Karnataka SIR: ಎಸ್‌ಐಆರ್‌ನಲ್ಲಿ ರಾಜ್ಯ ಸರ್ಕಾರ ಕಾನೂನುಬಾಹಿರ ಹಸ್ತಕ್ಷೇಪ; ರಾಜ್ಯಪಾಲರಿಗೆ ಬಿಜೆಪಿ-ಜೆಡಿಎಸ್ ನಿಯೋಗ ದೂರು
ರಾಜ್ಯ ಕಾಂಗ್ರೆಸ್ ಸರ್ಕಾರವು ವಿರೋಧ ಪಕ್ಷಗಳ ಕಾರ್ಯಕರ್ತರ ಮೇಲೆ ರಾಜಕೀಯ ದ್ವೇಷ ಸಾಧಿಸಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಬಿಜೆಪಿ-ಜೆಡಿಎಸ್ ಮೈತ್ರಿಯ ಎನ್‌ಡಿಎ ನಿಯೋಗದಿಂದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಮಂಗಳವಾರ ದೂರು ಸಲ್ಲಿಸಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಎನ್‌ಡಿಎ ನಿಯೋಗದಿಂದ ದೂರು ಸಲ್ಲಿಕೆ. -
ಬೆಂಗಳೂರು: ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ (Karnataka SIR) ರಾಜ್ಯ ಸರ್ಕಾರವು ಕಾನೂನುಬಾಹಿರ ಹಸ್ತಕ್ಷೇಪ ಮಾಡುತ್ತಿದ್ದು, ಫಾರ್ಮ್-7 ರ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸುತ್ತಿರುವ ವ್ಯಕ್ತಿಗಳ ವಿರುದ್ಧ ಸುಳ್ಳು ಮತ್ತು ಗಂಭೀರ ಸ್ವರೂಪದ ಆರೋಪಗಳನ್ನು ಹೊರಿಸಿ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಹೀಗಾಗಿ ಆಕ್ಷೇಪಣೆ ಸಲ್ಲಿಸಿರುವ ವ್ಯಕ್ತಿಗಳ ಹಿತಾಸಕ್ತಿಗಳನ್ನು ಕಾಪಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಬಿಜೆಪಿ-ಜೆಡಿಎಸ್ (ಎನ್‌ಡಿಎ) ನಿಯೋಗ ದೂರು ಸಲ್ಲಿಸಿದೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಮುಖಂಡರಾದ ಎಸ್.ಎಲ್. ಭೋಜೇಗೌಡ, ಟಿ.ಎ. ಶರವಣ, ಶಾಸಕರಾದ ಶ್ರೀವತ್ಸ, ವಿಠಲ್ ಹಲಗೇಕರ್ ಹಾಗೂ ಸಂಸದ ಮಲ್ಲೇಶ್ ಬಾಬು ಸೇರಿದಂತೆ ಹಲವು ನಾಯಕರು ನಿಯೋಗದಲ್ಲಿದ್ದರು.
ದೂರಿನಲ್ಲಿ ಏನಿದೆ?
1960ರ ಮತದಾರರ ನೋಂದಣಿ ನಿಯಮಗಳ ನಿಯಮ 13(2) ರ ಪ್ರಕಾರ, ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸುವುದಕ್ಕೆ ಸಲ್ಲಿಸುವ ಪ್ರತಿಯೊಂದು ಆಕ್ಷೇಪಣೆಯು ನಮೂನೆ-7ರಲ್ಲಿರಬೇಕು ಮತ್ತು ಅದನ್ನು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಯಾವುದೇ ವ್ಯಕ್ತಿ ಸಲ್ಲಿಸಬಹುದಾಗಿದೆ.
ಫಾರ್ಮ್-7 ರ ಮೂಲಕ ಬೃಹತ್ ಪ್ರಮಾಣದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ ಯಾವುದೇ ನಿಷೇಧವಿಲ್ಲ. ಆದರೆ, ರಾಜ್ಯದಲ್ಲಿ ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದ ಸಚಿವರು, ಸದಸ್ಯರು ಹಾಗೂ ಕೆಪಿಸಿಸಿಗೆ ಕಾರ್ಯಕರ್ತರು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ವ್ಯಾಪಕವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಫಾರ್ಮ್-7 ರ ಮೂಲಕ ಆಕ್ಷೇಪಣೆ ಸಲ್ಲಿಸುತ್ತಿರುವ ವ್ಯಕ್ತಿಗಳ ವಿರುದ್ಧ ಸುಳ್ಳು ಮತ್ತು ಗಂಭೀರ ಸ್ವರೂಪದ ಅಪರಾಧ ಆರೋಪಗಳನ್ನು ಹೊರಿಸುವ ಮೂಲಕ ರಾಜ್ಯ ಪೊಲೀಸ್ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಆಕ್ಷೇಪಣೆ ಸಲ್ಲಿಸುವವರ ಮನಸ್ಸಿನಲ್ಲಿ ಭಯ ಮತ್ತು ಆತಂಕದ ವಾತಾವರಣ ಸೃಷ್ಟಿಯಾಗುತ್ತಿದ್ದು, ಎಸ್‌ಐಆರ್‌ನ ಸಂಪೂರ್ಣ ಪ್ರಕ್ರಿಯೆಯು ದುರ್ಬಲಗೊಳ್ಳುತ್ತಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆ, 1950 ರ ಸೆಕ್ಷನ್ 31ರ ಅಡಿಯಲ್ಲಿ ಸುಳ್ಳು ಆಕ್ಷೇಪಣೆಗಳನ್ನು ಸಲ್ಲಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದರೂ, ರಾಜ್ಯ ಸರ್ಕಾರವು ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ವಂಚನೆ, ಸುಳ್ಳು ದಾಖಲೆ ಸೃಷ್ಟಿ (ಫೋರ್ಜರಿ), ಬೆದರಿಕೆ ಹಾಕುವುದು ಮತ್ತು ಶಾಂತಿಭಂಗದಂತಹ ಗಂಭೀರ ಸ್ವರೂಪದ ಪ್ರಕರಣಗಳನ್ನು ದಾಖಲಿಸುವಂತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರುತ್ತಿದೆ. ಪೊಲೀಸರು ಸರಿಯಾದ ವಿವೇಚನೆ ಇಲ್ಲದೆ ರಾಜಕೀಯ ಒತ್ತಡಕ್ಕೆ ಮಣಿದು, ವಿಶೇಷವಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಬಿಜೆಪಿಯ ಬಗ್ಗೆ ಒಲವು ಹೊಂದಿರುವ ವ್ಯಕ್ತಿಗಳನ್ನು ಗುರಿಯಾಗಿಸಿ ಗಂಭೀರ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಎನ್‌ಡಿಎ ನಿಯೋಗ ಆರೋಪಿಸಿದೆ.
ಭಾಲ್ಕಿ (ಬೀದರ್), ಮಾರ್ಕೆಟ್ ಪ್ರದೇಶ (ಬೆಳಗಾವಿ), ವೈಯಾಲಿಕಾವಲ್ (ಬೆಂಗಳೂರು), ಬಳ್ಳಾರಿ ಮತ್ತು ನರಸಿಂಹರಾಜ (ಮೈಸೂರು) ಗಳಲ್ಲಿ ಆರು ಎಫ್‌ಐಆರ್ (FIR)ಗಳು ದಾಖಲಾಗಿರುವ ಬಗ್ಗೆ ವರದಿಗಳಾಗಿವೆ. ಇದು ಸ್ವತಂತ್ರ ಮತ್ತು ನಿಷ್ಪಕ್ಷಪಾತ ಸಂಸ್ಥೆಯಾದ ಭಾರತೀಯ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡಲು ಪೊಲೀಸ್ ಅಧಿಕಾರವನ್ನು ಗಂಭೀರವಾಗಿ ದುರುಪಯೋಗಪಡಿಸಿಕೊಳ್ಳುವುದಾಗಿದೆ. ಇದು ಇಡೀ ಎಸ್‌ಐಆರ್ ಪ್ರಕ್ರಿಯೆಯ ಸಮಗ್ರತೆಗೆ ಧಕ್ಕೆ ತರುತ್ತದೆ.
ಇದಲ್ಲದೆ ಅ.1 ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸಚಿವರ ಪರಿವಾರದೊಂದಿಗೆ ನಿಷೇಧಾಜ್ಞೆ ಇದ್ದರೂ ಚುನಾವಣಾಧಿಕಾರಿಗಳ ಕಚೇರಿಯ ಆವರಣದಲ್ಲಿ ಕಾನೂನುಬಹಿರವಾಗಿ ಪ್ರತಿಭಟನೆ ನಡೆಸಿದ್ದು ಕಳವಳಕಾರಿ ಸಂಗತಿಯಾಗಿದೆ. ಹೀಗಾಗಿ ರಾಜ್ಯ ಸರ್ಕಾರವು ಎಸ್‌ಐಆರ್‌ನ ಸಾಂವಿಧಾನಿಕ ಪ್ರಕ್ರಿಯೆಯ ಮೇಲೆ ಬೀರುತ್ತಿರುವ ಅನುಚಿತ ಪ್ರಭಾವದ ಬಗ್ಗೆ ನಮ್ಮ ಗಂಭೀರ ಕಳವಳವನ್ನು ಮತ್ತು ಅಸಮ್ಮತಿಯನ್ನು ವ್ಯಕ್ತಪಡಿಸುತ್ತೇವೆ. ಮುಖ್ಯ ಚುನಾವಣಾ ಅಧಿಕಾರಿಯವರ ಕಚೇರಿಯು ಸಹ ಅಂತಹ ಒತ್ತಡಕ್ಕೆ ಮಣಿದಂತೆ ತೋರುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.
ಈ ಪರಿಸ್ಥಿತಿಯಲ್ಲಿ, ಫಾರ್ಮ್-7 ರ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಿರುವ ವ್ಯಕ್ತಿಗಳ ಹಿತಾಸಕ್ತಿಗಳನ್ನು ಕಾಪಾಡುವ ದೃಷ್ಟಿಯಿಂದ, ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ವಿನಂತಿಸುತ್ತೇವೆ. ಹಾಗೂ ಈ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸೇರಿದಂತೆ ಇತರೆ ವ್ಯಕ್ತಿಗಳ ವಿರುದ್ಧ ಸುಳ್ಳು, ಅನಗತ್ಯ ಎಫ್‌ಐಆರ್ ದಾಖಲಾಗದಂತೆ ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಮುಂದಿನ ನಿರ್ದೇಶನಗಳನ್ನು ನೀಡುವಂತೆಯೂ ನಾವು ವಿನಂತಿಸುತ್ತೇವೆ ಎಂದು ರಾಜ್ಯಪಾಲರಿಗೆ ಕೋರಲಾಗಿದೆ.