Bihar Election: ಭ್ರಷ್ಟಾಚಾರ ಆರೋಪ: ಲಾಲು ಪ್ರಸಾದ್ ಯಾದವ್ ಕುಟುಂಬಕ್ಕೆ ನ್ಯಾಯಾಲಯದಲ್ಲಿ ಹಿನ್ನಡೆ
ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಐಆರ್‌ಸಿಟಿಸಿ ಹೊಟೇಲ್‌ಗಳ ನಿರ್ವಹಣಾ ಒಪ್ಪಂದಗಳ ಹಂಚಿಕೆಗೆ ಸಂಬಂಧಿಸಿದ ನಡೆದಿರುವ ಭ್ರಷ್ಟಾಚಾರದ ಆರೋಪಗಳಲ್ಲಿ ಇದೀಗ ಅವರಿಗೆ ಸಂಕಷ್ಟ ಎದುರಾಗಿದೆ. ಲಾಲು ಯಾದವ್, ಪತ್ನಿ ಮತ್ತು ಪುತ್ರನಿಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಇದು ಬಿಹಾರ ವಿಧಾನಸಭಾ ಚುನಾವಣೆ ವೇಳೆ ಯಾದವ್ ಕುಟುಂಬಕ್ಕೆ ಬಹುದೊಡ್ಡ ಶಾಕ್ ನೀಡಿದೆ.

-

ನವದೆಹಲಿ: ನವೆಂಬರ್ ಆರಂಭದಲ್ಲಿ ಬಿಹಾರದ ವಿಧಾನಸಭಾ ಚುನಾವಣೆ (Bihar assembly elections) ನಡೆಯಲಿದೆ. ಚುನಾವಣೆ ಹೊಸ್ತಿಲಲ್ಲೇ ಭ್ರಷ್ಟಾಚಾರ ಆರೋಪಕ್ಕೆ (Corruption case) ಸಂಬಂಧಿಸಿ ಲಾಲು ಪ್ರಸಾದ್ ಯಾದವ್ (Lalu Yadav), ಪತ್ನಿ ಮತ್ತು ಪುತ್ರನಿಗೆ ನ್ಯಾಯಾಲಯದ ಹಿನ್ನಡೆಯಾಗಿದೆ. ರಾಷ್ಟ್ರೀಯ ಜನತಾ ದಳದ (Rashtriya Janata Dal) ಲಾಲು ಯಾದವ್ ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಐಆರ್‌ಸಿಟಿಸಿ ಹೊಟೇಲ್‌ಗಳ ನಿರ್ವಹಣಾ ಒಪ್ಪಂದಗಳ ಹಂಚಿಕೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದ ಸಿಬಿಐ ಪ್ರಕರಣವನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣದಲ್ಲಿ ಪಿತೂರಿ ನಡೆದಿರುವುದು ಸ್ಪಷ್ಟವಾಗಿದೆ ಎಂದು ಹೇಳಿದೆ.
ಬಿಹಾರದ ವಿಧಾನಸಭಾ ಚುನಾವಣೆಗೂ ಮೊದಲು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ)ಕ್ಕೆ ನ್ಯಾಯಾಲಯ ಬಹುದೊಡ್ಡ ಆಘಾತವನ್ನು ನೀಡಿದೆ. ದೆಹಲಿ ನ್ಯಾಯಾಲಯವು ಸೋಮವಾರ ಪಕ್ಷದ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್, ಪತ್ನಿ ರಾಬ್ರಿ ದೇವಿ ಮತ್ತು ಅವರ ಮಗ ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿದೆ. ಪ್ರಕರಣದಲ್ಲಿ ಪಿತೂರಿ ನಡೆದಿದೆ. ಆದರೆ ಹಿರಿಯ ರಾಜಕಾರಣಿ ಮತ್ತು ಅವರ ಕುಟುಂಬ ಸದಸ್ಯರು ತಪ್ಪೊಪ್ಪಿಕೊಂಡಿಲ್ಲ. ಹೀಗಾಗಿ ವಿಚಾರಣೆಯನ್ನು ಮುಂದುವರಿಸುವುದಾಗಿ ನ್ಯಾಯಾಲಯ ಹೇಳಿದೆ.
ಲಾಲು ಯಾದವ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ವಿವಿಧ ವಿಭಾಗಗಳು ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಈ ಕುರಿತು ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಲಾಲು ಯಾದವ್ 2004ರಿಂದ 2009ರವರೆಗೆ ರೈಲ್ವೆ ಸಚಿವರಾಗಿದ್ದರು. ಈ ಸಂದರ್ಭದಲ್ಲಿ ಐಆರ್‌ಸಿಟಿಸಿ ಹೊಟೇಟ್‌ಗಳ ನಿರ್ವಹಣಾ ಒಪ್ಪಂದಗಳಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪಗಳಿವೆ.
ಈ ಪ್ರಕರಣದಲ್ಲಿ ಬಿಎನ್‌ಆರ್ ರಾಂಚಿ ಮತ್ತು ಬಿಎನ್‌ಆರ್ ಪುರಿಯ ಎರಡು ಐಆರ್‌ಸಿಟಿಸಿ ಹೊಟೇಲ್‌ಗಳ ನಿರ್ವಹಣಾ ಒಪ್ಪಂದವನ್ನು ಸುಜಾತಾ ಹೊಟೇಲ್‌ಗೆ ನೀಡಲಾಗಿದೆ. ಈ ಒಪ್ಪಂದಕ್ಕೆ ಪ್ರತಿಯಾಗಿ ಲಾಲು ಯಾದವ್ ಬೇನಾಮಿ ಕಂಪೆನಿಯ ಮೂಲಕ ಮೂರು ಎಕರೆ ಅತ್ಯುನ್ನತ ಭೂಮಿಯನ್ನು ಪಡೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಈ ಕುರಿತು 2017ರಲ್ಲಿ ಪ್ರಕರಣ ಸಿಬಿಐ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆದರೆ ಈ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಮತ್ತು ಟೆಂಡರ್‌ಗಳನ್ನು ನ್ಯಾಯಯುತವಾಗಿ ನೀಡಲಾಗಿದೆ ಎಂದು ಲಾಲು ಯಾದವ್ ಅವರ ವಕೀಲರು ವಾದಿಸಿದ್ದರು.
ಇದನ್ನೂ ಓದಿ: Bank Robber: ಬ್ಯಾಂಕ್ ದರೋಡೆಗೈದು ಪೊಲೀಸರ ಅತಿಥಿಯಾದ ಎಂ.ಫಿಲ್ ಪದವೀಧರ; ಈತ ಬಲೆಗೆ ಬಿದ್ದಿದ್ದೇ ರೋಚಕ!
ಇಲ್ಲಿ ಖಜಾನೆಯ ಹಣ ಬಳಕೆಯಾಗಿರುವುದು ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿದ್ದು, ಇದು ಬಹುದೊಡ್ಡ ಪಿತೂರಿಯಾಗಿದೆ. ಪ್ರಾಥಮಿಕ ತನಿಖೆ ವೇಳೆ ಲಾಲು ಯಾದವ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿರುವುದನ್ನು ಗಮನಿಸಿರುವುದಾಗಿ ಹೇಳಿದೆ.