒಪ್ಪಂದಗಳು ಆಗಿವೆ ಎಂದು ಹೇಳಿದರು.

ಸೌರಶಕ್ತಿಯಿಂದ 30 ಲಕ್ಷ ರೈತರ ಸಬಲೀಕರಣ: ಪ್ರಲ್ಹಾದ್ ಜೋಶಿ

ಭಾರತದ ಸೌರಶಕ್ತಿ ಸಾಮರ್ಥ್ಯಕ್ಕೆ ನಿಬ್ಬೆರಗಾದ ವಿದೇಶಗಳು ಪಾಲುದಾರಿಕೆ ಹೆಚ್ಚಿಸಿಕೊಳ್ಳುತ್ತಿವೆ. ಈಗಾಗಲೇ 8 ಲಕ್ಷ ಟನ್ ಹೈಡ್ರೋಜನ್‌ಗೆ ಬೇಡಿಕೆಯಿಟ್ಟಿವೆ. ಯುರೋಪಿಯನ್ ರಾಷ್ಟ್ರಗಳ ಜತೆ ಇತರೆ ದೇಶಗಳೂ ಹಸಿರು ಇಂಧನದ ಭಾರತದ ಬದ್ಧತೆಗೆ ಪೂರಕವಾಗಿ ಕೈಜೋಡಿಸುತ್ತಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.