Drone Testing Facility: ಚಿಕ್ಕಬಳ್ಳಾಪುರದಲ್ಲಿ ಡ್ರೋನ್ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ: ಪ್ರಿಯಾಂಕ್ ಖರ್ಗೆ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜೀಡರಹಳ್ಳಿ ಗ್ರಾಮದಲ್ಲಿ ಡ್ರೋನ್ ಪರೀಕ್ಷಾ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸುಮಾರು 19.26 ಎಕರೆ ಸರ್ಕಾರಿ ಜಮೀನಿನಲ್ಲಿ ಸ್ಥಾಪನೆಯಾಗಲಿರುವ ಈ ಕೇಂದ್ರಕ್ಕೆ ರಾಜ್ಯ ಸರ್ಕಾರವು ಒಟ್ಟು ₹42.83 ಕೋಟಿ ನೆರವು ನೀಡಲಿದೆ.
ಸಚಿವ ಪ್ರಿಯಾಂಕ್ ಖರ್ಗೆ -
ಬೆಂಗಳೂರು, ಸೆಪ್ಟೆಂಬರ್ 9: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜೀಡರಹಳ್ಳಿ ಗ್ರಾಮದಲ್ಲಿ ಡ್ರೋನ್ ಪರೀಕ್ಷಾ ಕೇಂದ್ರ (Drone Testing Facility) ಸ್ಥಾಪಿಸಲು ಅನುಮೋದನೆ ನೀಡಲಾಗಿದೆ ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸುಮಾರು 19.26 ಎಕರೆ ಸರ್ಕಾರಿ ಜಮೀನಿನಲ್ಲಿ ಸ್ಥಾಪನೆಯಾಗಲಿರುವ ಈ ಕೇಂದ್ರಕ್ಕೆ ರಾಜ್ಯ ಸರ್ಕಾರವು ಒಟ್ಟು ₹42.83 ಕೋಟಿ ನೆರವು ನೀಡಲಿದೆ. ಇದರಲ್ಲಿ ₹38.15 ಕೋಟಿ ಮೂಲಸೌಕರ್ಯ ನಿರ್ಮಾಣಕ್ಕೆ ಹಾಗೂ ಆರಂಭಿಕ ಮೂರು ವರ್ಷಗಳ ಕಾರ್ಯಾಚರಣೆಗೆ ₹4.68 ಕೋಟಿ ವೆಚ್ಚವಾಗಲಿದೆ.
ಈ ಕುರಿತು ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, “ಡ್ರೋನ್ ತಂತ್ರಜ್ಞಾನದಲ್ಲಿ ಕರ್ನಾಟಕದ ಮುನ್ನಡೆಯನ್ನು ಮತ್ತಷ್ಟು ಬಲಪಡಿಸುವುದು ಈ ಕೇಂದ್ರದ ಉದ್ದೇಶ. ರಾಜ್ಯದಲ್ಲೇ ಡ್ರೋನ್‌ಗಳ ಪರೀಕ್ಷೆ, ಸುರಕ್ಷತಾ ಮೌಲ್ಯಮಾಪನ ಮತ್ತು ಪ್ರಮಾಣೀಕರಣಕ್ಕೆ ಅಗತ್ಯವಾದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ,” ಎಂದರು.
ಕೇಂದ್ರದಲ್ಲಿ ಡ್ರೋನ್‌ಗಳ ಹಾರಾಟ ಪರೀಕ್ಷೆ, ದೀರ್ಘಾವಧಿ ಕಾರ್ಯಕ್ಷಮತೆ ಪರೀಕ್ಷೆ, ಸುರಕ್ಷತಾ ಪರಿಶೀಲನೆ ಹಾಗೂ ದೃಶ್ಯ ವ್ಯಾಪ್ತಿಯಾಚೆಗಿನ ಹಾರಾಟ ಪರೀಕ್ಷೆಗಳಿಗೆ ಅಗತ್ಯವಾದ ಪ್ರತ್ಯೇಕಿತ ವಾಯುಪ್ರದೇಶ, ರನ್‌ವೇ, ನಿಯಂತ್ರಣ ಕೇಂದ್ರ, ದುರಸ್ತಿ ಪ್ರಯೋಗಾಲಯ, ಗೋದಾಮು ಮತ್ತು ತರಬೇತಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ಕೇಂದ್ರವು ನವೋದ್ಯಮಗಳು, ಕೈಗಾರಿಕೆಗಳು, ಶೈಕ್ಷಣಿಕ ಸಂಸ್ಥೆಗಳು, ರಕ್ಷಣಾ ಕ್ಷೇತ್ರ ಮತ್ತು ಜಾಗತಿಕ ತಂತ್ರಜ್ಞಾನ ಸಂಸ್ಥೆಗಳಿಗೆ ಡ್ರೋನ್ ತಂತ್ರಜ್ಞಾನಗಳ ಪರೀಕ್ಷೆ ಮತ್ತು ಅಭಿವೃದ್ಧಿಗೆ ನೆರವಾಗಲಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನಿಡಿದ್ದಾರೆ.
“ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ಭಾಗಗಳಲ್ಲೂ ಉನ್ನತ ತಂತ್ರಜ್ಞಾನ ಆಧಾರಿತ ಉದ್ಯಮಗಳಿಗೆ ಅವಕಾಶ ಕಲ್ಪಿಸುವುದು ನಮ್ಮ ಗುರಿ. ಚಿಕ್ಕಬಳ್ಳಾಪುರದ ಡ್ರೋನ್ ಪರೀಕ್ಷಾ ಕೇಂದ್ರವು ನವೋದ್ಯಮ, ಸಂಶೋಧನೆ ಮತ್ತು ಕೈಗಾರಿಕೆಗೆ ಒಂದೇ ವೇದಿಕೆಯಲ್ಲಿ ಸಂಪರ್ಕ ಕಲ್ಪಿಸಲಿದೆ,” ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
Cabinet Meeting: ಕರ್ನಾಟಕದ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆ ಸಚಿವ ಸಂಪುಟ ಒಪ್ಪಿಗೆ
ಡ್ರೋನ್ ಫೆಡರೇಷನ್ ಇಂಡಿಯಾ (DFI) ಕೇಂದ್ರದ ಕಾರ್ಯಾಚರಣೆ ಮತ್ತು ನಿರ್ವಹಣೆಯ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಮೂರು ವರ್ಷಗಳ ನಂತರ ಕೇಂದ್ರವು ಪರೀಕ್ಷಾ ಶುಲ್ಕ, ತರಬೇತಿ, ಪ್ರಮಾಣೀಕರಣ, ಉಪಕರಣ ಮತ್ತು ಗೋದಾಮು ಬಾಡಿಗೆ ಹಾಗೂ ಕೈಗಾರಿಕಾ ಸಹಭಾಗಿತ್ವದ ಮೂಲಕ ಸ್ವಾವಲಂಬಿಯಾಗಿ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿದೆ. ಕೇಂದ್ರದ ಭೂಮಿ, ಮೂಲಸೌಕರ್ಯ ಮತ್ತು ಸರ್ಕಾರಿ ಅನುದಾನದಡಿ ನಿರ್ಮಾಣವಾಗುವ ಎಲ್ಲ ಆಸ್ತಿಗಳ ಮಾಲೀಕತ್ವ ಕರ್ನಾಟಕ ಸರ್ಕಾರದಲ್ಲೇ ಉಳಿಯಲಿದೆ ಎಂದೂ ಸಚಿವರು ತಿಳಿಸಿದ್ದಾರೆ.