ನವದೆಹಲಿ: ನಿರುದ್ಯೋಗದ ಕುರಿತಾಗಿ ಸುಪ್ರೀಂ ಕೋರ್ಟ್ (supreme court) ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆಗಳಿಂದ ಪ್ರೇರಿತವಾಗಿ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷ (Cockroach Janta Party) ಈಗ ಸಾಮಾಜಿಕ ಮಾಧ್ಯಮಗಳಲ್ಲಿ (social media) ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದೆ. ಮುಂದೆ ಒಂದು ವೇಳೆ ಕಾಕ್ರೋಚ್ (Cockroach) ಜನತಾ ಪಕ್ಷದಿಂದ ಯಾರಾದರೂ ಚುನಾವಣಾ (election) ಕಣಕ್ಕೆ ಇಳಿಯುವ ಯೋಚನೆ ಮಾಡಿದರೆ ಅವರಿಗೆ ಪಕ್ಷದ ಚಿಹ್ನೆಯಾಗಿ ಜಿರಳೆ (cockroach poll symbol) ಸಿಗುತ್ತದೆಯೇ ? ಎನ್ನುವ ಚರ್ಚೆಗಳು ಪ್ರಾರಂಭವಾಗಿವೆ.
ಕೇವಲ ಐದು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ ಮಾತುಗಳು ಈಗ ದೇಶದ ರಾಜಕೀಯ ವಲಯದಲ್ಲಿ ಜೋರಾಗಿ ಹರಿದಾಡುತ್ತಿವೆ. ಇದರ ಭವಿಷ್ಯದ ಕುರಿತು ಕೂಡ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕಾಕ್ರೋಚ್ ಜನತಾ ಪಕ್ಷ ತನ್ನ ಚುನಾವಣಾ ಚಿಹ್ನೆಯಾಗಿ ಮೊಬೈಲ್ ಫೋನ್ ಅನ್ನು ಬಯಸುತ್ತದೆ. ಆದರೆ ಇದು ಚುನಾವಣಾ ಆಯೋಗದ ಉಚಿತ ಚಿಹ್ನೆಗಳ ಪಟ್ಟಿಯಲ್ಲಿಲ್ಲ. ಹೀಗಾಗಿ ಅದು ತನ್ನ ಚುನಾವಣಾ ಚಿಹ್ನೆಯಾಗಿ ಜಿರಳೆಯನ್ನು ಬಳಸಬಹುದೇ?
5 ದಿನಗಳಲ್ಲಿ 10 ಮಿಲಿಯನ್ ಫಾಲೋವರ್ಸ್: ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿಯನ್ನು ಹಿಂದಿಕ್ಕಿದ ಜಿರಳೆ ಜನತಾ ಪಕ್ಷ
ದೇಶದಲ್ಲಿ ಮಾತ್ರವಲ್ಲ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಆಡಳಿತಾರೂಢ ಬಿಜೆಪಿಯ ಅನುಯಾಯಿಗಳನ್ನು ಕೂಡ ಹಿಂದಿಕ್ಕಿರುವ ಕಾಕ್ರೋಚ್ ಜನತಾ ಪಕ್ಷ ತೃಣಮೂಲ ಕಾಂಗ್ರೆಸ್ ನ ಇಬ್ಬರು ಸಂಸದರನ್ನು ಈಗಾಗಲೇ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದಾಗಿ ಹೇಳಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹುಟ್ಟಿರುವ ಪಕ್ಷದ ರಾಜ್ಯ ಘಟಕಗಳು ಕೂಡ ಆರಂಭಗೊಂಡಿವೆ ಎಂದು ಯುನೈಟೆಡ್ ಸ್ಟೇಟ್ಸ್ ನ ಬೋಸ್ಟನ್ ನಿಂದ ಕಾರ್ಯನಿರ್ವಹಿಸುವ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ತಿಳಿಸಿದ್ದಾರೆ. ದೇಶದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುತ್ತಿರುವ ಸಿಜೆಪಿಯ ಎಕ್ಸ್ ಖಾತೆಯನ್ನು ಗುರುವಾರ ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ.
ಬೆಳೆಯುತ್ತಿರುವ ಸಾಮಾಜಿಕ ಮಾಧ್ಯಮ ಅನುಯಾಯಿಗಳು ಮತ್ತು ಸಾವಿರಾರು ಸದಸ್ಯರು ಹಕ್ಕು ಕೇಳುತ್ತಿರುವುದರಿಂದ ಉತ್ತೇಜಿತವಾಗಿರುವ ಕಾಕ್ರೋಚ್ ಜನತಾ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಅದಕ್ಕೆ ಜಿರಳೆಯನ್ನು ತನ್ನ ಚುನಾವಣಾ ಚಿಹ್ನೆಯಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಆದರೆ ಇದು ಅಷ್ಟು ಸುಲಭದ ಕಾರ್ಯವೇನಲ್ಲ.
ಯಾಕೆಂದರೆ ಭಾರತದ ಚುನಾವಣಾ ಆಯೋಗದ ಉಚಿತ ಚಿಹ್ನೆಗಳ ಪಟ್ಟಿಯಲ್ಲಿ ಜಿರಳೆ ಇಲ್ಲ. ಇದನ್ನು ಚಿಹ್ನೆಯಾಗಿ ಪಡೆಯಬೇಕಾದರೆ ಅದು ಮೊದಲು ಭಾರತ ಚುನಾವಣಾ ಆಯೋಗದ ಪ್ರಕಾರ ನೋಂದಣಿ ಮಾಡಿಕೊಳ್ಳಬೇಕು.ಬಳಿಕ ಪಕ್ಷಕ್ಕೆ ತನ್ನ ಆಯ್ಕೆಯ ಮೂರು ಹೊಸ ಚಿಹ್ನೆ, ವಿನ್ಯಾಸ ಮತ್ತು ರೇಖಾಚಿತ್ರಗಳೊಂದಿಗೆ ಸಾಮಾನ್ಯ ಚಿಹ್ನೆಯಾಗಿ ಪರಿಗಣಿಸಲು ಪ್ರಸ್ತಾಪಿಸಬಹುದು. ಈ ಚಿಹ್ನೆಯನ್ನು ನೀಡಲು ಯಾವುದೇ ಆಕ್ಷೇಪಣೆ ಇಲ್ಲದಿದ್ದರೆ ಅವುಗಳನ್ನು ಭಾರತೀಯ ಚುನಾವಣಾ ಆಯೋಗವು ಪರಿಗಣಿಸುತ್ತದೆ.
ಹೊಸದಾಗಿ ಪ್ರಸ್ತಾಪಿಸಲಾದ ಚಿಹ್ನೆಗಳು ಈಗಾಗಲೇ ಅಸ್ತಿತ್ವದಲ್ಲಿರುವ ಚಿಹ್ನೆಗಳಿಗೆ ಯಾವುದೇ ರೀತಿಯಲ್ಲಿ ಹೋಲಿಕೆಯನ್ನು ಹೊಂದಿರಬಾರದು. ಯಾವುದೇ ಧಾರ್ಮಿಕ ಅಥವಾ ಕೋಮು ಅರ್ಥವನ್ನು ಒಳಗೊಂಡಿರಬಾರದು. ಯಾವುದೇ ಪಕ್ಷಿ ಅಥವಾ ಪ್ರಾಣಿಯ ಚಿತ್ರವಾಗಿರಬಾರದು. ಜಿರಳೆ ಒಂದು ಕೀಟವಾಗಿದ್ದು ಅದನ್ನು ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನಿಬಂಧನೆಗಳು ಈ ಚಿಹ್ನೆ ಹೊಂದಲು ಅಡ್ಡಿಪಡಿಸಿದರೆ ಚುನಾವಣಾ ಆಯೋಗವು ಈ ನಿರ್ಬಂಧವನ್ನು ಉಲ್ಲಂಘಿಸಬಹುದಾಗಿದೆ.
ಪ್ರಾಣಿ ಅಥವಾ ಪಕ್ಷಿಗಳ ಚಿಹ್ನೆಗಳನ್ನು ಭಾರತೀಯ ಚುನಾವಣೆಯಲ್ಲಿ ಬಳಸಲಾಗುವುದಿಲ್ಲ. ಆದರೆ ಕೆಲವೊಂದು ಮಾನ್ಯತೆ ಪಡೆದ ಪಕ್ಷಗಳು ಇದನ್ನು ತಮ್ಮ ಪಕ್ಷದ ಚಿಹ್ನೆಯಾಗಿ ಬಳಸಿಕೊಂಡಿವೆ. ಪಕ್ಷದ ಚಿಹ್ನೆಯಾಗಿ "ಪ್ರಾಣಿ" ಮೇಲಿನ ನಿರ್ಬಂಧವು ಹೊಸದೇನಲ್ಲ.
ಚುನಾವಣಾ ಪ್ರಚಾರದಲ್ಲಿ ನಿಜವಾದ ಪ್ರಾಣಿಗಳನ್ನು ಬಳಸಲಾಗುತ್ತದೆ ಎಂಬ ಕಾರಣದಿಂದ 1991ರಿಂದ ಚುನಾವಣಾ ಆಯೋಗವು ಪ್ರಾಣಿಗಳ ಚಿಹ್ನೆಗಳನ್ನು ನೀಡುವುದನ್ನು ನಿಲ್ಲಿಸಿದೆ. ಒಂದು ವೇಳೆ ಪ್ರಾಣಿಗಳ ಚಿಹ್ನೆ ಪಡೆದರೆ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಬಳಸದಂತೆ, ಯಾವುದೇ ರೀತಿಯಲ್ಲಿ ಅವುಗಳ ಮೇಲೆ ಕ್ರೌರ್ಯ ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.
ಹಳೆಯ ಪಕ್ಷಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದ್ದು, ಐತಿಹಾಸಿಕವಾಗಿ ಹಂಚಿಕೆಯಾದ ಪ್ರಾಣಿ-ಆಧಾರಿತ ಚಿಹ್ನೆಗಳನ್ನು ಬಳಸುವುದನ್ನು ಅವುಗಳು ಮುಂದುವರಿಸಬಹುದು. ಆದರೆ ಹೊಸ ಅರ್ಜಿದಾರರು ಹೆಚ್ಚು ಕಠಿಣ ಮಾನದಂಡವನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳಿದೆ.