ಪಾಟ್ನಾ, ನ. 14: ಬಿಹಾರ ವಿಧಾನಸಭಾ ಚುನಾವಣೆಯ (Bihar Election Results 2025) ಫಲಿತಾಂಶ ಹೊರ ಬೀಳುತ್ತಿದ್ದು, ಎನ್‌ಡಿಎ ಭರ್ಜರಿ ಜಯದತ್ತ ದಾಪುಗಾಲು ಇರಿಸಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಮ್ಯಾಜಿಕ್ ಸಂಖ್ಯೆ 122. ಎನ್‌ಡಿಎ ಈಗಾಗಲೇ 202 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಮತ್ತೊಮ್ಮೆ ಎಡವಿದ್ದು, ಮುನ್ನಡೆ 33 ಕ್ಷೇತ್ರಗಳಿಗೆ ಸೀಮಿತವಾಗಿದೆ. ಹಾವು-ಏಣಿ ಆಟದಲ್ಲಿ ಕೊನೆಗೂ ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ, ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ (Tejashwi Yadav) ಜಯ ಗಳಿಸಿ ನಿಟ್ಟುಸಿರು ಬಿಟ್ಟಿದ್ದಾರೆ.
ರಾಘೋಪುರ ಕ್ಷೇತ್ರದಲ್ಲಿ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸತೀಶ್ ಕುಮಾರ್ ಯಾದವ್ ಅವರನ್ನು 14,532 ಮತಗಳ ಅಂತರದಿಂದ ಪರಾಭವಗೊಳಿಸಿದರು. ತೇಜಸ್ವಿ ಒಟ್ಟು 1,18,597 ಮತ ಗಳಿಸಿದರು. ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ ಲಭಿಸಿದ್ದು 1,04,065 ವೋಟ್. ಆರಂಭಿಕ ಹಂತದಲ್ಲಿ ತೇಜಸ್ವಿ ಯಾದವ್ ಹಿನ್ನಡೆ ಅನುಭವಿಸುತ್ತಿದ್ದುದು ಆರ್‌ಜೆಡಿ ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿತ್ತು. ತೀವ್ರ ಪೈಪೋಟಿ ನಡುವೆ ಕೊನೆಗೂ ವಿಜಯಲಕ್ಷ್ಮೀ ಒಲಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು.
ರಾಘೋಪುರ ಕ್ಷೇತ್ರದಲ್ಲಿ ಜಯ ಗಳಿಸಿದ ಆರ್‌ಜೆಡಿಯ ತೇಜಸ್ವಿ ಯಾದವ್:
ಈ ಸುದ್ದಿಯನ್ನೂ ಓದಿ: Nitish Kumar: ನಿತೀಶ್ ಕುಮಾರ್ ಅವರ ರಾಜಕೀಯ ರಂಗ ಪ್ರವೇಶ ಹೇಗಿತ್ತು?
ರಾಘೋಪುರ ಕ್ಷೇತ್ರದ ವಿವರ
ಬಿಹಾರ ವಿಧಾನಸಭೆಯಲ್ಲಿ 128ನೇ ಕ್ಷೇತ್ರವಾದ ರಾಘೋಪುರ ಹಾಜಿಪುರ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುತ್ತದೆ. ಇದು ಸಾಮಾನ್ಯ ವರ್ಗದ ಕ್ಷೇತ್ರವಾಗಿದ್ದು, 2020ರ ವಿಧಾನಸಭಾ ಚುನಾವಣೆಯಲ್ಲಿ 3,44,369 ಮತದಾರರಿದ್ದರು. ಈ ಪೈಕಿ1,85,106 ಪುರುಷರು, 1,59,258 ಮಹಿಳೆಯರು.
ಈ ವರ್ಷ ರಾಘೋಪುರ ಘಟಾನುಘಟಿಗಳ ಸ್ಪರ್ಧೆಯ ಕಾರಣದಿಂದ ದೇಶದ ಗಮನ ಸೆಳೆದಿತ್ತು. ಆರ್‌ಜೆಡಿಯಿಂದ ತೇಜಸ್ವಿ ಯಾದವ್, ಬಿಜೆಪಿಯಿಂದ ಸತೀಶ್ ಕುಮಾರ್ ಯಾದವ್ ಮತ್ತು ಜನ ಸುರಾಜ್ ಪಕ್ಷ (ಜೆಎಸ್‌ಪಿ)ದಿಂದ ಚಂಚಲ್ ಕುಮಾರ್ ಸ್ಪರ್ಧಿಸಿದ್ದರು. ತೇಜಸ್ವಿ ಅವರ ಸಹೋದರ ತೇಜ್ ಪ್ರತಾಪ್ ಯಾದವ್ ತಮ್ಮದೇ ಆದ ಜನಶಕ್ತಿ ಜನತಾ ದಳ (ಜೆಜೆಡಿ)ದಿಂದ ಪ್ರೇಮ್ ಕುಮಾರ್ ಅವರನ್ನು ಕಣಕ್ಕಿಳಿಸಿದ್ದರು.
ಮರುಕಳಿಸಿದ ಇತಿಹಾಸ
ರಾಘೋಪುರ ಕ್ಷೇತ್ರದಲ್ಲಿ ಈ ಬಾರಿ 2020ರ ಇತಿಹಾಸ ಮರುಕಳಿಸಿದೆ. ಇದು ಬಹಳ ಹಿಂದಿನಿಂದಲೂ ತೇಜಸ್ವಿ ಯಾದವ್ ಕುಟುಂಬದ ಭದ್ರಕೋಟೆ ಎನಿಸಿಕೊಂಡಿದ್ದು, ಮತ್ತೊಮ್ಮೆ ಈ ಅಂಶ ಸಾಬೀತಾಗಿದೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 125 ಸ್ಥಾನಗಳೊಂದಿಗೆ ಬಹುಮತವನ್ನು ಗಳಿಸಿತ್ತು. ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಈ ಬಾರಿ ಸಂಖ್ಯಾಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡು ದಾಖಲೆ ಬರೆದಿದೆ.
ಕಾಂಗ್ರೆಸ್‌ಗೆ ಮತ್ತೆ ಹೀನಾಯ ಸ್ಥಿತಿ
ಶತಾಯ ಗತಾಯ ಈ ಬಾರಿ ಅಧಿಕಾರಕ್ಕೆ ಮರಳಲೇಬೇಕೆಂಬ ಉದ್ದೇಶದಿಂದ ಮಹಾಘಟಬಂಧನ್ ಚುನಾವಣೆ ಎದುರಿಸಿತ್ತು. ಆರ್‌ಜೆಡಿ ಮತ್ತು ಕಾಂಗ್ರೆಸ್ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ ಇದ್ಯಾವುದೂ ವರ್ಕೌಟ್ ಆಗಿಲ್ಲ. ಇತ್ತ ಕಾಂಗ್ರೆಸ್ ಇನ್ನು ಪಾತಾಳಕ್ಕೆ ಕುಸಿದಿದ್ದು, ಮತ್ತೊಮ್ಮೆ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಕಾಂಗ್ರೆಸ್-6, ಆರ್‌ಜೆಡಿ-23, ಇತರ-3 ಕಡೆ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಮೂಡಿಬಂದಿದ್ದು, 92 ಕಡೆ ಮುನ್ನಡೆ ಸಾಧಿಸಿದೆ. ಜೆಡಿಯು 84 ಕ್ಷೇತ್ರಗಳಲ್ಲಿ ಮುಂದಿದೆ.