SIR in Karnataka: ಎಸ್ಐಆರ್ ಮೂಲಕ ಬಡವರ ಮತಗಳನ್ನು ತೆಗೆಯಲು ಸಂಚು: ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ
ರಾಜ್ಯದಲ್ಲಿ ಎಸ್‌ಐಆರ್ ಮಾಡಲು ಈಗಾಗಲೇ ದಿನಾಂಕ ಘೋಷಣೆಯಾಗಿದೆ. ಮತದಾನದ ಹಕ್ಕು ಹೋದರೆ ಪಿಂಚಣಿ, ಗೃಹಲಕ್ಷ್ಮಿ ಯೋಜನೆ ಸೇರಿ ಅನೇಕ ಅನುಕೂಲಗಳಿಂದ ನಾಗರಿಕರು ವಂಚಿತರಾಗುತ್ತಾರೆ. ಅದಕ್ಕೆ ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್. -
ಬೆಂಗಳೂರು, ಮೇ 22: “ಬಡವರ ಮತಗಳನ್ನು ತೆಗೆಯಲು ಎಸ್ಐಆರ್ (SIR) ಮೂಲಕ ಸಂಚು ಮಾಡಲಾಗಿದೆ. ನಾವುಗಳು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು. “ಶಾಸಕರು, ಬಿಎಲ್ಎಗಳಿಗೆ ಎಸ್‌ಐಆರ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಆದ ಕಾರಣಕ್ಕೆ ಸಭೆ ಕರೆಯಲಾಗುತ್ತಿದೆ. ಏಕೆಂದರೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ. ಆದ ಕಾರಣಕ್ಕೆ ನಾವು ಜಾಗೃತಿಗೆ ಮುಂದಾಗಿದ್ದೇವೆ. ಪ್ರತಿಯೊಬ್ಬರೂ ಸಹ ಅರ್ಜಿ ಸಲ್ಲಿಸಬೇಕಿದೆ. ಇಲ್ಲದಿದ್ದರೆ ನಾಗರಿಕರು ತಮ್ಮ ಮತವನ್ನು ಕಳೆದುಕೊಳ್ಳುತ್ತಾರೆ. ಬೇರೆ ರಾಜ್ಯಗಳಲ್ಲಿ ಇದೇ ರೀತಿ ಆಗಿದ್ದನ್ನು ನೋಡಿದ್ದೇವೆ. ಮತದಾನದ ಹಕ್ಕು ಹೋದರೆ ಪಿಂಚಣಿ, ಗೃಹಲಕ್ಷ್ಮಿ ಯೋಜನೆ ಸೇರಿ ಅನೇಕ ಅನುಕೂಲಗಳಿಂದ ನಾಗರಿಕರು ವಂಚಿತರಾಗುತ್ತಾರೆ. ಅದಕ್ಕೆ ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ” ಎಂದರು.
ಹೋರಾಟಗಾರರ ಮೇಲಿನ ಪ್ರಕರಣ ವಾಪಸ್ ತಪ್ಪೇನಿಲ್ಲ
ಮುಸ್ಲಿಮರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವ ತೀರ್ಮಾನದ ಬಗ್ಗೆ ಕೇಳಿದಾಗ, “ರಾಜಕೀಯ ಪ್ರೇರಿತ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಜತೆಗೆ ರೈತರ ಮೇಲಿನ, ಕನ್ನಡ ಚಳುವಳಿಗಾರರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿದ್ದು ಇದರಲ್ಲಿ ತಪ್ಪೇನಿಲ್ಲ” ಎಂದು ತಿಳಿಸಿದರು.
ಮೇ 30 ರಿಂದ ಮೂರನೇ ಹಂತದ ಎಸ್‌ಐಆರ್
ದೇಶಾದ್ಯಂತ ಸದ್ದು ಮಾಡಿರುವ ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆಯ (ಎಸ್‌ಐಆರ್) ಮೂರನೇ ಹಂತದ ಪ್ರಕ್ರಿಯೆಗೆ ಮೇ 30 ರಿಂದ ಕರ್ನಾಟಕ ಸೇರಿ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ಗೆ ಚಾಲನೆ ದೊರೆಯಲಿದೆ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ಹರಿಯಾಣ, ಜಾರ್ಖಂಡ್, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ದಿಲ್ಲಿ, ಒಡಿಶಾ, ಪಂಜಾಬ್, ಸಿಕ್ಕಿಂ, ತ್ರಿಪುರ, ಉತ್ತರಾಖಂಡ ಜತೆಗೆ ಕೇಂದ್ರಾಡಳಿತ ಪ್ರದೇಶಗಳಾದ ದಿಯು-ದಮನ್, ದಾದ್ರಾ ಮತ್ತು ನಗರ್ ಹವೇಲಿ, ಚಂಡೀಗಢದಲ್ಲಿ ಮತಪಟ್ಟಿ ಸಮಗ್ರ ಪರಿಷ್ಕರಣೆ ನಡೆಯಲಿದೆ.
ಗೆಲುವಿನ ಅಂತರಕ್ಕಿಂತ ಡಿಲೀಟ್ ಆದ ಮತಗಳೇ ಹೆಚ್ಚು: ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಐಆರ್ ವಿರುದ್ಧ ಟಿಎಂಸಿ ಕಿಡಿ
ಮೂರನೇ ಹಂತದ ಪರಿಷ್ಕರಣೆಯ ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ಅತ್ಯಧಿಕ 9.86 ಕೋಟಿ ಮತದಾರರಿದ್ದು, ಕರ್ನಾಟದಲ್ಲಿ 5.55 ಕೋಟಿ ಮತದಾರರು, ಆಂಧ್ರಪ್ರದೇಶದಲ್ಲಿ 4.16 ಕೋಟಿ, ತೆಲಂಗಾಣದಲ್ಲಿ 3.39 ಮತದಾರರು ಭಾಗಿಯಾಗಲಿದ್ದಾರೆ.
ರಾಜ್ಯದಲ್ಲಿ ಪರಿಷ್ಕರಣೆ ಪ್ರಕ್ರಿಯೆ
- ಜೂ. 26 ರಿಂದ 29ರವರೆಗೆ ಅಧಿಕಾರಿಗಳಿಗೆ ತರಬೇತಿ
- ಜೂ. 30 ರಿಂದ ಜುಲೈ 29ರ ವರೆಗೆ ಮನೆಮನೆ ಭೇಟಿ
- ಜು. 1ರ ವರೆಗೆ ಮತಪಟ್ಟಿಯಲ್ಲಿದ್ದ ಹೆಸರು ಪರಿಗಣನೆ
- ಆ. 5ಕ್ಕೆ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟ
- ಆ. 5ರಿಂದ ಅಕ್ಟೋಬರ್ 3ರ ವರೆಗೆ ದೂರು ಸಲ್ಲಿಕೆ
- ಅ. 1ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಣೆ