Karnataka CM Row: ಸಿಎಂ ಕುರ್ಚಿ ಕದನ; ಶನಿವಾರ ಬೆಳಗ್ಗೆ ಸಿಎಂ, ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್!
ಶನಿವಾರ ಬೆಳಗ್ಗೆ 9.30ಕ್ಕೆ ಸಿಎಂ ಅಧಿಕೃತ ನಿವಾಸ ಕಾವೇರಿ ನಿವಾಸದಲ್ಲಿ ಸಿಎಂ ಮತ್ತು ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ನಿಗದಿಯಾಗಿದೆ. ಇಬ್ಬರು ಕುಳಿದು ಮಾತುಕತೆ ನಡೆಸಿ, ಒಂದು ನಿರ್ಧಾರ ತೆಗೆದುಕೊಂಡು ದೆಹಲಿಗೆ ಬನ್ನಿ ಎಂದು ಹೈಕಮಾಂಡ್ ನಾಯಕರು ಸೂಚಿಸಿರುವ ಹಿನ್ನೆಲೆಯಲ್ಲಿ ಈ ಸಭೆ ಏರ್ಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ -
ಬೆಂಗಳೂರು, ನ.28: ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಕದನ ಜೋರಾಗಿರುವ ನಡುವೆ ಹೈಕಮಾಂಡ್ ಸೂಚನೆ ಮೇರೆಗೆ ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಲು ನ.29ರಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಭೆ ನಿಗದಿಯಾಗಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು, ಹೈಕಮಾಂಡ್ ಸೂಚನೆಯಂತೆ ನಾಳೆ ಸಭೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವುದಾಗಿ ಈಗಾಗಲೇ ತಿಳಿಸಿದ್ದೇನೆ. ಈಗಲೂ ಮತ್ತು ನಾಳೆಯೂ ಅದನ್ನೇ ಹೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು.
ಪಕ್ಷದ ವರಿಷ್ಠರು ನನಗೆ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೂ ಕರೆ ಮಾಡಿ ನೀವಿಬ್ಬರೂ ಭೇಟಿ ಮಾಡಿ ಎಂದು ತಿಳಿಸಿರುತ್ತಾರೆ. ಹಾಗಾಗಿ ಅವರನ್ನು ನಾನು ಉಪಹಾರಕ್ಕಾಗಿ ಕರೆದಿದ್ದು, ಅಲ್ಲಿ ಚರ್ಚೆ ಮಾಡುತ್ತೇವೆ. ಡಿ.ಕೆ ಶಿವಕುಮಾರ್ ಅವರು ಹೈಕಮಾಂಡ್ ಹೇಳಿದ್ದನ್ನು ಒಪ್ಪುದಾಗಿ ಹೇಳಿದ್ದಾರೆ ಎಂದರು. ಇನ್ನು ನವದೆಹಲಿಗೆ ಕರೆದರೆ ತೆರಳುವುದಾಗಿ ಮುಖ್ಯಮಂತ್ರಿಗಳು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಶನಿವಾರ ಬೆಳಗ್ಗೆ 9.30ಕ್ಕೆ ಸಿಎಂ ಅಧಿಕೃತ ನಿವಾಸ ಕಾವೇರಿ ನಿವಾಸದಲ್ಲಿ ಸಿಎಂ ಮತ್ತು ಡಿಸಿಎಂ ಬ್ರೇಕ್ ಪಾಸ್ಟ್ ಮೀಟಿಂಗ್ ನಿಗದಿಯಾಗಿದೆ. ಇಬ್ಬರೂ ಕುಳಿತು ಮಾತುಕತೆ ನಡೆಸಿ, ಒಂದು ನಿರ್ಧಾರ ತೆಗೆದುಕೊಂಡು ದೆಹಲಿಗೆ ಬನ್ನಿ ಎಂದು ಹೈಕಮಾಂಡ್ ನಾಯಕರು ಸೂಚಿಸಿರುವ ಹಿನ್ನೆಲೆಯಲ್ಲಿ ಈ ಸಭೆ ಏರ್ಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಧಾನಿ ಮೋದಿ ರೈತರ ಸಮಸ್ಯೆ ಬಗೆಹರಿಸುತ್ತಾರೆ ಎಂದು ಭಾವಿಸಿದ್ದೇನೆ: ಸಿಎಂ
ಇಬ್ಬರು ನಾಯಕರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವಾರ್‌ನಿಂದ ಹೈಕಮಾಂಡ್ ನಾಯಕರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಇಬ್ಬರೂ ಮಾತುಕತೆ ನಡೆಸಿ ದೆಹಲಿಗೆ ಬನ್ನಿ ಎಂದು ಸೂಚಿಸಲಾಗಿದೆ ಎನ್ನಲಾಗಿದೆ.
ಕರ್ನಾಟಕದ ನಾಯಕತ್ವ ಬದಲಾವಣೆ ಕುರಿತು ಇದೇ ಭಾನುವಾರ ದೆಹಲಿಯಲ್ಲಿ ಹೈವೋಲ್ಟೇಜ್ ಮೀಟಿಂಗ್ ಸಾಧ್ಯತೆ ಇದೆ. ಅಂದೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಸಂಧಾನ ನಡೆಯಲಿದೆ ಎನ್ನಲಾಗುತ್ತಿದೆ. ಈ ನಡುವೆ ಸಿಎಂ ಮತ್ತು ಡಿಸಿಎಂ ನಡುವೆ ಸಭೆ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ.
ನನಗೆ ಆತುರ ಇಲ್ಲ, ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ: ಡಿ.ಕೆ.ಶಿವಕುಮಾರ್
ನನಗೆ ಯಾವ ಆತುರವೂ ಇಲ್ಲ, ಎಲ್ಲವನ್ನೂ ಪಕ್ಷ ತೀರ್ಮಾನಿಸುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ನಿಮ್ಮ ಪಕ್ಷದ ಬಹಳಷ್ಟು ಕಾರ್ಯಕರ್ತರು ನಿಮ್ಮನ್ನು ಸಿಎಂ ಸ್ಥಾನದಲ್ಲಿ ನೋಡಲು ಬಯಸುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಬೆಂಗಳೂರಿನ ಅರಮನೆ ಮೈದಾನದ ಬಳಿ ಡಿಸಿಎಂ ಪ್ರತಿಕ್ರಿಯಿಸಿದ್ದಾರೆ.
ನೀವು ಹಾಗೂ ಸಿಎಂ ದೆಹಲಿಗೆ ಹೋಗುತ್ತೀರಾ ಎಂದು ಕೇಳಿದಾಗ, ʼನಾನು ದೆಹಲಿಗೆ ಹೋಗಬಹುದು. ನನಗೆ ದೆಹಲಿಯಲ್ಲಿ ಸಾಕಷ್ಟು ಕೆಲಸಗಳಿವೆ. ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ನಾನು ಸಂಸದರನ್ನು ಭೇಟಿ ಮಾಡಬೇಕಿದೆ. ದೇವರ ಕೃಪೆಯಿಂದ ಮೇಕೆದಾಟು ಯೋಜನೆ ಸಂಬಂಧ ನ್ಯಾಯಾಲಯದಲ್ಲಿ ನಮಗೆ ನ್ಯಾಯ ದೊರೆತಿದ್ದು, ಈ ಯೋಜನೆ ಪರಿಷ್ಕೃತ ಡಿಪಿಆರ್ ಸಿದ್ಧತೆಗೆ ಸೂಚಿಸಿದ್ದೇವೆ. ಮಹದಾಯಿ, ಕೃಷ್ಣಾ, ಎತ್ತಿನಹೊಳೆ ಸೇರಿದಂತೆ ನಮ್ಮ ಸಾಕಷ್ಟು ಯೋಜನೆಗಳ ಬಗ್ಗೆ ಸಂಸದರ ಜತೆ ಚರ್ಚೆ ಮಾಡುವುದಿದೆ. ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಸಿಎಂ ಜತೆ ಚರ್ಚೆ ಮಾಡುತ್ತೇನೆʼ ಎಂದರು.
ಜತೆಗೆ ಮೆಕ್ಕೆಜೋಳ ಬೆಲೆ ವಿಚಾರದಲ್ಲಿ ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿಲ್ಲ. ಮೆಕ್ಕೆಜೋಳಕ್ಕೆ 2400 ರೂ. ಬೆಲೆ ನಿಗದಿ ಮಾಡಿರುವುದು ಕೇಂದ್ರ ಸರ್ಕಾರ. ಮಾರುಕಟ್ಟೆಯಲ್ಲಿ ಸಿಗುತ್ತಿರುವುದು 1600 ರಿಂದ 1800 ರೂ. ಮಾತ್ರ. ಕೇಂದ್ರ ಸರ್ಕಾರ ರೈತರಿಗೆ ನೆರವು ನೀಡುತ್ತಿಲ್ಲ. ಹೀಗಾಗಿ ನಾವು ಹೋಗಿ ಮನವಿ ಸಲ್ಲಿಸಬೇಕಿದೆ. ನಾವು ಎಲ್ಲಾ ಕಾರ್ಖಾನೆ ಮಾಲೀಕರ ಸಭೆ ಕರೆಯಲು ತೀರ್ಮಾನಿಸಿದ್ದೇವೆ. ಕೇಂದ್ರ ಸರ್ಕಾರ ಮೆಕ್ಕೆಜೋಳ ಖರೀದಿ ಮಾಡಬೇಕು ಎಂದು ಮನವಿ ಸಲ್ಲಿಸುತ್ತೇವೆʼ ಎಂದರು.
ದೆಹಲಿಗೆ ಹೋದಾಗ ಪಕ್ಷದ ಕಚೇರಿಗೆ ಹೋಗುತ್ತೀರಾ ಎಂದು ಕೇಳಿದಾಗ, ʼಅದು ದೆಹಲಿಯಲ್ಲಿರುವ ನಮ್ಮ ಪಾಲಿನ ದೇವಾಲಯ. ದೆಹಲಿ ಕಚೇರಿ ನಮಗೆ ಮಾರ್ಗದರ್ಶನ ನೀಡಲಿದೆʼ ಎಂದು ತಿಳಿಸಿದರು.
ಒಕ್ಕಲಿಗ ಸಮುದಾಯ ನಿಮ್ಮ ಪರವಾಗಿ ನಿಂತಿದೆಯಲ್ಲ ಎಂದು ಕೇಳಿದಾಗ, ʼನಾನು ಸಮುದಾಯದ ದೃಷ್ಟಿಕೋನದ ಬಗ್ಗೆ ಚರ್ಚೆ ಮಾಡುವುದಿಲ್ಲ. ಪಕ್ಷ ನನಗೆ ಮುಖ್ಯ. ಕಾಂಗ್ರೆಸ್ ನನ್ನ ಸಮುದಾಯ. ನಾನು ಒಕ್ಕಲಿಗ ಸಮುದಾಯದಿಂದ ಬಂದಿದ್ದು, ಆ ಸಮುದಾಯದ ಜನ ನನ್ನನ್ನು ಪ್ರೀತಿಸಬಹುದು. ನನ್ನ ಬದ್ಧತೆ ಹಿಂದುಳಿದ, ಪರಿಶಿಷ್ಟ, ಅಲ್ಪಸಂಖ್ಯಾತ ಸೇರಿದಂತೆ ಸಮಾಜದ ಎಲ್ಲಾ ಸಮುದಾಯಗಳ ಪರವಾಗಿದೆ. ಒಕ್ಕಲಿಗರೂ ಕೂಡ ಹಿಂದುಳಿದ ವರ್ಗದ ಸಮುದಾಯದವರೇ ಎಂದರು.
ಗಾಳ ಹಾಕಿ ಮೀನು ಹಿಡಿಯುವುದು ಹೇಗೆಂದು ನನಗೆ ಗೊತ್ತು: ಡಿ.ಕೆ. ಶಿವಕುಮಾರ್
ನಿಮ್ಮ ಮುಂಬೈ ಭೇಟಿಯನ್ನು ಬಿಜೆಪಿ ಬೇರೆ ರೀತಿ ಅರ್ಥೈಸುತ್ತಿದೆಯಲ್ಲ ಎಂದು ಕೇಳಿದಾಗ, ʼನಾನು ಬಿಜೆಪಿಯ ಅರ್ಥಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಆತ್ಮೀಯ ಸ್ನೇಹಿತ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ವಿಚಾರಿಸಿದೆ. ಒಂದು ಗಂಟೆ ಅಲ್ಲಿದ್ದು, ನಾನು ವಾಪಸ್ಸಾಗಿದ್ದೇನೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.