NETF ಅಧ್ಯಕ್ಷರನ್ನು ಭೇಟಿಯಾದ ಸಚಿವ ಪ್ರಲ್ಹಾದ್ ಜೋಶಿ; ಪರೀಕ್ಷಾ ವ್ಯವಸ್ಥೆ ಸುಧಾರಣೆ ಕ್ರಮಗಳ ಬಗ್ಗೆ ಚರ್ಚೆ
NETF ಅಧ್ಯಕ್ಷ ಪ್ರೊ.ಅನಿಲ್ ದತ್ತಾತ್ರೇಯ ಸಹಸ್ರಬುಧೆ ಅವರ ನಿವಾಸಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಭೇಟಿ ನೀಡಿ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಅಲ್ಲದೆ NETF ಅಧ್ಯಕ್ಷರಿಂದ ಅಗತ್ಯ ಸಲಹೆ, ಮಾರ್ಗದರ್ಶನ ಪಡೆದಿದ್ದಾರೆ.
-
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Minister Pralhad Joshi) ಅವರು ಭಾನುವಾರ ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ (NETF) ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. NETF ಅಧ್ಯಕ್ಷ ಪ್ರೊ.ಅನಿಲ್ ದತ್ತಾತ್ರೇಯ ಸಹಸ್ರಬುಧೆ ಅವರ ನಿವಾಸಕ್ಕೆ ಭೇಟಿ ನೀಡಿ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ತಮ್ಮ ಕಾಲೇಜು ದಿನಗಳಿಂದಲೂ ಪ್ರೊ.ಅನೀಲ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಸಚಿವ ಜೋಶಿ, ಅನಿಲ್ ಅವರನ್ನು ಭೇಟಿಯಾಗುತ್ತಲೇ ಅವರ ಆರೋಗ್ಯ ಮತ್ತು ಯೋಗಕ್ಷೇಮ ವಿಚಾರಿಸಿದರು. ಬಳಿಕ ಪ್ರಸ್ತುತ ಶಿಕ್ಷಣ ಕ್ಷೇತ್ರದ ಸಮಗ್ರ ಪ್ರಗತಿ, ಆಧುನಿಕ ತಂತ್ರಜ್ಞಾನದ ಬಳಕೆ ಬಗ್ಗೆ ಪರಸ್ಪರ ಮಾತುಕತೆ ನಡೆಸಿದರು.
ಶಿಕ್ಷಣ ಕ್ಷೇತ್ರ, ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಗಹನ ಚರ್ಚೆ ನಡೆಸಿದ ಸಚಿವರು, NETF ಅಧ್ಯಕ್ಷರಿಂದ ಅಗತ್ಯ ಸಲಹೆ, ಮಾರ್ಗದರ್ಶನ ಪಡೆದರು. ದೇಶದ ಶೈಕ್ಷಣಿಕ ವಲಯವನ್ನು ಇನ್ನೂ ಹೆಚ್ಚಿನ ರೀತಿ ಪ್ರಬಲಗೊಳಿಸುವ ನಿಟ್ಟಿನಲ್ಲಿ ಈರ್ವರೂ ಅಭಿಪ್ರಾಯ ಹಂಚಿಕೊಂಡರು.
ಪರೀಕ್ಷಾ ಪಾರದರ್ಶಕತೆ, ಸಕ್ಕರೆ ದಾಸ್ತಾನು ಮೇಲೆ ನಿಗಾವಹಿಸಿ
ನವದೆಹಲಿ: ಕೇಂದ್ರದ ಶಿಕ್ಷಣ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Minister Pralhad Joshi) ಅವರು ಭಾನುವಾರವೂ ಉಭಯ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು. ಪರೀಕ್ಷಾ ಪಾರದರ್ಶಕತೆ ಮತ್ತು ಹಬ್ಬದ ದಿನಗಳಲ್ಲಿ ಸಕ್ಕರೆ ದಾಸ್ತಾನು ಮೇಲೆ ನಿಗಾ ವಹಿಸುವಂತೆ ನಿರ್ದೇಶನ ನೀಡಿದರು.
ದೆಹಲಿಯಲ್ಲಿ ಭಾನುವಾರ ಬೆಳಗ್ಗೆ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರೀಕ್ಷಾ ಪಾರದರ್ಶಕತೆ ಕುರಿತು ಮಹತ್ವದ ಚರ್ಚೆ ನಡೆಸಿದರಲ್ಲದೆ, ಅಗತ್ಯ ಸಲಹೆ, ಸೂಚನೆ ನೀಡಿದರು. ಶೈಕ್ಷಣಿಕವಾಗಿ ಪಾರದರ್ಶಕ ಮತ್ತು ವಿಶ್ವಾಸಾರ್ಹ ಪರೀಕ್ಷಾ ಪರಿಸರ ವ್ಯವಸ್ಥೆಗೆ ಗಮನ ಹರಿಸಬೇಕೆಂದು ನಿರ್ದೇಶನ ನೀಡಿದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA)ಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಿದರು. ಪರೀಕ್ಷಾ ವಿಧ ಮತ್ತು ಸಾಂಸ್ಥಿಕ ಕಾರ್ಯ ವಿಧಾನಗಳನ್ನು ಮತ್ತಷ್ಟು ಬಲಪಡಿಸಲು ಹಾಗೂ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಸೂಚನೆ ನೀಡಿದರು.
ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ತೊಡಕುಗಳು ಎದುರಾಗದಂತೆ ಸ್ಪಂದಿಸುವ ನಿಟ್ಟಿನಲ್ಲಿ ಮುಂದಿನ ಹಂತಗಳ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಯೂ ಮಹತ್ವಾಕಾಂಕ್ಷೆ ಹೊಂದಿರುತ್ತಾನೆ. ಅವರ ಆಶಯಗಳನ್ನು ಪೂರೈಸುವ ನಿಟ್ಟಿನಲ್ಲಿ ಅತ್ಯಂತ ಪಾರದರ್ಶಕ ಮತ್ತು ವಿಶ್ವಾಸಾರ್ಹ ಪರೀಕ್ಷಾ ಪರಿಸರ ವ್ಯವಸ್ಥೆ ನಿರ್ಮಿಸುವತ್ತ ಆದ್ಯ ಗಮನ ಹರಿಸಬೇಕಿದೆ ಎಂದು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಗತ್ಯ ಮಾರ್ಗದರ್ಶನ, ಸಲಹೆಯಂತೆ ಯಾವ ವಿದ್ಯಾರ್ಥಿಗೂ ಅನ್ಯಾಯವಾಗದಂತೆ ಶೈಕ್ಷಣಿಕ ಸುಧಾರಣಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲು ಗಮನಹರಿಸಿ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸಕ್ಕರೆ ದಾಸ್ತಾನು ಪರಿಶೀಲನಾ ಸಭೆ: ಶಿಕ್ಷಣ ಸಚಿವಾಲಯದ ಅಧಿಕಾರಿಗಳ ಸಭೆ ನಡೆಸಿದ ಬೆನ್ನಲ್ಲೇ ಸಚಿವ ಪ್ರಲ್ಹಾದ ಜೋಶಿ ಅವರು ಆಹಾರ ಇಲಾಖೆ ಅಧಿಕಾರಿಗಳ ಸಭೆ ಸಹ ನಡೆಸಿ, ಸಕ್ಕರೆ ದಾಸ್ತಾನು ಬಗ್ಗೆ ಪರಿಶೀಲನೆ ನಡೆಸಿದರು.
ಹಬ್ಬಗಳಲ್ಲಿ ಸಕ್ಕರೆ ದಾಸ್ತಾನು ನಿಗಾ ವಹಿಸಿ: ಪ್ರಸ್ತುತ ಸಕ್ಕರೆ ದಾಸ್ತಾನು ಸ್ಥಿತಿ, ಉತ್ಪಾದನಾ ಮಟ್ಟ ಮತ್ತು ಪ್ರಸ್ತುತ ಸಕ್ಕರೆ ಋತುವಿನಲ್ಲಿ ಬೇಡಿಕೆ, ಪೂರೈಕೆ ಬಗ್ಗೆ ನಿಗಾ ವಹಿಸಿದರು. ಆಹಾರ ಇಲಾಖೆ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಸಚಿವರು, ಶ್ರಾವಣ ಮಾಸ ಮತ್ತು ಹಬ್ಬಗಳು ಋತು ಶುರುವಾಗಿದ್ದರಿಂದ ಸಕ್ಕರೆ ಲಭ್ಯತೆ ಮೇಲೆ ನಿಕಟ ಮೇಲ್ವಿಚಾರಣೆ ನಡೆಸುವಂತೆ ಸಲಹೆ ನೀಡಿದರು.
ಸಾಕಷ್ಟು ಸಕ್ಕರೆ ದಾಸ್ತಾನು ನಿರ್ವಹಣೆ ಮತ್ತು ಸ್ಥಿರ ಪೂರೈಕೆ ಹಾಗೂ ಬೆಲೆ ಸ್ಥಿರತೆಗೆ ಅನ್ವಯಿಸಿ ಸಕಾಲಿಕವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.