''ದೆಹಲಿಯಲ್ಲಿ ಇಳಿದ ತಕ್ಷಣ ನನ್ನನ್ನು ತಿಹಾರ್ ಜೈಲಿಗೆ ಕರೆದೊಯ್ಯಬಹುದುʼʼ: ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಆತಂಕ
Cockroach Janta Party: ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ‘ಜಿರಳೆ’ ಹೇಳಿಕೆಯಿಂದ ಹುಟ್ಟಿದ ʼಕಾಕ್ರೋಚ್ ಜನತಾ ಪಕ್ಷʼ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ, ದೆಹಲಿಗೆ ಬಂದಿಳಿದ ತಕ್ಷಣ ತಮ್ಮನ್ನು ತಿಹಾರ್ ಜೈಲಿಗೆ ಕರೆದೊಯ್ಯಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಭಿಜೀತ್ ದಿಪ್ಕೆ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ -
ದೆಹಲಿ, ಮೇ 13: ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ (Chief Justice Surya Kant) ಅವರ ಜಿರೆಳೆ (Cockroach) ಹೇಳಿಕೆಯ ನಂತರ ಕೇವಲ ಹಾಸ್ಯ ಮತ್ತು ವ್ಯಂಗ್ಯಕ್ಕಾಗಿ ಆರಂಭವಾದ ಪೇಜ್, ಈಗ ಹಲವು ವಿರೋಧ ಪಕ್ಷದ ನಾಯಕರ ಬೆಂಬಲದೊಂದಿಗೆ ಪೂರ್ಣ ಪ್ರಮಾಣದ ರಾಜಕೀಯ ಸಂಘಟನೆಯಾಗಿ ರೂಪಾಂತರಗೊಂಡಿದೆ. ಹೌದು, ಇಂಟರ್‌ನೆಟ್ ಕಾಕ್ರೋಚ್ ಜನತಾ ಪಕ್ಷ (CJP) ಪ್ರಾರಂಭವಾದ ಕೇವಲ ಒಂದು ವಾರದೊಳಗೆ ಅಭೂತಪೂರ್ವ ಜನಪ್ರಿಯತೆ ಗಳಿಸಿದೆ.
ಈ ವಿಡಂಬನಾತ್ಮಕ ಸಂಘಟನೆಯು ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿ ಫಾಲೋವರ್ಸ್ ಸಂಖ್ಯೆಯನ್ನೂ ಹಿಂದಿಕ್ಕಿ ಮುನ್ನಡೆಯುತ್ತಿರುವುದೇ ಇದಕ್ಕೆ ಸಾಕ್ಷಿ. ಇತ್ತೀಚಿನ ಸಂದರ್ಶನವೊಂದರಲ್ಲಿ, ಈ ಸಂಘಟನೆಯ ಸಂಸ್ಥಾಪಕ ಅಭಿಜೀತ್ ದಿಪ್ಕೆ ಇದರ ಜನಪ್ರಿಯತೆಯ ಹಿಂದಿನ ಕಾರಣಗಳು, ತಮ್ಮ ಕಾರ್ಯಸೂಚಿ ಮತ್ತು ಭಾರತಕ್ಕೆ ಮರಳಿದ ತಕ್ಷಣ ತಮಗೆ ಎದುರಾಗಬಹುದಾದ ಬಂಧನದ ಭೀತಿಯ ಬಗ್ಗೆ ಮಾತನಾಡಿದ್ದಾರೆ.
ಅಭಿಜೀತ್ ದಿಪ್ಕೆ ಅವರ ಎಕ್ಸ್ ಪೋಸ್ಟ್:
Still relentlessly trying to hack my personal Instagram. pic.twitter.com/XPRWLxP7WA
— Abhijeet Dipke (@abhijeet_dipke) May 21, 2026
"ಕೊನೆಗೂ ಈ ದೇಶದಲ್ಲಿ ನಮ್ಮ ಗುರುತು ಏನೆಂದು ನಮಗೆ ತಿಳಿದಿದೆ. ನಮ್ಮನ್ನು ಜಿರಳೆಗಳಂತೆ ನೋಡಲಾಗುತ್ತಿದೆ" ಎಂದು ದಿಪ್ಕೆ 'ದಿ ರೆಡ್ ಮೈಕ್' ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಯನ್ನು ಹಿಂದಿಕ್ಕಿರುವ ಬಗ್ಗೆ ಮಾತನಾಡಿದ ಅವರು, "ನಮಗೆ ಹೆಚ್ಚು ಫಾಲೋವರ್ಸ್ ಬಂದಿದ್ದಾರೆ ಎಂಬ ಬಗ್ಗೆ ನನಗೇನು ಸಂತೋಷವಿಲ್ಲ. ಅದರಿಂದ ಏನಾಗುತ್ತದೆ? ಜನರ ಸಮಸ್ಯೆಗಳು ಹಾಗೇ ಉಳಿದಿವೆ" ಎಂದಿದ್ದಾರೆ.
ಕಾಕ್ರೋಚ್ ಜನತಾ ಪಕ್ಷದ X ಖಾತೆ ಬ್ಲಾಕ್; ಎರಡು ಟ್ರೇಡ್‌ಮಾರ್ಕ್ ಹಕ್ಕುಗಳು ಮುಂಚೂಣಿಗೆ
ಇದಕ್ಕೂ ಮುನ್ನ, ಕಾಕ್ರೋಚ್ ಜನತಾ ಪಕ್ಷದ ಎಕ್ಸ್ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿತ್ತು. ಇದರ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದ ದಿಪ್ಕೆ, "ನಿರೀಕ್ಷೆಯಂತೆಯೇ ಭಾರತದಲ್ಲಿ ಕಾಕ್ರಾಚ್ ಜನತಾ ಪಕ್ಷದ ಖಾತೆಯನ್ನು ತಡೆಹಿಡಿಯಲಾಗಿದೆ" ಎಂದು ಬರೆದುಕೊಂಡಿದ್ದರು. ಇದೇ ವೇಳೆ, ತಾನು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ತನ್ನನ್ನು ಬಂಧಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು, "ನಾನು ದೆಹಲಿ ಏರ್‌ಪೋರ್ಟ್‌ನಲ್ಲಿ ಇಳಿಯುತ್ತಿದ್ದಂತೆ, ದೆಹಲಿ ಪೊಲೀಸರ ಬೆಂಗಾವಲು ಪಡೆ ನನ್ನನ್ನು ನೇರವಾಗಿ ತಿಹಾರ್ ಜೈಲಿಗೆ ಕರೆದೊಯ್ಯುತ್ತದೆ ಎಂದು ನನಗೆ ಅನಿಸುತ್ತಿದೆ" ಎಂದು ತಿಳಿಸಿದ್ದಾರೆ.
30 ವರ್ಷದ ರಾಜಕೀಯ ಸಂವಹನ ತಂತ್ರಜ್ಞ ಅಭಿಜೀತ್ ದಿಪ್ಕೆ, ಇತ್ತೀಚೆಗಷ್ಟೇ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ (ಪಿಆರ್) ವಿಷಯದಲ್ಲಿ ಪದವಿ ಮುಗಿಸಿ ಪ್ರಸ್ತುತ ಅಮೆರಿಕದಲ್ಲಿದ್ದಾರೆ. ಈ ಹಿಂದೆ ಪುಣೆಯಲ್ಲಿ ಪತ್ರಿಕೋದ್ಯಮ ಪದವಿ ಮುಗಿಸಿದ್ದ ಅವರು, ಡಿಜಿಟಲ್ ರಾಜಕೀಯ ಸಂದೇಶ ಕಳುಹಿಸುವಿಕೆ ಮತ್ತು ಆನ್‌ಲೈನ್ ಪ್ರಚಾರ ತಂತ್ರಗಳಲ್ಲಿ ಹೆಸರುವಾಸಿಯಾಗಿದ್ದರು.
ಕೇವಲ ನಾಲ್ಕು ದಿನಗಳ ಹಿಂದೆ ಜನ್ಮತಾಳಿದ ಈ ವಿಡಂಬನಾತ್ಮಕ ಪುಟವು ಇನ್‌ಸ್ಟಾಗ್ರಾಮ್‌ನಲ್ಲಿ 12 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಬಿಜೆಪಿಯ 8.7 ಮಿಲಿಯನ್ ಫಾಲೋವರ್ಸ್ ಸಂಖ್ಯೆಯನ್ನು ಮೀರಿಸಿದೆ. ಸದ್ಯ ಸಿಜೆಪಿಗೆ ಮಹುವಾ ಮೊಯಿತ್ರಾ, ಕೀರ್ತಿ ಆಜಾದ್, ಅಖಿಲೇಶ್ ಯಾದವ್ ಸೇರಿ ಹಲವು ವಿರೋಧ ಪಕ್ಷದ ನಾಯಕರು, ಹಾಸ್ಯನಟರು ಹಾಗೂ ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.