ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar assembly elections: ಬಿಹಾರ ಚುನಾವಣೆ: ಬುರ್ಖಾ ಧರಿಸುವವರನ್ನು ಸರಿಯಾಗಿ ಪರಿಶೀಲಿಸಿ ಎಂದ ಬಿಜೆಪಿ; ಆರ್‌ಜೆಡಿ ಕಿಡಿ

ಬಿಹಾರ ವಿಧಾನಸಭಾ ಚುನಾವಣೆಯನ್ನು ಒಂದು ಅಥವಾ ಎರಡು ಹಂತಗಳಲ್ಲಿ ನಡೆಸುವಂತೆ ಚುನಾವಣಾ ಆಯೋಗವನ್ನು (Election Commission) ಒತ್ತಾಯಿಸಿರುವ ಬಿಜೆಪಿ ಮತದಾರರ ಎಣಿಕೆ ಸರಿಯಾಗಿ ಮಾಡಬೇಕು. ಅದರಲ್ಲೂ ವಿಶೇಷವಾಗಿ ಬುರ್ಖಾ ಧರಿಸಿದ ಮಹಿಳೆಯರನ್ನು ಎಪಿಕ್ ಕಾರ್ಡ್‌ಗಳೊಂದಿಗೆ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

ಪಾಟ್ನಾ: ಒಂದಲ್ಲ ಒಂದು ಕಾರಣಕ್ಕೆ ವಿವಾದ ಉಂಟಾಗುತ್ತಿರುವ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar assembly elections) ವಿಚಾರ ಸದ್ದು ಮಾಡುತ್ತಿದೆ. ಈಗ ಬಿಜೆಪಿ ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾ (Burqa Issue) ವಿಚಾರವನ್ನು ಚುನಾವಣೆ ಅಖಾಡಕ್ಕೆ ತಂದಿದೆ. ಬುರ್ಖಾ ಧರಿಸಿರುವ ಮಹಿಳೆಯರನ್ನು ಸರಿಯಾಗಿ ಪರಿಶೀಲನೆ ಮಾಡಬೇಕು ಎಂದು ಬಿಜೆಪಿ (BJP) ಶನಿವಾರ ಚುನಾವಣಾ ಆಯೋಗವನ್ನು(Election Commission) ಒತ್ತಾಯಿಸಿದೆ. ಇಲ್ಲಿ ಬಿಜೆಪಿಯು ಆರ್‌ಜೆಡಿಯ (RJD) ಪ್ರಮುಖ ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಇದೊಂದು ರಾಜಕೀಯ ಪಿತೂರಿ ಎಂದು ವಿಪಕ್ಷಗಳು ಆರೋಪಿಸಿವೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದ ತಂಡದೊಂದಿಗೆ ಸಭೆಯ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್ ಮಾತನಾಡಿದರು. ʼʼಒಂದು ಅಥವಾ ಎರಡು ಹಂತಗಳಲ್ಲಿ ಚುನಾವಣೆ ನಡೆಸುವಂತೆ ನಾವು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದೇವೆ. ಇದಕ್ಕಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಮಾಡುವ ಅಗತ್ಯವಿಲ್ಲ. ಮತದಾರರ ಎಣಿಕೆ ಸರಿಯಾಗಿ ಮಾಡಬೇಕು. ಅದರಲ್ಲೂ ವಿಶೇಷವಾಗಿ ಬುರ್ಖಾ ಧರಿಸಿದ ಮಹಿಳೆಯರನ್ನು ಎಪಿಕ್ ಕಾರ್ಡ್‌ಗಳೊಂದಿಗೆ ಖಚಿತಪಡಿಸಿಕೊಳ್ಳಬೇಕು. ಇದರಿಂದ ನಿಜವಾದ ಮತದಾರರು ಮಾತ್ರ ತಮ್ಮ ಮತ ಚಲಾಯಿಸಬಹುದುʼʼ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಚುನಾವಣಾ ಆಯೋಗ ತಂಡವು ಚುನಾವಣಾ ದಿನಾಂಕಗಳನ್ನು ಘೋಷಿಸುವ ಮೊದಲು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿತು.

ಆರ್‌ಜೆಡಿ ನಿಯೋಗದ ನೇತೃತ್ವವನ್ನು ಲೋಕಸಭೆಯಲ್ಲಿ ಪಕ್ಷದ ನಾಯಕ ಅಭಯ್ ಕುಶ್ವಾಹ ವಹಿಸಿದ್ದರು, ಅವರೊಂದಿಗೆ ವಕ್ತಾರರಾದ ಚಿತರಂಜನ್ ಗಗನ್ ಮತ್ತು ಮುಕುಂದ್ ಸಿಂಗ್ ಇದ್ದರು. ಬುರ್ಖಾ ವಿಚಾರವಾಗಿ ಜೈಸ್ವಾಲ್ ಮಾತನಾಡಿದಾಗ ಅಭಯ್ ಕುಶ್ವಾಹ ಪ್ರತಿಕ್ರಿಯಿಸಿ, ʼʼಇದು ರಾಜಕೀಯ ಪಿತೂರಿ. ಇತ್ತೀಚೆಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅನ್ನು ಕೈಗೊಳ್ಳಲಾಗಿದೆ. ಎಲ್ಲ ಮತದಾರರಿಗೆ ಹೊಸ ಛಾಯಾಚಿತ್ರಗಳೊಂದಿಗೆ ಹೊಸ ಎಪಿಕ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆʼʼ ಎಂದು ಹೇಳಿದರು.

ವಿಧಾನಸಭೆಯ ಅವಧಿ ಮುಗಿಯುತ್ತಿದೆ. ಹೀಗಾಗಿ ಎರಡು ಹಂತಗಳಿಗಿಂತ ಹೆಚ್ಚು ಅವಧಿಯಲ್ಲಿ ಚುನಾವಣೆಗಳನ್ನು ನಡೆಸಲು ಪರಿಗಣಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿರುವುದಾಗಿ ಆರ್‌ಜೆಡಿ ನಾಯಕರು ತಿಳಿಸಿದರು.

ರಾಜ್ಯದ ಅತ್ಯಂತ ಜನಪ್ರಿಯ ಹಬ್ಬವಾದ ಛತ್ ಬಳಿಕ ಚುನಾವಣೆಗಳನ್ನು ನಡೆಸಲು ಆರ್‌ಜೆಡಿಯ ಹಾಗೂ ಬಿಜೆಪಿ ಒತ್ತಾಯಿಸಿದೆ. ಹೀಗಾಗಿ ನವೆಂಬರ್ 3- 4ರಿಂದ ಮತದಾನ ಪ್ರಾರಂಭವಾಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: BIMS Hospital: ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೆಳಗಾವಿ ಜಿಲ್ಲೆಗೆ ಗರಿ ಇದ್ದಂತೆ: ಲಕ್ಷ್ಮಿ ಹೆಬ್ಬಾಳ್ಕರ್‌

ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಮತ್ತು ಇಂಡಿಯಾ ಬ್ಲಾಕ್ ಪಾಲುದಾರ ಸಿಪಿಐ ಲಿಬರೇಶನ್‌ನಂತಹ ಸಣ್ಣ ಪಕ್ಷಗಳು ಸಹ ವಿಧಾನಸಭಾ ಚುನಾವಣೆಯನ್ನು ಬೆಂಬಲಿಸುವುದಾಗಿ ಚುನಾವಣಾ ಆಯೋಗಕ್ಕೆ ತಿಳಿಸಿವೆ.

ಹಿಂದುಳಿದ ವರ್ಗಗಳಿರುವ ಹಳ್ಳಿಗಳಲ್ಲಿ ಕೆಲವು ದಿನಗಳ ಮುಂಚಿತವಾಗಿ ಅರೆಸೈನಿಕ ಪಡೆಗಳನ್ನು ನಿಯೋಜಿಸಬೇಕು ಮತ್ತು ಮತದಾರರಲ್ಲಿ ವಿಶ್ವಾಸ ಮೂಡಿಸಲು ಧ್ವಜ ಮೆರವಣಿಗೆ ನಡೆಸಬೇಕು. ಇನ್ನು ನದಿ ತೀರದ ಪ್ರದೇಶಗಳಲ್ಲಿ ಅಶ್ವಸೈನ್ಯದ ನಿಯೋಜನೆಯನ್ನು ಮಾಡುವಂತೆ ಜೈಸ್ವಾಲ್ ಸಭೆಯಲ್ಲಿ ತಿಳಿಸಿದ್ದಾರೆ. ಎಲ್ಲ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಮತ್ತು ಪಟ್ಟಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕು. ಇಲ್ಲಿ ಮತದಾರರಿಗೆ ಬೆದರಿಕೆ ಉಂಟಾಗುವುದನ್ನು ತಡೆಯಲು ನಾವು ಕೆಲಸ ಮಾಡಬಹುದು ಎಂದು ಕುಶ್ವಾಹ ಹೇಳಿದರು.

ಇನ್ನು ಬಿಜೆಪಿ ನೇತೃತ್ವದ ಎನ್‌ಡಿಎಗೆ ಸಹಾಯ ಮಾಡಲು ಎಸ್‌ಐಆರ್ ನಡೆಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ಆರ್‌ಜೆಡಿ, ಈ ವಾರದ ಆರಂಭದಲ್ಲಿ ಪ್ರಕಟವಾದ ಅಂತಿಮ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿ ಹಾಕಲಾದ 3.66 ಲಕ್ಷ ಜನರ ವಿವರಗಳನ್ನು ಬಹಿರಂಗಪಡಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ವಿದ್ಯಾ ಇರ್ವತ್ತೂರು

View all posts by this author