ರಾಜ್ಯದಲ್ಲಿ ಸಿಎಂ, ನಾಯಕತ್ವ ಬದಲಾವಣೆ ಗೊಂದಲ ಶೀಘ್ರ ನಿವಾರಣೆ: ಗೃಹ ಸಚಿವ ಪರಮೇಶ್ವರ್
G Parameshwar: ನಮ್ಮ ಪಕ್ಷದಲ್ಲಿ ಹೈಕಮಾಂಡ್ ಅತ್ಯುನ್ನತವಾದುದು. ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಮಾನಗಳು ಮತ್ತು ಜನರ ಆಶಯಗಳ ಬಗ್ಗೆ ವರಿಷ್ಠರಿಗೆ ಸಂಪೂರ್ಣ ಅರಿವಿದೆ. ನಾಯಕತ್ವದ ಕುರಿತಾದ ಯಾವುದೇ ಗೊಂದಲಗಳಿಗೆ ಅವರೇ ಶೀಘ್ರದಲ್ಲಿ ಅಧಿಕೃತ ತೆರೆ ಎಳೆಯಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ (ಸಂಗ್ರಹ ಚಿತ್ರ) -
ಕಲಬುರಗಿ, ಏ.28: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಬದಲಾವಣೆ ಹಾಗೂ ನಾಯಕತ್ವದ ಗೊಂದಲಗಳ ಕುರಿತು ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಅವರು ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ನಾಯಕತ್ವ ಬದಲಾವಣೆಯ ಕುರಿತಾದ ಎಲ್ಲ ಪ್ರಶ್ನೆಗಳಿಗೂ ನಮ್ಮ ಪಕ್ಷದ ಹೈಕಮಾಂಡ್ ಆದಷ್ಟು ಬೇಗ ಉತ್ತರ ನೀಡಲಿದೆ ಎಂದು ಹೇಳುವ ಮೂಲಕ ಅವರು ಕುತೂಹಲವನ್ನು ಜೀವಂತವಾಗಿರಿಸಿದ್ದಾರೆ. ಕಲಬುರಗಿಯಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಪಕ್ಷದಲ್ಲಿ ಯಾವುದೇ ರೀತಿಯ ಆಂತರಿಕ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ನಾವು ಜನರಿಗೆ ಮಾತು ಕೊಟ್ಟಂತೆ ಜನಸೇವೆಯಲ್ಲಿ ತೊಡಗಿದ್ದೇವೆ. ಆಡಳಿತ ಯಂತ್ರ ಸುಸೂತ್ರವಾಗಿ ಸಾಗುತ್ತಿದೆ. ಸದ್ಯಕ್ಕೆ ನಾನು ದೆಹಲಿಗೆ ಹೋಗುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ತಮ್ಮ ದೆಹಲಿ ಭೇಟಿಯ ವದಂತಿಗಳಿಗೆ ತೆರೆ ಎಳೆದರು.
ದಲಿತ ಸಿಎಂ ಕೂಗು ಜನಾಭಿಪ್ರಾಯ
ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ 'ದಲಿತ ಮುಖ್ಯಮಂತ್ರಿ' ಬೇಡಿಕೆಯ ಕುರಿತು ಉತ್ತರಿಸಿದ ಅವರು, ಇದು ಕೇವಲ ಜನಾಭಿಪ್ರಾಯ. ಜನರು ನಮ್ಮ ಮೇಲಿರುವ ಪ್ರೀತಿ ಮತ್ತು ವಿಶ್ವಾಸದಿಂದ ಇಂತಹ ಹಾರೈಕೆಗಳನ್ನು ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನರ ಆಶಯಗಳಿಗೆ ಬೆಲೆ ಇರುತ್ತದೆ. ಆದರೆ, ಅಂತಿಮವಾಗಿ ನಮ್ಮ ಪಕ್ಷದ ಹೈಕಮಾಂಡ್ ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.
ಡಿಕೆಶಿ ಬರ್ತ್‌ಡೇ ಗಿಫ್ಟ್ ಮತ್ತು ಅಧಿಕಾರ ಹಂಚಿಕೆ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನದ 'ಬರ್ತ್‌ಡೇ ಗಿಫ್ಟ್' ನೀಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಸಂಯಮದಿಂದಲೇ ಉತ್ತರಿಸಿದ ಸಚಿವ ಜಿ. ಪರಮೇಶ್ವರ್, ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ಸಿಗನೂ ವರಿಷ್ಠರ ತೀರ್ಮಾನವನ್ನು ಒಪ್ಪಿಕೊಳ್ಳುತ್ತಾನೆ. ಅಧಿಕಾರ ಬದಲಾವಣೆ ವಿಚಾರದಲ್ಲಿ ಪಕ್ಷದೊಳಗೆ ಗೊಂದಲವಿದೆ ಎಂಬುದು ಸರಿಯಲ್ಲ. ಎಲ್ಲೋ ಒಬ್ಬಿಬ್ಬರು ಈ ಬಗ್ಗೆ ಮಾತನಾಡುತ್ತಿರಬಹುದು, ಅದನ್ನೇ ಗೊಂದಲ ಎನ್ನಲಾಗದು ಎಂದು ಸಮರ್ಥಿಸಿಕೊಂಡರು.
ಅಭಿವೃದ್ಧಿಯೇ ಮೂಲಮಂತ್ರ
ಸುಮಾರು 4 ಲಕ್ಷ ಕೋಟಿ ರೂಪಾಯಿ ಬಜೆಟ್‌ನ ಕಾರ್ಯಕ್ರಮಗಳು ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಜಾರಿಯಾಗುತ್ತಿವೆ. ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಅಡ್ಡಿಯಾಗಿಲ್ಲ ಎಂದು ತಿಳಿಸಿದರು.