ಸತತ ಸೋಲುಗಳಿಂದ ಕಂಗೆಟ್ಟಿದ್ದ ತೆಲುಗು ನಟ ರವಿ ತೇಜಗೆ ಕೊನೆಗೂ ಸಿಕ್ತು ಭಾರಿ ಗೆಲುವು! ‘ಇರುಮುಡಿ’ ಸಿನಿಮಾ ಈವರೆಗೂ ಗಳಿಸಿದ್ದೆಷ್ಟು ಕೋಟಿ?
ʻಇರುಮುಡಿʼ ಚಿತ್ರದ ಮೂಲಕ ನಟ ರವಿ ತೇಜ ಟಾಲಿವುಡ್‌ನಲ್ಲಿ ಅದ್ದೂರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವು ಮದ್ಯವ್ಯಸನದ ವಿರುದ್ಧ ಹೋರಾಡುವ ವ್ಯಕ್ತಿಯೊಬ್ಬನ ಅಯ್ಯಪ್ಪ ದೀಕ್ಷೆಯ ಹಿನ್ನೆಲೆಯ ಕಥೆಯನ್ನು ಒಳಗೊಂಡಿದೆ. ಕೇವಲ ಮೂರೇ ದಿನಗಳಲ್ಲಿ ವಿಶ್ವಾದ್ಯಂತ ದಾಖಲೆ ಪ್ರಮಾಣದ ಗಳಿಕೆಯನ್ನು ಈ ಸಿನಿಮಾ ಮಾಡಿದೆ.
-
ಮಾಸ್ ಮಹಾರಾಜ ರವಿತೇಜ ಅಭಿನಯದ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಶಿವ ನಿರ್ವಾಣ ನಿರ್ದೇಶನದಲ್ಲಿ, 'ಮೈತ್ರಿ ಮೂವಿ ಮೇಕರ್ಸ್' ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಅದ್ಧೂರಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಬರೋಬ್ಬರಿ 80 ಕೋಟಿ ರೂ. ಗಳಿಕೆ
ಕಳೆದ 8-9 ವರ್ಷಗಳಿಂದ ನಿರೀಕ್ಷಿತ ಯಶಸ್ಸು ಕಾಣದಿದ್ದ ರವಿತೇಜ ಅವರಿಗೆ ಈ ಗೆಲುವು ಅನಿವಾರ್ಯವಾಗಿತ್ತು. ಈಗ 'ಇರುಮುಡಿ' ಸಿನಿಮಾ ಆ ಕೊರಗನ್ನು ನೀಗಿಸಿದೆ. ಸುಮಾರು 40 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು, ಕೇವಲ ಮೂರೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 80 ಕೋಟಿ ರೂ. ಗಳಿಕೆ ಕಂಡಿದೆ. ಮೊದಲ ದಿನದ ಮೊದಲ ಪ್ರದರ್ಶನದಿಂದಲೇ ಮೆಚ್ಚುಗೆ ಪಡೆದ ಈ ಚಿತ್ರ, ಮೊದಲ ವಾರಾಂತ್ಯದಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ.
ದಿನದಿಂದ ದಿನಕ್ಕೆ ಕಲೆಕ್ಷನ್‌ನಲ್ಲಿ ಏರಿಕೆ
ಸಾಮಾನ್ಯವಾಗಿ ಬಹುತೇಕ ಚಿತ್ರಗಳು ಮೊದಲ ದಿನದ ನಂತರ ಕಲೆಕ್ಷನ್‌ನಲ್ಲಿ ಇಳಿಕೆ ಕಾಣುತ್ತವೆ. ಆದರೆ 'ಇರುಮುಡಿ' ವಿಚಾರದಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಮೊದಲ ದಿನ (ಶುಕ್ರವಾರ) ಭಾರತದಲ್ಲಿ 15.30 ಕೋಟಿ ರೂ. ಗಳಿಕೆಯೊಂದಿಗೆ ಖಾತೆ ತೆರೆದ ಚಿತ್ರ, ಎರಡನೇ ದಿನ (ಶನಿವಾರ) 16.20 ಕೋಟಿ ರೂ. ಗಳಿಸಿತು. ಇನ್ನು ಮೂರನೇ ದಿನವಾದ ಭಾನುವಾರ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿಯನ್ನೇ ಸೃಷ್ಟಿಸಿತು. ಶನಿವಾರಕ್ಕೆ ಹೋಲಿಸಿದರೆ ಶೇ. 16ರಷ್ಟು ಬೆಳವಣಿಗೆ ಕಂಡು, ಒಂದೇ ದಿನ 20 ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿತು. ಈ ಮೂಲಕ ಮೊದಲ ಮೂರು ದಿನಗಳಲ್ಲಿ ದೇಶಾದ್ಯಂತ ಒಟ್ಟು ಕಲೆಕ್ಷನ್ 60 ಕೋಟಿ ರೂ. ಗಡಿ ದಾಟಿದೆ.
ಪ್ರೇಕ್ಷಕರಿಂದ ತುಂಬಿತುಳುಕಿದ ಚಿತ್ರಮಂದಿರಗಳು
ಭಾನುವಾರ ದೇಶಾದ್ಯಂತ ಒಟ್ಟು 3,078 ಪ್ರದರ್ಶನಗಳು ಕಂಡಿದ್ದು, ತೆಲುಗು ರಾಜ್ಯಗಳಲ್ಲೇ ಶೇ. 85.50ರಷ್ಟು ಸರಾಸರಿ ಆಕ್ಯುಪೆನ್ಸಿ ದಾಖಲಾಗಿದೆ. ಬೆಳಗಿನ ಪ್ರದರ್ಶನಗಳಿಗೆ ಶೇ. 73, ಮಧ್ಯಾಹ್ನ ಶೇ. 89.69, ಸಂಜೆ ಶೇ. 91.23 ಹಾಗೂ ರಾತ್ರಿಯ ಪ್ರದರ್ಶನಗಳಿಗೆ ಶೇ. 83.62ರಷ್ಟು ಆಕ್ಯುಪೆನ್ಸಿಯೊಂದಿಗೆ ಚಿತ್ರಮಂದಿರಗಳು ಭರ್ತಿಯಾಗಿದ್ದವು. ಮೂರನೇ ದಿನ ತೆಲುಗು ರಾಜ್ಯಗಳಿಂದಲೇ 18.25 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿದ್ದರೆ, ಕರ್ನಾಟಕದಿಂದ 2.30 ಕೋಟಿ ರೂ., ತಮಿಳುನಾಡಿನಿಂದ 53 ಲಕ್ಷ ರೂ. ಹಾಗೂ ವಿದೇಶಗಳಿಂದ 13.50 ಕೋಟಿ ರೂ. ಗಳಿಕೆಯಾಗಿದೆ.
Ravi Teja: 'ಇರುಮುಡಿ' ಹೊತ್ತು ಬಂದ ಮಾಸ್ ಮಹಾರಾಜ; 77ನೇ ಸಿನಿಮಾ ಫಸ್ಟ್ ಲುಕ್ ಔಟ್
ಪ್ರೇಕ್ಷಕರನ್ನು ಸೆಳೆದ ತಂದೆ-ಮಗಳ ಬಾಂಧವ್ಯ
ಹಳೆಯ ಕಹಿ ನೆನಪುಗಳು ಮತ್ತು ಮದ್ಯವ್ಯಸನದ ವಿರುದ್ಧ ಹೋರಾಡುತ್ತಲೇ ಅಯ್ಯಪ್ಪ ಸ್ವಾಮಿ ದೀಕ್ಷೆ ಸ್ವೀಕರಿಸುವ 'ತ್ರಿನಾದ್' ಎಂಬ ಮಾಸ್ ಪಾತ್ರದಲ್ಲಿ ರವಿತೇಜ ಜೀವಿಸಿದ್ದಾರೆ. ತಮ್ಮ ಮಗಳು 'ಮಣಿಕಂಠ' (ಬೇಬಿ ನಕ್ಷತ್ರ) ಜೊತೆಗಿನ ಭಾವುಕ ಸನ್ನಿವೇಶಗಳು ಪ್ರೇಕ್ಷಕರ ಕಣ್ಣಂಚಲಿ ನೀರು ತರಿಸುತ್ತಿವೆ. ಜೊತೆಗೆ ಹಿರಿಯ ನಟ ಸಾಯಿಕುಮಾರ್, ನಟಿ ಪ್ರಿಯಾ ಭವಾನಿ ಶಂಕರ್ ಅವರ ನಟನೆ ಹಾಗೂ ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಚಿತ್ರಕ್ಕೆ ಭದ್ರ ಬುನಾದಿ ಒದಗಿಸಿವೆ. ಮುಂಬರುವ ದಿನಗಳಲ್ಲಿ ಇದು ರವಿತೇಜ ಅವರ ವೃತ್ತಿಜೀವನದಲ್ಲೇ ಗರಿಷ್ಠ ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮಲಿದೆ ಎಂದು ಸಿನಿ ಪಂಡಿತರು ಅಂದಾಜಿಸಿದ್ದಾರೆ.