ಸರ್ಕಾರಿ ಶಾಲೆಯ 100 ವಿದ್ಯಾರ್ಥಿನಿಯರಿಗೆ ವೃತ್ತಿಪರ ಉಚಿತ ಫುಟ್‌ಬಾಲ್ ತರಬೇತಿ ಪ್ರಾರಂಭ
ಕೆಇಎಂಪಿ (ಕೆಂಪ್) ಎಕ್ಸಲೆನ್ಸ್ ಪ್ರತಿಷ್ಠಾನದ ಸಹಯೋಗದೊಂದಿಗೆ, ಮೂರು ವರ್ಷಗಳ ಫುಟ್ ಬಾಲ್ ತರಬೇತಿ ಮತ್ತು ಅಭಿವೃದ್ಧಿ ಯೋಜನೆಯಡಿ ಸರ್ಕಾರಿ ಶಾಲೆಯ 100 ಬಾಲಕಿಯರಿಗೆ ವೃತ್ತಿಪರ ತರಬೇತಿ, ಕ್ರೀಡಾ ಸಾಮಗ್ರಿಗಳು ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಒದಗಿಸಲಾಗುತ್ತದೆ. ತಳಮಟ್ಟದಲ್ಲೇ ಪ್ರತಿಭಾವಂತ ಆಟಗಾರ್ತಿಯರನ್ನು ಗುರುತಿಸಿ, ಅವರನ್ನು ಉನ್ನತ ಮಟ್ಟದ ಸ್ಪರ್ಧೆ ಗಳಿಗೆ ಸಜ್ಜುಗೊಳಿಸುವುದು ಯೋಜನೆಯ ಉದ್ದೇಶವಾಗಿದೆ.
-
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನವು ಗ್ರಾಮೀಣ ಸರ್ಕಾರಿ ಶಾಲಾ ಬಾಲಕಿಯರಿಗೆ ಕ್ರೀಡಾ ಕ್ಷೇತ್ರದಲ್ಲಿ ಹೊಸ ಅವಕಾಶ ಕಲ್ಪಿಸುವ ಉದ್ದೇಶದಿಂದ 100 ಸರ್ಕಾರಿ ಶಾಲಾ ಬಾಲಕಿಯರಿಗೆ ಉಚಿತ ಪುಟ್‌ಬಾಲ್ ವೃತ್ತಿಪರ ತರಬೇತಿ ನೀಡುತ್ತಿದೆ.
ಕೆಇಎಂಪಿ (ಕೆಂಪ್) ಎಕ್ಸಲೆನ್ಸ್ ಪ್ರತಿಷ್ಠಾನದ ಸಹಯೋಗದೊಂದಿಗೆ, ಮೂರು ವರ್ಷಗಳ ಫುಟ್ ಬಾಲ್ ತರಬೇತಿ ಮತ್ತು ಅಭಿವೃದ್ಧಿ ಯೋಜನೆಯಡಿ ಸರ್ಕಾರಿ ಶಾಲೆಯ 100 ಬಾಲಕಿಯರಿಗೆ ವೃತ್ತಿಪರ ತರಬೇತಿ, ಕ್ರೀಡಾ ಸಾಮಗ್ರಿಗಳು ಮತ್ತು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಒದಗಿಸಲಾಗುತ್ತದೆ. ತಳಮಟ್ಟದಲ್ಲೇ ಪ್ರತಿಭಾವಂತ ಆಟಗಾರ್ತಿಯರನ್ನು ಗುರುತಿಸಿ, ಅವರನ್ನು ಉನ್ನತ ಮಟ್ಟದ ಸ್ಪರ್ಧೆಗಳಿಗೆ ಸಜ್ಜುಗೊಳಿಸುವುದು ಯೋಜನೆಯ ಉದ್ದೇಶವಾಗಿದೆ.
100 ಬಾಲಕಿಯರನ್ನು ಎಂಟು ಗುಂಪುಗಳಾಗಿ ವಿಂಗಡಿಸಿ, ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ ಮಾನ್ಯತೆ ಪಡೆದ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ. ವಾರಕ್ಕೆ ಎರಡು ಬಾರಿ ಮೈದಾನ ದಲ್ಲಿ ತರಬೇತಿ ನಡೆಯಲಿದ್ದು, ಪ್ರತಿ ಕ್ರೀಡಾ ಋತುವಿನಲ್ಲಿ 40 ತರಬೇತಿ ಅವಧಿಗಳನ್ನು ಆಯೋಜಿಸ ಲಾಗುತ್ತದೆ. ದೈಹಿಕ ಸಾಮರ್ಥ್ಯ, ತಾಂತ್ರಿಕ ಕೌಶಲ್ಯ ಮತ್ತು ಮೈದಾನದಲ್ಲಿನ ಸ್ಥಾನ ನಿರ್ವಹಣೆ ಕುರಿತು ತರಬೇತಿ ನೀಡಲಾಗುತ್ತದೆ.
ಇದನ್ನೂ ಓದಿ: National Sports Awards 2025: 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ, ಖೇಲ್ ರತ್ನ ಈ ಬಾರಿ ಯಾರಿಗೂ ಇಲ್ಲ!
ತರಬೇತಿ ಸಂಪೂರ್ಣ ಉಚಿತವಾಗಿದ್ದು, ಕ್ರೀಡಾ ಉಡುಪು, ಫುಟ್‌ಬಾಲ್ ಬೂಟು, ಕಾಲುಚೀಲ, ಪಂದ್ಯ ಚೆಂಡು ಸೇರಿದಂತೆ ಅಗತ್ಯ ಕ್ರೀಡಾ ಸಾಮಗ್ರಿಗಳನ್ನು ಬಾಲಕಿಯರಿಗೆ ಒದಗಿಸಲಾಗುತ್ತದೆ.
‘ಕನಸು ಕಾಣಿ – ಧೈರ್ಯ ಮಾಡಿ – ಮುನ್ನಡಿ’ ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಈ ಯೋಜನೆ, ಬಾಲಕಿಯರಲ್ಲಿ ಆತ್ಮವಿಶ್ವಾಸ, ಶಿಸ್ತು, ತಂಡಭಾವ ಮತ್ತು ಉನ್ನತ ಗುರಿ ಸಾಧಿಸುವ ಮನೋಭಾವ ಬೆಳೆಸುವತ್ತ ಗಮನಹರಿಸಿದೆ. ಪ್ರತಿಭಾವಂತ ಆಟಗಾರ್ತಿಯರಿಗೆ ಅಂತರಶಾಲಾ ಪಂದ್ಯಗಳು, ಯುವ ಕ್ರೀಡಾಕೂಟಗಳು ಹಾಗೂ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗುತ್ತದೆ.
ಯೋಜನೆಯ ಫಲಿತಾಂಶ ಈಗಾಗಲೇ ಕಾಣಿಸತೊಡಗಿದೆ. ಆಯ್ಕೆಯಾದ ವಿದ್ಯಾರ್ಥಿನಿಯರು ಯಲಹಂಕದ ಪಡುಕೋಣೆ–ದ್ರಾವಿಡ್ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ ತಮ್ಮ ಮೊದಲ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ.
2026–27ನೇ ಸಾಲಿನ ತಾಲ್ಲೂಕು ಮಟ್ಟದ ಬಾಲಕಿಯರ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಬೆಟ್ಟಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಾಂಪಿಯನ್ ಆಗಿದ್ದು, ವಿಜಯಪುರ ಸರ್ಕಾರಿ ಶಾಲೆ ದ್ವಿತೀಯ ಸ್ಥಾನ ಪಡೆದಿದೆ. ಆರು ತಂಡಗಳು ಭಾಗವಹಿಸಿದ್ದ ಈ ಸ್ಪರ್ಧೆಯ ಬಳಿಕ ಎರಡೂ ಶಾಲೆಗಳ 18 ಆಟಗಾರ್ತಿಯರು ಬೆಂಗಳೂರು ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ತಾಲ್ಲೂಕನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಪ್ರತಿಷ್ಠಾನವು ಪ್ರಸ್ತುತ ಏಳು ಸರ್ಕಾರಿ ಶಾಲೆಗಳ ಸುಮಾರು 3,000 ವಿದ್ಯಾರ್ಥಿಗಳಿಗೆ ‘ನಮ್ಮ ಶಿಕ್ಷಣ’ ಮತ್ತು ‘ನಮ್ಮ ಆರೋಗ್ಯ’ ಯೋಜನೆಗಳ ಮೂಲಕ ಶಿಕ್ಷಣ, ಆರೋಗ್ಯ ಮತ್ತು ಸಮಗ್ರ ಅಭಿವೃದ್ಧಿಗೆ ಬೆಂಬಲ ನೀಡುತ್ತಿದೆ.
ಮುಂದಿನ ದಿನಗಳಲ್ಲಿ ಫುಟ್‌ಬಾಲ್ ಯೋಜನೆಯನ್ನು ಸುತ್ತಮುತ್ತಲಿನ ಇನ್ನಷ್ಟು ಸರ್ಕಾರಿ ಶಾಲೆ ಗಳಿಗೆ ವಿಸ್ತರಿಸಿ, ಗ್ರಾಮೀಣ ಪ್ರದೇಶದ ಹೆಚ್ಚಿನ ಬಾಲಕಿಯರಿಗೆ ಕ್ರೀಡಾ ಅವಕಾಶ ಕಲ್ಪಿಸುವ ಯೋಜನೆ ಹೊಂದಿದೆ.
2020ರ ಮಾರ್ಚ್‌ನಲ್ಲಿ ಲಾಭರಹಿತ ಸಂಸ್ಥೆಯಾಗಿ ಸ್ಥಾಪನೆಯಾದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನವು ನಮ್ಮ ಶಿಕ್ಷಣ, ನಮ್ಮ ಆರೋಗ್ಯ, ನಮ್ಮ ಊರು, ನಮ್ಮ ನೆಲ ನಮ್ಮ ಜಲ ಮತ್ತು ನಮ್ಮ ಪರಂಪರೆ ಎಂಬ ಐದು ಪ್ರಮುಖ ಕಾರ್ಯಕ್ರಮಗಳ ಮೂಲಕ ಸಮುದಾಯ ಅಭಿವೃದ್ಧಿಗೆ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯಕ್ರಮಗಳು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಹೊಂದಾಣಿಕೆಯಾಗಿವೆ.