FRP ಅಷ್ಟೇ ಅಲ್ಲ, ಕರ್ನಾಟಕದ ಕಬ್ಬು ಬೆಳೆಗಾರರಿಗೆ ಬೇಕು SAP ಬೆಂಬಲ
Sugarcane farmers Protest: 'ಯಾವುದೇ ಹೊಸ ಯೋಜನೆ ಘೋಷಣೆಗೆ ಹಣವಿಲ್ಲ' ಎಂಬ ಆರ್ಥಿಕ ಇಲಾಖೆ ಹೇಳಿಕೆ ಸಹ ಸ್ವತಃ ರಾಜ್ಯ ಸರ್ಕಾರವನ್ನೂ ದಿಕ್ಕೆಡಿಸಿದೆ. ಹೀಗಾಗಿ ಕಬ್ಬು ಬೆಳೆಗಾರರ ಹೋರಾಟವನ್ನು ಕೇಂದ್ರದತ್ತ ತಿರುಗಿಸಲಾಗಿದೆ? ಎಂಬ ಬಲವಾದ ಆರೋಪ ವಿಪಕ್ಷಗಳದ್ದಾಗಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು: ರಾಜ್ಯದ ಕಬ್ಬು ಬೆಳೆಗಾರರು ಅಧಿಕ ಬೆಲೆ ಬೇಕೆನ್ನುತ್ತಿದ್ದಾರೆ. ಕಬ್ಬಿನ ಬೆಲೆ ಹೆಚ್ಚಳಕ್ಕೆ ರೈತರ ಹೋರಾಟ ನ್ಯಾಯೋಚಿತವೇ. ಆದರೆ, ವಾಸ್ತವದಲ್ಲಿ ಯಾವ ಸರ್ಕಾರಕ್ಕೆ ಒತ್ತಡ ಹೇರಬೇಕು? ಎಂಬ ಜಿಜ್ಞಾಸೆ ಸ್ವತಃ ರೈತರನ್ನೇ ಕಾಡುತ್ತಿರುವಂತಿದೆ. ಮಾತ್ರವಲ್ಲ, ಕೇಂದ್ರಕ್ಕೋ? ಅಥವಾ ರಾಜ್ಯ ಸರ್ಕಾರಕ್ಕೋ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಕರ್ನಾಟಕದ ಕಬ್ಬು ಬೆಳೆಗಾರರು ನೈಜವಾಗಿ ಈಗಿಂಥ ಗೊಂದಲ ಮತ್ತು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ. ₹52000 ಕೋಟಿ ʼಗ್ಯಾರಂಟಿ ಹೊರೆ ಭಾರ'ದ ರಾಜ್ಯ ಸರ್ಕಾರದ ಮೊರೆ ಹೋದರೆ ಬಹುಶಃ ನಿಷ್ಪ್ರಯೋಜಕ. ಕೇಂದ್ರ ಸರ್ಕಾರಕ್ಕೆ ಅದರಲ್ಲೂ ಪ್ರಧಾನಿ ಮೋದಿ ಟೀಂನ ಪ್ರಭಾವಿ ಸಚಿವ ಕರ್ನಾಟಕದವರೇ ಆಗಿರುವ ಪ್ರಲ್ಹಾದ ಜೋಶಿ ಅವರಿಗೆ ಒತ್ತಡ ಹೇರಿದರೆ ಫಲ ಸಿಗಬಹುದೆಂಬ ಲೆಕ್ಕಾಚಾರದಲ್ಲಿ ಹುಬ್ಬಳ್ಳಿಯಲ್ಲಿ ರೈತ ಹೋರಾಟ ನಡೆದಿದೆ. ನಿರೀಕ್ಷೆಯಂತೆ ರೈತರ ಹೋರಾಟಕ್ಕೆ ಸ್ಪಂದಿಸಿದ ಸಚಿವ ಜೋಶಿ ದೆಹಲಿಯಲ್ಲಿ ಅ.12ಕ್ಕೆ ಉನ್ನತ ಮಟ್ಟದ ಸಭೆಗೂ ವೇದಿಕೆ ಕಲ್ಪಿಸಿದ್ದಾರೆ.
ರೈತರು ʼMSP ಹೆಚ್ಚಿಸಿ, FRP ಹೆಚ್ಚಿಸಿʼ ಎಂಬಿತ್ಯಾದಿ ಬೇಡಿಕೆ ಮುಂದಿಡುತ್ತಿದ್ದರೆ, ಪ್ರಸ್ತುತ ಕಬ್ಬು ಬೆಳೆಗಾರರ, ಸಕ್ಕರೆ ಕಾರ್ಖಾನೆಗಳ ಮತ್ತು ಗ್ರಾಹಕರ ಹಿತರಕ್ಷಣೆಯಿಂದ ಈ ಎರೆಡರಲ್ಲೂ ಸಮತೋಲನ ಕಾಯ್ದುಕೊಂಡಿದೆ ಎನ್ನುತ್ತಿದೆ ಕೇಂದ್ರ ಸರ್ಕಾರ. ಈ ನಡುವೆ ಕಬ್ಬು ಬೆಳೆಗಾರರ ಸಮಸ್ಯೆಗೆ ರಾಜ್ಯ ಸರ್ಕಾರದ ʼSAPʼಯೇ ಸೂಕ್ತ ಪರಿಹಾರ ಕ್ರಮ ಎಂಬ ಮಾತೂ ಕೇಳಿಬರುತ್ತಿದೆ.
ಏನಿದು FRP-MSP-SAP ಕೂಗು?:
ಸಕ್ಕರೆ ದಿನನಿತ್ಯದ ಅಗತ್ಯ ಆಹಾರ ಪದಾರ್ಥಗಳಲ್ಲೊಂದು. ರಾಜ್ಯ ಹೋರಾಟಗಾರರ ಬೇಡಿಕೆಯಂತೆ ಕೇಂದ್ರ ಸರ್ಕಾರ ಕಬ್ಬಿನ FRP ಬೆಲೆ ಹೆಚ್ಚಿಸಿದರೆ ಸಹಜವಾಗಿಯೇ ದೇಶಾದ್ಯಂತ ʼಸಕ್ಕರೆ ಬೆಲೆ ಏರಿಕೆ'ಗೆ ಕಾರಣವಾಗುತ್ತದೆ. ಜನಸಾಮಾನ್ಯರ ಜತೆ ಸ್ವತಃ ರೈತರೂ ದುಬಾರಿ ಬೆಲೆ ತೆರಬೇಕಾಗುತ್ತದೆ. ಸದ್ಯಕ್ಕೆ ಕಬ್ಬಿಗೆ FRP ₹365 ಇದ್ದರೆ, ಸಕ್ಕರೆಗೆ MSP ₹31 ಇದೆ. ಈ ಸಮತೋಲಿತ ಬೆಲೆಯ ಮಧ್ಯೆಯೂ ಮಾರುಕಟ್ಟೆಯಲ್ಲಿ ಒಮ್ಮೊಮ್ಮೆ ಸಕ್ಕರೆ ಬೆಲೆ ₹65 ದಾಟಿದ್ದಿದೆ. ಇನ್ನು MSPಯನ್ನೇ ₹60ಕ್ಕೆ ಹೆಚ್ಚಿಸಿದರೆ ಸಕ್ಕರೆ ಬೆಲೆ ₹100ರ ಸನಿಹ ಏರುತ್ತದೆ. ಜನಸಾಮಾನ್ಯರ ಗತಿಯೇನು? ಹಾಗಾಗಿ ಬಲ್ಲವರು ರಾಜ್ಯ ಸರ್ಕಾರ ಕಬ್ಬಿಗೆ SAP (ರಾಜ್ಯ ಸಲಹಾ ಬೆಲೆ) ಘೋಷಿಸಲಿ ಎನ್ನುತ್ತಿದ್ದಾರೆ. ಆದರೆ, ಹೋರಾಟಗಾರರರು ಸಾಧಕ-ಬಾಧಕ ಅರಿತೋ-ಅರಿಯದೆಯೋ MSP ₹60 ಹೆಚ್ಚಳಕ್ಕೆ ಬೇಡಿಕೆ ಇಡುತ್ತಿರುವುದು ಸೋಜಿಗದ ಸಂಗತಿ.
MSP-FRPಗೂ ವ್ಯತ್ಯಾಸವೇನು?:
ಬಹುತೇಕ ಕಬ್ಬು ಬೆಳೆಗಾರರಲ್ಲಿ MSP ಗೊಂದಲವಿದೆ. ಅಲ್ಲದೇ, MSP-FRP ಬಗ್ಗೆ ತಿಳಿವಳಿಕೆ ಕೊರತೆಯೂ ಇದ್ದಂತಿದೆ. MSP ಅಂದರೆ ಅನೇಕರು ʼಕನಿಷ್ಠ ಬೆಂಬಲ ಬೆಲೆʼಯೆಂದು ತಪ್ಪು ತಿಳಿದಂತಿದೆ. ಆದರೆ ಸಕ್ಕರೆ ವಲಯದಲ್ಲಿ MSP ಅಂದರೆ ʼಕನಿಷ್ಠ ಮಾರಾಟ ಬೆಲೆʼ. ಸಕ್ಕರೆ ಕಾರ್ಖಾನೆಗಳಿಗೆ ಅನ್ವಯಿಸುತ್ತದೆ. ಸಕ್ಕರೆ ಕಾರ್ಖಾನೆಗಳು ಈ ನಿಗದಿತ ದರಕ್ಕಿಂತ ಕಡಿಮೆ ಬೆಲೆಗೆ ಸಕ್ಕರೆ ಮಾರುವಂತಿಲ್ಲ. ಹೀಗಾಗಿ MSP ಹೆಚ್ಚಳದಿಂದ ರೈತರಿಗೇನೂ ಪ್ರಯೋಜನವಾಗದು. ಬದಲಿಗೆ ಸಕ್ಕರೆ ಬೆಲೆ ಮತ್ತಷ್ಟು ಏರಿಕೆಯಾಗಿ ಗ್ರಾಹಕರ ಜತೆ ರೈತರಿಗೂ ಬರೆಯೇ! ಇನ್ನು, FRP ಇದು ನೇರವಾಗಿ ಕಬ್ಬು ಬೆಳೆಗಾರರಿಗೆ ಅನ್ವಯಿಸುತ್ತದೆ. ಸಕ್ಕರೆ ಕಾರ್ಖಾನೆಗಳು FRP ₹365ಕ್ಕಿಂತ ಕಡಿಮೆ ಬೆಲೆ ನೀಡಿ ರೈತರಿಂದ ಕಬ್ಬು ಖರೀದಿಸುವಂತಿಲ್ಲ. ಅಲ್ಲದೇ, ಶೇ.10.25ಕ್ಕಿಂತ ಹೆಚ್ಚಿನ 0.1ರಷ್ಟು ರಿಕವರಿ ಕಬ್ಬಿಗೆ ಪ್ರತಿ ಕ್ವಿಂಟಲ್‌ಗೆ ₹3.56 ಹೆಚ್ಚಳ ನೀಡಬೇಕು. ಅಂತೆಯೇ ಶೇ.9.5ಕ್ಕಿಂತ ಕಡಿಮೆ ರಿಕವರಿ ಕಬ್ಬಿಗೆ ಕನಿಷ್ಠ ₹338.3ರ ಬೆಲೆಯಲ್ಲಿ ಕಬ್ಬು ಖರೀದಿಸಬೇಕು. ಕೇಂದ್ರದ ಈ MSP ಬಲ ಸಕ್ಕರೆ ಕಾರ್ಖಾನೆಗಳನ್ನು ಸಬಲಗೊಳಿಸಿದರೆ, FRP ರೈತರ ಆರ್ಥಿಕ ಸದೃಢತೆಗೆ ಬೆಂಬಲವಾಗಿದೆ.
ಸಕ್ಕರೆ ವಲಯಕ್ಕೆ ಕೇಂದ್ರದ್ದೇನು ಕೊಡುಗೆ:?
ಕೇಂದ್ರ ಸರ್ಕಾರ, ದಶಕದಿಂದಲೂ ಕಬ್ಬು ಬೆಳೆಗಾರರನ್ನು ಒಳಗೊಂಡಂತೆ ಇಡೀ ಸಕ್ಕರೆ ವಲಯದ ಸಬಲತೆಗೆ ಸಕಾಲಿಕ ಕೊಡುಗೆ ನೀಡುತ್ತ ಬಂದಿದೆ. ʼರೈತರು, ಸಕ್ಕರೆ ಕಾರ್ಖಾನೆಗಳು ಮತ್ತು ಗ್ರಾಹಕರ ರಕ್ಷಣೆಗೆ ಸಮತೋಲಿತ ಹೆಜ್ಜೆಯಿರಿಸಿದೆ. ಕಬ್ಬು ಬೆಳೆಗಾರರಿಗೆ ₹365 ರವರೆಗೆ FRP ಹೆಚ್ಚಳ, ಸಕ್ಕರೆ ಕಾರ್ಖಾನೆಗಳ ಬಲವರ್ಧನೆಗೆ MSP ₹31 (ಕನಿಷ್ಠ ಮಾರಾಟ ದರ) ನಿಗದಿ ಮತ್ತು 1200 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆ-ಖರೀದಿಗೆ ಉತ್ತೇಜನ, ಗ್ರಾಹಕರಿಗೆ, ಜನಸಾಮಾನ್ಯರಿಗೆ ಹೊರೆಯಾಗದಂತೆ ʼಸಕ್ಕರೆ ಬೆಲೆ ನಿಯಂತ್ರಣ' ಹೀಗೆ ಸರ್ವಹಿತ ಬದ್ಧತೆ ತೋರಿದೆ.
ರೈತರ ಹಿತಾಸಕ್ತಿ ವಿಚಾರದಲ್ಲಿ ಒಂದು ಹೆಜ್ಜೆ ಮುಂದಡಿಯಿಟ್ಟ ಕೇಂದ್ರ ಸರ್ಕಾರ 2018ರಿಂದ ಪ್ರತಿ ವರ್ಷವೂ FRP ಹೆಚ್ಚಿಸುತ್ತಲೇ ಬಂದಿದ್ದು, 2014-15ರಲ್ಲಿ ಪ್ರತಿ ಕ್ವಿಂಟಲ್‌ಗೆ ₹220ರಷ್ಟಿದ್ದ FRP ಪ್ರಸ್ತುತ ಪ್ರತಿ ಕ್ವಿಂಟಲ್‌ಗೆ ₹365ಕ್ಕೆ ಏರಿಕೆಯಾಗಿದೆ. ಅಂದರೆ ಸರಿಸುಮಾರು ಶೇ.66ರಷ್ಟು ಅಧಿಕವಾಗಿದೆ. ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಯಾ ರಾಜ್ಯ ಸರ್ಕಾರಗಳಿಗೂ ಮುಕ್ತ ಅವಕಾಶ, ಅಧಿಕಾರ ಕೊಟ್ಟಿದೆ. ಕಬ್ಬು ಉತ್ಪಾದಿತ ಪ್ರಮುಖ ರಾಜ್ಯಗಳು SAP (ರಾಜ್ಯ ಸಲಹಾ ಬೆಲೆ) ಒದಗಿಸಲು ಹಾಗೂ ಹೆಚ್ಚುವರಿ ಉತ್ಪಾದಿತ ಸಕ್ಕರೆ ರಫ್ತಿಗೂ ಅನುಮತಿಸಿದೆ.
ನೆರೆಯ 4 ರಾಜ್ಯಗಳಲ್ಲಿದೆ SAP:
ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಸಕಾಲಿಕವಾಗಿ FRP ಹೆಚ್ಚಳ ಮಾಡಿದೆ. ₹220 ಇದ್ದ FRPಯನ್ನು ಇದೀಗ ₹365ಕ್ಕೆ ತಲುಪಿಸಿದೆ. ಈ ವರ್ಷವೂ ಹೆಚ್ಚಳ ಮಾಡುವ ನಿರೀಕ್ಷೆ ಹುಟ್ಟಿಸಿದೆ. ಆದರೆ, ಕರ್ನಾಟಕ ಹೊರತುಪಡಿಸಿ ಅಧಿಕ ಕಬ್ಬು ಬೆಳೆಯುವ ಇತರೆ ನಾಲ್ಕು ರಾಜ್ಯಗಳು ರೈತರಿಗೆ ಕೇಂದ್ರದ FRP ಬೆಂಬಲದ ಜತೆಗೆ ಹೆಚ್ಚುವರಿಯಾಗಿ SAP (ರಾಜ್ಯ ಸಲಹಾ ಬೆಲೆ)ಯನ್ನೂ ನೀಡುತ್ತಿವೆ. ಪಂಜಾಬ್, ಹರಿಯಾಣ, ಉತ್ತರಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಕಬ್ಬು ಬೆಳೆಗಾರರಿಗೆ ₹355ರಿಂದ ₹416ರವರೆಗೆ SAP ದರ ಕೊಡಮಾಡಿವೆ. ವಿಪರ್ಯಾಸವೆಂದರೆ ಸಕ್ಕರೆ ನಾಡು ಎಂದೇ ಪ್ರಸಿದ್ಧಿಯಾದ ಮಂಡ್ಯ ಜಿಲ್ಲೆ ಒಳಗೊಂಡಿರುವ ನಮ್ಮ ಕರ್ನಾಟಕದಲ್ಲೇ ಇಲ್ಲ SAP.
ನಮ್ಮ ಕರ್ನಾಟಕದಲ್ಲೇ ಇಲ್ಲ SAP ಬೆಂಬಲ:
ರಾಜ್ಯದ ನೀರಾವರಿ ಭೂ ಭಾಗದ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಕಲಬುರಗಿ ಹೀಗೆ 16 ಜಿಲ್ಲೆಗಳನ್ನು ಆವರಿಸಿರುವ ನಮ್ಮ 'ಸಿಹಿದಾತ'ರಿಗೇ ಇಲ್ಲವಾಗಿದೆ ರಾಜ್ಯ ಸರ್ಕಾರದ SAP ಬೆಂಬಲ! ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಕೇವಲ ₹50 ಕೊಟ್ಟು ಮೂಗಿಗೆ ತುಪ್ಪ ಸವರಿದ್ದು ಬಿಟ್ಟರೆ ಬೇರೇನೂ ಇಲ್ಲ. ಹೀಗಾಗಿ ಕಬ್ಬು ಬೆಳೆಗಾರರ ಪಾಲಿಗಿಂದು ಕರ್ನಾಟಕ ಸರ್ಕಾರ ತೋರುತ್ತಿರುವ ಅನಾದಾರ, ತಾತ್ಸಾರವೇ? ಎಂಬ ಪ್ರಶ್ನೆ ಎದ್ದಿದೆ.
ರಾಜ್ಯದ ಅದರಲ್ಲೂ ಬೆಳಗಾವಿ ಭಾಗದ ಕಬ್ಬು ಬೆಳೆಗಾರರ 'ಹುಬ್ಬಳ್ಳಿ ಹೋರಾಟ' ಮಾಡಿದ ಸದ್ದು ಈಗ ರಾಜ್ಯ ಸರ್ಕಾರದ ಆದ್ಯ ಕರ್ತವ್ಯವಾದ ʼSAPʼ ಬೆಂಬಲ ಜಾರಿಯನ್ನು ಮುನ್ನೆಲೆಗೆ ತಂದಿದೆ ಎಂದರೆ ತಪ್ಪಿಲ್ಲ. ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಸರ್ಕಾರ ರಾಜ್ಯದ ಕಬ್ಬು ಬೆಳೆಗಾರರಿಗೆ ದಸರೆ-ದೀಪಾವಳಿ ವೇಳೆಗೆ ʼSAPʼ ಕೊಡುಗೆ ನೀಡಬಹುದೇ? ಎಂಬ ನಿರೀಕ್ಷೆ ಸಿಹಿದಾತರದ್ದು.
SAP ನೀಡಲು ರಾಜ್ಯ ಸರ್ಕಾರಕ್ಕೇನು ಅಡ್ಡಿ?:
52 ಸಾವಿರ ಕೋಟಿಯಂತಹ ದುಬಾರಿ ವ್ಯಯದ ಪಂಚ ಗ್ಯಾರೆಂಟಿ ಯೋಜನೆಗಳು ಇತರೆ ಅಭಿವೃದ್ಧಿ, ಜನಕಲ್ಯಾಣ ಯೋಜನೆಗಳಿಗೆ ಅಡ್ಡಿ ಎಂಬುದರ ಮಧ್ಯೆ, ʼಯಾವುದೇ ಹೊಸ ಯೋಜನೆ ಘೋಷಣೆಗೆ ಹಣವಿಲ್ಲ' ಎಂಬ ಆರ್ಥಿಕ ಇಲಾಖೆ ಹೇಳಿಕೆ ಸಹ ಸ್ವತಃ ಸರ್ಕಾರವನ್ನೂ ದಿಕ್ಕೆಡಿಸಿದೆ. ಹೀಗಾಗಿ ಕಬ್ಬು ಬೆಳೆಗಾರರ ಹೋರಾಟವನ್ನು ಕೇಂದ್ರದತ್ತ ತಿರುಗಿಸಲಾಗಿದೆ? ಎಂಬ ಬಲವಾದ ಆರೋಪ ವಿಪಕ್ಷಗಳದ್ದು.
ಕಬ್ಬು ಬೆಳೆಗಾರರಿಗೆ ಕೇಂದ್ರ ಮಾಡಿದ್ದೇನು?:
ಕಬ್ಬಿನ FRP ಹೆಚ್ಚಳಕ್ಕಾಗಿ ಧ್ವನಿ ಎತ್ತುತ್ತಿರುವ ರೈತರು 2015ಕ್ಕೂ ಮುನ್ನ ವರ್ಷಾನುಗಟ್ಟಲೆ ಇರುತ್ತಿದ್ದ ಕಬ್ಬಿನ ಬಾಕಿ ಪಾವತಿಗಾಗಿ ಬೀದಿಗಿಳಿಯುತ್ತಿದ್ದರು. ಯುಪಿಎ ಆಡಳಿತದಲ್ಲಿನ ಸರಿಸುಮಾರು ₹23000 ಕೋಟಿ ಬಾಕಿಯಲ್ಲಿ NDA ಸರ್ಕಾರ ₹16600 ಕೋಟಿ ಪಾವತಿಸಿ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರ ರಕ್ಷಣೆಗೆ ನಿಂತಿತು. 2018ರಿಂದ ಸಕ್ಕರೆ ಕಾರ್ಖಾನೆಗಳಿಗೆ MSP (ಕನಿಷ್ಠ ಮಾರಾಟ ದರ) ತಂದು ನಷ್ಟಕ್ಕೀಡಾಗುವುದನ್ನು ತಡೆಯಿತು. ಅಲ್ಲದೆ, 38 ಕೋಟಿ ಲೀಟರ್ ಇದ್ದ ಎಥೆನಾಲ್ ಖರೀದಿ ಒಪ್ಪಂದವನ್ನು ಬರೋಬ್ಬರಿ 1200 ಕೋಟಿ ಲೀಟರ್ ಗೆ ಅಧಿಕಗೊಳಿಸಿ ಮತ್ತಷ್ಟು ಬಲ ತುಂಬಿತು. ಅಂತೆಯೇ ಪ್ರಸ್ತುತ ₹365ರವರೆಗೆ FRP ಹೆಚ್ಚಿಸಿ ದೇಶದ 5 ಕೋಟಿ ಕಬ್ಬು ಬೆಳೆಗಾರರನ್ನೂ ಆರ್ಥಿಕವಾಗಿ ಸಶಕ್ತಗೊಳಿಸುತ್ತಿದೆ.
ಸಕ್ಕರೆ ವಲಯದ ಆರ್ಥಿಕ ಸುಸ್ಥಿರತೆಗೆ ವ್ಯವಸ್ಥೆ ರೂಪಿಸುವ ಧ್ಯೇಯದೊಂದಿಗೆ ಹೆಜ್ಜೆ ಹಾಕಿದ ಕೇಂದ್ರ ಸರ್ಕಾರ ಮೊದಲಿಗೆ ಸಕಾಲಿಕವಾಗಿ ಕಬ್ಬಿನ ಬಾಕಿ ಹಣ ಪಾವತಿಗೆ ಆದ್ಯತೆ ನೀಡಿದ್ದು, ಪ್ರಸ್ತುತ ಶೇ.97ರಷ್ಟು ಬಾಕಿ ಹಣ ಪಾವತಿಸಿದೆ. 2024-25ರ ಸಕ್ಕರೆ ಹಂಗಾಮಿನಲ್ಲಿ ಒಟ್ಟು ₹1,02,687 ಕೋಟಿ ಬಾಕಿ ಮೊತ್ತದಲ್ಲಿ 2026ರ ಏಪ್ರಿಲ್ 20ರ ವೇಳೆಗೆ ₹1,02,209 ಕೋಟಿ ಪಾವತಿಸಿದೆ. ಶೇ.99.5ರಷ್ಟು ಬಾಕಿ ವಿಲೇವಾರಿ ಮಾಡಿ ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ಸುಸ್ಥಿರತೆ ಕಲ್ಪಿಸಿದೆ. ಪ್ರಸ್ತುತ 2025-26ರ ಸಕ್ಕರೆ ಹಂಗಾಮಿನಲ್ಲಿ ಆಗಸ್ಟ್ 20ರ ವೇಳೆಗೆ ಶೇ.97ರಷ್ಟು ಬಾಕಿ ಹಣ ಪಾವತಿಸಿದ್ದು, ಇದು ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕಿರುವ ಕಾಳಜಿ ಎನ್ನುತ್ತ ಅಂಕಿ ಅಂಶ ಸಹಿತ ಕೇಂದ್ರದ ಕೊಡುಗೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ರಾಜ್ಯ ಬಿಜೆಪಿ ನಾಯಕರು.
ಸಕ್ಕರೆ ರಫ್ತು ಬಲ:
ಭಾರತ ವಾರ್ಷಿಕವಾಗಿ ಸುಮಾರು 300-340 LMT ಸಕ್ಕರೆ ಉತ್ಪಾದಿಸುತ್ತಿದ್ದು, ದೇಶೀಯ ಬಳಕೆ 280-290 LMT ಇದೆ. ಇದೀಗ ಹೆಚ್ಚುವರಿ ಸಕ್ಕರೆ ರಫ್ತಿಗೆ ಅವಕಾಶ ಕಲ್ಪಿಸಿದೆ. 2025-26ರಲ್ಲಿ 20 LMT ವರೆಗೆ ಸಕ್ಕರೆ ರಫ್ತುವನ್ನು ವಿಸ್ತರಿಸಿದ್ದು, ಪರಿಣಾಮ ಕೇವಲ 0.47 LMT ಇದ್ದ ರಫ್ತು ಪ್ರಮಾಣ ಇದೀಗ 8 LMT ತಲುಪಿದೆ. ಪ್ರಮುಖವಾಗಿ ಶ್ರೀಲಂಕಾ, ಪಶ್ಚಿಮ ಏಷ್ಯಾ ಮತ್ತು ಪೂರ್ವ ಆಫ್ರಿಕಾಗೆ ರಫ್ತು ಮಾಡಲಾಗುತ್ತಿದೆ. ಅಲ್ಲದೆ, ಕಬ್ಬು ಆಧಾರಿತ ಕಚ್ಚಾ ವಸ್ತುಗಳಿಂದ ಎಥೆನಾಲ್ ಉತ್ಪಾದನೆಗೂ ಉತ್ತೇಜನ ನೀಡಿದ್ದರ ಫಲವಾಗಿ ಬೆಲೆ ಕುಸಿತ ಕಂಡರೂ ಕಾರ್ಖಾನೆಗಳ ಮಾಲೀಕರು ಮತ್ತು ರೈತರಲ್ಲಿ ತುಸು ನಿರಾಳತೆಯಿದೆ.
ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ಹೆಚ್ಚುವರಿ ಆದಾಯ:
ಕೇಂದ್ರ ಸರ್ಕಾರ ಕೈಗೊಂಡ ರಾಷ್ಟ್ರೀಯ ಜೈವಿಕ ಇಂಧನ ನೀತಿ ಮತ್ತು EBP ಕಾರ್ಯಕ್ರಮವು ಕಬ್ಬಿಗೆ ಪ್ರಮುಖ ಮಾರುಕಟ್ಟೆ ಸೃಷ್ಟಿಸಿದೆ. 2014-15ರಿಂದ 2024-25ರ ಅವಧಿಯಲ್ಲಿ ಎಥೆನಾಲ್ ಮಾರಾಟದಿಂದ ಸಕ್ಕರೆ ಕಾರ್ಖಾನೆಗಳು ₹1.29 ಲಕ್ಷ ಕೋಟಿಗೂ ಹೆಚ್ಚು ಆದಾಯ ಗಳಿಸಿವೆ. 2014-15ರಿಂದ ಅಕ್ಟೋಬರ್ 2025ರವರೆಗೆ ರೈತರಿಗೆ ₹1,36,300 ಕೋಟಿಗೂ ಹೆಚ್ಚಿನ ಮೊತ್ತದ ತ್ವರಿತ ಪಾವತಿಯನ್ನು ಸುಗಮಗೊಳಿಸಿದೆ.
ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಲವರ್ಧನೆಗೆ ₹1000 ಕೋಟಿ:
ಕೇಂದ್ರ ಸರ್ಕಾರ ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಲವರ್ಧನೆಗಾಗಿ NCDCಗೆ ₹1,000 ಕೋಟಿ ಅನುದಾನ ಒದಗಿಸಿದ್ದು, NCDC ಎಥೆನಾಲ್ ಘಟಕ, ಸಹ-ಉತ್ಪಾದನಾ ಘಟಕ ಮತ್ತು ಕಾರ್ಯನಿರತ ಬಂಡವಾಳಕ್ಕಾಗಿ ₹10000 ಕೋಟಿ ಸಾಲ ಒದಗಿಸಿದೆ. ಅಲ್ಲದೇ, ಅವಧಿ ಸಾಲದ ಮೇಲಿನ ಬಡ್ಡಿ ದರವನ್ನೂ ಶೇ.8.5ಕ್ಕೆ ಕಡಿತಗೊಳಿಸಿದೆ. ಸಹಕಾರಿ ಸಕ್ಕರೆ ಕಾರ್ಖಾನೆಗಳು ಆಧುನೀಕರಣ, ಸಹ-ಉತ್ಪಾದನೆ ಮತ್ತು ಎಥೆನಾಲ್ ಯೋಜನೆಗಳಿಗಾಗಿ ಸಕ್ಕರೆ ಅಭಿವೃದ್ಧಿ ನಿಧಿ (SDF) ಆರ್ಥಿಕ ನೆರವು ಪಡೆಯಲೂ ಅವಕಾಶ ಕಲ್ಪಿಸಿದೆ. 2026ರ ಮಾರ್ಚ್ ವೇಳೆಗೆ ಉತ್ತರ ಪ್ರದೇಶದ 4 ಸಹಕಾರಿ ಸಕ್ಕರೆ ಕಾರ್ಖಾನೆಗಳು SDF ಅಡಿಯಲ್ಲಿ ಪ್ರಯೋಜನ ಪಡೆದಿವೆ.
ಕಬ್ಬು ಉತ್ಪಾದನೆ ವೃದ್ಧಿ
ಕೇಂದ್ರ ಸರ್ಕಾರದ ಸಕಾರಾತ್ಮಕ ಕ್ರಮಗಳಿಂದಾಗಿ 2025-26ರಲ್ಲಿ ಭಾರತದಲ್ಲಿ ಕಬ್ಬು ಉತ್ಪಾದನೆ 500 MMT ತಲುಪಿದೆ. 2015-16ಕ್ಕೆ ಹೋಲಿಸಿದರೆ 348.44 ದಶಲಕ್ಷ ಮೆಟ್ರಿಕ್ ಟನ್ ಗಿಂತ ಶೇ.43.5ರಷ್ಟು ಹೆಚ್ಚಾಗಿದೆ. ಕಬ್ಬು ಬೆಳೆಯುವ ಪ್ರದೇಶ 2015-16ರಲ್ಲಿ 49.27 ಲಕ್ಷ ಹೆಕ್ಟೇರ್ ಇದ್ದರೆ ಈಗದು 58.87 ಲಕ್ಷ ಹೆಕ್ಟೇರ್‌ಗೆ ವಿಸ್ತಾರವಾಗಿದೆ. ಕೇಂದ್ರ ಸರ್ಕಾರ ಹೀಗೆ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಬಲವರ್ಧನೆಗೆ ಸಮಯೋಚಿತ ಹೆಜ್ಜೆ ಇರಿಸಿದೆ. ಆದರೆ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಬಲವರ್ಧನೆಗೆ ರಾಜ್ಯ ಸರ್ಕಾರದ ಪಾಲೇನು? ಎಂಬುದೇ ಈಗ ಯಕ್ಷ ಪ್ರಶ್ನೆ.