ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರಂಗಕ್ಕೆ ಆಸ್ಪತ್ರೆಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ; ಸಂಸದ ಕ್ಯಾ. ಬ್ರಿಜೇಶ್ ಚೌಟ ಪತ್ರಕ್ಕೆ ಮನ್ನಣೆ
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಅಂಗಾಂಗ ಕಸಿ ಪ್ರಕರಣಗಳಲ್ಲಿ ಪಾರದರ್ಶಕತೆ ತರಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ನಿರ್ದೇಶಕ ಡಾ. ಅನಿಲ್ ಕುಮಾರ್ ಅವರಿಗೆ ಪತ್ರ ಬರೆದ ಪರಿಣಾಮ, ಅಂಗಾಂಗ ಕಸಿ ಪ್ರಕ್ರಿಯೆಯ ಫಲಿತಾಂಶಗಳ ದತ್ತಾಂಶಗಳನ್ನು ಕಡ್ಡಾಯವಾಗಿ ದಾಖಲು ಮಾಡಲು ಆಸ್ಪತ್ರೆಗೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಸಂಸದ ಕ್ಯಾ. ಬ್ರಿಜೇಶ್ ಚೌಟ. -
ನವದೆಹಲಿ: ದೇಶದಲ್ಲಿ ಮೂತ್ರಪಿಂಡ (ಕಿಡ್ನಿ) ಸೇರಿದಂತೆ ಅಂಗಾಂಗ ಕಸಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಮತ್ತು ಆಸ್ಪತ್ರೆಗಳ ಹೊಣೆಗಾರಿಕೆಯನ್ನು ಹೆಚ್ಚಿಸಲು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಮಹತ್ವದ ಕ್ರಮ ಕೈಗೊಂಡಿದೆ. ದೇಶದ ಎಲ್ಲಾ ನೋಂದಾಯಿತ ಅಂಗಾಂಗ ಕಸಿ ಆಸ್ಪತ್ರೆಗಳು ತಮ್ಮ ವೆಬ್‌ಸೈಟ್‌ಗಳ ಮುಖಪುಟದಲ್ಲಿ (Homepage) ಕಸಿ ಪ್ರಕ್ರಿಯೆಯ ಫಲಿತಾಂಶಗಳ ದತ್ತಾಂಶಗಳನ್ನು ಕಡ್ಡಾಯವಾಗಿ ದಾಖಲು ಮಾಡಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ವ್ಯಾಪ್ತಿಯ ನೋಟೋ ಸಂಸ್ಥೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕರ್ನಾಟಕದ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಅಂಗಾಂಗ ಕಸಿ ಪ್ರಕರಣಗಳಲ್ಲಿ ಪಾರದರ್ಶಕತೆ ತರಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ನಿರ್ದೇಶಕ ಡಾ. ಅನಿಲ್ ಕುಮಾರ್ ಅವರಿಗೆ ಪತ್ರ ಬರೆದ ಪರಿಣಾಮ ದೇಶದ ಎಲ್ಲಾ ನೋಂದಾಯಿತ ಅಂಗಾಂಗ ಕಸಿ ಆಸ್ಪತ್ರೆಗಳಿಗೆ ಹೊಸ ನಿಯಮ ಅನ್ವಯವಾಗಲಿದೆ. ಡಾ. ಅನಿಲ್ ಕುಮಾರ್ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸೂಕ್ತ ಪ್ರಾಧಿಕಾರಗಳಿಗೆ ಸಂಸದ ಚೌಟ ಅವರ ಪತ್ರ ಉಲ್ಲೇಖಿಸಿ ಈ ಕುರಿತ ಅಧಿಕೃತ ಆದೇಶ ನೀಡಿದ್ದಾರೆ.
ಮಂಗಳೂರಿನ ಆರೋಗ್ಯ ತಜ್ಞರಾದ ಶ್ಯಾಮ್ ಕಾಮತ್ ಮತ್ತು ಡಾ. ಲಿಯೋನೆಲ್ ಡಿಸೋಜಾ ಅವರು ಸಲ್ಲಿಸಿದ ಸಮಗ್ರ ವರದಿಯೊಂದನ್ನು ಆಧರಿಸಿ ಪತ್ರ ಸಂಸದ ಕ್ಯಾ. ಚೌಟ ಪತ್ರ ಬರೆದಿದ್ದರು. ಅಂಗಾಂಗ ಕಸಿ (Cadaveric Kidney Transplants) ಪ್ರಕ್ರಿಯೆಗಳ ನಂತರದ ಮರಣ ಪ್ರಮಾಣ ಮತ್ತು ದೀರ್ಘಕಾಲೀನ ನಿಗಾ ವ್ಯವಸ್ಥೆಯಲ್ಲಿರುವ ನ್ಯೂನತೆಗಳನ್ನು ಈ ವರದಿ ಎತ್ತಿ ತೋರಿಸಿತ್ತು.
ನೋಟೋ ಸೂಚನೆಯಲ್ಲಿ ಏನೇನಿದೆ?
ಸದ್ಯ ದೇಶಾದ್ಯಂತ 824 ಕಸಿ ಕೇಂದ್ರಗಳು ನೋಟೋ ಸಂಸ್ಥೆಯ ರಿಜಿಸ್ಟ್ರಿಯೊಂದಿಗೆ ಲಿಂಕ್ ಆಗಿದ್ದು, ರೋಗಿಗಳ ಮತ್ತು ದಾನಿಗಳ ದತ್ತಾಂಶಗಳನ್ನು ನಮೂದಿಸುವುದು ಕಡ್ಡಾಯ. ಪ್ರತಿ ಆಸ್ಪತ್ರೆ ಕೂಡ ಅಲ್ಲಿ ಮಾಡಿದ ಕಸಿ ಚಿಕಿತ್ಸೆಗಳ ಫಲಿತಾಂಶದ ಡೇಟಾ ವೆಬ್‌ಸೈಟ್ ನಲ್ಲಿ ದಾಖಲಿಸಬೇಕು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 6 ತಿಂಗಳು, 1 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಯಲ್ಲಿ ಎಷ್ಟು ರೋಗಿಗಳು ಜೀವಂತವಾಗಿದ್ದಾರೆ, ಎಷ್ಟು ಜನ ಮೃತಪಟ್ಟಿದ್ದಾರೆ ಮತ್ತು ಎಷ್ಟು ಜನರಲ್ಲಿ ಕಸಿ ವಿಫಲವಾಗಿದೆ ಎಂಬ ವಿವರಗಳನ್ನು ಇಲ್ಲಿ ನಮೂದಿಸಬೇಕಾಗುತ್ತದೆ. ಕಸಿ ಪ್ರಕ್ರಿಯೆಗೆ ಮುನ್ನ ರೋಗಿ ಮತ್ತವರ ಕುಟುಂಬಕ್ಕೆ ಅದರಲ್ಲಿರುವ ಅಪಾಯಗಳು ಹಾಗೂ ಫಲಿತಾಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಸಿ ಆಸ್ಪತ್ರೆಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ರಾಷ್ಟ್ರೀಯ ನೋಂದಣಿಗೆ ಸಕಾಲದಲ್ಲಿ ಸಂಪೂರ್ಣ ದತ್ತಾಂಶ ಸಲ್ಲಿಸುವಂತೆ ನೋಡಿಕೊಳ್ಳಬೇಕು ಎಂದು ನೋಟೋ ಆದೇಶ ನೀಡಿದೆ.
ಸಂಸದರ ಪತ್ರದಲ್ಲೇನಿತ್ತು?
ಅಂಗಾಂಗ ಕಸಿ ಯಶಸ್ವಿಯಾಗಬೇಕು ಎಂದು ಸಾರ್ವಜನಿಕರು ಬಯಸುತ್ತಾರೆ. ಆದರೆ ಕಸಿ ಪ್ರಕ್ರಿಯೆಯಲ್ಲಿನ ದೀರ್ಘಕಾಲೀನ ತೊಡಕುಗಳು, ವೈಫಲ್ಯಗಳು ಮತ್ತು ಕಸಿ ನಂತರದ ಸಾವುಗಳನ್ನು ಸಮರ್ಪಕವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಕಿಡ್ನಿ ಕಸಿಯ ಅಲ್ಪಾವಧಿಯ ಯಶಸ್ಸನ್ನು ಮಾತ್ರ ಬಿಂಬಿಸಲಾಗುತ್ತಿದ್ದು, ರೋಗಿಗಳು ದೀರ್ಘಕಾಲದವರೆಗೆ ಎದುರಿಸುವ ಸವಾಲುಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಕಸಿ ನಂತರ ನೀಡಲಾಗುವ ರೋಗ ನಿರೋಧಕ (Immunosuppressive) ಚಿಕಿತ್ಸೆಗಳಿಂದಾಗಿ ರೋಗಿಗಳು ತೀವ್ರ ಆರೋಗ್ಯ ತೊಂದರೆ, ದೀರ್ಘಕಾಲದ ವಿಷತ್ವ (Chronic Toxicity), ಶಾರೀರಿಕ ದೌರ್ಬಲ್ಯ ಮತ್ತು ಮಾರಕ ಸೋಂಕುಗಳಿಗೆ ಒಳಗಾಗುತ್ತಿದ್ದಾರೆ. ಕಸಿ ಪ್ರಕ್ರಿಯೆಯ ದೀರ್ಘಾವಧಿ ಪರಿಣಾಮದ ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ನೋಂದಾವಣೆ ವ್ಯವಸ್ಥೆ ಇಲ್ಲ. ಡಿಸ್ಚಾರ್ಜ್ ಆದ ನಂತರದ ದೀರ್ಘಕಾಲದ ಬದುಕುಳಿಯುವಿಕೆ ಮತ್ತು ಮರಣದ ಕಾರಣಗಳನ್ನು ಪತ್ತೆಹಚ್ಚಲು ಕೇಂದ್ರೀಕೃತ ರಾಷ್ಟ್ರೀಯ ವ್ಯವಸ್ಥೆಯ ಕೊರತೆಯಿದೆ. ಆಸ್ಪತ್ರೆಗಳ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಹೆಚ್ಚಿಸಲು ಹಾಗೂ ರೋಗಿಗಳು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ದತ್ತಾಂಶ ದಾಖಲೀಕರಣ ಸಹಾಯ ಮಾಡುತ್ತದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಮ್ಮ ಪತ್ರದಲ್ಲಿ ವಿವರಿಸಿದ್ದರು.
ಅನಿವಾಸಿ ಕನ್ನಡಿಗರಿಂದ NRI ಸಚಿವಾಲಯಕ್ಕಾಗಿ ಅಭಿಯಾನ; Xನಲ್ಲಿ ಟ್ರೆಂಡ್ ಆಯ್ತು ಕನ್ನಡಿಗರ ಧ್ವನಿ
ಇದೊಂದು ಮೈಲಿಗಲ್ಲು: ಕ್ಯಾ. ಬ್ರಿಜೇಶ್ ಚೌಟ
ಮೇ 22ರಂದು ನಾನು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು NOTTO ನಿರ್ದೇಶಕರಿಗೆ ಪತ್ರ ಬರೆದಿದ್ದೆ. ಪತ್ರಕ್ಕೆ ತಕ್ಷಣ ಸ್ಪಂದಿಸಿ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಂಡಿರುವುದು ನಿಜಕ್ಕೂ ಶ್ಲಾಘನಾರ್ಹ. ಸಾರ್ವಜನಿಕರಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಮ್ಮ ಕೇಂದ್ರ ಸರ್ಕಾರ ತ್ವರಿತಗತಿಯ ತೀರ್ಮಾನಗಳನ್ನು ಹೇಗೆ ಕೈಗೊಳ್ಳುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಆಸ್ಪತ್ರೆಗಳ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಇದೊಂದು ಮೈಲಿಗಲ್ಲು ಎಂದು ನಾನು ಭಾವಿಸುತ್ತೇನೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.