Karnataka Cabinet: ಡಿಕೆಶಿ ಸಂಪುಟದಲ್ಲಿ ಪರಮೇಶ್ವರ್‌ಗೆ ಡಿಸಿಎಂ ಸ್ಥಾನ; ಯಾರೆಲ್ಲಾ ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ?
ಡಿ.ಕೆ. ಶಿವಕುಮಾರ್ ಅವರ ಸರ್ಕಾರದಲ್ಲಿ ಹಿರಿಯ ದಲಿತ ನಾಯಕ, ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೂ ಸಚಿವ ಸ್ಥಾನ ಒಲಿದಿದ್ದು, ಯಾರೆಲ್ಲಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಡಿಸಿಎಂ ಆಗಲಿರುವ ಪರಮೇಶ್ವರ್ ಅವರಿಗೆ ಸಿದ್ದರಾಮಯ್ಯ ಅಭಿನಂದನೆ. -
ಬೆಂಗಳೂರು: ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲಕ್ಕೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆದಿದೆ. ಇಂದು ಮಧ್ಯಾಹ್ನ ಹೊಸ ಸಚಿವ ಸಂಪುಟದ ಪಟ್ಟಿ ಪ್ರಕಟಿಸಲಾಗಿದ್ದು, ಡಾ.ಜಿ.ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ಒಲಿದಿದ್ದು, ಸಂಪುಟದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಪುತ್ರ, ಶಾಸಕ ಡಾ.ಯತೀಂದ್ರ ಅವರಿಗೂ ಸ್ಥಾನ ಸಿಕ್ಕಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ನಾಲ್ಕು ಡಿಸಿಎಂ ಸ್ಥಾಣ ಸೃಷ್ಟಿಸಲಾಗುತ್ತದೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದವು. ಎಂಬಿ ಪಾಟೀಲ್, ಪ್ರಿಯಾಂಕ್ ಖರ್ಗೆ, ಜಮೀರ್ ಅಹ್ಮದ್ ಖಾನ್ ಹೆಸರೂ ಮುನ್ನೆಲೆಗೆ ಬಂದಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಕೇವಲ ಒಂದೇ ಡಿಸಿಎಂ ಹುದ್ದೆಯನ್ನು ಪರಿಗಣಿಸಿದೆ. ಇದರಿಂದ ಡಿಕೆಶಿ ಸರ್ಕಾರದಲ್ಲಿ ಏಕೈಕ ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡಿ.ಕೆ.ಶಿವಕುಮಾರ್ ಜತೆ 13 ಶಾಸಕರು ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ.
ಸಚಿವರ ಪಟ್ಟಿ ಇಲ್ಲಿದೆ
- ಡಿ.ಕೆ.ಶಿವಕುಮಾರ್-ಸಿಎಂ
- ಡಾ.ಜಿ.ಪರಮೇಶ್ವರ್ – ಡಿಸಿಎಂ
- ಕೆ.ಎಚ್.ಮುನಿಯಪ್ಪ- ಸಚಿವರು
- ಕೆ.ಜೆ. ಜಾರ್ಜ್ - ಸಚಿವರು
- ಎಂ.ಬಿ. ಪಾಟೀಲ್ - ಸಚಿವರು
- ರಾಮಲಿಂಗಾರೆಡ್ಡಿ - ಸಚಿವರು
- ಸತೀಶ್ ಜಾರಕಿಹೊಳಿ - ಸಚಿವರು
- ಕೃಷ್ಣಬೈರೇಗೌಡ - ಸಚಿವರು
- ಪ್ರಿಯಾಂಕ್ ಖರ್ಗೆ - ಸಚಿವರು
- ಯು.ಟಿ. ಖಾದರ್ – ಸಚಿವರು
- ಈಶ್ವರ್ ಖಂಡ್ರೆ - ಸಚಿವರು
- ಯತೀಂದ್ರ ಸಿದ್ದರಾಮಯ್ಯ - ಸಚಿವರು
- ಭೈರತಿ ಸುರೇಶ್ - ಸಚಿವರು
- ಶರಣಪ್ರಕಾಶ್ ಪಾಟೀಲ್-ಸಚಿವರು
ಸಿದ್ದರಾಮಯ್ಯ ಭೇಟಿಯಾಗಿ ಧನ್ಯವಾದ ಅರ್ಪಿಸಿದ ಡಿಕೆಶಿ
ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಧನ್ಯವಾದ ಅರ್ಪಿಸಿದರು. ಹಾಗೆಯೇ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಜಿ.ಪಮೇಶ್ವರ್ ಅವರೂ ಧನ್ಯವಾದ ಅರ್ಪಿಸಿದರು.
ಕರ್ನಾಟಕದಲ್ಲಿ ಹೊಸ ಯುವ ಯುಗ ಆರಂಭವಾಗಲಿದೆ: ಡಿ.ಕೆ. ಶಿವಕುಮಾರ್
ಸಿದ್ದರಾಮಯ್ಯ ಅವರು ಇಬ್ಬರಿಗೂ ಅಭಿನಂದಿಸಿ ಶುಭಕೋರಿದರು. ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಇಬ್ಬರಿಗೂ ಅಭಿನಂದಿಸಿದರು.