ನವದೆಹಲಿ: ಚುನಾವಣೆ ಕಣದಲ್ಲಿ ಎಷ್ಟೇ ಪ್ರಬಲ ಎದುರಾಳಿಗಳಿದ್ದರೂ ಇಲ್ಲಿ ಗೆಲುವು ಎನ್ನುವುದು ಸ್ಪಷ್ಟವಾಗುವುದಿಲ್ಲ. ಯಾಕೆಂದರೆ ಸಣ್ಣ ಪುಟ್ಟ ಪಕ್ಷಗಳ ಪಾತ್ರವೇ ಫಲಿತಾಂಶದ ನಿಖರತೆಯನ್ನು ಸ್ಪಷ್ಟಪಡಿಸುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಹಾರ ವಿಧಾನ ಸಭಾ ಚುನಾವಣೆ (Bihar Assembly Elections) ನಡೆಯಲಿದೆ. ಕಳೆದ ಎರಡು ದಶಕಗಳಲ್ಲಿನ ಚುನಾವಣಾ ಫಲಿತಾಂಶಗಳನ್ನು (Election result) ಗಮನಿಸಿದರೆ ಬಿಹಾರ ಚುನಾವಣೆಯಲ್ಲಿ (Bihar election) ಯಾವುದೇ ಪಕ್ಷವು ಶೇ. 25 ಹೆಚ್ಚಿನ ಮತವನ್ನು ಪಡೆಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಇಲ್ಲಿ ಮೈತ್ರಿಯೇ (alliances) ನಿರ್ಣಾಯಕವಾಗಿರುತ್ತದೆ.
ದೇಶದ ಎರಡು ಬಹುದೊಡ್ಡ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಇಲ್ಲಿ ಆರ್‌ಜೆಡಿ, ಜೆಡಿ(ಯು), ವಿಐಪಿ, ಎಚ್‌ಎಎಂ, ಎಲ್‌ಜೆಪಿ, ಎಐಎಂಐಎಂ, ಜೆಎಸ್‌ಪಿ, ಆರ್‌ಎಲ್‌ಎಂ, ಎಡ ಪಕ್ಷಗಳು ಮತ್ತು ಜೆಎಪಿಗಳು ಸೇರ್ಪಡೆಗೊಂಡಿವೆ. ಹೀಗಾಗಿ ಇಲ್ಲಿನ ಚುನಾವಣೆಯಲ್ಲಿ ಯಾರು ಯಾರ ಜೊತೆಗೆ ಇದ್ದಾರೆ ಎಂಬುದೇ ಮುಖ್ಯವಾಗುತ್ತದೆ. ಅಂದರೆ ಇಲ್ಲಿ ಮತ್ರಿಯೇ ಗೆಲುವನ್ನು ನಿರ್ಧರಿಸುತ್ತದೆ.
ಯಾವತ್ತೂ ಬಿಹಾರದಲ್ಲಿ ಒಂದೇ ಪಕ್ಷ ಗೆಲ್ಲುವುದಿಲ್ಲ. ಇಲ್ಲಿ ಯಾವಾಗಲೂ ನಾಲ್ಕರಿಂದ ಐದು ಪಕ್ಷಗಳ ಒಕ್ಕೂಟ ಗೆಲುವು ಸಾಧಿಸುತ್ತಎ. ಹೀಗಾಗಿ ಇಲ್ಲಿನ ಸಂಕೀರ್ಣ ಜಾತಿ ರಾಜಕೀಯವು ಹೊಸಬರಿಗೆ ಸವಾಲು ತಂದೊಡ್ಡುತ್ತದೆ.
ಯಾವ ಪಕ್ಷಗಳ ಮೈತ್ರಿ?
ಈ ಬಾರಿ ಇಲ್ಲಿ ಎನ್ ಡಿಎ ಮೈತ್ರಿ ಕೂಟವು ಬಿಜೆಪಿ, ಜೆಡಿಯು, ಎಲ್ ಜೆಪಿ, ಹೆಚ್ ಎಎಂ ಮತ್ತು ಆರ್ ಎಲ್ ಎಮ್ ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇವು ಬಿಹಾರದ ಬಹುತೇಕ ಎಲ್ಲಾ ಜಾತಿ ಗುಂಪುಗಳನ್ನು ಒಳಗೊಂಡಿವೆ. ಮುಸ್ಲಿಂ ಯಾದವ್ ಬ್ಲಾಕ್ ಮಾತ್ರ ವಿರೋಧ ಪಕ್ಷದೊಂದಿಗೆ ಉಳಿದುಕೊಂಡಿದೆ. ಸದ್ಯಕ್ಕೆ ಇಲ್ಲಿ ಆಡಳಿತದಲ್ಲಿರುವ ಮೈತ್ರಿಕೂಟಕ್ಕೆ ಹಿಂದುಳಿದ ವರ್ಗದವರ ಬೆಂಬಲವೂ ಇದೆ.
ಎನ್ ಡಿಎ ಶಕ್ತಿ ಏನು?
ಇಲ್ಲಿ ಎನ್ ಡಿಎಗೆ ಇರುವ ಬಹುದೊಡ್ಡ ಶಕ್ತಿ ಎಂದರೆ ವಿವಿಧ ಅಭಿವೃದ್ಧಿ ಕಾಮಗಾರಿಗಳು. ಹೊಸ ಸೇತುವೆ, ಹೆದ್ದಾರಿಮತ್ತು ವಿಮಾನ ನಿಲ್ದಾಣಗಳು ಸೇರಿದಂತೆ ವಿವಿಧ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ಮೇಲೆ ಹರಿಸಿರುವುದು ಈ ಬಾರಿ ಅದರ ವಿಜಯಕ್ಕೆ ಕಾರಣವಾಗಬಹುದು ಎನ್ನುವ ನಿರೀಕ್ಷೆಯಲ್ಲಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಬಗ್ಗೆ ಸಾಕಷ್ಟು ಉತ್ತಮ ಅಭಿಪ್ರಾಯಗಳಿವೆ. ಅವರು ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿ 75 ಲಕ್ಷ ಮಹಿಳೆಯರಿಗೆ ನೀಡಲಾದ 10,000 ರೂ.ಗಳ ಯೋಜನೆಯು ಎನ್‌ಡಿಎಗೆ ಗೆಲುವಿನ ಭರವಸೆಯಾಗಿದೆ.
ಇನ್ನು ಸೀಟು ಹಂಚಿಕೆ ವಿಚಾರದಲ್ಲಿ ಸಾಕಷ್ಟು ಒತ್ತಡವಿದ್ದರೂ ಒಗ್ಗಟ್ಟು ಪ್ರದರ್ಶಿಸುತ್ತಿದೆ. ಎಲ್ಲವೂ ಪರಸ್ಪರ ಒಪ್ಪಂದದಲ್ಲಿ ನಡೆಯುತ್ತಿದೆ ಎಂಬುದನ್ನು ತೋರಿಸಿಕೊಳ್ಳುತ್ತಿದೆ. ಬಿಜೆಪಿ ಮತ್ತು ಜೆಡಿ(ಯು) ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮೊದಲ ಬಾರಿಗೆ ಸಮಾನ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವುದು ಸಮಬಲವನ್ನು ಪ್ರದರ್ಶಿಸಿದೆ.
ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ 29 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಈ ಮೂಲಕ ಅವರು ತಮ್ಮ ಸಂಪೂರ್ಣ ಬೆಂಬಲವನ್ನು ಎನ್‌ಡಿಎಗೆ ನೀಡಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅವರ ಪಕ್ಷ ಸ್ವತಂತ್ರವಾಗಿ 135 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಈ ಬಾರಿ ಪರಸ್ಪರ ಒಪ್ಪಂದ ಮಾಡಿಕೊಂಡು ಸ್ಪರ್ಧೆಗೆ ಇಳಿದಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಬಾರಿ ಏಳು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಜಿತನ್ ರಾಮ್ ಮಾಂಝಿ ಅವರು ಈ ಬಾರಿ ಎನ್ ಡಿಎ ಯಲ್ಲಿ ಆರು ಸ್ಥಾನಗಳನ್ನು ಗಳಿಸಿದ್ದಾರೆ. ಪ್ರಸ್ತುತ ರಾಜ್ಯಸಭೆಯಲ್ಲಿರುವ ಉಪೇಂದ್ರ ಕುಶ್ವಾಹ ಅವರಿಗೂ ಆರು ವಿಧಾನಸಭಾ ಸ್ಥಾನಗಳನ್ನು ಸಹ ನೀಡಲಾಗಿದೆ. ಒಟ್ಟಿನಲ್ಲಿ ಎಲ್ಲ ಮೈತ್ರಿ ಪಕ್ಷಗಳೊಂದಿಗೆ ಎನ್ ಡಿಎ ಸೌಹಾರ್ದತೆಯಿಂದ ಸೀಟು ಹಂಚಿಕೆ ಮಾಡಿದೆ ಎನ್ನುವಂತೆ ತೋರುತ್ತಿದೆ.
2020ರ ಚುನಾವಣೆಯಲ್ಲಿ ಚಿರಾಗ್ ಮತ್ತು ಕುಶ್ವಾಹ ಇಬ್ಬರೂ ಸ್ವತಂತ್ರವಾಗಿ ಸ್ಪರ್ಧಿಸಿ ಜೆಡಿಯುಗೆ ತೀವ್ರ ಪೈಪೋಟಿ ನೀಡಿದ್ದರು. ಆದರೆ ಈ ಬಾರಿ ಹಾಗೆ ಉಂಟಾಗದೇ ಇರಲು ಎನ್ ಡಿಎ ಮೊದಲೇ ಯೋಜನೆ ರೂಪಿಸಿಕೊಂಡಿದೆ.
ಮಹಾಘಟಬಂಧನ್ ಭವಿಷ್ಯ ಹೇಗಿದೆ?
ಮಹಾಘಟಬಂಧನ್ ನಲ್ಲಿ ಸೀಟು ಹಂಚಿಕೆ ವಿಚಾರ ಇನ್ನೂ ಸಮಸ್ಯೆಯಲ್ಲೇ ಇದೆ. ವಿಶ್ವಾಸಾರ್ಹವಲ್ಲದ ಮಿತ್ರಪಕ್ಷಗಳು ನಾನಾ ರೀತಿಯ ಸವಾಲುಗಳನ್ನು ಒಡ್ಡುತ್ತಿವೆ. 2020ರ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಆರ್ ಜೆಡಿಯು ಕಾಂಗ್ರೆಸ್ ಸ್ಪರ್ಧಿಸಿದ 70 ಸ್ಥಾನಗಳಲ್ಲಿ ಕೇವಲ 19 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದರಿಂದ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿತ್ತು. ಈ ಬಾರಿಯೂ ಇದೇ ರೀತಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ.
ಈಡೇರಿಸಲು ಅಸಾಧ್ಯವೆಂದು ತೋರುವ ಚುನಾವಣಾ ಭರವಸೆಗಳು, ಕೆಲವೊಂದು ಆಂತರಿಕ ವಿಷಯಗಳು ಸೇರಿದಂತೆ ಲಾಲು ಪ್ರಸಾದ್ ಯಾದವ್ ಕುಟುಂಬಕ್ಕೆ ಎದುರಾಗಿರುವ ಕಾನೂನು ಸಮಸ್ಯೆಗಳು ಮಹಾಘಟಬಂಧನ್ ಗೆ ಚುನಾವಣೆಯಲ್ಲಿ ಹೆಚ್ಚಿನ ಸವಾಲುಗಳು ಎದುರಾಗಬಹುದು ಎಂಬುದನ್ನು ತೋರಿಸುತ್ತಿವೆ.
ಇದನ್ನೂ ಓದಿ: Javed Akhtar: ನಾಚಿಕೆಯಾಗಬೇಕು ನಿಮಗೆ; ತಾಲಿಬಾನ್ ಸಚಿವರಿಗೆ ನೀಡಿದ ಸ್ವಾಗತ ಕುರಿತು ಜಾವೇದ್ ಅಖ್ತರ್ ಕಿಡಿ
ಇನ್ನು ಈ ಬಾರಿಯ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಮತ್ತು ಅವರ ಜನ ಸುರಾಜ್ ಪಕ್ಷವು ಮತದಾರರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿರುವುದು ಈಗಾಗಲೇ ಸ್ಪಷ್ಟವಾಗಿದೆ. ಕಿಶೋರ್ ಅವರು ಜಾತಿ ರಾಜಕೀಯವನ್ನು ಮೀರಿ ತಮ್ಮ ಭವಿಷ್ಯಕ್ಕಾಗಿ ಮತ ಚಲಾಯಿಸುವಂತೆ ಯುವಜನರಲ್ಲಿ ಮನವಿ ಮಾಡುತ್ತಿದ್ದಾರೆ. ಇದು ಚುನಾವಣಾ ಫಲಿತಾಂಶದ ಮೇಲೆ ಗಮನಾರ್ಹಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.