Chikkaballapur News: 53 ಗ್ರಾಮಗಳ ಜನರಿಗೆ ತುರ್ತು ಚಿಕಿತ್ಸೆ ಮರೀಚಿಕೆ: ಕೂಡಲೇ ವೈದ್ಯರ ನೇಮಕಕ್ಕೆ ರೈತ ಸಂಘ ಆಗ್ರಹ
ಅನಿವಾರ್ಯವಾಗಿ ಸುಮಾರು 50 ಕಿ.ಮೀ. ದೂರದ ಕೋಲಾರ ಜಿಲ್ಲಾಸ್ಪತ್ರೆ ಅಥವಾ 100 ಕಿ.ಮೀ. ದೂರದ ಬೆಂಗಳೂರಿಗೆ ತೆರಳಬೇಕಾದ ದುಸ್ಥಿತಿ ಇದೆ. ಬಡ ಕುಟುಂಬಗಳಿಗೆ ತುರ್ತು ಸಂದರ್ಭದಲ್ಲಿ ದೂರದ ಊರುಗಳಿಗೆ ತೆರಳಲು ಹಣ ಹಾಗೂ ವಾಹನ ಸೌಲಭ್ಯವೂ ಇಲ್ಲದೆ ರೋಗಿಗಳ ಜೀವಕ್ಕೆ ಅಪಾಯ ಎದುರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
-
ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕೈವಾರ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಗೆ ವೈದ್ಯರಿಲ್ಲದೆ ಸುತ್ತಮುತ್ತಲಿನ 53 ಗ್ರಾಮಗಳ ಬಡವರು, ರೈತರು ಹಾಗೂ ಕೂಲಿ ಕಾರ್ಮಿಕರು ತುರ್ತು ಆರೋಗ್ಯ ಸೇವೆ ಪಡೆಯಲು ಪರದಾಡುವಂತಾಗಿದೆ. ಹೀಗಾಗಿ ಆಸ್ಪತ್ರೆಗೆ ಕೂಡಲೇ ರಾತ್ರಿ ಪಾಳಿ ವೈದ್ಯರನ್ನು ನೇಮಿಸಿ, ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ (ಕೆ.ಎಸ್.ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಆಸ್ಪತ್ರೆಯ ವೈದ್ಯರಿಗೆ ಮನವಿ ಸಲ್ಲಿಸಿರುವ ಸಂಘದ ಮುಖಂಡರು, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ತ್ಯಾಗರಾಜ್, ಕೈವಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಕೂಲಿ ಕಾರ್ಮಿಕರು ಹಗಲಿಡೀ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ರಾತ್ರಿ ವೇಳೆ ದಿಢೀರ್ ಅನಾರೋಗ್ಯ ಅಥವಾ ಅಪಘಾತದಂತಹ ತುರ್ತು ಪರಿಸ್ಥಿತಿ ಎದುರಾದರೆ ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ದೊರೆಯುತ್ತಿಲ್ಲ.
ಇದನ್ನೂ ಓದಿ: Chikkaballapur News: ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ: ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ
ಅನಿವಾರ್ಯವಾಗಿ ಸುಮಾರು 50 ಕಿ.ಮೀ. ದೂರದ ಕೋಲಾರ ಜಿಲ್ಲಾಸ್ಪತ್ರೆ ಅಥವಾ 100 ಕಿ.ಮೀ. ದೂರದ ಬೆಂಗಳೂರಿಗೆ ತೆರಳಬೇಕಾದ ದುಸ್ಥಿತಿ ಇದೆ. ಬಡ ಕುಟುಂಬಗಳಿಗೆ ತುರ್ತು ಸಂದರ್ಭದಲ್ಲಿ ದೂರದ ಊರುಗಳಿಗೆ ತೆರಳಲು ಹಣ ಹಾಗೂ ವಾಹನ ಸೌಲಭ್ಯವೂ ಇಲ್ಲದೆ ರೋಗಿಗಳ ಜೀವಕ್ಕೆ ಅಪಾಯ ಎದುರಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ಆರು ವರ್ಷಗಳಿಂದ ರಾತ್ರಿ ಪಾಳಿ ವೈದ್ಯರನ್ನು ನೇಮಿಸುವಂತೆ ರೈತ ಸಂಘ ಹಾಗೂ ಸ್ಥಳೀಯರು ಹಲವು ಬಾರಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆ ಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ, ಕಟ್ಟಡ ನಿರ್ಮಾಣ, ಟೆಂಡರ್ ಪ್ರಕ್ರಿಯೆ ಹಾಗೂ ಕಾಯಂ ವೈದ್ಯರ ನೇಮಕಾತಿಗೆ ಇನ್ನೂ ಹಲವು ವರ್ಷಗಳು ಬೇಕಾಗಬಹುದು. ಅಲ್ಲಿಯ ವರೆಗೆ ತಾತ್ಕಾಲಿಕ ವ್ಯವಸ್ಥೆಯನ್ನೂ ಮಾಡದೆ ಗ್ರಾಮೀಣ ಜನರ ಆರೋಗ್ಯವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಪತ್ರೆ ಮೇಲ್ದರ್ಜೆಗೇರುವವರೆಗೆ ತಾತ್ಕಾಲಿಕವಾಗಿ ರಾತ್ರಿ ಪಾಳಿ ವೈದ್ಯರನ್ನು ನೇಮಿಸಬೇಕು. ಅಗತ್ಯ ವೈದ್ಯಕೀಯ ಸಿಬ್ಬಂದಿ ಹಾಗೂ ಜೀವರಕ್ಷಕ ಔಷಧಗಳನ್ನು ಒದಗಿಸಿ ಗ್ರಾಮೀಣ ಜನರಿಗೆ ನಿರಂತರ ಆರೋಗ್ಯ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷ ಮೊಹಮ್ಮದ್ ರಿಯಾಜ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ನಾರಾಯಣ ಸ್ವಾಮಿ, ಎಂ. ರಾಜಣ್ಣ, ನಾರಾಯಣಪ್ಪ, ದೊಡ್ಡ ರೈತ ನಾರಾಯಣಸ್ವಾಮಿ, ಎಂ.ಡಿ. ಶಫಿ, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.