ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬಂಧನಕ್ಕೆ ಸಿಎಂ ಸೂಚನೆ
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿರುವ ಸಂಬಂಧ ಕೈ ಮುಖಂಡ ರಾಜೀವ್ ಗೌಡ ವಿರುದ್ಧ ಎರಡು ಪ್ರಕರಣ ದಾಖಲಾಗಿವೆ. ಹೀಗಾಗಿ ಕಾಂಗ್ರೆಸ್ ಮುಖಂಡನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಆರೋಪಿ ರಾಜೀವ್ ಗೌಡ -
ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಜೀವ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ (Rajeev Gowda) ತಲೆಮರೆಸಿಕೊಂಡಿದ್ದು, ವರನ್ನು ಬಂಧಿಸಲಾಗುವುದು. ಅವರ ಮೇಲೆ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಯಾವುದೇ ಪಕ್ಷದವರಾಗಲಿ, ಕಾನೂನಿಗಿಂತ ಯಾರೂ ಮೇಲಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಇಂದು ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿದ ನಂತರ ಮಾಧ್ಯಮ ಗೋಷ್ಠಿಯಲ್ಲಿ ರಾಜೀವ್ ಗೌಡ ಪ್ರಕರಣದ ಬಗ್ಗೆ ಸಿಎಂ ಪ್ರತಿಕ್ರಿಯಿಸಿದ್ದಾರೆ.
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕೈ ಮುಖಂಡ ರಾಜೀವ್ ಗೌಡ ವಿರುದ್ಧ ಶಿಡ್ಲಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಶಾಸಕ ರವಿಕುಮಾರ್ ಬೆಂಬಲಿಗರು ನೀಡಿದ ದೂರಿನ ಅನ್ವಯ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿ ರಾಜೀವ್ ಗೌಡ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಆದರೆ, ಬಂಧನ ಭೀತಿಯಿಂದ ಕೈ ಮುಖಂಡ ತಲೆಮಾರೆಸಿಕೊಂಡಿದ್ದಾನೆ.
ಶಿಡ್ಲಘಟ್ಟ ಮಹಿಳಾ ಅಧಿಕಾರಿಗೆ ಧಮ್ಕಿ; ಕಾಂಗ್ರೆಸ್ ಮುಖಂಡನ ಬಂಧನಕ್ಕೆ ಎಚ್.ಡಿ.ಕುಮಾರಸ್ವಾಮಿ ಆಗ್ರಹ
3 ತಂಡಗಳಿಂದ ಹುಡುಕಾಟ
ತಲೆಮರೆಸಿಕೊಂಡಿರುವ ರಾಜೀವ್ಗೌಡಗಾಗಿ 3 ತಂಡಗಳಿಂದ ಹುಡುಕಾಟ ನಡೆಸಲಾಗುತ್ತಿದೆ. ಶಿಡ್ಲಘಟ್ಟ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆನಂದಕುಮಾರ್, ಚಿಂತಾಮಣಿ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಶಿವರಾಜ್ ಮತ್ತು ಸೈಬರ್ ಪೊಲೀಸ್ ಠಾಣೆ ಪಿಐ ಸೂರ್ಯಪ್ರಕಾಶ್ ನೇತೃತ್ವದಲ್ಲಿ ಶೋಧ ನಡೆಯುತ್ತಿದೆ. ಬಂಧನ ಭೀತಿಯಿಂದ ರಾಜೀವ್ ಗೌಡ ಪರಾರಿಯಾಗಿದ್ದು, ಆತನ 2 ಮೊಬೈಲ್ಗಳು ಕೂಡ ಸ್ವಿಚ್ಆಫ್ ಆಗಿವೆ. ಹೀಗಾಗಿ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.