ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀರಾವರಿ ಯೋಜನೆಗಳಿಗೆ ಆರ್ಥಿಕ ನೆರವು, ಬರ ಪರಿಹಾರ ಬಿಡುಗಡೆ ಮಾಡಿ: ಪ್ರಧಾನಿ ಮೋದಿಗೆ ಸಿಎಂ ಡಿಕೆಶಿ ಪತ್ರ

ರಾಜ್ಯದ ರೈತರ ತುರ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರ್ನಾಟಕದಿಂದ ಸರ್ವಪಕ್ಷಗಳ ನಿಯೋಗದೊಂದಿಗೆ ಭೇಟಿ ಮಾಡುವುದಾಗಿ ಪ್ರಧಾನಿಗಳಿಗೆ ಪತ್ರದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿ ಹಿನ್ನೆಲೆ ಬರ ಪರಿಹಾರ ಬಿಡುಗಡೆಗಾಗಿ ಅವರು ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿಗೆ ಸಿಎಂ ಡಿಕೆಶಿ ಪತ್ರ; ಬರ ಪರಿಹಾರ ಬಿಡುಗಡೆಗೆ ಮನವಿ

-

Prabhakara R
Prabhakara R Nov 5, 2026 11:06 PM

ಬೆಂಗಳೂರು: ಬೆಂಗಳೂರಿನ ಮೂಲಭೂತ ಸೌಕರ್ಯ ಅಗತ್ಯತೆಗಳಿಗಾಗಿ ವಿಶೇಷ ಆರ್ಥಿಕ ಪ್ಯಾಕೇಜ್‌, ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುಮೋದನೆ, ಆರ್ಥಿಕ ನೆರವು, ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ, ಬೆಂಗಳೂರಿನಲ್ಲಿ ಪ್ರಸ್ತಾವಿತ ಎಐ (AI) ವಿಶ್ವವಿದ್ಯಾಲಯ ಸ್ಥಾಪನೆ, ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲು ಹಾಗೂ ಬರ ಪರಿಹಾರ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ಪತ್ರ ಬರೆದಿದ್ದಾರೆ.

ರಾಜ್ಯದ ರೈತರು ಮತ್ತು ಜನರ ತುರ್ತು ಸಮಸ್ಯೆಗಳನ್ನು ಚರ್ಚಿಸಲು ಕರ್ನಾಟಕದಿಂದ ಸರ್ವಪಕ್ಷಗಳ ನಿಯೋಗದೊಂದಿಗೆ ಭೇಟಿ ಮಾಡುವುದಾಗಿ ಪ್ರಧಾನಿಗಳಿಗೆ ಪತ್ರದಲ್ಲಿ ಸಿಎಂ ಅವರು ತಿಳಿಸಿದ್ದಾರೆ.

ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಿ

ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಮೇಕೆದಾಟು ಯೋಜನೆ, ಕಳಸಾ-ಬಂಡೂರಿ, ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳಿಗೆ ಅಗತ್ಯವಿರುವ ಅನುಮೋದನೆಗಳನ್ನು ಮತ್ತು ಒಪ್ಪಿಗೆಗಳನ್ನು ತ್ವರಿತಗೊಳಿಸಬೇಕಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಮತ್ತು ಪರಿಷ್ಕೃತ ನೀರಾವರಿ ಲಾಭದ ಯೋಜನೆ (AIBP) ಅಡಿಯಲ್ಲಿ ನಾವು ಕೇಂದ್ರಕ್ಕೆ ಹಲವಾರು ಪ್ರಸ್ತಾವನೆಗಳನ್ನು ಸಲ್ಲಿಸಿದ್ದು, ಅನುಮೋದನೆಗಾಗಿ ಕಾಯುತ್ತಿದ್ದೇವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು.

ಕರ್ನಾಟಕದಲ್ಲಿ ಒಟ್ಟು 101.10 ಲಕ್ಷ ಗ್ರಾಮೀಣ ಕುಟುಂಬಗಳಿದ್ದು, ಜಲ ಜೀವನ್ ಮಿಷನ್ ಆರಂಭವಾದಾಗ 24.51 ಲಕ್ಷ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿತ್ತು. 2026ರ ಸೆಪ್ಟೆಂಬರ್ ವೇಳೆಗೆ, ರಾಜ್ಯವು 90.61 ಲಕ್ಷ ಕಾರ್ಯಾತ್ಮಕ ಮನೆಗಳ ನಳದ ಸಂಪರ್ಕಗಳನ್ನು (FHTCs) ಸಾಧಿಸಿದೆ, ಇದು ಶೇಕಡಾ 89.52 ರಷ್ಟನ್ನು ತಲುಪಿದೆ. ಆದರೆ, ಅಂತರ್ಜಲ ಕುಸಿಯುತ್ತಿರುವುದರಿಂದ, ನೀರಿನ ಕೊರತೆ ಇರುವ ಜನವಸತಿ ಪ್ರದೇಶಗಳಿಗೆ ಸುಸ್ಥಿರ ಕುಡಿಯುವ ನೀರನ್ನು ಒದಗಿಸಲು ರಾಜ್ಯವು ಜಲ ಜೀವನ್ ಮಿಷನ್ ಅಡಿಯಲ್ಲಿ 160 ಹೊಸ ಬಹುಗ್ರಾಮ ಯೋಜನೆಗಳನ್ನು (MVS) ನಮ್ಮ ಸರ್ಕಾರ ಯೋಜಿಸಿದೆ. ಆದ್ದರಿಂದ, ಬಾಕಿ ಇರುವ ಮೊತ್ತವನ್ನು ತ್ವರಿತ ಗತಿಯಲ್ಲಿ ಬಿಡುಗಡೆ ಮಾಡುವುದನ್ನು ಖಚಿತಪಡಿಸಬೇಕು.



ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕು

ಕರ್ನಾಟಕವು ಅಪಾರ ಪ್ರತಿಭೆ, ಸೃಜನಶೀಲತೆ ಮತ್ತು ಸಾಮರ್ಥ್ಯ ಹೊಂದಿರುವ ಯುವ ಜನತೆ ಹೊಂದಿದೆ. ನಮ್ಮ ಸರ್ಕಾರವು ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಬಲಪಡಿಸಲು ಶ್ರಮಿಸುತ್ತಿದೆ. ರಾಜ್ಯದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಉತ್ತಮ ವೈದ್ಯಕೀಯ ಸೇವೆ ಮತ್ತು ಶಿಕ್ಷಣವನ್ನು ಒದಗಿಸಲು ರಾಯಚೂರಿನಲ್ಲಿ ಏಮ್ಸ್ (AIIMS) ಸ್ಥಾಪಿಸಬೇಕು. ಇನ್ನು ಬೆಂಗಳೂರಿನಲ್ಲಿ ಭಾರತದ ಮತ್ತು ಬಹುಶಃ ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ನಾನು ಘೋಷಿಸಿದ್ದೇನೆ. ಈ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಪಾಲುದಾರರಾಗಲು ಹಾಗೂ ಸಹ-ಹಣಕಾಸು ಒದಗಿಸಲು ಭಾರತ ಸರ್ಕಾರವನ್ನೂ ಕೋರುತ್ತೇವೆ.

ರಾಜ್ಯಾದ್ಯಂತ 240 ತಾಲೂಕುಗಳ ಪೈಕಿ 237 ತಾಲೂಕುಗಳು (ಶೇ. 99) ಸತತ ಮೂರು ಅಥವಾ ಅದಕ್ಕಿಂತ ಹೆಚ್ಚು ವಾರಗಳ ಕಾಲ ಮಳೆಯಿಲ್ಲದೆ ಒಣ ಅವಧಿಯನ್ನು ಅನುಭವಿಸಿವೆ. ಬೆಳೆ ಬೆಳೆಯುವ ನಿರ್ಣಾಯಕ ಹಂತಗಳಲ್ಲಿ ಈ ಒಣ ಹವೆ ಮುಂದುವರಿದಿರುವುದು ತೇವಾಂಶದ ಒತ್ತಡವನ್ನು ಗಣನೀಯವಾಗಿ ಹೆಚ್ಚಿಸಿದೆ. ರಾಜ್ಯದ ದೊಡ್ಡ ಭಾಗಗಳಲ್ಲಿ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅಲ್ಲದೇ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಿಸುವ ನಿರೀಕ್ಷೆಯಿರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ.

ಸರ್ವಪಕ್ಷಗಳ ನಿಯೋಗ ಭೇಟಿ ಸಮಯಾವಕಾಶ ನೀಡಿ

ಇನ್ನು ರಾಜ್ಯದ ಸರ್ವಪಕ್ಷಗಳ ನಿಯೋಗವು ನಿಮಗೆ ಅನುಕೂಲವಾದ ಸಮಯದಲ್ಲಿ ನಿಮ್ಮನ್ನು ಭೇಟಿ ಮಾಡಲು ಸಮಯಾವಕಾಶ ಕಲ್ಪಿಸುವಂತೆ ಕೋರುತ್ತೇನೆ. ನಾವು ತುರ್ತು ಕಳವಳದ ಎರಡು ವಿಷಯಗಳ ಕುರಿತು ಚರ್ಚಿಸಲು ಬಯಸುತ್ತೇವೆ.

ಮೊದಲನೆಯದಾಗಿ, ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿಯ ಕುರಿತು ನಿಮಗೆ ಮಾಹಿತಿ ನೀಡಲು ಮತ್ತು ರಾಜ್ಯ ಸರ್ಕಾರಕೈಗೊಂಡಿರುವ ಪರಿಹಾರ ಕಾರ್ಯಗಳ ಬಗ್ಗೆ ತಿಳಿಸಲು ಬಯಸುತ್ತೇವೆ. ಅಲ್ಲದೆ ಮನವಿಯಲ್ಲಿರುವ ಕೆಲವು ಪ್ರಮುಖ ಅಂಶಗಳನ್ನು ನಿಮ್ಮ ಮುಂದಿಟ್ಟು ಅನುದಾನ ಬಿಡುಗಡೆಯನ್ನು ತ್ವರಿತಗೊಳಿಸುವಲ್ಲಿ ನಿಮ್ಮ ಹಸ್ತಕ್ಷೇಪವನ್ನು ಕೋರಲು ಬಯಸುತ್ತೇವೆ.

ಎರಡನೆಯದಾಗಿ ಈ ಹಿಂದೆ ತಿಳಿಸಿದಂತೆ, ಕಬ್ಬು ಕಡಿಯುವ ಹಂಗಾಮು ಈಗಾಗಲೇ ವಿಳಂಬವಾಗಿದೆ ಮತ್ತು ಕಬ್ಬಿನ ಬೆಳೆಗಾಗಿ ಹೆಚ್ಚಿನ ಹಣವನ್ನು ನೀಡುವಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ತಂಡವು ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿ ರೈತರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ಈ ವಿಷಯದ ಕುರಿತು ನಿಮಗೆ ವಿವರಣೆ ನೀಡಲು ಮತ್ತು ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳ ಮಾಡುವ ಮೂಲಕ ಅವರ ಆದಾಯವನ್ನು ಹೆಚ್ಚಿಸಲು ನಿಮ್ಮ ಸಹಾಯವನ್ನು ಕೋರಲು ನಮ್ಮ ನಿಯೋಗವು ಬಯಸುತ್ತದೆ ಪತ್ರದಲ್ಲಿ ಸಿಎಂ ತಿಳಿಸಿದ್ದಾರೆ.