Chirag Paswan: ಬಿಹಾರದಲ್ಲಿ ಎನ್‌ಡಿಎಗೆ ಬಹುಮತ; ಚಿರಾಗ್ ಪಾಸ್ವಾನ್‌ಗೆ ಉಪಮುಖ್ಯಮಂತ್ರಿ ಪಟ್ಟ?
Bihar Election 2025 Results: ದೇಶದ ಗಮನ ಸೆಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ ಎನ್‌ಡಿಎ ಭರ್ಜರಿ ಬಹುಮತದತ್ತ ಸಾಗಿದೆ. ಚುನಾವಣೋತ್ತರ ಸಮೀಕ್ಷೆಯ ಭವಿಷ್ಯದಂತೆ ಎನ್‌ಡಿಎ ಮ್ಯಾಜಿಕ್ ಮಾಡುವಲ್ಲಿ ಸಫಲವಾಗಿದ್ದು, ಈಗಾಗಲೇ 202 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕೇಂದ್ರ ಸಚಿವ, ಯುವ ನಾಯಕ ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಬಿಹಾರದ 4ನೇ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಸಲ್ಲಿಸುವ ಸಾಧ್ಯತೆ ಇದೆ.
ಬಿಹಾರ ಉಪಮುಖ್ಯಮಂತ್ರಿಯಾಗಿ ಚಿರಾಗ್ ಪಾಸ್ವಾನ್ ಆಯ್ಕೆ ಸಾಧ್ಯತೆ (ಸಂಗ್ರಹ ಚಿತ್ರ). -
ಪಾಟ್ನಾ, ನ. 14: ದೇಶದ ಗಮನ ಸೆಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Election 2025 Results) ನಿರೀಕ್ಷೆಯಂತೆ ಎನ್‌ಡಿಎ (NDA) ಭರ್ಜರಿ ಬಹುಮತದತ್ತ ಸಾಗಿದೆ. ಚುನಾವಣೋತ್ತರ ಸಮೀಕ್ಷೆಯ ಭವಿಷ್ಯದಂತೆ ಎನ್‌ಡಿಎ ಮ್ಯಾಜಿಕ್ ಮಾಡುವಲ್ಲಿ ಸಫಲವಾಗಿದ್ದು, ಈಗಾಗಲೇ 202 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಎನ್‌ಡಿಎ ಮ್ಯಾಜಿಕ್ ಮುಂದೆ ವಿಪಕ್ಷಗಳ ಮಹಾಘಟಬಂಧನ್ ಮೈತ್ರಿಕೂಟ ಧೂಳೀಪಟವಾಗಿದ್ದು, ಶತಾಯಗತಾಯ ಅಧಿಕಾರಕ್ಕೆ ಬರಬೇಕು ಎನ್ನುವ ಕನಸು ನುಚ್ಚುನೂರಾಗಿದೆ. ಕೇಂದ್ರ ಸಚಿವ, ಯುವ ನಾಯಕ ಚಿರಾಗ್ ಪಾಸ್ವಾನ್ (Chirag Paswan) ಅವರ ಲೋಕಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಬಿಹಾರದ 4ನೇ ಅತೀ ದೊಡ್ಡ ಪಕ್ಷವಾಗಿ, ಎನ್‌ಡಿಎ ಮೈತ್ರಿಕೂಟದ 3ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಸಲ್ಲಿಸುವ ಸಾಧ್ಯತೆ ಇದೆ. ಜೆಡಿ(ಯು) ನಾಯಕ ನಿತೀಶ್ ಕುಮಾರ್ ದಾಖಲೆಯ 10ನೇ ಬಾರಿಗೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.
ವಾರದ ಹಿಂದೆ ಉಪಮುಖ್ಯಮಂತ್ರಿ ಹುದ್ದೆ ಹೊಂದುವ ಬಗ್ಗೆ ಚಿರಾಗ್ ಅವರನ್ನು ಕೇಳಿದ್ದಾಗ, ʼʼಎನ್‌ಡಿಎ ಬಹುಮತ ಪಡೆದರೆ ತಮ್ಮ ಪಕ್ಷವು ಉಪಮುಖ್ಯಮಂತ್ರಿ ಹುದ್ದೆಗಾಗಿ ಹಕ್ಕು ಮಂಡಿಸಲಿದೆʼʼ ಎಂದು ಹೇಳಿದ್ದರು.
ಚಿರಾಗ್ ಪಾಸ್ವಾನ್ ಅವರ ಕುರಿತಾದ ಎಕ್ಸ್ ಪೋಸ್ಟ್:
Narendra Modiji's Hanuman Shri Chirag Paswan should be Rewarded as Deputy Chief Minister of Bihar 🔥#BiharElection2025 #ChiragPaswan
— Desi Thug (@desi_thug1) November 14, 2025
Comment your Opinion... pic.twitter.com/dTq3b4XyEJ
ಈ ಸುದ್ದಿಯನ್ನೂ ಓದಿ: Bihar Election 2025 Results: ಬಿಹಾರಲ್ಲಿ ಎನ್‌ಡಿಎ ಸ್ಪಷ್ಟ ಬಹುಮತದತ್ತ; ಸಂಜೆ ದೆಹಲಿ ಬಿಜೆಪಿ ಕಚೇರಿಗೆ ಮೋದಿ ಭೇಟಿ
20 ಕಡೆಗಳಲ್ಲಿ ಎಲ್‌ಜೆಪಿ ಮುನ್ನಡೆ
ಈ ಬಾರಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದ ಬಿಜೆಪಿ ಮತ್ತು ಜೆಡಿಯು ತಲಾ 101 ಕಡೆ ಕಣಕ್ಕಿಳಿದಿದ್ದವು. ಇನ್ನು ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಕ್ಷವು 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.ಎನ್‌ಡಿಎಯ ಮಿತ್ರ ಪಕ್ಷಗಳಾದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಮತ್ತು ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ ತಲಾ 6 ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು. ಈ ಪೈಕಿ ಬಿಜೆಪಿ-84, ಜೆಡಿಯು-79, ಎಲ್‌ಜೆಪಿ-20 ಕಡೆಗಳಲ್ಲಿ ಮುನ್ನಡೆ ಸಾಧಿಸಿವೆ.
"ನನ್ನ ಸ್ಟ್ರೈಕ್ ರೇಟ್ ಶೇ. 100ಕ್ಕೆ ಹತ್ತಿರದಲ್ಲಿರುತ್ತದೆ ಎಂಬ ವಿಶ್ವಾಸವಿದೆ. ಈ ಬಾರಿಯೂ ನಾನು ಅದೇ ರೀತಿಯ ನಿರೀಕ್ಷೆಯಲ್ಲಿದ್ದೇನೆ" ಎಂದು ಚಿರಾಗ್ ಪಾಸ್ವಾನ್ ಕೆಲವು ದಿನಗಳ ಹಿಂದೆ ಇಂಡಿಯಾ ಟುಡೇಗೆ ತಿಳಿಸಿದ್ದರು. "ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಕೇಂದ್ರದಲ್ಲಿ ಮಹತ್ವದ ಜವಾಬ್ದಾರಿಗಳನ್ನು ನನಗೆ ವಹಿಸಿದ್ದಾರೆ. ಸದ್ಯಕ್ಕೆ ನಾನು ಉಪಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಳ್ಳುವುದಿಲ್ಲ. ನಾವು ಗೆದ್ದರೆ ನಮ್ಮ ಪಕ್ಷದ ನಾಯಕರೊಬ್ಬರು ಖಂಡಿತವಾಗಿಯೂ ಅದನ್ನು ವಹಿಸಿಕೊಳ್ಳುತ್ತಾರೆ" ಎಂದು ಅವರು ಹೇಳಿದ್ದರು. ಆ ಮೂಲಕ ತಾವು ಡಿಸಿಎಂ ಹುದ್ದೆಯ ರೇಸ್‌ನಲ್ಲಿಲ್ಲ ಎಂದು ಹೇಳಿದ್ದರು.
ಈ ಫಲಿತಾಂಶದ ಮೂಲಕ ಎಲ್‌ಜೆಪಿ (ಆರ್‌ವಿ) ರಾಜ್ಯ ಮಟ್ಟದಲ್ಲಿ ಮತ್ತೊಮ್ಮೆ ತನ್ನ ಪ್ರಭಾವ ಸಾಬೀತುಪಡಿಸಿದೆ. 2020ರಲ್ಲಿ ಚಿರಾಗ್ ಅವರ ಎಲ್‌ಜೆಪಿ ಎನ್‌ಡಿಎಯ ಭಾಗವಾಗಿರಲಿಲ್ಲ. ಆಗ 130ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ ಒಂದು ಸ್ಥಾನ ಕಡೆ ಮಾತ್ರ ಜಯಗಳಿಸಿತ್ತು. 2024ರ ಲೋಕಸಭಾ ಚುನಾವಣೆಯ ಹೊತ್ತಿಗೆ, ಪರಿಸ್ಥಿತಿ ಬದಲಾಯಿತು. ಚಿರಾಗ್ ಬಿಜೆಪಿ ನೇತೃತ್ವದ ಎನ್‌ಡಿಎ ಪಾಳಯಕ್ಕೆ ಸೇರಿದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಚಿವರಾದರು.