Delhi Protest: ದೆಹಲಿ ಪ್ರತಿಭಟನೆಗಳ ಹಿಂದೆ ಕಾಣದ ಶಕ್ತಿಗಳ ಕೈವಾಡ: ಅನುಮಾನ ವ್ಯಕ್ತಪಡಿಸಿದ ಕುಮಾರಸ್ವಾಮಿ
ದೆಹಲಿಯಲ್ಲಿ ಸಿಜೆಪಿ ಹಾಗೂ ಕಾಂಗ್ರೆಸ್ ಪ್ರತಿಭಟನೆಗಳ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಇದ ಕೆಲವರ ಕಣ್ಣು ಕುಕ್ಕಿರುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದ್ದಾರೆ.
-
ಹಾಸನ: ನವದೆಹಲಿಯಲ್ಲಿ ನಡೆಯುತ್ತಿರುವ ಸಂಘಟಿತ ಪ್ರತಿಭಟನೆಗಳ (Delhi Protest) ಹಿಂದೆ ಕಾಣದ ಶಕ್ತಿಗಳ ಕೈವಾಡ ಇರಬಹುದು ಎಂಬ ಅನುಮಾನವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ತಮ್ಮ ತಾಯಿ ಚೆನ್ನಮ್ಮ ಅವರ ಸಮಾಧಿಗೆ ತಂದೆ ಎಚ್.ಡಿ. ದೇವೇಗೌಡರು ಹಾಗೂ ಕುಟುಂಬಸ್ಥರ ಜೊತೆಗೂಡಿ ಪೂಜೆ ನೆರವೇರಿಸಿದ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.
ಅಭಿವೃದ್ಧಿ ವಿಷಯದಲ್ಲಿ ಭಾರತ ಜಗತ್ತಿನಲ್ಲಿಯೇ ವೇಗವಾಗಿ ದಾಪುಗಾಲು ಇಡುತ್ತಿದೆ. ಅಲ್ಲದೆ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಸರ್ವ ರೀತಿಯ ಪ್ರಯತ್ನ ಮಾಡುತ್ತಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಭಾರತದ ವಿರುದ್ಧ ಷಡ್ಯಂತ್ರ ನಡೆಯುತ್ತಿರುವ ಶಂಕೆ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ತಲಾದಾಯ ಮತ್ತು ಜಿಡಿಪಿಯಲ್ಲಿಯೂ ಭಾರತ ಅಗ್ರ ರಾಷ್ಟ್ರಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಅಭಿವೃದ್ಧಿಯನ್ನು ಸಾಧಿಸುತ್ತಿದೆ. ಇವೆಲ್ಲವೂ ಕೆಲವರ ಕಣ್ಣು ಕುಕ್ಕಿರುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದರು.
ಸಿಎಂ ಬಗ್ಗೆ ದೇವರೇ ನುಡಿಸಿದ ಮಾತುಗಳನ್ನು ಹೇಳಿದ್ದೇನೆ:
ನಮ್ಮ ತಾಯಿ ಅಂತ್ಯಕ್ರಿಯೆ ಸಂದರ್ಭದಲ್ಲಿ ಗೌರವ ಸಲ್ಲಿಸಲು ಆಗಮಿಸಿದ್ದ ನಾಡಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರು ಹೇಳಲಿಲ್ಲ ಎಂಬ ಬಗ್ಗೆ ಯಾರೂ ತಪ್ಪು ತಿಳಿಯುವುದು ಬೇಡ. ಆ ಭಾವುಕ ಸಂದರ್ಭದಲ್ಲಿ ನಾನು ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದೇನೆ. ಮುಖ್ಯವಾಗಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಯವರಿಗೆ ಎಂದು ಹೇಳಿ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಿದ್ದೇನೆ. ಮುಖ್ಯಮಂತ್ರಿಗಳು ಎಂದರೆ ಶಿವಕುಮಾರ್ ಅವರೇ ಅಲ್ಲವೇ. ಅವರ ಹೆಸರನ್ನು ಹೇಳಲಿಲ್ಲ ಎಂದು ಯಾರೂ ಅನ್ಯತಾ ಭಾವಿಸುವುದು ಬೇಡ. ಮುಖ್ಯಮಂತ್ರಿಗಳು ಎಂದು ಅತ್ಯಂತ ಗೌರವದಿಂದ ನಾನು ಅವರನ್ನು ಸಂಭೋಧಿಸಿದ್ದೇನೆ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ಆ ಸಂದರ್ಭ ಹೇಗಿತ್ತು ಎಂಬುದನ್ನು ತಾವೆಲ್ಲರೂ ಗಮನಿಸಿದ್ದೀರಿ. ಅಂತಿಮ ದರ್ಶನದ ವೇಳೆ ನಾನು ಮೈಕ್ ಹಿಡಿದು ಮಾತನಾಡಿದೆ. ಮಾತಾಡಬೇಕು ಎಂಬ ಉದ್ದೇಶ ನನಗೆ ಇರಲಿಲ್ಲ. ನನ್ನ ತಾಯಿಯೇ ನನ್ನನ್ನು ಮಾತನಾಡಿಸಿದರು, ಆ ಭಗವಂತನೇ ಆ ಮಾತುಗಳನ್ನು ನುಡಿಸಿದ ಎಂದು ನಂಬಿದ್ದೇನೆ. ನಾನೆಂದೂ ಮುಖ್ಯಮಂತ್ರಿಗಳು ಸೇರಿದಂತೆ ಯಾರನ್ನು ಅಗೌರವಿಸುವ ಪ್ರಶ್ನೆ ಬರುವುದಿಲ್ಲ. ಇದು ನಾನು ಕೊಡುತ್ತಿರುವ ಸ್ಪಷ್ಟನೆ ಎಂದು ತಿಳಿಸಿದರು.
ನಾಡಿನ ಲಕ್ಷಾಂತರ ಜನ ನನ್ನ ತಾಯಿಯ ದರ್ಶನ ಪಡೆದು ಅವರಿಗೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ನಡೆದ ಅಂತಿಮ ಯಾತ್ರೆಯಲ್ಲಿ ಜನತೆ ತೋರಿದ ಪ್ರೀತಿಗೆ ನಾನು ಭಾವುಕನಾಗಿದ್ದೇನೆ. ಕೇವಲ ನಾಲ್ಕು ಗಂಟೆಗಳಲ್ಲಿ ಮುಗಿಯಬೇಕಾಗಿದ್ದ ಅಂತಿಮ ಯಾತ್ರೆ ಸತತ 16 ಗಂಟೆಗಳ ಕಾಲ ಸಾಗಿದ್ದು ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ. ಇಂಥ ಜನರ ಋಣ ಭಾರ ನನ್ನ ಮೇಲಿದೆ. ಇವರ ಋಣ ತೀರಿಸುವುದು ನನ್ನ ಜವಾಬ್ದಾರಿ. ಅದಕ್ಕಾಗಿ ಆ ಭಗವಂತ ನನಗೆ ಶಕ್ತಿ ಕೊಡಲಿ ಎಂದು ವಿನಮ್ರತೆಯಿಂದ ಪ್ರಾರ್ಥಿಸುತ್ತೇನೆ. ಜನರ ಸೇವೆ ಮಾಡುವುದೇ ನನ್ನ ಧ್ಯೇಯವಾಗಿದೆ. ನನ್ನ ಹೆತ್ತಮ್ಮನ ಸಮಾಧಿಯ ಮುಂದೆ ಕುಳಿತು ಈ ಮಾತು ಹೇಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಅವರು ಅತ್ಯಂತ ಭಾವುಕತೆಯಿಂದ ಹೇಳಿದರು.
ಅಮ್ಮನು ಸಮಾಧಿಯಾದ ಮೂರನೇ ದಿನವಾದ ಬುಧವಾರ ಹಾಲು, ತುಪ್ಪದ ಕಾರ್ಯಕ್ರಮ ಇರುತ್ತದೆ. ಕುಟುಂಬದ ಸದಸ್ಯರೆಲ್ಲರೂ ಸೇರಿ ಈ ಕಾರ್ಯಕ್ರಮವನ್ನು ನೆರವೇರಿಸುತ್ತೇವೆ ಎಂದು ಸಚಿವರು ಹೇಳಿದರು.
Sansad Chalo: ಹಿಂಸೆಗೆ ತಿರುಗಿದ ಸಿಜೆಪಿ ಪ್ರತಿಭಟನೆ; ಗಂಭೀರ ಗಾಯಗೊಂಡ 20 ವರ್ಷದ ಮಹಿಳೆ ಐಸಿಯುಗೆ ದಾಖಲು
ಚೆನ್ನಮ್ಮ ಅವರ ಸಮಾಧಿಗೆ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಸೇರಿದಂತೆ ಮಾಜಿ ಪ್ರಧಾನಿಗಳ ಕುಟುಂಬ ಸದಸ್ಯರೆಲ್ಲರೂ ಪೂಜೆ ಸಲ್ಲಿಸಿದರು.