BJP Protest: ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಯತ್ನ; ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ವಾಲ್ಮೀಕಿ ನಿಗಮ ಹಗರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದರು.
ಬೆಂಗಳೂರಿನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಯತ್ನದ ವೇಳೆ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. -
ಬೆಂಗಳೂರು: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಿಜೆಪಿ ನಾಯಕರು ಸೋಮವಾರ ಪ್ರತಿಭಟನೆ (BJP Protest) ನಡೆಸಿದರು. ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿ ಹಲವು ನಾಯಕರು ಹಾಗೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.

ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದರು.

ಪ್ರತಿಭಟನೆ ವೇಳೆ ವಿಜಯೇಂದ್ರ ಹಾಗೂ ಆರ್. ಅಶೋಕ್ ಅವರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರಕರಣದಲ್ಲಿ ಹೊಣೆಗಾರಿಕೆ ವಹಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್, ಮಾಜಿ ಸಚಿವ ಬಿ. ಶ್ರೀರಾಮುಲು, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕ ಉಮನಾಥ್ ಕೋಟ್ಯಾನ್, ಶಾಸಕ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ, ವಿಧಾನಪರಿಷತ್ ಸದಸ್ಯ ಎಚ್.ಎಸ್. ಗೋಪಿನಾಥ್ ರೆಡ್ಡಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜುಗೌಡ ನಾಯಕ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ವಿಭಾಗ ಪ್ರಭಾರಿ ರಾಜಣ್ಣ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ನೂರಾರು ಮಂದಿ ಭಾಗವಹಿಸಿದ್ದರು.
ಹನುಮಾನ್ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದವನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ: ಬೊಮ್ಮಾಯಿ
ದಲಿತರಿಗೆ ಅನ್ಯಾಯವನ್ನು ಬಿಜೆಪಿ ಸಹಿಸುವುದಿಲ್ಲ
ಎಸ್‌ಟಿ ಸಮುದಾಯದ 187 ಕೋಟಿ ಲೂಟಿ ಹೊಡೆದ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಸರ್ಕಾರ ತಕ್ಷಣವೇ ಪಡೆಯಬೇಕು. ದಲಿತರಿಗೆ ಅನ್ಯಾಯ ಆಗುವುದನ್ನು ಬಿಜೆಪಿ ಸಹಿಸುವುದಿಲ್ಲ, ಮಹಾನ್ ಭ್ರಷ್ಟನ ವಜಾಗೊಳಿಸಿ ರಾಜೀನಾಮೆ ಪಡೆಯುವವರೆಗೂ ಬಿಜೆಪಿ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.