Kasturirangan Report: ಕಸ್ತೂರಿ ರಂಗನ್ ವರದಿ ವಿರುದ್ಧ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರ
Karnataka assembly session: ಕಸ್ತೂರಿ ರಂಗನ್ ವರದಿ ಸಂಬಂಧ ಹೊರಡಿಸಲಾಗಿರುವ ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯನ್ನು ಯಥಾವತ್ತಾಗಿ ಒಪ್ಪದಿರಲು ವಿಧಾನಸಭೆಯಲ್ಲಿ ಮಂಗಳವಾರ ತೀರ್ಮಾನಿಸಿದ್ದು, ಆರು ಅಂಶಗಳ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿರ್ಣಯವನ್ನು ಮಂಡಿಸಿದರು.
-
ಬೆಂಗಳೂರು: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಕುರಿತಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ (Kasturirangan Report) 7ನೇ ಕರಡು ಅಧಿಸೂಚನೆಯನ್ನು ಪ್ರಸ್ತುತ ರೂಪದಲ್ಲಿ ಯಥಾವತ್ತಾಗಿ ಒಪ್ಪದಿರಲು ಕರ್ನಾಟಕ ವಿಧಾನಸಭೆ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ.
ಮಲೆನಾಡು ಮತ್ತು ಕರಾವಳಿ ಭಾಗದ ಜನರ ಜಮೀನು, ಜೀವನೋಪಾಯ ಹಾಗೂ ಕೃಷಿಕರ ಹಿತರಕ್ಷಣೆಗಾಗಿ ಈ ಅಧಿಸೂಚನೆಯನ್ನು ಮರು ಪರಿಶೀಲಿಸುವಂತೆ ಕೇಂದ್ರಕ್ಕೆ ಒತ್ತಾಯಿಸಲು ನಿರ್ಧರಿಸಲಾಗಿದೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಪ್ರಮುಖ ನಿರ್ಣಯವನ್ನು ಮಂಡಿಸಿದ್ದು, ಇದಕ್ಕೆ ವಿಪಕ್ಷಗಳು ಸೇರಿದಂತೆ ಸದನದ ಎಲ್ಲಾ ಸದಸ್ಯರು ಒಮ್ಮತದ ಬೆಂಬಲ ಸೂಚಿಸಿದರು.
ಕಸ್ತೂರಿ ರಂಗನ್ ವರದಿಯಲ್ಲಿ ಕಂಡುಬಂದಿರುವ ಹಲವು ಗಂಭೀರ ನ್ಯೂನ್ಯತೆಗಳು ಮತ್ತು ಸಾರ್ವಜನಿಕರ ಆತಂಕಗಳನ್ನು ಸರಿಪಡಿಸಲು ರಾಜ್ಯ ಸರ್ಕಾರದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯು ವರದಿಯ ಎಲ್ಲಾ ಅಂಶಗಳು, ಕೃಷಿ ಭೂಮಿಯ ಗಡಿ ಗುರುತಿಸುವಿಕೆ ಹಾಗೂ ಪರಿಸರ ಸೂಕ್ಷ್ಮ ವಲಯದ ತಾಂತ್ರಿಕ ಲೋಪಗಳನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ.
ಕೇಂದ್ರದ ಅಧಿಸೂಚನೆಯನ್ನು ಯಥಾವತ್ತಾಗಿ ಒಪ್ಪಲು ಸಾಧ್ಯವಿಲ್ಲ: ಸಿಎಂ
ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಕಸ್ತೂರಿ ರಂಗನ್ ವರದಿಯ ನಿಬಂಧನೆಗಳಿಂದ ರಾಜ್ಯದ 10 ಜಿಲ್ಲೆಗಳ ಸುಮಾರು 1,449ಕ್ಕೂ ಹೆಚ್ಚು ಗ್ರಾಮಗಳ ಜನರ ಜೀವನೋಪಾಯಕ್ಕೆ ಧಕ್ಕೆಯಾಗುವ ಭೀತಿಯಿದೆ. ಕೃಷಿ ಭೂಮಿ, ಜನವಸತಿ ಪ್ರದೇಶಗಳು ಮತ್ತು ಖಾಸಗಿ ತೋಟಗಳನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿಸಿರುವುದು ಅಶಾಂತಿಗೆ ಕಾರಣವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ನೀಡಿರುವ 7ನೇ ಕರಡು ಅಧಿಸೂಚನೆಯನ್ನು ನಾವು ಯಥಾವತ್ತಾಗಿ ಒಪ್ಪಲು ಸಾಧ್ಯವಿಲ್ಲ" ಎಂದರು.
KPSC Recruitment Scam: ನೇಮಕಾತಿ ಅಕ್ರಮ; ಕೆಪಿಎಸ್ಸಿಯನ್ನೇ ಮುಚ್ಚುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದ ಸಿಎಂ
ಕೇಂದ್ರ ಸರ್ಕಾರವು ಸೆಪ್ಟೆಂಬರ್ 27ರೊಳಗೆ ರಾಜ್ಯದ ಅಂತಿಮ ನಿಲುವನ್ನು ತಿಳಿಸುವಂತೆ ಕೇಳಿದ್ದು, ಈ ಹಿನ್ನೆಲೆಯಲ್ಲಿ ಶಾಸನಸಭೆಯ ಸರ್ವಾನುಮತದ ನಿರ್ಣಯವನ್ನು ಕೇಂದ್ರ ಗೃಹ ಹಾಗೂ ಪರಿಸರ ಸಚಿವಾಲಯಕ್ಕೆ ಕಳುಹಿಸಿಕೊಡಲಾಗುವುದು. ಅಗತ್ಯಬಿದ್ದರೆ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ದು ಮನವಿ ಸಲ್ಲಿಸಲು ಮತ್ತು ನಿವೃತ್ತ ನ್ಯಾಯಾಧೀಶರ ಸಮಿತಿಯ ವರದಿ ಆಧಾರದ ಮೇಲೆ ಕೇಂದ್ರಕ್ಕೆ ಸೂಕ್ತ ಪರ್ಯಾಯ ಪ್ರಸ್ತಾವನೆ ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ.