ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಬೆಂಗಳೂರಿಗೆ ಸರಿಸಮನಾದ ಮತ್ತೊಂದು ನಗರ ದೇಶದಲ್ಲಿಲ್ಲ: ನಾರಾ ಲೋಕೇಶ್‌ಗೆ ಡಿ.ಕೆ. ಶಿವಕುಮಾರ್‌ ತಿರುಗೇಟು

DK Shivakumar Reaction: ಬೆಂಗಳೂರಿನ ವಿಚಾರವಾಗಿ ಆಂಧ್ರ ಪ್ರದೇಶ ಐಟಿ ಸಚಿವ ನಾರಾ ಲೋಕೇಶ್ ಅವರ ಹೇಳಿಕೆ ಬಗ್ಗೆ ಮಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ‘ನಾರಾ ಲೋಕೇಶ್ ಆಗಲಿ, ಬೇರೆಯವರಾಗಲಿ, ಯಾರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು, 2 ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಗತಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರವಾಗಿದೆ. ಕೇಂದ್ರ ಸರ್ಕಾರಕ್ಕೆ ಸುಮಾರು 40% ತೆರಿಗೆ ಆದಾಯ ಇಲ್ಲಿಂದಲೇ ಹೋಗುತ್ತಿದೆ. ಅವರು ತಮ್ಮ ಬಗ್ಗೆ ಮಾರ್ಕೆಟಿಂಗ್ ಮಾಡಿಕೊಳ್ಳಲು ಮಾತನಾಡುತ್ತಾರೆ. ಅವರು ಏನಾದರೂ ಮಾಡಿಕೊಳ್ಳಲಿ. ಅವರಿಗೆ ಕೇಂದ್ರ ಸರ್ಕಾರವೂ ಸಹಾಯ ಮಾಡಲಿ. ಆದರೆ ಬೆಂಗಳೂರಿಗೆ ಸರಿಸಮನಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿಗೆ ಸರಿಸಮನಾದ ಮತ್ತೊಂದು ನಗರ ದೇಶದಲ್ಲಿಲ್ಲ: ಡಿಕೆಶಿ

-

Profile
Siddalinga Swamy Oct 15, 2025 3:34 PM

ಬೆಂಗಳೂರು: ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ (Bengaluru) ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ (Nara Lokesh) ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿರುಗೇಟು ನೀಡಿದರು. ವಿಧಾನಸೌಧದದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಅವರು ಪ್ರತಿಕ್ರಿಯೆ ನೀಡಿದರು.

ಬೆಂಗಳೂರಿನ ವಿಚಾರವಾಗಿ ಆಂಧ್ರ ಪ್ರದೇಶ ಐಟಿ ಸಚಿವ ನಾರಾ ಲೋಕೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ನಾರಾ ಲೋಕೇಶ್ ಆಗಲಿ, ಬೇರೆಯವರಾಗಲಿ, ಯಾರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು, 2 ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಗತಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರವಾಗಿದೆ. ಕೇಂದ್ರ ಸರ್ಕಾರಕ್ಕೆ ಸುಮಾರು 40% ತೆರಿಗೆ ಆದಾಯ ಇಲ್ಲಿಂದಲೇ ಹೋಗುತ್ತಿದೆ. ಅವರು ತಮ್ಮ ಬಗ್ಗೆ ಮಾರ್ಕೆಟಿಂಗ್ ಮಾಡಿಕೊಳ್ಳಲು ಮಾತನಾಡುತ್ತಾರೆ. ಅವರು ಏನಾದರೂ ಮಾಡಿಕೊಳ್ಳಲಿ. ಅವರಿಗೆ ಕೇಂದ್ರ ಸರ್ಕಾರವೂ ಸಹಾಯ ಮಾಡಲಿ. ಆದರೆ ಬೆಂಗಳೂರಿಗೆ ಸರಿಸಮನಾಗಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು

‘ಎಷ್ಟು ವಿದೇಶಿ ನಾಯಕರು ನನ್ನನ್ನು ಸಂಪರ್ಕಿಸುತ್ತಿದ್ದಾರೆ ಎಂದು ನಮಗೆ ಗೊತ್ತಿದೆ. ನಾನು ಐಟಿ ಸಚಿವರು, ಬೃಹತ್ ಕೈಗಾರಿಕೆ ಸಚಿವರು ಕೂತು ಚರ್ಚೆ ಮಾಡುತ್ತೇವೆ. ವಿದೇಶಿ ಕಂಪನಿಗಳು ಇಷ್ಟು ದಿನ ಬೆಂಗಳೂರಿನಲ್ಲಿ ಬಾಡಿಗೆ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಅಮೆರಿಕದಲ್ಲಿನ ಬೆಳವಣಿಗೆ ನಂತರ ಈಗ ಅವರು ಸ್ವಂತ ಜಾಗ ಖರೀದಿಗೆ ಮುಂದಾಗುತ್ತಿದ್ದಾರೆ. ತಮ್ಮದೇ ಸ್ವಂತ ಕ್ಯಾಂಪಸ್ ಹೊಂದಲು ಮುಂದಾಗಿದ್ದಾರೆ ಇದು ಬೆಂಗಳೂರಿನ ಶಕ್ತಿ’ ಎಂದು ತಿಳಿಸಿದರು.

ಬೆಂಗಳೂರಿನ ಬಗ್ಗೆ ಟ್ವೀಟ್ ಮಾಡಿ ಬೆದರಿಸುವವರು, ಕಳೆದ 25 ವರ್ಷಗಳಿಂದ ಎಲ್ಲಿದ್ದರು?

ಬೆಂಗಳೂರಿನ ಮೂಲಸೌಕರ್ಯಗಳ ಬಗ್ಗೆ ಕಿರಣ್ ಮಜುಂದಾರ್ ಷಾ ಅವರು ಟ್ವೀಟ್ ಮೂಲಕ ಟೀಕೆ ಮಾಡುವ ವಿಚಾರವಾಗಿ ಕೇಳಿದಾಗ, ‘ಅವರು ತಮ್ಮ ಟ್ವೀಟ್ ಮಾಡುವ ಮೂಲಕ ಅವರಿಗೆ ನೆರವಾಗಿರುವ ದೇಶ ಹಾಗೂ ರಾಜ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಅವರ ಟೀಕೆ ತಮಗೆ ತಾವೇ ಹಾಗೂ ಈ ನಗರಕ್ಕೆ ದ್ರೋಹ ಬಗೆದುಕೊಂಡಂತೆ. ಕಳೆದ 25 ವರ್ಷಗಳಿಂದ ಅವರು ಎಲ್ಲಿದ್ದರು? ಅವರ ಬೆಳವಣಿಗೆಯಲ್ಲಿ ಹೆಚ್ಚಿನ ಕೊಡುಗೆ ನೀಡಿರುವುದು ಬೆಂಗಳೂರು. ಬೆಂಗಳೂರು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ, ಉದ್ಯಮಿಗಳನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದೆ. ಟೀಕಿಸುವವರಿಗೆ ಸರ್ಕಾರಗಳು ಎಷ್ಟು ಜಾಗ ಕೊಟ್ಟಿದೆ, ಎಷ್ಟು ನೆರವು ನೀಡಿದೆ ಎಂಬುದನ್ನು ಸ್ಮರಿಸಬೇಕು’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಕಿಡಿಕಾರಿದರು.

ರಸ್ತೆಗುಂಡಿ ಮುಚ್ಚುವ ಬಗ್ಗೆ ಕೇಳಿದಾಗ, ʼನಾವು ನಮ್ಮ ಕೈಯಲ್ಲಾದಷ್ಟು ನಾವು ಮಾಡುತ್ತಿದ್ದೇವೆ. ನಾವು ಮಹದೇವಪುರ ಹಾಗೂ ಕೆ.ಆರ್. ಪುರವನ್ನೇ ಪ್ರತ್ಯೇಕ ಪಾಲಿಕೆ ಮಾಡಿದ್ದು, ಇಲ್ಲೇ ಐಟಿ ಹಬ್ ಇವೆ. ಕೇವಲ 50 ವಾರ್ಡ್‌ಗಳನ್ನು ಹೊಂದಿರುವ ಈ ಪಾಲಿಕೆ ತನ್ನ ಆದಾಯವನ್ನು ತಾನೇ ಬಳಸಿಕೊಳ್ಳಬಹುದಾಗಿದೆ. ಬೇರೆ ಪ್ರದೇಶಗಳ ಜತೆ ಹಂಚಿಕೊಳ್ಳುವ ಪ್ರಮೇಯವಿಲ್ಲ. ಈ ಭಾಗದ ಜನಸಂಖ್ಯೆ, ಅವರ ಸಮಸ್ಯೆಗಳೇನು ಎಂದು ನಮಗೆ ಅರಿವಿದೆ. ಅವರಿಗೆ ನೆರವಾಗಬೇಕು ಎಂದು ನಾವು ಈ ಕ್ರಮ ಕೈಗೊಂಡಿದ್ದೇವೆ. ಐಟಿಯಿಂದ ಬರುವ ಒಂದೂವರೆ ಸಾವಿರ ಕೋಟಿ ಆದಾಯವನ್ನು ಈ ವಾರ್ಡ್‌ಗಳ ಅಭಿವೃದ್ಧಿಗೆ ಬಳಸಬಹುದಾಗಿದೆ. ಆ ಮೂಲಕ ಆ ಭಾಗದ ಅಭಿವೃದ್ಧಿಗೆ ನಾವು ಕ್ರಮ ಕೈಗೊಂಡಿದ್ದೇವೆ. ಇದಕ್ಕಾಗಿಯೇ ನಾವು ಜಿಬಿಎ ಮಾಡಿ ಆ ಮೂಲಕ ಬೆಂಗಳೂರಿನಲ್ಲಿ ಐದು ಪಾಲಿಕೆಗಳನ್ನು ರಚಿಸಿದ್ದೇವೆ. ಇನ್ನು ಎಲ್ಲಾ ಸಂಸ್ಥೆಗಳು ತಮ್ಮ ಸಿಎಸ್ಆರ್ ನಿಧಿಯನ್ನು ಏನು ಮಾಡುತ್ತಿವೆ ಎಂದು ಬಹಿರಂಗಪಡಿಸಲಿ.

ನಾನು ಯಾರನ್ನು ಪ್ರಶ್ನೆ ಮಾಡುವುದಿಲ್ಲ. ಎಲ್ಲರೂ ಸ್ವಲ್ಪ ತಾಳ್ಮೆಯಿಂದ ಇರಬೇಕು. ನಿಮಗೆ ಟ್ವೀಟ್ ಮಾಡಿ ನಮ್ಮನ್ನು ಬೆದರಿಸುವುದೇ ಮುಖ್ಯವಾದರೆ, ಅದು ಅವರಿಗೆ ಬಿಟ್ಟ ವಿಚಾರ. ನಮ್ಮದು ಪ್ರಗತಿಪರ ಸರ್ಕಾರ. ಪ್ರಧಾನಮಂತ್ರಿಗಳೇ ಬೆಂಗಳೂರನ್ನು ಜಾಗತಿಕ ನಗರ ಎಂದು ಹೇಳಿರುವಾಗ ಇವರು ಪ್ರಧಾನಮಂತ್ರಿ ಹೇಳಿಕೆಗೆ ತದ್ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಚೀನಾ ಇಲ್ಲ, ಪ್ರಜಾಪ್ರಭುತ್ವ ರಾಜ್ಯ. ಚೀನಾದಲ್ಲಿ ಅವರು ತಮಗೆ ಬೇಕಾದ ರಸ್ತೆ ಕಿತ್ತು, ಬೇಕಾದ ಹಾಗೆ ಮಾಡಬಹುದು. ಆದರೆ ಕರ್ನಾಟಕದಲ್ಲಿ ಆ ರೀತಿ ಮಾಡಲು ಆಗುವುದಿಲ್ಲ. ರಸ್ತೆ ಅಗಲೀಕರಣಕ್ಕೆ ಅವರು ತಮ್ಮ ಜಾಗವನ್ನು ಬಿಟ್ಟುಕೊಡುವರೇ? ಯಾರೊಬ್ಬರೂ ನೀಡುವುದಿಲ್ಲ. ಎಲ್ಲದಕ್ಕೂ ತನ್ನದೇ ಆದ ಇತಿಮಿತಿಗಳಿರುತ್ತವೆ. ಅವರು ಎಲ್ಲಿ ಬೆಳೆದಿದ್ದಾರೆ, ಎಲ್ಲಿ ಕೆಲಸ ಮಾಡಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರು ತಾವು ಬೆಳೆದು ಬಂದ ದಾರಿಯನ್ನು ಮರೆಯಬಾರದು. ಅವರ ಮೂಲ ಹಾಗೂ ಬೆಳೆದು ಬಂದ ಹಾದಿ ಬೆಂಗಳೂರುʼ ಎಂದು ತಿಳಿಸಿದರು.

ಗೂಗಲ್ ಎಐ ಹಬ್ ಆಂಧ್ರ ಪ್ರದೇಶ ಪಾಲಾಗಿದೆ ಎಂದು ಕೇಳಿದಾಗ, ʼಆಂಧ್ರ ಪ್ರದೇಶಕ್ಕೆ ಹೋಗುವವರಿಗೆ ನಾವು ಬೇಡ ಎನ್ನಲು ಸಾಧ್ಯವೇ? ಅವರು ಹೆಚ್ಚಿನ ವಿನಾಯಿತಿ ಕೊಡುತ್ತಾರೆ ಎಂದು ಹೋಗುವುದಾದರೆ ಹೋಗಲಿ. ಅವರಿಗೂ ಎಲ್ಲ ಕಡೆ ನೋಡಿ ಅನುಭವವಾಗಲಿʼ ಎಂದು ತಿಳಿಸಿದರು.

ನಮ್ಮ ರಾಜ್ಯಕ್ಕೆ 1 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆ ಕೈತಪ್ಪಿದೆ ಎಂದು ಕೇಳಿದಾಗ, ʼವಿದೇಶಿ ಪ್ರತಿನಿಧಿಗಳು ನನ್ನನ್ನು, ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್ ಅವರನ್ನು ನಿರಂತರವಾಗಿ ಭೇಟಿ ಮಾಡುತ್ತಲೇ ಇದ್ದಾರೆ. 12ರಂದು ಸಿಂಗಾಪುರದ ಉದ್ಯಮಿಗಳ ನಿಯೋಗ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅನೇಕ ಖಾಸಗಿ ವಿವಿಗಳು, ಸಂಸ್ಥೆಗಳು ಬೆಂಗಳೂರಿನಲ್ಲಿ ತಮ್ಮ ಸಂಸ್ಥೆ ಆರಂಭಿಸಲು ಬರುತ್ತಿದ್ದಾರೆ. ಬೆಂಗಳೂರನ್ನು ಯಾರೂ ಬಿಟ್ಟು ಹೋಗುವುದಿಲ್ಲ. ನಾವು ದೊಡ್ಡ ದೊಡ್ಡ ವಿನಾಯಿತಿ ನೀಡುತ್ತೇವೆ ಎಂದು ಜಾಹೀರಾತು ಹಾಕಿ ನಾವು ಯಾರನ್ನೂ ಕರೆಯುವ ಅಗತ್ಯವಿಲ್ಲ. ಬೆಂಗಳೂರಿನಲ್ಲಿರುವ ಎಲ್ಲಾ ಸೌಲಭ್ಯಗಳು ಹೂಡಿಕೆದಾರರನ್ನು ಆಕರ್ಷಿಸುತ್ತಿದೆʼ ಎಂದರು.‌

ಈ ಸುದ್ದಿಯನ್ನೂ ಓದಿ | DK Shivakumar: ನಾನುಂಟು ತಾಯಿಯುಂಟು, ನಾನುಂಟು ಭಕ್ತಿಯುಂಟು: ಡಿ.ಕೆ. ಶಿವಕುಮಾರ್ ಹೀಗೆ ಹೇಳಿದ್ದೇಕೆ?

ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡಿದ್ದು, ನಮಗೆ ನೀಡಿಲ್ಲ ಎಂದು ಜೆಡಿಎಸ್ ಶಾಸಕರು ನ್ಯಾಯಾಲಯದಲ್ಲಿ ಅರ್ಜಿ ಹಾಕಿರುವ ಬಗ್ಗೆ ಕೇಳಿದಾಗ, ʼಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡಲಿದ್ದಾರೆ. ಯಾರಿಗೆ ಎಷ್ಟು ಅನುದಾನ ನೀಡಬೇಕು ಎಂದು ಸಿಎಂ ತೀರ್ಮಾನ ಮಾಡಿದ್ದಾರೆ. ಈ ವಿಚಾರದಲ್ಲಿ ನಮಗೆ ಪಾಠ ಹೇಳಿಕೊಟ್ಟವರು ಬಿಜೆಪಿಯವರಲ್ಲವೇ? ನಾವು ಅವರಷ್ಟು ಕ್ರೂರಿಗಳಲ್ಲ. ನಾವು ಹೃದಯ ಶ್ರೀಮಂತಿಕೆ ಪ್ರದರ್ಶಿಸಿದ್ದೇವೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.