ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Maithili Thakur: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆನ್‌ ಝಿ ಸಂಚಲನ; ಬಿಜೆಪಿಯ 25 ವರ್ಷದ ಗಾಯಕಿ ಮೈಥಿಲಿ ಠಾಕೂರ್‌ಗೆ ಭರ್ಜರಿ ಜಯ

Bihar Election 2025 Results: ದೇಶದ ಕೂತೂಹಲ ಕೆರಳಿಸಿದ ಬಿಹಾರ ವಿಧಾನಸಭಾ ಚುನಾವಣೆಯ ಪಲಿತಾಂಶ ಹೊರ ಬೀಳುತ್ತಿದ್ದು, ಬಿಜೆಪಿ ಅಭ್ಯರ್ಥಿ 25 ವರ್ಷದ ಗಾಯಕಿ ಮೈಥಿಲಿ ಠಾಕೂರ್‌ ಬರೋಬ್ಬರಿ 12 ಸಾವಿರ ಮತಗಳಿಂದ ಜಯ ಗಳಿಸಿದ್ದಾರೆ. ಆ ಮೂಲಕ ಬಿಹಾರದ ಅತೀ ಕಿರಿಯ ಶಾಸಕಿ ಎನಿಸಿಕೊಂಡಿದ್ದಾರೆ. ಅಲಿನಗರ್‌ ಕ್ಷೇತ್ರದಿಂದ ಕಣಕ್ಕಿಳಿದ ಅವರು ಮೊದಲ ಪ್ರಯತ್ನದಲ್ಲೇ ತಮ್ಮ ನೇರ ಪ್ರತಿಸ್ಪರ್ಧಿ ಆರ್‌ಜೆಡಿಯ ಬಿನೋದ್‌ ಮಿಶ್ರಾ ಅವರನ್ನು ಸೋಲಿಸಿದ್ದಾರೆ.

ಬಿಹಾರದ ಅಲಿನಗರ್‌ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿ, ಗಾಯಕಿ ಮೈಥಿಲಿ ಠಾಕೂರ್‌ (ಸಂಗ್ರಹ ಚಿತ್ರ).

ಪಾಟ್ನಾ, ನ. 14: ದೇಶದ ಕೂತೂಹಲ ಕೆರಳಿಸಿದ ಬಿಹಾರ ವಿಧಾನಸಭಾ ಚುನಾವಣೆಯ ಪಲಿತಾಂಶ (Bihar Election 2025 Results) ಹೊರ ಬೀಳುತ್ತಿದ್ದು, ಎನ್‌ಡಿಎ 200ಕ್ಕಿಂತ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಸ್ಪಷ್ಟ ಬಹುಮತದತ್ತ ಹೆಜ್ಜೆ ಇಡುತ್ತಿದೆ. ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ತತ್ತರಿಸಿ ಹೋಗಿದ್ದು, ಕಾಂಗ್ರೆಸ್‌ ಧೂಳಿಪಟವಾಗಿದೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿ 25 ವರ್ಷದ ಗಾಯಕಿ ಮೈಥಿಲಿ ಠಾಕೂರ್‌ (Maithili Thakur) ಬರೋಬ್ಬರಿ 12 ಸಾವಿರ ಮತಗಳಿಂದ ಜಯ ಗಳಿಸಿದ್ದು, ಆ ಮೂಲಕ ಬಿಹಾರದ ಅತೀ ಕಿರಿಯ ಶಾಸಕಿ ಎನಿಸಿಕೊಂಡಿದ್ದಾರೆ. ಅಲಿನಗರ್‌ ಕ್ಷೇತ್ರದಿಂದ ಕಣಕ್ಕಿಳಿದ ಅವರು ಮೊದಲ ಪ್ರಯತ್ನದಲ್ಲೇ ತಮ್ಮ ನೇರ ಪ್ರತಿಸ್ಪರ್ಧಿ ಆರ್‌ಜೆಡಿಯ ಬಿನೋದ್‌ ಮಿಶ್ರಾ ಅವರನ್ನು ಸೋಲಿಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಸಿಂಗಿಂಗ್‌ ರಿಯಾಲಿಟಿ ಶೋ ಮೂಲಕ ಗಮನ ಸೆಳೆದ ಮೈಥಿಲಿ ಇತ್ತೀಚೆಗ ಬಿಜೆಪಿ ಸೇರುವ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. ಈ ವರ್ಷದ ಜುಲೈನಲ್ಲಿ 25ನೇ ವರ್ಷಕ್ಕೆ ಕಾಲಿಟ್ಟ ಅವರು ಅಭ್ಯರ್ಥಿಗಳ ಸರಾಸರಿ ವಯಸ್ಸು 51 ವರ್ಷವಿರುವ ವಿಧಾನಸಭೆಗೆ ಕಿರಿಯ ಸದಸ್ಯೆಯಾಗಿ ಕಾಲಿಡಲಿದ್ದಾರೆ. ಅಲಿನಗರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿರುವುದು ಇದೇ ಮೊದಲ ಸಲ ಎನ್ನುವುದು ಕೂಡ ಮತ್ತೊಂದು ವಿಶೇಷ. ಗಣನೀಯ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರ ಇದು.

ಬಿಹಾರದ ಅತೀ ಕಿರಿಯ ಶಾಸಕಿಯಾದ 25 ವರ್ಷದ ಗಾಯಕಿ ಮೈಥಿಲಿ ಠಾಕೂರ್‌:



ಈ ಸುದ್ದಿಯನ್ನೂ ಓದಿ: Bihar Election 2025 Results: ಚಿರಾಗ್‌ ಪಾಸ್ವಾನ್:‌ ಎನ್‌ಡಿಎ ಗೆಲುವಿನ ಆಕಾಶದಲ್ಲಿ ಮೂಡಿಬಂದ ಯುವ ತಾರೆ!

ಕಿರಿಯ ಶಾಸಕರು

ಈ ಹಿಂದೆ ಅತ್ಯಂತ ಕಿರಿಯ ಶಾಸಕರು ಎನ್ನುವ ದಾಖಲೆ ಸ್ವತಂತ್ರ ಅಭ್ಯರ್ಥಿ ತೌಸೀಫ್ ಆಲಂ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ಹೆಸರಿನಲ್ಲಿತ್ತು. ಅವರು 26ನೇ ವಯಸ್ಸಿನಲ್ಲಿ ಶಾಸಕರಾಗಿದ್ದರು. 2005ರಲ್ಲಿ ತೌಸೀಫ್ ಆಲಂ ಜಯಗಳಿಸಿದ್ದರೆ, 2015ರಲ್ಲಿ ತೇಜಸ್ವಿ ಯಾದವ್ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಗೆದ್ದಿದ್ದು ಹೇಗೆ?

ಸಾಂಸ್ಕೃತಿಕ ಪುನರುಜ್ಜೀವನವನ್ನು ಸಾಮಾಜಿಕ ಸುಧಾರಣೆಯೊಂದಿಗೆ ಪರಿಚಯಿಸುವ ಮೈಥಿಲಿ ಅವರ ಉದ್ದೇಶ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ. ಪ್ರಚಾರದ ವೇಳೆ ಅವರು ಶಾಲೆಗಳಲ್ಲಿ ಮಿಥಿಲಾ ಚಿತ್ರಕಲೆಯನ್ನು ಪಠ್ಯೇತರ ಅಂಶವಾಗಿ ಪರಿಚಯಿಸುವುದಾಗಿ, ವಿಶೇಷವಾಗಿ ಹುಡುಗಿಯರಿಗೆ ಅಗತ್ಯವಾದ ಶೈಕ್ಷಣಿಕ ಉಪಕ್ರಮಗಳನ್ನು ಪ್ರತಿಪಾದಿಸುವುದಾಗಿ ಮತ್ತು ಸ್ಥಳೀಯ ಯುವಕರಿಗೆ ಉದ್ಯೋಗ-ಕೇಂದ್ರಿತ ಯೋಜನೆಗಳನ್ನು ಪರಿಚಯಿಸುವುದಾಗಿ ಭರವಸೆ ನೀಡಿದ್ದರು. ಮಿಥಿಲಾ ಚಿತ್ರಕಲೆಯ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಅಲಿನಗರವನ್ನು ಸೀತಾನಗರ ಎಂದು ಮರುನಾಮಕರಣ ಮಾಡುವ ಬಗ್ಗೆಯೂ ಅವರು ಆಸಕ್ತಿ ವ್ಯಕ್ತಪಡಿಸಿದ್ದರು.

ಮೈಥಿಲಿ ಠಾಕೂರ್‌ ಹಿನ್ನೆಲೆ

ಜಾನಪದ ಹಾಡುಗಾರಿಕೆ ಮೂಲಕ ಉತ್ತರ ಭಾರತಾದ್ಯಂತ ಗಮನ ಸೆಳೆದ ಮೈಥಿಲಿ 2000ರ ಜುಲೈ 25ರಂದು ಬಿಹಾರದ ಮಧುಬನಿಯಲ್ಲಿ ಜನಿಸಿದರು. ಬಾಲ್ಯದಲ್ಲೇ ಶಾಸ್ತ್ರೀಯ ಮತ್ತು ಜಾನಪದ ಹಾಡುಗಾರಿಕೆಯಲ್ಲಿ ತರಬೇತಿ ಪಡೆದ ಅವರು ಚಿಕ್ಕ ವಯಸ್ಸಿನಲ್ಲೇ ಕಛೇರಿ ನೀಡುತ್ತಿದ್ದರು. ಖಾಸಗಿ ವಾಹನಿಯಲ್ಲಿ ಪ್ರಸಾರವಾಗುತ್ತಿದ್ದ ಲಿಟಲ್‌ ಚಾಂಪ್ಸ್‌ (2011) ಮತ್ತು ಇಂಡಿಯನ್‌ ಐಡಲ್‌ (2015) ರಿಯಾಲಿಟಿ ಶೋದಲ್ಲಿ ಪಾಲ್ಗೊಳ್ಳುವ ಮೂಲಕ ಮತ್ತಷ್ಟು ಜನಪ್ರಿಯರಾದರು. ಜತೆಗೆ ರೈಸಿಂಗ್‌ ಸ್ಟಾರ್‌ ಶೋದ ರನ್ನರ್‌ ಅಪ್‌ ಎನಿಸಿಕೊಂಡರು.