Basavaraj Bommai: ರಾಜಕೀಯ ರೊಟ್ಟಿ ಸುಟ್ಟುಕೊಳ್ಳಲು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದಾರೆ: ಬಸವರಾಜ ಬೊಮ್ಮಾಯಿ
congress guarantees: ತಮ್ಮ ರಾಜಕೀಯ ರೊಟ್ಟಿ ಸುಟ್ಟುಕೊಳ್ಳಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪ್ರಾಮಾಣಿಕವಾಗಿ ಜನರಿಗೆ ಅನುಕೂಲ ಮಾಡಲು ಅಲ್ಲ. ಆಡಳಿತ ಪಕ್ಷದ ಶಾಸಕರೇ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ ಅಂತ ಹೇಳುತ್ತಿದ್ದಾರೆ. ಇವರು ಬಂದ ಮೇಲೆ ಸುಮಾರು ಮೂರುವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅವರ ಅವಧಿ ಮುಗಿಯುವಷ್ಟರಲ್ಲಿ ಆರು ಲಕ್ಷ ಕೋಟಿ ಸಾಲವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ) -
ಗದಗ (ಮುಂಡರಗಿ), ನ.22: ಬೂತ್ ಮಟ್ಟದಲ್ಲಿ ಸಂಘಟನೆ ಪರ್ವವನ್ನು ಆರಂಭಿಸಿ ಪಕ್ಷವನ್ನು ಬೇರು ಸಮೇತ ಗಟ್ಟಿಯಾಗಿ ಬೆಳೆಸಿ ರಾಜ್ಯ ಸಕಾರದ ವಿರುದ್ಧ ಹೋರಾಟ ಮಾಡಿ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದರೆ, ಜನರು ಬಿಜೆಪಿಗೆ ಆಶೀರ್ವಾದ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಬಿಜೆಪಿ ಮುಂಡರಗಿ ಮಂಡಲ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮುಂಡರಗಿ ತಾಲೂಕು ಬಹಳ ವೈಶಿಷ್ಟ್ಯ ಪೂರ್ಣವಾಗಿರುವಂಥದ್ದು ಇಲ್ಲಿನ ಮಣ್ಣು, ನೀರು, ಗಾಳಿ ವಿಶೇಷವಾಗಿದೆ. ತೋಟಗಾರಿಕೆಗೆ ಹೇಳಿ ಮಾಡಿಸಿರುವಂಥದ್ದು. ಕೆಲವು ಭಾಗದಲ್ಲಿ ಬಹಳಷ್ಟು ಮಳೆಯ ಅಭಾವದಿಂದ ಒಣ ಬೇಸಾಯಕ್ಕೆ ಸಮಸ್ಯೆ ಇತ್ತು. ಒಂದು ಕಾಲದಲ್ಲಿ ಅತಿ ಹೆಚ್ಚು ಪ್ಲೋರೆಸಿಸ್ ಇರುವ ತಾಲೂಕು ಅಂತ ಇತ್ತು. ಈಗ ಎಲ್ಲವೂ ಕಡಿಮೆಯಾಗಿದೆ. ಆದರೂ, ಅಭಿವೃದ್ಧಿ ಆಗಬೇಕಿದೆ. ಅದಕ್ಕಾಗಿ ನನೆಗುದಿಗೆ ಬಿದ್ದಿದ್ದ ಸಿಂಗಟಾಲೂರು ಏತ ನೀರಾವರಿಯನ್ನು ಎಸ್. ಎಸ್. ಪಾಟೀಲರು, ಎಂಪಿ ಪ್ರಕಾಶರು ಇದ್ದಾಗ ಆರಂಭ ಆಗಿತ್ತು. ಈ ಯೋಜನೆಯ ವ್ಯಾಪ್ತಿಯನ್ನು ನೋಡಿದಾಗ ನೀರು ಸಾಲುವುದಿಲ್ಲ ಅಂತ ಇತ್ತು ಕಾಂಗ್ರೆಸ್ ಸರ್ಕಾರ ಐದು ವರ್ಷ ಏನೂ ಮಾಡಲಿಲ್ಲ. ನಾನು ನೀರಾವರಿ ಸಚಿವನಾಗಿ ಬಂದು 18 ಟಿಎಂಸಿ ನೀರು ನಿಗದಿ ಮಾಡುವಂತೆ ಹೇಳಿ ಅದನ್ನು ನ್ಯಾಯಮಂಡಳಿಯಲ್ಲಿ ಒಪ್ಪಿಗೆ ಪಡೆದೆವು. ಮುಂಡರಗಿ ತಾಲೂಕಿನ ಬಹುತೇಕ ಭಾಗ ನೀರಾವರಿ ಆಗಿಲ್ಲ. ಮೈಕ್ರೊ ನೀರಾವರಿ ಮಾಡಲು ಪಯತ್ನ ಮಾಡಿದ್ದೇವು. ಅದಕ್ಕೆ ರೈತರು ಸಹಕಾರ ಕೊಡಲಿಲ್ಲ. ಈಗ ಮಧ್ಯಪದೇಶದಲ್ಲಿ ಹೊಸ ಮಾದರಿ ಮೈಕ್ರೊ ನೀರಾವರಿ ಪದ್ಧತಿ ಬಂದಿದೆ. ಅದನ್ನು ಇಲ್ಲಿ ಜಾರಿಗೆ ತಂದು ಎಲ್ಲ ಹೊಲಗಳಿಗೂ ನೀರು ಹರಿಸುವ ಕೆಲಸ ಮಾಡುತ್ತೇನೆ ಎಂದರು.
ಜನವಿರೋಧಿ ಸರ್ಕಾರ
ಕಳೆದ ಚುನಾವಣೆಯಲ್ಲಿ ಹಲವಾರು ತಾಲೂಕುಗಳಲ್ಲಿ ನಾವು ಗೆಲ್ಲುವ ಶಕ್ತಿ ಕಳೆದುಕೊಂಡೆವು ಅದರ ಪರಿಣಾಮ ರಾಜ್ಯದಲ್ಲಿ ಅತ್ಯಂತ ಜನ ವಿರೋಧಿ ಸರ್ಕಾರ ಬಂದಿದೆ. ಎರಡೂವರೆ ವರ್ಷ ಅಧಿಕಾರ ನಡೆಸಿ ಗ್ಯಾರಂಟಿಗಳನ್ನೂ ಸರಿಯಾಗಿ ಕೊಡುತ್ತಿಲ್ಲ. ತೆರಿಗೆಯಿಂದ ಬಂದಿರುವ ಜನರ ದುಡ್ಡನ್ನು ಜನರಿಗೆ ಹಂಚಲು ಸರ್ಕಾರವೇ ಬೇಕಿಲ್ಲ. ತಮ್ಮ ರಾಜಕೀಯ ರೊಟ್ಟಿ ಸುಟ್ಟುಕೊಳ್ಳಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪ್ರಾಮಾಣಿಕವಾಗಿ ಜನರಿಗೆ ಅನುಕೂಲ ಮಾಡಲು ಅಲ್ಲ. ಆಡಳಿತ ಪಕ್ಷದ ಶಾಸಕರೇ ಯಾವುದೇ ರೀತಿಯ ಅಭಿವೃದ್ಧಿ ಆಗಿಲ್ಲ ಅಂತ ಹೇಳುತ್ತಿದ್ದಾರೆ. ಇವರು ಬಂದ ಮೇಲೆ ಸುಮಾರು ಮೂರುವರೆ ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅವರ ಅವಧಿ ಮುಗಿಯುವಷ್ಟರಲ್ಲಿ ಆರು ಲಕ್ಷ ಕೋಟಿ ಸಾಲವಾಗಲಿದೆ ಎಂದು ಆರೋಪಿಸಿದರು.
ಇದನ್ನೂ ಓದಿ | ರಾಜ್ಯ ಸರ್ಕಾರದ ಅಧಿಕಾರ ದಾಹದಲ್ಲಿ ಜನತೆ ಅನಾಥ: ಬಸವರಾಜ ಬೊಮ್ಮಾಯಿ ಟೀಕೆ
ರಾಜ್ಯದ ಜನತೆಯ ಮೇಲೆ ಅಬಕಾರಿ, ಸ್ಟ್ಯಾಂಪ್ ಡ್ಯೂಟಿ, ಪೆಟ್ರೋಲ್ ಸೆಸ್ ಸೇರಿ ಪ್ರತಿ ವರ್ಷ ಒಂದು ಲಕ್ಷ ಕೋಟಿ ರೂ. ಹೊಸ ತೆರಿಗೆ ಹಾಕುತ್ತಿದ್ದಾರೆ. ಇಷ್ಟೆಲ್ಲ ಆದರೂ, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರಿಗೆ ಗೌರವ ಧನ ಸಿಗುತ್ತಿಲ್ಲ. ಗುತ್ತಿಗೆದಾರರಿಗೆ ಸರಿಯಾಗಿ ಹಣ ಕೊಡುತ್ತಿಲ್ಲ. ರೈತರನ್ನು ಸಂಪೂರ್ಣ ಮರೆತಿದ್ದಾರೆ. ನಾನು ಸಿಎಂ ಇದ್ದಾಗ ರೈತರ ಮಕ್ಕಳಿಗೆ ವಿದ್ಯಾನಿಧಿ ವಿದ್ಯಾರ್ಥಿ ವೇತನ ನೀಡುವ ಯೋಜನೆ ಮಾಡಿದ್ದೆ. ರೈತರ ಪಂಪ್‌ಸೆಟ್‌ಗೆ ಡಿಸೆಲ್ ಸಬ್ಸಿಡಿ ಕೊಟ್ಟಿದ್ದೆ, ರೈತರಿಗೆ ಗೊಬ್ಬರ ಬೀಜಕ್ಕೆ 10 ಸಾವಿರ ರೂ. ಕೊಡುತ್ತಿದ್ದೆ. ಇವರು ರೈತರ ಹೊಲಗಳ ಟಿಸಿಗಳಿಗೆ 3 ಲಕ್ಷ ರೂ. ಮಾಡಿದ್ದಾರೆ. ಈ ಸರ್ಕಾರದ ಮೊದಲ ಆದೇಶವೇ ರೈತರ ವಿರೋಧಿಯಾಗಿದೆ. ರೈತರ ಯಾವುದೇ ಬೆಳೆಗಳಿಗೆ ಬೆಲೆ ಇಲ್ಲ. ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ಕೊಡುತ್ತಿಲ್ಲ. ಮೆಕ್ಕೆಜೋಳ ಬೆಳೆದ ರೈತರಿಗೆ ಸೂಕ್ತ ಬೆಲೆ ಕೊಡುತ್ತಿಲ್ಲ. ಬೆಳೆ ಹಾನಿ ಸಮೀಕ್ಷೆಯನ್ನೂ ಸರಿಯಾಗಿ ಮಾಡಿಲ್ಲ. ಮುಂಡರಗಿ ತಾಲೂಕಿನಲ್ಲಿ ಬೆಳೆ ಹಾನಿಯೇ ಆಗಿಲ್ಲ ಎಂದು ವರದಿ ಕೊಟ್ಟಿದ್ದಾರೆ. ಮುಂಡರಗಿ ತಾಲೂಕಿನ ರೈತರಿಗೆ ಈ ಸರ್ಕಾರ ಬಹಳ ದೊಡ್ಡ ಅನ್ಯಾಯ ಮಾಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಯಾರೂ ತಲೆ ಕೆಡಿಸಿಕೊಂಡಿಲ್ಲ. ಈ ಭಾಗದ ರೈತರಿಗೆ ಈ ಸರ್ಕಾರ ಇದ್ದೂ ಸತ್ತಂತೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ನಾವು ವಿರೋಧ ಪಕ್ಷದಲ್ಲಿ ಇದ್ದುಕೊಂಡು ಜನ ವಿರೋಧಿ ಕೆಲಸಗಳನ್ನು ಜನರಿಗೆ ತಿಳಿಸಿ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಆ ಕೆಲಸ ಮಾಡಬೇಕೆಂದರೆ ಪಕ್ಷ ಸದೃಢವಾಗಿರಬೇಕು. ಬೂತ್ ಮಟದ ಸಮಿತಿ ಬಹಳ ಮುಖ್ಯ, ಶಕ್ತಿ ಕೇಂದ್ರ ಗಟ್ಟಿಯಾಗಿರಬೇಕು. ಮಂಡಳ ಗಟ್ಟಿಯಾಗಿರಬೇಕು. ನಿರಂತರ ಪಕ್ಷದ ಚಟುವಟಿಕೆ ಇರಬೇಕು. ಜನರಿಗೆ ಎಲ್ಲಿ ಅನ್ಯಾಯವಾಗುತ್ತದೆ ಅಲ್ಲಿ ಬಿಜೆಪಿ ಕಾರ್ಯಕರ್ತರು ಇರಬೇಕು. ಬೂತ್ ಮಟ್ಟದಲ್ಲಿ ಸಂಘಟನೆ ಪರ್ವವನ್ನು ಆರಂಭಿಸಬೇಕು. ಪಕ್ಷವನ್ನು ಬೇರು ಸಮೇತ ಗಟ್ಟಿಯಾಗಿ ಬೆಳೆಸಿ ಈ ಸರ್ಕಾರದ ವಿರುದ್ಧ ಹೋರಾಟ ಮಾಡಿ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದರೆ ಜನರು ನಮಗೆ ಆಶೀರ್ವಾದ ಮಾಡುತ್ತಾರೆ. ಎಲ್ಲ ವರ್ಗದ ಜನರಿಗೆ ಅವಕಾಶಗಳನ್ನು ನೀಡಬೇಕು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಎಲ್ಲರೂ ಒಗ್ಗಟ್ಟಾಗಿ ರೈತರು, ದಲಿತರ ಪರವಾಗಿ ಹೋರಾಟ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಸ್ಥಳಿಯ ಬಿಜೆಪಿ ಮುಖಂಡರು ಹಾಜರಿದ್ದರು.