ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DISHA Meeting: ಕೇಂದ್ರದ ಯೋಜನೆಗಳಿಗೆ ಬಾರದ ಹಣ: ದಿಶಾ ಸಭೆಯಲ್ಲಿ ಸಿಎಂ ಅಸಮಾಧಾನ

DISHA Meeting: 5300 ಕೋಟಿ ರೂಪಾಯಿ ಭದ್ರಾ ಮೇಲ್ದಂಡೆ ಯೋಜನೆಗೆ ಕೊಡುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಘೋಷಿಸಿದರೂ ನಯಾಪೈಸೆ ಕೊಡಲಿಲ್ಲ. ಈ ಬಗ್ಗೆ ಎರಡು ವರ್ಷದಲ್ಲಿ ಒಮ್ಮೆಯೂ ರಾಜ್ಯದ ಪರವಾಗಿ ಬಿಜೆಪಿ ಸಂಸದರು ಮಾತನಾಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕೇಂದ್ರದ ಯೋಜನೆಗಳಿಗೆ ಬಾರದ ಹಣ: ದಿಶಾ ಸಭೆಯಲ್ಲಿ ಸಿಎಂ ಅಸಮಾಧಾನ

Profile Prabhakara R May 14, 2025 3:21 PM

ಬೆಂಗಳೂರು: ಕೇಂದ್ರ ಸರ್ಕಾರದಿಂದ ಬರಬೇಕಾದ ಪಿಂಚಣಿ ಎರಡು ವರ್ಷದಿಂದ ರಾಜ್ಯಕ್ಕೆ ಕೊಟ್ಟಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರದಿಂದ ಹಣ ಬಾರದೇ ಇರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ವಲಯ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನೆಗಾಗಿ ವಿಧಾನಸೌಧದಲ್ಲಿ (DISHA Meeting) ಬುಧವಾರ ನಡೆದ ರಾಜ್ಯ ಮಟ್ಟದ ದಿಶಾ ಸಮಿತಿ (DISHA-District Development Co-ordination and Monitoring Committee) ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ರಾಜ್ಯ ಸರ್ಕಾರವೇ ಬಹುತೇಕ ಹಣ ಕೊಡುವ ಯೋಜನೆಗಳಿಗೆ ಪ್ರಧಾನಿ ಮತ್ತು ಕೇಂದ್ರದ ಹೆಸರಿದೆ. ಆದರೂ ಚೂರು, ಪಾರು ಕೇಂದ್ರದ ಹಣವೂ ಬರುತ್ತಿಲ್ಲ. ಈ ನಿರಂತರ ಅನ್ಯಾಯ ಪ್ರಶ್ನಿಸಬೇಕಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಕೇಂದ್ರ ಸರ್ಕಾರಕ್ಕೆ , ಕೇಂದ್ರದ ಮಂತ್ರಿಗಳಿಗೆ ಮತ್ತು ಪ್ರಧಾನ ಮಂತ್ರಿಯವರಿಗೆ ರಾಜ್ಯ ಸರ್ಕಾರದಿಂದ ಮೇಲಿಂದ ಮೇಲೆ ಬರೆದ ಪತ್ರಗಳ ಮಾಹಿತಿ ನೀಡಿದ ಸಿಎಂ , ಪತ್ರವನ್ನು ಸಭೆಯಲ್ಲಿ ಓದಿ ಸಂಸದರ ಗಮನ‌ ಸೆಳೆದರು.

15 ನೇ ಹಣಕಾಸು ಆಯೋಗದಲ್ಲಿ 5495 ಕೋಟಿ ರೂಪಾಯಿ ವಿಶೇಷ ಅನುದಾನ ಕೊಡಬೇಕು, ಕೆರೆ ಮತ್ತು ಫೆರಿಫೆರಲ್ ರಿಂಗ್ ರಸ್ತೆಗೆ ಕೊಡಬೇಕಾದ ಹಣ ಸೇರಿ ಒಟ್ಟು 11495 ಕೋಟಿ ರೂಪಾಯಿ ಕೇಂದ್ರದಿಂದ ಬರಬೇಕಿತ್ತು. ಏನನ್ನೂ ಕೊಡ್ತಾ ಇಲ್ಲ.

ನಾವು ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ಕೊಟ್ಟರೂ ರಾಜ್ಯಕ್ಕೆ ಸಣ್ಣ ನೆರವೂ ಕೇಂದ್ರದಿಂದ ಬರುವುದಿಲ್ಲ , ಕೇಂದ್ರ ಪುರಸ್ಕೃತ ಯೋಜನೆಗಳಿಗೂ ಹಣ ಕೊಡುವುದಿಲ್ಲ, ಆದರೆ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಅಂತ ನೀವೇ ಹೊರಗೆ ಆರೋಪ ಮಾತಾಡ್ತೀರಿ ಎಂದು ಸಿಎಂ ಟೀಕಿಸಿದರು.

ನಾನೇ ಎರಡು ಬಾರಿ ಭೇಟಿ ನಿರ್ಮಲಾ ಸೀತರಾಮನ್ ಅವರಿಗೆ ಭೇಟಿ ಮಾಡಿ ಮನವಿ ಮಾಡಿದರೂ ಕೊಡಲಿಲ್ಲ. ರಾಜ್ಯದ ಸಂಸದರು ಒಟ್ಟಾಗಿ ಇದನ್ನು ಕೊಡಿಸಲು ಯತ್ನಿಸಬೇಕು. ಇಷ್ಟು ದಿನಗಳೊಳಗೆ ನೀವು ಕೊಡಿಸಬೇಕಿತ್ತು. ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ ಎಂದು ಸಿಎಂ ತಿಳಿಸಿದರು.

ರಾಜ್ಯ ಸರ್ಕಾರ ನಿರಂತರವಾಗಿ ಒಟ್ಟು 5665 ಕೋಟಿ ಪಿಂಚಣಿ ಕೊಡುತ್ತಲೇ ಬರುತ್ತದೆ. ಆದರೆ, 559 ಕೋಟಿ ಮಾತ್ರ ಕೇಂದ್ರ ಸರ್ಕಾರ ಕೊಡುತ್ತದೆ. ಈ ಸಣ್ಣ ಮೊತ್ತವನ್ನೂ ಕೇಂದ್ರ ಸರ್ಕಾರಕ್ಕೆ ಕೊಡಲು ಸಾಧ್ಯವಾಗುತ್ತಿಲ್ಲ. ಇದನ್ನೂ ಎರಡು ವರ್ಷಗಳಿಂದ ಬಾಕಿ ಉಳಿಸಿಕೊಂಡಿದೆ ಕೇಂದ್ರ. ಇದು ಏಕೆ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಕೇಂದ್ರದಿಂದ ಇನ್ನೂ ನರೇಗಾ ಹಣ ಬಾರದ ಅಂಕಿ ಅಂಶಗಳನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಕೇಂದ್ರ ಪಿಂಚಣಿ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆಯೂ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಮಟ್ಟದಲ್ಲಿ ದಿಶಾ ಸಭೆಗಳು ನಿಗದಿತವಾಗಿ ನಡೆಯಬೇಕು ಎಂದು ಸೂಚನೆ ನೀಡಿದ ಮುಖ್ಯಮಂತ್ರಿಗಳು ಸಂಸದರೂ ಈ ಬಗ್ಗೆ ಆಸಕ್ತಿ ವಹಿಸಬೇಕು ಎಂದರು. ಮೂರು ತಿಂಗಳ ಒಳಗೆ ನರೇಗಾ ಕ್ರಿಯಾ ಯೋಜನೆ ಕಡ್ಡಾಯವಾಗಿ ಸಿದ್ಧಪಡಿಸಬೇಕು. ಏನೇ ಕಾರಣದಿಂದ ಹಿಂದಿನ ಕ್ರಿಯಾ ಯೋಜನೆ ಆಗಿದ್ದರೆ ಅದನ್ನು ಮುಂದಿನ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಎಂದು ಸಿಎಂ ಸೂಚನೆ ನೀಡಿದರು.

ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ (NHM) ಹಾಗೂ ಪ್ರಧಾನ ಮಂತ್ರಿ ಆಯುಷ್ಮಾನ್‌ ಭಾರತ್‌ ಯೋಜನೆ ಹಾಗೂ ಬಹಳಷ್ಟು ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೇಂದ್ರದ ಪಾಲು ಶೇ. 90 ರಿಂದ 100 ಇದ್ದಿದ್ದು ಈಗ ಶೇ. 50-60 ಕ್ಕೆ ಇಳಿದಿದೆ. ಪ್ರಸ್ತುತ ಎಲ್ಲಾ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೇಂದ್ರ ಹಾಗೂ ರಾಜ್ಯದ ಪಾಲು 60:40 ಇರುತ್ತದೆ. ಆದಾಗ್ಯೂ ನಾವು ಬಹಳಷ್ಟು ಯೋಜನೆಗಳಲ್ಲಿ ಹೆಚ್ಚಿನ ಪ್ರಯೋಜನ ನೀಡುತ್ತಿದ್ದೇವೆ (ಉದಾ: ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಮೊಟ್ಟೆ, ಹಾಲು ಇತ್ಯಾದಿ). ಇದರಿಂದಾಗಿ ರಾಜ್ಯದ ಪಾಲು ಶೇ. 70-80 ಕ್ಕೆ ಏರುತ್ತಿದೆ.

ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಲ್ಲಿ 2024-25 ನೇ ಸಾಲಿನಲ್ಲಿ ಮಾರ್ಚ್ ಅಂತ್ಯಕ್ಕೆ ಕೇಂದ್ರದಿಂದ ಹಂಚಿಕೆಯಾಗಿದ್ದ ಅನುದಾನ 22,758 ಕೋಟಿ ರೂ.ಗಳಲ್ಲಿ 18,562 ಕೋಟಿ ರೂ.ಗಳು ಕೇಂದ್ರದಿಂದ ಬಿಡುಗಡೆಯಾಗಿದ್ದು (ಶೇ.82). ಇನ್ನೂ 4,196 ಕೋಟಿ ಕೇಂದ್ರದಿಂದ ಬಿಡುಗಡೆಯಲ್ಲಿ ಕೊರತೆಯಾಗಿದೆ. ಒಟ್ಟಾರೆ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ರಾಜ್ಯದ ಅನುದಾನವೂ ಒಳಗೊಂಡಂತೆ ರೂ. 46,859 ಕೋಟಿ ವೆಚ್ಚವಾಗಿದ್ದು ಒಟ್ಟಾರೆ ಲಭ್ಯ ಅನುದಾನಕ್ಕೆ ಶೇ.83 ರಷ್ಟು ಪ್ರಗತಿಯಾಗಿದೆ.

2024-25ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ, ಸಾಮಾಜಿಕ ಭದ್ರತಾ ಪಿಂಚಣಿಗಳು, ಪ್ಯಾಕ್ಸ್ (Computerisation of PACS) ಕೇಂದ್ರದಿಂದ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ.

ನರೇಗಾ ಕಾರ್ಯಕ್ರಮದಡಿ 2024-25ನೇ ಸಾಲಿನಲ್ಲಿ ಕೇಂದ್ರದಿಂದ ಹಂಚಿಕೆಯಾಗಿದ್ದ ಅನುದಾನ 2200.40 ಕೋಟಿ ರೂ.ಗಳಲ್ಲಿ 1933.48 ಕೋಟಿ ರೂ. ಬಿಡುಗಡೆಯಾಗಿದ್ದು (ಕೂಲಿ ಮೊತ್ತ ಹೊರತುಪಡಿಸಿ) ಇನ್ನೂ 266.92 ಕೋಟಿ ರೂ. ಕೇಂದ್ರದಿಂದ ಬಿಡುಗಡೆ ಬಾಕಿಯಿದೆ.

ಜಲಜೀವನ್ ಮಿಷನ್ ಕಾರ್ಯಕ್ರಮದಡಿ 2024-25ನೇ ಸಾಲಿನಲ್ಲಿ ಕೇಂದ್ರದಿಂದ ಹಂಚಿಕೆಯಾಗಿದ್ದ ಅನುದಾನ 3804 ಕೋಟಿಯಲ್ಲಿ 570.70 ಕೋಟಿ ರೂ. ಬಿಡುಗಡೆಯಾಗಿದ್ದು ಇನ್ನೂ 3234 ಕೋಟಿ ರೂ. ಕೇಂದ್ರದಿಂದ ಬಿಡುಗಡೆ ಬಾಕಿಯಿದೆ. ಎರಡು ವರ್ಷದಲ್ಲಿ 10,889 ಕೋಟಿ ರೂ. ಕೇಂದ್ರದಿಂದ ಬಿಡುಗಡೆಗೆ ಬಾಕಿ ಇರುತ್ತದೆ.

ಸ್ವಚ್ಛಭಾರತ (ಗ್ರಾಮೀಣ) ಕಾರ್ಯಕ್ರಮದಡಿ 2024-25ನೇ ಸಾಲಿನಲ್ಲಿ ಕೇಂದ್ರದಿಂದ ಹಂಚಿಕೆಯಾಗಿದ್ದ ಅನುದಾನ 215.82 ಕೋಟಿಯಲ್ಲಿ 150.00 ಕೋಟಿ ರೂ. ಬಿಡುಗಡೆಯಾಗಿದ್ದು ಇನ್ನೂ 65.82 ಕೋಟಿ ರೂ. ಕೇಂದ್ರದಿಂದ ಬಿಡುಗಡೆ ಬಾಕಿಯಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY) ಕಾರ್ಯಕ್ರಮದಡಿ 2024-25ನೇ ಸಾಲಿನಲ್ಲಿ ಕೇಂದ್ರದಿಂದ ಹಂಚಿಕೆಯಾಗಿದ್ದ ಅನುದಾನ ರೂ. 100 ಕೋಟೆಯಲ್ಲಿ 34.21 ಕೋಟಿ ರೂ. ಬಿಡುಗಡೆಯಾಗಿದ್ದು ಇನ್ನೂ ರೂ. 65.79 ಕೋಟಿ ಕೇಂದ್ರದಿಂದ ಬಿಡುಗಡೆ ಬಾಕಿಯಿರುತ್ತದೆ.

ಈ ಸುದ್ದಿಯನ್ನೂ ಓದಿ | Operation Sindoor: ಆಪರೇಷನ್‌ ಸಿಂದೂರ್‌ ಬಗ್ಗೆ ಅಪಪ್ರಚಾರ- ಚೀನಾದ ಖ್ಯಾತ ಟಿವಿ ಚಾನೆಲ್‌ನ ಎಕ್ಸ್‌ ಖಾತೆ ಬ್ಲಾಕ್‌!

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (NRLM) ಕಾರ್ಯಕ್ರಮದಡಿ 2024-25ನೇ ಸಾಲಿನಲ್ಲಿ ಕೇಂದ್ರದಿಂದ ಹಂಚಿಕೆಯಾಗಿದ್ದ ಅನುದಾನ ರೂ. 398 ಕೋಟಿಯಲ್ಲಿ ರೂ. 298.73 ಕೋಟಿ ಬಿಡುಗಡೆಯಾಗಿದ್ದು ಇನ್ನೂ 99.58 ಕೋಟಿ ಕೇಂದ್ರದಿಂದ ಬಿಡುಗಡೆ ಬಾಕಿಯಿದೆ.