ಪಾಟ್ನಾ: ಒಂದು ಕಡೆ ಬಿಹಾರ ವಿಧಾನಸಭಾ ಚುನಾವಣಾ (Bihar Assembly Election) ಕಣ ರಂಗೇರುತ್ತಿದ್ದರೆ ಮತ್ತೊಂದು ಕಡೆ ಈ 3 ಹಳ್ಳಿಗಳ ಗ್ರಾಮಸ್ಥರು ನಾವು ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಗಯಾದಿಂದ (Gaya) ಸುಮಾರು 150 ಕಿಲೋ ಮೀಟರ್ ದೂರದಲ್ಲಿರುವ ಪತ್ರಾ (Pathra), ಹೆರ್ಹಂಜ್ (herhanj) ಮತ್ತು ಕೆವಾಲ್ದಿಹ್‌ನ (kewaldih) ಗ್ರಾಮಸ್ಥರು ಕಳೆದ 77 ವರ್ಷಗಳಿಂದ ಸೇತುವೆಗಾಗಿ ಬೇಡಿಕೆ ಇಡುತ್ತಿದ್ದು, ಇದು ಇನ್ನೂ ಈಡೇರಿಲ್ಲ. ಇದರಿಂದ 8,000ಕ್ಕೂ ಹೆಚ್ಚು ಗ್ರಾಮಸ್ಥರು ನದಿ ದಾಟಲು ಪರದಾಡುವಂತಾಗಿದೆ.
ಸೇತುವೆ ನಿರ್ಮಿಸುವವರೆಗೆ ನಾವು ಮತ ಚಲಾಯಿಸುವುದಿಲ್ಲ. 77 ವರ್ಷಗಳಿಂದ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ. ರಾಜಕಾರಣಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಭರವಸೆಗಳನ್ನು ಈಡೇರುವುದಿಲ್ಲ. ನಮಗೆ ಅಭಿವೃದ್ಧಿ ಎಂದರೆ ಸೇತುವೆ ನಿರ್ಮಾಣ ಎಂದು ಗ್ರಾಮದ ಮಹಿಳಾ ಮತದಾರರು ಹೇಳಿದ್ದಾರೆ.
ಇದನ್ನೂ ಓದಿ: Tsunami Alert: ಜಪಾನ್‌ನಲ್ಲಿ 6.8 ತೀವ್ರತೆಯ ಭೂಕಂಪ; ಭಾರೀ ಸುನಾಮಿಯ ಎಚ್ಚರಿಕೆ
ವರ್ಷದಲ್ಲಿ ನಾಲ್ಕು ತಿಂಗಳ ಕಾಲ ಈ ಗ್ರಾಮಗಳು ಉಳಿದ ಪ್ರದೇಶಗಳಿಂದ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಳ್ಳುತ್ತವೆ. ಎದೆ ಮಟ್ಟದ ನೀರಿನಲ್ಲಿ ಗ್ರಾಮಸ್ಥರು ಪ್ರತಿನಿತ್ಯ ಓಡಾಡಬೇಕು. ದಿನಸಿಗಾಗಿ ಸ್ಥಳೀಯ ಮಾರುಕಟ್ಟೆಗೂ ಹೋಗುವುದು, ಮಕ್ಕಳು ಶಾಲೆಗೆ ಹೋಗುವುದು, ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು, ಅಸ್ವಸ್ಥರನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗುವುದು ಕೂಡ ಸಾಧ್ಯವಾಗುವುದಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.
ಈ ಗ್ರಾಮದಲ್ಲಿ ಅಗತ್ಯವಾಗಿ ಬೇಕಾದ ಆರೋಗ್ಯ ಸೇವೆ ಕೂಡ ಇಲ್ಲ. ಪತ್ರಾ ಗ್ರಾಮದ ಸುನಿಲ್ ವಿಶ್ವಕರ್ಮ ಎಂಬವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದೆ ನದಿಯ ದಡದಲ್ಲೇ ಸಾವನ್ನಪ್ಪಿದ್ದರು. ಆಂಬ್ಯುಲೆನ್ಸ್ ಇರಲಿಲ್ಲ. ಅವರು ಸಾಯುವ ಮೊದಲು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನಾವು ಖಾಸಗಿ ವಾಹನವನ್ನು ಬಾಡಿಗೆಗೆ ಪಡೆದಿದ್ದೆವು. ಆದರೆ ನದಿಯು ಇನ್ನೊಂದು ದಡದಲ್ಲಿತ್ತು ಎಂದು ವಿಶ್ವಕರ್ಮ ಅವರ ತಾಯಿ ತಿಳಿಸಿದ್ದಾರೆ.
ಗರ್ಭಿಣಿಯರು ನದಿ ದಾಟಿದ ಬಳಿಕ 39 ಕಿಲೋ ಮೀಟರ್ ದೂರದಲ್ಲಿರುವ ಆಸ್ಪತ್ರೆಗಳಿಗೆ ಹೋಗುವ ದಾರಿ ಮಧ್ಯೆಯೇ ಸಾವನ್ನಪ್ಪಿದ ಹಲವು ಪ್ರಕರಣಗಳು ನಡೆದಿವೆ. ಇಲ್ಲಿನ ಪರಿಸ್ಥಿತಿಯಿಂದಾಗಿ ಪ್ರತಿ ಮಳೆಗಾಲದಲ್ಲಿ ಕನಿಷ್ಠ ಎರಡು ಜೀವಗಳಾದರೂ ಹೋಗುತ್ತವೆ. ಗ್ರಾಮದ ಬಹುತೇಕ ಎಲ್ಲ ಕಡೆಗಳಲ್ಲಿ ಕಾಡು, ನದಿಗಳು ಇವೆ. ರಾಜಕಾರಣಿಗಳು ನೀಡುವ ಭರವಸೆಗಳು ಕೇವಲ ಚುನಾವಣಾ ಪ್ರಣಾಳಿಕೆಗಳಾಗಿ ಉಳಿದಿವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಗೃಹ ಪ್ರವೇಶ ಆಚರಣೆಯಲ್ಲಿ ಗೋಮಾತೆ ಬದಲಿಗೆ ಆಟಿಕೆ ಹಸು: ಇದೇ ಮಾಡರ್ನ್ ಇಂಡಿಯಾ ಎಂದ ನೆಟ್ಟಿಗರು
ಬಿಹಾರ ಚುನಾವಣೆ
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಕಳೆದ ಗುರುವಾರ (ನವೆಂಬರ್ 6) ನಡೆದಿದೆ. ಮೊದಲ ಹಂತದಲ್ಲಿ ಶೇ. 64.66ರಷ್ಟು ಮತದಾನವಾಗಿದೆ. ಎರಡನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದೆ. ಬಿಹಾರದ ಎಲ್ಲ 243 ವಿಧಾನಸಭಾ ಕ್ಷೇತ್ರಗಳ ಒಟ್ಟು 2,616 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ನವೆಂಬರ್ 14ರಂದು ಹೊರ ಬೀಳಲಿದೆ.