ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bihar Election 2025 Results: ಚಿರಾಗ್‌ ಪಾಸ್ವಾನ್:‌ ಎನ್‌ಡಿಎ ಗೆಲುವಿನ ಆಕಾಶದಲ್ಲಿ ಮೂಡಿಬಂದ ಯುವ ತಾರೆ!

Chirag Paswan: 2020ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ 130 ಸೀಟ್‌ಗಳಲ್ಲಿ ಕೇವಲ ಒಂದನ್ನು ಗೆದ್ದಿದ್ದರು ಚಿರಾಗ್.‌ ಜೆಡಿಯುವಿನ ಸಾಕಷ್ಟು ಮತಗಳನ್ನು ಕಸಿದು ಹಾನಿ ಎಸಗಿದ್ದರೂ, ಅವು ಸೀಟುಗಳಾಗಿ ಬಂದಿರಲಿಲ್ಲ. ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸುವಂತೆ, 2021ರಲ್ಲಿ ಚಿರಾಗ್‌ ಚಿಕ್ಕಪ್ಪ ಪಶುಪತಿ ಕುಮಾರ್‌ ಪರಸ್‌ ಎಲ್‌ಜೆಪಿಯ ಇನ್ನೊಂದು ಬಣವನ್ನು ತನ್ನ ಜೊತೆಗೆ ಕೊಂಡೊಯ್ದಿದ್ದರು. ಈ ಮನುಷ್ಯನಿಗೆ ತಂದೆಯ ಲೆಗಸಿಯನ್ನು ಮುಂದುವರಿಸುವ ಸಾಮರ್ಥ್ಯ ಇಲ್ಲವೆಂದೇ ತಜ್ಞರು ಭಾವಿಸಿದ್ದರು. ತಜ್ಞರ ಅನಿಸಿಕೆಗಳನ್ನು ಚಿರಾಗ್‌ ಇದೀಗ ಸುಳ್ಳು ಮಾಡಿದ್ದಾರೆ.

ಚಿರಾಗ್‌ ಪಾಸ್ವಾನ್:‌ ಎನ್‌ಡಿಎ ಗೆಲುವಿನ ಆಕಾಶದಲ್ಲಿ ಮೂಡಿಬಂದ ಯುವ ತಾರೆ!

ಚಿರಾಗ್‌ ಪಾಸ್ವಾನ್ -

ಹರೀಶ್‌ ಕೇರ
ಹರೀಶ್‌ ಕೇರ Nov 14, 2025 5:16 PM

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ (Bihar Election 2025 Results) ಜೆಡಿಯು- ಬಿಜೆಪಿ (JDU - BJP) ಜೊತೆಗಾರಿಕೆಯಷ್ಟೇ ಗಮನ ಸೆಳೆದಿರುವ ಇನ್ನೊಂದು ಅಂಶ ಯುವ ತಾರೆಯೊಂದರ ಉದಯ- ಅದು ಚಿರಾಗ್‌ ಪಾಸ್ವಾನ್ (Chirag Paswan) .‌ ಎನ್‌ಡಿಎಯ ಎರಡು ಘಟಾನುಘಟಿಗಳ ನಡುವೆ ತನ್ನ ಲೋಕ ಜನ ಶಕ್ತಿ ಪಕ್ಷಕ್ಕೆ ಗುದ್ದಾಡಿ 29 ಕ್ಷೇತ್ರಗಳಲ್ಲಿ ಟಿಕೆಟ್‌ ದಕ್ಕಿಸಿಕೊಂಡದ್ದೇ ಒಂದು ಗೆಲುವು; ಜೊತೆಗೆ ಆ ಕ್ಷೇತ್ರಗಳಲ್ಲಿ 19 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದು ಇನ್ನೊಂದು ಹಂತದ ವಿಜಯ. ಆ ಮೂಲಕ ತನ್ನ ವರ್ಚಸ್ಸನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತುಪಡಿಸಿದವರು ಚಿರಾಗ್.‌

29ರಲ್ಲಿ 19 ಎಂದರೆ ಸುಮಾರು ಪ್ರತಿಶತ 65. ಕಳೆದ ವರ್ಷ ತಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ 5 ಕ್ಷೇತ್ರಗಳಲ್ಲಿ ಎಲ್ಲವನ್ನೂ ಎಲ್‌ಜೆಪಿ ಗೆದ್ದಿದೆ ಎಂಬುದನ್ನೂ ನೆನಪಿಡಬೇಕು. ತುಸು ಹಿಂದೆ ಹೋದರೆ, ಜೆಡಿಯು ನಾಯಕ ನಿತೀಶ ಕುಮಾರ್‌ ಜೊತೆಗೆ ಬಂದ ಭಿನ್ನಮತದಿಂದ, ಆ ಪಕ್ಷದಿಂದ ಹೊರಬಿದ್ದು ಎಲ್‌ಜೆಪಿ ಕಟ್ಟಿದವರು ರಾಮ್‌ ವಿಲಾಸ್‌ ಪಾಸ್ವಾನ್.‌ 2020ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ 130 ಸೀಟ್‌ಗಳಲ್ಲಿ ಕೇವಲ ಒಂದನ್ನು ಗೆದ್ದಿದ್ದರು ಚಿರಾಗ್.‌ ಜೆಡಿಯುವಿನ ಸಾಕಷ್ಟು ಮತಗಳನ್ನು ಕಸಿದು ಹಾನಿ ಎಸಗಿದ್ದರೂ, ಅವು ಸೀಟುಗಳಾಗಿ ಬಂದಿರಲಿಲ್ಲ. ಈ ಮನುಷ್ಯನಿಗೆ ತಂದೆಯ ಲೆಗಸಿಯನ್ನು ಮುಂದುವರಿಸುವ ಸಾಮರ್ಥ್ಯ ಇಲ್ಲವೆಂದೇ ತಜ್ಞರು ಭಾವಿಸಿದ್ದರು.

ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸುವಂತೆ, 2021ರಲ್ಲಿ ಚಿರಾಗ್‌ ಚಿಕ್ಕಪ್ಪ ಪಶುಪತಿ ಕುಮಾರ್‌ ಪರಸ್‌ ಎಲ್‌ಜೆಪಿಯ ಇನ್ನೊಂದು ಬಣವನ್ನು ತನ್ನ ಜೊತೆಗೆ ಕೊಂಡೊಯ್ದಿದ್ದರು. ತಜ್ಞರ ಅನಿಸಿಕೆಗಳನ್ನು ಚಿರಾಗ್‌ ಇದೀಗ ಸುಳ್ಳು ಮಾಡಿದ್ದಾರೆ. ತಮ್ಮ 43ರ ಹರೆಯದಲ್ಲಿ ತಮ್ಮನ್ನು ಗಟ್ಟಿಯಾಗಿ ಸ್ಥಾಪಿಸಿಕೊಂಡಿದ್ದಾರೆ. ಅವರೀಗ ಯುವ ಬಿಹಾರಿ. ಪಾಲಿಟಿಕ್ಸ್‌ನಲ್ಲಿ 43 ಎಂಬುದು ಸಣ್ಣ ಪ್ರಾಯವೇ.

2024ರ ಲೋಕಸಭೆಯಲ್ಲಿ ಸ್ಪರ್ಧಿಸಿದ ಎಲ್ಲ 5 ಕ್ಷೇತ್ರಗಳಲ್ಲಿ ಗೆದ್ದು ತೋರಿಸಿದ್ದರೂ, 20ಕ್ಕಿಂತ ಹೆಚ್ಚು ವಿಧಾನಸಭೆ ಕ್ಷೇತ್ರ ಕೊಡಲು ಬಿಜೆಪಿ- ಜೆಡಿಯು ಮುಂದಾಗಿರಲಿಲ್ಲ. ಆಗ ಚಿರಾಗ್‌, ಪ್ರಶಾತ್‌ ಕಿಶೋರ್‌ ಅವರ ಜನ್‌ ಸುರಾಜ್‌ ಪಾರ್ಟಿ ಜೊತೆಗೆ ಮಾತುಕತೆ ಆರಂಭಿಂಸಿದರೆಂದು ಸುದ್ದಿ. ಇದರಿಂದ ಆತಂಕಗೊಂಡ ಬಿಜೆಪಿ ಹಾಗೂ ಜೆಡಿಯು, ಚಿರಾಗ್‌ ಜೊತೆಗೆ ಮಾತಿಗೆ ಕೂತು 29 ಸ್ಥಾನ ಕೊಟ್ಟವು. ತನ್ನನ್ನು ಅಷ್ಟು ಉಡಾಫೆಯಾಗಿ ಪರಿಗಣಿಸಬಾರದು ಎಂಬ ಸಿಗ್ನಲ್‌ ಅವರದಾಗಿತ್ತು.

ಈ ಸಾಧನೆಯಿಂದ ತನ್ನೆಲ್ಲ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ ಚಿರಾಗ್.‌ ಈ ಹಿಂದೆ ಎಲ್‌ಜೆಪಿ ದೊಡ್ಡ ಸಾಧನೆ ಮಾಡಿದ್ದು 2005ರಲ್ಲಿ. ಆಗ ಸ್ಪರ್ಧಿಸಿದ 178 ಸೀಟುಗಳಲ್ಲಿ 29ನ್ನು ಪಕ್ಷ ಗೆದ್ದಿತ್ತು. ಆಗ ಹಿರಿಯ ನಾಯಕ ರಾಮ್ ವಿಲಾಸ್‌ ಪಾಸ್ವಾನ್‌ ಇದ್ದರು.‌ ಈ ಸಲದ ಸಾಧನೆ ಆ ಕಾರಣದಿಂದಲೇ ದೊಡ್ಡದು.

ಇದನ್ನೂ ಓದಿ: Chirag Paswan: ಬಿಹಾರದಲ್ಲಿ ಎನ್‌ಡಿಎಗೆ ಬಹುಮತ; ಚಿರಾಗ್‌ ಪಾಸ್ವಾನ್‌ಗೆ ಉಪಮುಖ್ಯಮಂತ್ರಿ ಪಟ್ಟ?

ಚಿರಾಗ್‌ಗೆ ಮುಖ್ಯಮಂತ್ರಿ ಆಗುವ ಮನಸ್ಸಿರಬಹುದು. ಆದರೆ ಅದನ್ನು ಹೇಳಿಕೊಂಡಿಲ್ಲ. ಅವರು ಮಹತ್ವಾಕಾಂಕ್ಷಿ ಎಂಬುದಂತೂ ಖಚಿತ. ತಮ್ಮ ಪಕ್ಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಬಯಸಿದ್ದಾರೆ. ಅದನ್ನು ಬಿಜೆಪಿ ಬಿಟ್ಟುಕೊಡುತ್ತದೋ ಇಲ್ಲವೋ ಗೊತ್ತಿಲ್ಲ. ಡಿಸಿಎಂಗಳ ಜೊತೆಗೆ ನಿತೀಶ್‌ ಕುಮಾರ್‌ ಒಳ್ಳೆಯ ಸಂಬಂಧ ಕಾಪಾಡಿಕೊಂಡ ಇತಿಹಾಸವಿಲ್ಲ.

"ನಮ್ಮ ನಾಯಕ ಅತಿ ದೊಡ್ಡ ಸ್ಥಾನ ಏರಲು ಅರ್ಹ ಎಂದು ಪಕ್ಷದ ಕಾರ್ಯಕರ್ತ ಭಾವಿಸದೇ ಇದ್ದರೆ, ನಾವು ಅವರನ್ನು ಪ್ರಭಾವಿಸಲು ವಿಫಲರಾಗಿದ್ದೇವೆ ಎಂದರ್ಥ. ಅವರು ಅತೊ ದೊಡ್ಡ ಸ್ಥಾನವನ್ನು ಬಯಸಬೇಕು ಎಂಬುದು ನಮ್ಮ ಆಸೆ. ನನ್ನ ತಂದೆ ದೇಶದ ಪ್ರಧಾನಿ ಆಗಬೇಕೆಂದು ನಾನು ಬಯಸಿದ್ದೆ" ಎಂದು ಚಿರಾಗ್‌ ಒಂದು ಸಂದರ್ಶನದಲ್ಲಿ ಹೇಳಿದ್ದರು. "ಭವಿಷ್ಯ ಏನು ಎಂದು ನನಗೆ ಗೊತ್ತಿಲ್ಲ. ಒಂದು ಹಂತಕ್ಕೆ ಏರಿದ ಬಳಿಕ ಮುಂದಿನದರ ಬಗ್ಗೆ ಯೋಚಿಸುತ್ತೇನೆ. ಬಿಹಾರ ಚುನಾವಣೆ ಬಳಿಕ ನನ್ನ ಆದ್ಯತೆ ಎಂದರೆ 2017ರ ಉತ್ತರ ಪ್ರದೇಶ ಹಾಗೂ ಪಂಜಾಬ್‌ ಚುನಾವಣೆಗಳು. ನಂತರ 2029ರ ಲೋಕಸಭೆ ಚುನಾವಣೆ. ನನ್ನ ಪ್ರಧಾನಿ ನಾಲ್ಕನೇ ಬಾರಿಗೆ ಆಯ್ಕೆಯಾಗುವುದನ್ನು ನಾನು ನೋಡಬೇಕು. ನಂತರ 2030ರ ಕುರಿತು ಯೋಚಿಸುತ್ತೇನೆ" ಎನ್ನುತ್ತಾರೆ ಚಿರಾಗ್.‌

ಎನ್‌ಡಿಎಗೆ ನಿರೀಕ್ಷಿತ ಸ್ಥಾನಗಳ ಬರದೇ ಹೋದರೆ ಬೇರೆ ಕಡೆಗೆ ಹೋಗುವಿರಾ ಎಂಬ, ಚುನಾವಣೆಯ ಮೊದಲು ಎದುರಾಗಿದ್ದ ಪ್ರಶ್ನೆಗೆ ಚಿರಾಗ್‌ ಉತ್ತರಿಸಿ, ಮೋದಿ ಬಗೆಗೆ ತಮಗಿರುವ ಪ್ರಶ್ನಾತೀತ ನಿಷ್ಠೆಯನ್ನು ಪ್ರದರ್ಶಿಸಿದ್ದರು. "ನಾನೆಲ್ಲಿಗೂ ಹೋಗುವುದಿಲ್ಲ. ಮೋದಿಯವರ ಬಗ್ಗೆ ನನ್ನ ನಿಷ್ಠೆ, ಪ್ರೀತಿ ಪ್ರಶ್ನಾತೀತ" ಎಂದಿದ್ದರು.

ಇದನ್ನೂ ಓದಿ: Bihar Election 2025 Results: ಮತ ಚೋರಿ ಎಂದವರಿಗೆ ಬಿಹಾರದಲ್ಲಿ ತಕ್ಕ ಪಾಠ: ಬಿ.ವೈ.ವಿಜಯೇಂದ್ರ