HD Kumaraswamy: ಸಿಎಂ ಡಿಕೆಶಿ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ; ಸ್ಫೋಟಕ ಆಡಿಯೊ ಬಾಂಬ್ ಸಿಡಿಸಿದ ಎಚ್‌ಡಿಕೆ!
NICE road project Scam: ಬೆಂಗಳೂರಿನಲ್ಲಿ ನಥಿಂಗ್ ನೈಸ್ ಹೆಸರಲ್ಲಿ ಸುದ್ದಿಗೋಷ್ಠಿ ನಡೆಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮು ಅವರು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೈಜೋಡಿಸಿ FWA ನಿಯಮಗಳನ್ನು ಗಾಳಿಗೆ ತೂರಿದ್ದಲ್ಲದೆ, ODP ಮಾರ್ಗ ವಿನ್ಯಾಸವನ್ನೇ ಬದಲಿಸಿ ಭಾರೀ ಪ್ರಮಾಣದಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
-
ಬೆಂಗಳೂರು: ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಹಾಗೂ ಅವರ ಕುಟುಂಬದ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸ್ಫೋಟಕ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇಂದು ಎಚ್‌ಡಿಕೆ ಅವರು, ʼನಥಿಂಗ್ ನೈಸ್ʼ (NICE road Scam) ಹೆಸರಲ್ಲಿ ಸುದ್ದಿಗೋಷ್ಠಿ ನಡೆಸಿ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ನೈಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಕೈಜೋಡಿಸಿ FWA ನಿಯಮಗಳನ್ನು ಗಾಳಿಗೆ ತೂರಿದ್ದಲ್ಲದೆ, ಒಡಿಪಿ ಮಾರ್ಗ ವಿನ್ಯಾಸವನ್ನೇ ಬದಲಿಸಿ ಭಾರೀ ಪ್ರಮಾಣದಲ್ಲಿ ಅಕ್ರಮ ಎಸಗಿದ್ದಾರೆ. ನೈಸ್ ಕಂಪನಿಯಿಂದ ಕಿಕ್‌ಬ್ಯಾಕ್ ರೂಪದಲ್ಲಿ, ನೋಟಿಫೈ ಆಗಿದ್ದ ಭೂಮಿಯನ್ನು ಎನ್‌ಒಸಿ ಪಡೆದು ರೈತರ ನೂರಾರು ಎಕರೆ ಫಲವತ್ತಾದ ಭೂಮಿಯನ್ನು ಡಿ.ಕೆ. ಶಿವಕುಮಾರ್ ಕುಟುಂಬ ಕಾನೂನುಬಾಹಿರವಾಗಿ ಖರೀದಿಸಿರುವ ದಾಖಲೆಗಳು ಮುಖ್ಯಮಂತ್ರಿಗಳ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಅನ್ನದಾತರ ರಕ್ತ ಹೀರಿ ಕಟ್ಟಿದ ಇವರ ಸಾಮ್ರಾಜ್ಯಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಬಳಿ ಉತ್ತರವಿದೆಯೇ? ಎಂದು ಪ್ರಶ್ನಿಸಿರುವ ಎಚ್‌ಡಿಕೆ, ಭ್ರಷ್ಟಾಚಾರದ ದೊಡ್ಡ ಫಲಾನುಭವಿಯಾಗಿರುವ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ. ಶಾಸನ ಹಾಗೂ ಸಂವಿಧಾನಕ್ಕೆ ವಂಚಿಸಿರುವ ಡಿ.ಕೆ. ಶಿವಕುಮಾರ್ ಅವರು ತಕ್ಷಣ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು ಮತ್ತು ನ್ಯಾಯಾಲಯದ ಆದೇಶದ ಪ್ಯಾರಾ-93 ರ ಪ್ರಕಾರ ಫೋರೆನ್ಸಿಕ್ ಆಡಿಟ್ ನಡೆಸಬೇಕು ಎಂದು ಜೆಡಿಎಸ್ ಪಕ್ಷವು ಆಗ್ರಹಿಸುತ್ತದೆ.
ರೈತರಿಗೆ ದ್ರೋಹ ಬಗೆದ ಈ ನೈಸ್ ಮಹಾಲೂಟಿಗೆ ರಾಜ್ಯದ ಜನತೆಗೆ ಸರ್ಕಾರ ಉತ್ತರ ನೀಡಬೇಕು. ರೈತರ ಭೂಮಿ ನುಂಗಿದ ಈ ಭೂಗಳ್ಳರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
https://t.co/r1TlfrZK3w#Live 📌#NothingNice ನನ್ನ ಮಾಧ್ಯಮಗೋಷ್ಠಿಯ#ನೇರಪ್ರಸಾರ
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) September 29, 2026
ನೈಸ್ ಅಕ್ರಮಗಳು ಹಾಗೂ ಆ ಕಂಪನಿ ಜತೆ ಶಾಮೀಲಾದವರು, ಭೂಮಿ ಕೊಳ್ಳೆ ಹೊಡೆದವರ ಬಗ್ಗೆ ಮಾಹಿತಿ. ದಾಖಲೆಗಳನ್ನು ನಾಡಿನ ಮುಂದೆ ಇಡುತ್ತಿದ್ದೇನೆ.#NiceLootsKarnataka @JanataDal_S
4 ಕೋಟಿಯಿಂದ 1,413 ಕೋಟಿಗೆ ಆಸ್ತಿ ಹೆಚ್ಚಳ
2003ರಲ್ಲಿ ಡಿ.ಕೆ. ಶಿವಕುಮಾರ್ ಅವರ ಘೋಷಿತ ಆಸ್ತಿ ಮೊತ್ತ ಸುಮಾರು 4 ಕೋಟಿ ರೂಪಾಯಿಗಳಷ್ಟಿತ್ತು. ಆದರೆ 2023ರ ವೇಳೆಗೆ ಅದು 1,413 ಕೋಟಿ ರೂಪಾಯಿಗೆ ಜಿಗಿದಿದೆ ಎಂದು ಅಂಕಿ-ಅಂಶಗಳನ್ನು ಮುಂದಿಟ್ಟ ಕುಮಾರಸ್ವಾಮಿ, ಈ ಭಾರಿ ಪ್ರಮಾಣದ ಬೆಳೆವಣಿಗೆಗೆ ಒಡಿಪಿ (ODP) ಬದಲಾವಣೆ ಮಾಡಿದ್ದೇ ಮುಖ್ಯ ಕಾರಣ ಎಂದು ದೂರಿದ್ದಾರೆ. 2003ರಿಂದ 2023ರ ಅವಧಿಯವರೆಗಿನ ದಾಖಲೆಗಳನ್ನು ಪ್ರದರ್ಶಿಸಿದ ಅವರು, ನೈಸ್ (NICE) ಯೋಜನಾ ವ್ಯಾಪ್ತಿಗೆ ಬರುವ ಜಮೀನುಗಳನ್ನು ಡಿ.ಕೆ. ಶಿವಕುಮಾರ್ ಅವರ ಕುಟುಂಬಸ್ಥರು ಹಂತ-ಹಂತವಾಗಿ ಖರೀದಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅಧಿಕಾರಿಗಳಿಗೆ ಬೆದರಿಕೆ ಹಾಕಿ 200 ಎಕರೆ ಗೋಮಾಳ ಜಮೀನು ಒತ್ತುವರಿ
1997ರಲ್ಲೇ ಸರ್ಕಾರಿ ಯೋಜನೆಗಾಗಿ ನೋಟಿಫೈ ಆಗಿದ್ದ ಸುಮಾರು 10 ಎಕರೆ ಜಮೀನನ್ನು 2004ರ ನವೆಂಬರ್ 3ರಂದು ಡಿ.ಕೆ. ಸುರೇಶ್ ಅವರು ಖರೀದಿಸಿದ್ದರು ಎಂದು ದಾಖಲೆ ಸಮೇತ ವಿವರಿಸಿದ ಎಚ್‌ಡಿಕೆ, ಅದೇ ಸರಣಿಯಲ್ಲಿ 2026ರಲ್ಲಿ ಡಿಕೆಶಿ ಅವರ ಪುತ್ರಿ ಆಭರಣ ಜಮೀನು ಖರೀದಿ ಮಾಡಿದ್ದಾರೆ ಎಂದು ದೂರಿದ್ದಾರೆ. ಅಧಿಕಾರಿಗಳಿಗೆ ಬೆದರಿಕೆ ಹಾಕಿ 150 ರಿಂದ 200 ಎಕರೆಗೂ ಹೆಚ್ಚು ಗೋಮಾಳ ಜಮೀನನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲಾಗಿದೆ. ಕೆಐಎಡಿಬಿ (KIADB) ವಶಪಡಿಸಿಕೊಂಡಿದ್ದ ಹಾಗೂ ನೈಸ್ ಕಂಪನಿಯ ವ್ಯಾಪ್ತಿಯಲ್ಲಿದ್ದ ಭೂಮಿ ಈಗ ಇವರ ಕೈಸೇರಿದೆ. "ನಾನು ಬ್ಲ್ಯಾಕ್ಮೇಲ್ ಮಾಡುತ್ತಿದ್ದೇನೆ ಎನ್ನುವ ಡಿಕೆಶಿ, ಮೊದಲು ಈ ಅಕ್ರಮ ಭೂಖರೀದಿಗೆ ಉತ್ತರ ನೀಡಲಿ" ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಅಶೋಕ್ ಖೇಣಿ, ಡಿಕೆಶಿ ಆಡಿಯೊ ರಿಲೀಸ್
ಅಶೋಕ್ ಖೇಣಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕುಮಾರಸ್ವಾಮಿ ರಿಲೀಸ್ ಮಾಡಿದ್ದಾರೆ. ನನಗೆ 2 ಲಕ್ಷ ಕೋಟಿ ಕೊಡಬೇಕಾಗುತ್ತೆ. ಈ ಸರ್ಕಾರ ಗ್ಯಾರಂಟಿಗೆ ಹಣ ಕೊಟ್ಟು ಬರ್ಬಾದಾಗಿದೆ. ನನಗೆಲ್ಲಿ ಹಣ ಕೊಡಲು ಆಗುತ್ತೆ. ವ್ಯಾಜ್ಯ ಎಂದು ಕೋರ್ಟ್‌ಗೆ ಹೋದ್ರೆ. ವಿಧಾನಸೌಧವನ್ನೇ ಬರೆದು ಕೊಡ್ಬೇಕಾಗುತ್ತೆ ಎಂದು ಖೇಣಿ ಹೇಳಿದ್ದಾರೆ ಎನ್ನಲಾದ ಆಡಿಯೊವನ್ನ ಕುಮಾರಸ್ವಾಮಿ ರಿಲೀಸ್ ಮಾಡಿದ್ದಾರೆ.
ಇನ್ನು ಬಿಎಂಐಸಿ (BMIC) ಯೋಜನೆಗೆಂದು ಶ್ರೀ ಸಿದ್ಧಗಂಗಾ ಮಠಕ್ಕೆ ಸೇರಿದ 7 ಎಕರೆ ಭೂಮಿಯನ್ನು ಪಡೆಯಲಾಗಿತ್ತು. ರಸ್ತೆಗೆ 1 ಎಕರೆ ಬಳಸಲಾಗಿದ್ದು, ಉಳಿದ ಭೂಮಿಯನ್ನು ವಾಪಸ್ ನೀಡುವಂತೆ ಮಠದ ಶ್ರೀಗಳು ಅರ್ಜಿ ಸಲ್ಲಿಸಿದ್ದರು. ಈ ವೇಳೆ, "ಈ ವಿಚಾರವಾಗಿ ನನ್ನ ಮನೆಗೆ ಬರಬೇಡಿ, ಕೇವಲ ಆಶೀರ್ವಾದ ಮಾಡಲು ಮಾತ್ರ ಬನ್ನಿ" ಎಂದು ಡಿಕೆಶಿ ಹೇಳಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೋ ತುಣುಕನ್ನು ಎಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಇನ್ನು ಕುಮಾರಸ್ವಾಮಿ ತನ್ನ ಸ್ವಂತ ಜಮೀನು ಉಳಿಸಿಕೊಳ್ಳಲು ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ ಎನ್ನಲಾಗ್ತಿದೆ.