DK Shivakumar: ನಾನುಂಟು ತಾಯಿಯುಂಟು, ನಾನುಂಟು ಭಕ್ತಿಯುಂಟು: ಡಿ.ಕೆ. ಶಿವಕುಮಾರ್ ಹೀಗೆ ಹೇಳಿದ್ದೇಕೆ?
Hasanamba Temple: ಕುಟುಂಬ ಸಮೇತರಾಗಿ ಮಂಗಳವಾರ ಸಂಜೆ ಹಾಸನಾಂಬ ದೇವಿಯ ದರ್ಶನ ಪಡೆದ ಡಿ.ಕೆ. ಶಿವಕುಮಾರ್ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು. ಹೆಚ್ಚಿನ ಅಧಿಕಾರಕ್ಕೆ ಏನಾದರೂ ಪ್ರಾರ್ಥನೆ ಮಾಡಿದ್ದೀರಾ ಎಂದಾಗ, ನಾನುಂಟು ತಾಯಿಯುಂಟು. ನಾನುಂಟು ಭಕ್ತಿಯುಂಟು, ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ ಎಂದು ಅವರು ತಿಳಿಸಿದ್ದಾರೆ.

-

ಹಾಸನ: ರಾಜ್ಯ ಹಾಗೂ ಹಾಸನ ಜಿಲ್ಲೆಯಲ್ಲಿ ಶಾಂತಿ ಹಾಗೂ ನೆಮ್ಮದಿಯಿಂದ ಆಡಳಿತ ವ್ಯವಸ್ಥೆ ನಡೆಯುತ್ತಿದೆ. ಇದಕ್ಕೆ ಜನರ ಹಾಗೂ ತಾಯಿ ಹಾಸನಾಂಬೆಯ (Hasanamba Devi) ಆಶೀರ್ವಾದ ಕಾರಣ. ತಾಯಿಯ ಆಶೀರ್ವಾದದಿಂದ ಎಲ್ಲರ ಆಶಯಗಳು ಈಡೇರಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಮಂಗಳವಾರ ಸಂಜೆ ಕುಟುಂಬ ಸಮೇತರಾಗಿ ಹಾಸನಾಂಬ ದೇವಿಯ ದರ್ಶನ ಪಡೆದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ದುಃಖವನ್ನು ದೂರ ಮಾಡುವವಳು ದುರ್ಗಾ ದೇವಿ. ಶಕ್ತಿ ಸ್ವರೂಪಿಣಿ, ತಾಯಿ ಹಾಸನಾಂಬೆಯ ದರ್ಶನವನ್ನ ಪ್ರತಿ ವರ್ಷ ತಪ್ಪದೇ ಮಾಡಿಕೊಂಡು ಬರುತ್ತಿದ್ದೇವೆ. ಜನರು ಸಹ ತಾಯಿಯ ಆಶೀರ್ವಾದ ಪಡೆದು ನೆಮ್ಮದಿ, ಶಾಂತಿ, ಬದುಕನ್ನು ಪಡೆಯಬೇಕು ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಜನರಲ್ಲಿ ದೊಡ್ಡ ಸಂಭ್ರಮ ಮನೆ ಮಾಡಿದೆ ಎಂದರು.
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಅತ್ಯುತ್ತಮವಾಗಿ ವ್ಯವಸ್ಥೆ ಮಾಡಿ ಪ್ರತಿಯೊಬ್ಬರಿಗೂ ದರ್ಶನ ಭಾಗ್ಯ ಕಲ್ಪಿಸಿಕೊಟ್ಟಿದ್ದಾರೆ. ಬಹಳ ಶಿಸ್ತಿನಿಂದ ಕೆಲಸ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಶ್ಲಾಘಿಸಿದರು.
ಸಾರ್ವಜನಿಕರು ಸಹ ಸಾಕಷ್ಟು ಸಹಕಾರ ನೀಡಿದ್ದಾರೆ. ತಮ್ಮ ಅಂಗಡಿಗಳ ಮುಂದೆ ದೀಪಾಲಂಕಾರ, ವಿವಿಧ ಬಗೆಯ ಅಲಂಕಾರ ಮಾಡಿದ್ದಾರೆ. ನಾನು ದೇವಿಯ ಭಕ್ತನಾಗಿ ಪ್ರತಿಯೊಬ್ಬರಿಗೂ ವಂದಿಸುತ್ತೇನೆ ಎಂದು ತಿಳಿಸಿದರು.
ವಿಶೇಷವಾಗಿ ಏನಾದರೂ ಪ್ರಾರ್ಥನೆ ಮಾಡಿದ್ದೀರಾ ಎಂದು ಕೇಳಿದಾಗ, ನಿಮಗೆ ಹಾಗೂ ನಮಗೆ ತಾಯಿ ಒಳ್ಳೆಯದನ್ನು ಮಾಡಲಿ. ರಾಜ್ಯಕ್ಕೆ ನೆಮ್ಮದಿ, ಶಾಂತಿ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ | ಲಿಥುವೇನಿಯಾ-ಸಂಸ್ಕೃತದ ಒಂದೇ ರೀತಿಯ ಪದಗಳು ದಶಕಗಳ ಹಿಂದಿನ ನಾಗರಿಕ ಸಂಪರ್ಕಕ್ಕೆ ಸಾಕ್ಷಿ: ಶ್ರೀ ಮಧುಸೂದನ ಸಾಯಿ
ಹೆಚ್ಚಿನ ಅಧಿಕಾರಕ್ಕೆ ಏನಾದರೂ ಪ್ರಾರ್ಥನೆ ಮಾಡಿದ್ದೀರಾ ಎಂದಾಗ, ನಾನುಂಟು ತಾಯಿಯುಂಟು. ನಾನುಂಟು ಭಕ್ತಿಯುಂಟು, ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.