Gruhalakshmi scheme: ಗೃಹಲಕ್ಷ್ಮಿ ಯೋಜನೆ ಒಂದು ವರ್ಷ ನಿಲ್ಲಿಸಿಬಿಡಿ: ಕಾಂಗ್ರೆಸ್ ಸರ್ಕಾರಕ್ಕೆ ಸ್ವಪಕ್ಷದ ಎಂಎಲ್‌ಸಿಯಿಂದಲೇ ಆಗ್ರಹ!
Congress Guarantee: ವಿಧಾನ ಪರಿಷತ್ತಿನ ಕಲಾಪದಲ್ಲಿ ನಡೆದ ಚರ್ಚೆಯ ವೇಳೆ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಂಎಲ್‌ಸಿ ತಿಪ್ಪಣ್ಣ ಕಮಕನೂರ್ ಅವರು, ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
-
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ (Congress Guarantees) ಬಗ್ಗೆ ಸ್ವಪಕ್ಷದ ಶಾಸಕರಿಂದಲೇ ಅಸಮಾಧಾನ ವ್ಯಕ್ತವಾಗಿದೆ. ರಾಜ್ಯದಲ್ಲಿ ಬರಗಾಲವನ್ನು ಎದುರಿಸಲು 'ಗೃಹಲಕ್ಷ್ಮಿ' ಯೋಜನೆಯನ್ನು ಒಂದು ವರ್ಷ ತಡೆಹಿಡಿದು, ಆ ಹಣವನ್ನು ಪ್ರಮುಖ ನೀರಾವರಿ ಯೋಜನೆಗಳಿಗೆ ಬಳಸಬೇಕು ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ್ ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ತಿನ ಕಲಾಪದಲ್ಲಿ ಬುಧವಾರ ನಡೆದ ಚರ್ಚೆಯ ವೇಳೆ ತಮ್ಮದೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಎಂಎಲ್‌ಸಿ ಕಮಕನೂರ್, ರಾಜ್ಯದ ಅಭಿವೃದ್ಧಿ ಹಿತದೃಷ್ಟಿಯಿಂದ ಈ ಕಠಿಣ ನಿರ್ಧಾರ ಅಗತ್ಯ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲವನ್ನು ಎದುರಿಸಲು ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಅತ್ಯಗತ್ಯ. ಹೀಗಾಗಿ, ಗೃಹಿಣಿಯರಿಗೆ ತಿಂಗಳಿಗೆ 2,000 ರೂ. ನೀಡುವ 'ಗೃಹಲಕ್ಷ್ಮಿ' ಯೋಜನೆಯನ್ನು ಒಂದು ವರ್ಷಗಳ ಕಾಲ ತಡೆಹಿಡಿದು, ಆ ಹಣವನ್ನು ಪ್ರಮುಖ ನೀರಾವರಿ ಯೋಜನೆಗಳಿಗೆ ಬಳಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಬರಗಾಲವನ್ನು ಸಮರ್ಥವಾಗಿ ಎದುರಿಸಬೇಕಾದರೆ ಮೇಕೆದಾಟು ಸಮತೋಲನ ಜಲಾಶಯ, ಮೇಲ್ದಂಡೆ ಕೃಷ್ಣ ಯೋಜನೆ ಹಂತ-3, ಕಳಸಾ-ಬಂಡೂರಿ ನಾಲಾ ಯೋಜನೆ, ಮೇಲ್ದಂಡೆ ಭದ್ರಾ ಯೋಜನೆ, ನವಲಿ ಸಮತೋಲನ ಜಲಾಶಯ ಹಾಗೂ ಎತ್ತಿನಹೊಳೆ ಯೋಜನೆಗಳನ್ನು ತಕ್ಷಣವೇ ಪೂರ್ಣಗೊಳಿಸಬೇಕು. ಇದಕ್ಕಾಗಿ ನೀರಾವರಿ ಕಾಮಗಾರಿಗಳಿಗೆ ಕನಿಷ್ಠ ಒಂದು ವರ್ಷಗಳ ಕಾಲ ಪ್ರಥಮ ಆದ್ಯತೆ ನೀಡಬೇಕಾಗಿದೆ ಎಂದಿದ್ದಾರೆ.
Congress MLC Tippannappa Kamaknoor suggested in the Legislative Council that the State Government should stop the ₹2,000 monthly assistance under the Gruha Lakshmi scheme and divert the funds towards irrigation and other development works.
— Anamika (@TheRubric_Medic) September 24, 2026
Congress promised big things before… pic.twitter.com/YlciVZBskv
ಕಮಕನೂರ್ ಹೇಳಿಕೆಗೆ ಉಪಸಭಾಪತಿ ಉಮಾಶ್ರೀ ಗರಂ
ಒಂದು ವರ್ಷದ ಮಟ್ಟಿಗೆ ನಿಮಗೆಲ್ಲಾ ನೀಡಲಾಗುತ್ತಿರುವ 2,000 ರೂಪಾಯಿಗಳನ್ನು ನಿಲ್ಲಿಸಬೇಕು ಎಂದು ಕಮಕನೂರ್ ಹೇಳಿದ ವೇಳೆ ಸಭಾಪತಿ ಪೀಠದಲ್ಲಿ ಕುಳಿತಿದ್ದ ಉಪಸಭಾಪತಿ ಉಮಾಶ್ರೀ ಗರಂ ಆದರು. "ನಿಮಗೆ ನೀಡಲಾಗುತ್ತಿರುವ ಯೋಜನೆ ಎಂದರೆ ನಿಮ್ಮ ಅರ್ಥವೇನು?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು. ಅದಕ್ಕೆ ಸ್ಪಷ್ಟನೆ ನೀಡಿದ ಕಮಕನೂರ್, ತಾವು 'ಗೃಹಲಕ್ಷ್ಮಿ' ಯೋಜನೆಯ ಬಗ್ಗೆ ಮಾತನಾಡುತ್ತಿರುವುದಾಗಿ ಹೇಳಿದರು.
'ಯೋಜನೆಯನ್ನು ನಿಲ್ಲಿಸಬೇಕು ಎಂದು ನೀವು ಹೇಳುತ್ತಿದ್ದೀರಾ?' ಎಂದು ಉಮಾಶ್ರೀ ಮರುಪ್ರಶ್ನಿಸಿದಾಗ, "ಮತ್ತೇನು ಮಾಡುವುದು? ಈ ಎಲ್ಲಾ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲೇಬೇಕಾಗಿದೆ" ಎಂದು ಕಮಕನೂರ್ ತಿರುಗೇಟು ನೀಡಿದ್ದಾರೆ.
ಇದು ಸರ್ಕಾರಕ್ಕೆ ನಿಮ್ಮ ಸಲಹೆಯೇ ಎಂದು ಉಪಸಭಾಪತಿಯವರು ಕೇಳಿದರು. ಅದಕ್ಕೆ ಉತ್ತರಿಸಿದ ಕಮಕನೂರ್, "ಈಗಾಗಲೇ ಸತ್ತುಹೋದ ಜನರ ಹೆಸರಲ್ಲೂ ಗೃಹಲಕ್ಷ್ಮಿ ಯೋಜನೆಯ ಅರ್ಧದಷ್ಟು ಹಣ ತಲುಪುತ್ತಿದೆ. ಅಂತಹ ಸತ್ತವರ ಹೆಸರಿಗೆ ಹೋಗುತ್ತಿರುವ ಹಣ ಉಳಿತಾಯವಾಗುತ್ತಿದ್ದು, ಆ ಹಣವನ್ನಾದರೂ ಈ ನೀರಾವರಿ ಯೋಜನೆಗಳಿಗೆ ಬಳಸಿಕೊಳ್ಳಿ ಎಂಬುದೇ ನನ್ನ ಉದ್ದೇಶ ಎಂದು ತಿಳಿಸಿದ್ದಾರೆ.