Digital marks cards: ಇನ್ನುಮುಂದೆ ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ!
ಫಲಿತಾಂಶ ಪ್ರಕಟವಾದ ಬಳಿಕ ಅಂಕಪಟ್ಟಿಗಾಗಿ ಕಾಯುವುದು, ಅದನ್ನು ಕಳೆದುಕೊಳ್ಳದಂತೆ ಜೋಪಾನ ಮಾಡುವುದು ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿತ್ತು. ಆದರೆ ಮುಂಬರುವ ಶೈಕ್ಷಣಿಕ ವರ್ಷದಿಂದ ಈ ಪ್ರಕ್ರಿಯೆ ಬದಲಾಗಲಿದೆ. ಡಿಜಿಟಲ್ ರೂಪದಲ್ಲಿ ದೊರೆಯುವ ಅಂಕಪಟ್ಟಿಗೆ ಅಧಿಕೃತ ಮಾನ್ಯತೆ ಇರಲಿದೆ.
-
ಬೆಂಗಳೂರು: ಎಸ್ಎಸ್ಎಲ್ಸಿ ಮತ್ತು ಪಿಯುಸಿ ಅಂಕಪಟ್ಟಿ ಪಡೆಯುವ ವಿಧಾನದಲ್ಲಿ ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಬದಲಾವಣೆ ತರಲು ಮುಂದಾಗಿದೆ. 2026-27ನೇ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕ್ಸ್ ಕಾರ್ಡ್ (Digital marks cards) ನೀಡಲು ನಿರ್ಧರಿಸಲಾಗಿದೆ. ಇದರಿಂದ ಮೊಬೈಲ್ನಲ್ಲೇ ಅಂಕಪಟ್ಟಿ ಪಡೆಯಲು ಸಾಧ್ಯವಾಗಲಿದ್ದು, ನಕಲಿ ದಾಖಲೆಗಳ ಹಾವಳಿ ತಡೆಯಲು ನೆರವಾಗಲಿದೆ.
ಫಲಿತಾಂಶ ಪ್ರಕಟವಾದ ಬಳಿಕ ಅಂಕಪಟ್ಟಿಗಾಗಿ ಕಾಯುವುದು, ಅದನ್ನು ಕಳೆದುಕೊಳ್ಳದಂತೆ ಜೋಪಾನ ಮಾಡುವುದು ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿತ್ತು. ಆದರೆ ಮುಂಬರುವ ಶೈಕ್ಷಣಿಕ ವರ್ಷದಿಂದ ಈ ಪ್ರಕ್ರಿಯೆ ಬದಲಾಗಲಿದೆ. ವಿದ್ಯಾರ್ಥಿಗಳು ಡಿಜಿಲಾಕರ್ನಲ್ಲಿ ತಮ್ಮ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಅಂಕಪಟ್ಟಿಯನ್ನು ಪಡೆದುಕೊಳ್ಳಬಹುದು. ಡಿಜಿಟಲ್ ರೂಪದಲ್ಲಿ ದೊರೆಯುವ ಅಂಕಪಟ್ಟಿಗೆ ಅಧಿಕೃತ ಮಾನ್ಯತೆ ಇರಲಿದೆ. ಹೀಗಾಗಿ ಮೂಲ ಅಂಕಪಟ್ಟಿ ಕಳೆದುಹೋದರೆ ಮತ್ತೆ ಪಡೆಯಲು ಕಚೇರಿಗಳಿಗೆ ಅಲೆದಾಡುವ ಅನಿವಾರ್ಯತೆಯೂ ಇರುವುದಿಲ್ಲ.
ಇದರ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು APAAR IDಗೆ ಜೋಡಿಸುವ ವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒಂದೇ ಕಡೆ ಸುರಕ್ಷಿತವಾಗಿ ಇರಿಸಬಹುದು. ಮುಂದಿನ ದಿನಗಳಲ್ಲಿ ಕಾಲೇಜು ಪ್ರವೇಶ ಅಥವಾ ಇತರ ಶೈಕ್ಷಣಿಕ ಉದ್ದೇಶಗಳಿಗೆ ಈ ದಾಖಲೆಗಳನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ.
ನಕಲಿ ಮಾರ್ಕ್ಸ್ ಕಾರ್ಡ್ ತಯಾರಿಸಿ ಉದ್ಯೋಗ ಅಥವಾ ಉನ್ನತ ಶಿಕ್ಷಣದ ಪ್ರವೇಶ ಪಡೆಯಲು ಯತ್ನಿಸುವ ಪ್ರಕರಣಗಳು ಶಿಕ್ಷಣ ಇಲಾಖೆಗೆ ಸವಾಲಾಗಿವೆ. ಅಂಕಪಟ್ಟಿಯಲ್ಲಿನ ಅಂಕಗಳನ್ನು ಬದಲಾಯಿಸಿ ಬಳಸುವ ಮೂಲಕ ವಂಚನೆ ಎಸಗುವ ಸಾಧ್ಯತೆಯೂ ಇದೆ. ಡಿಜಿಟಲ್ ವ್ಯವಸ್ಥೆಯಲ್ಲಿ ಅಂಕಪಟ್ಟಿಯ ಅಧಿಕೃತತೆಯನ್ನು ಪರಿಶೀಲಿಸಲು ಸುಲಭವಾಗುವುದರಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದು ಎಂಬುದು ಇಲಾಖೆಯ ಆಶಯ.
ಹೊಸ ವ್ಯವಸ್ಥೆ ಜಾರಿಗೊಳಿಸುವ ಸಂದರ್ಭದಲ್ಲಿ ಎದುರಾಗಬಹುದಾದ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.