ಚೆನ್ನೈ: ವಿಧಾನ ಸಭಾ ಚುನಾವಣೆಗೆ (Legislative Assembly elections) ಸಜ್ಜಾಗುತ್ತಿರುವ ತಮಿಳುನಾಡಿನಲ್ಲಿ (Tamilnadu) ಈಗ ಎಐಎಡಿಎಂಕೆ (AIADMK) ನೇತೃತ್ವದಲ್ಲಿ ಕಣಕ್ಕೆ ಇಳಿಯಲಿರುವ ಎನ್‌ಡಿಎಯ ಮತಗಳನ್ನು ವಿಭಜನೆ ಮಾಡಲು ಶಶಿಕಲಾ- ರಾಮದಾಸ್ ಮೈತ್ರಿಕೂಟವು (Sasikala-Ramadoss alliance) ಸಜ್ಜಾಗುತ್ತಿದೆ. ವಿ.ಕೆ. ಶಶಿಕಲಾ ಅವರ ಆಲ್ ಇಂಡಿಯಾ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ (ಎಐಪಿಟಿಎಂಎಂಕೆ) ಮತ್ತು ಎಸ್ ರಾಮದಾಸ್ ಅವರ ಪಿಎಂಕೆಯು ಚುನಾವಣಾ ಕಣದಲ್ಲಿ ಒಗ್ಗೂಡಿ ಹೋರಾಡುವ ನಿರ್ಧಾರ ಮಾಡಿದೆ. ಈ ಎರಡು ಪಕ್ಷಗಳ ಮೈತ್ರಿ ಕೂಟವು ಎಲ್ಲಾ 234 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿದೆ.
ತಮಿಳುನಾಡಿನ ಚುನಾವಣೆಯಲ್ಲಿ ಎನ್‌ಡಿಎಗೆ ಭಾರಿ ಹೊಡೆತ ನೀಡಲು ಶಶಿಕಲಾ- ರಾಮದಾಸ್ ಮೈತ್ರಿಕೂಟವು ಸಜ್ಜಾಗುತ್ತಿದೆ. ಈ ಮೈತ್ರಿಕೂಟವು ತೇವರ್ ಮತ್ತು ವನ್ನಿಯಾರ್ ಸಮುದಾಯ ನೆಲೆಗಳನ್ನು ಒಟ್ಟುಗೂಡಿಸುವ ಮೂಲಕ ಮತಗಳನ್ನು ವಿಭಜಿಸಲು ಮತ್ತು ವಿಶೇಷವಾಗಿ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮತ ವಿಭಜನೆ ಮಾಡಲು ಸಿದ್ಧತೆ ನಡೆಸುತ್ತಿದೆ. ವಿ.ಕೆ. ಶಶಿಕಲಾ ಮತ್ತು ಎಸ್. ರಾಮದಾಸ್ ಅವರಿಬ್ಬರೂ ದ್ರೋಹದ ಆರೋಪವನ್ನು ಎದುರಿಸುತ್ತಿದ್ದು, ಚುನಾವಣಾ ಕಣವನ್ನು ಯುದ್ಧದಂತೆ ಹೋರಾಡಲು ನಿರ್ಧರಿಸಿದ್ದಾರೆ.
ವಿದೇಶದಲ್ಲಿ ನಿಯಮ ಉಲ್ಲಂಘಿಸಿದ ಭಾರತೀಯ ಪ್ರವಾಸಿಗರು; ನಮ್ಮ ಮಾನ ತೆಗೆಯಬೇಡಿ ಎಂದು ಕೈಮುಗಿದ ನೆಟ್ಟಿಗರು
ಜಯಲಲಿತಾ ಅವರಿಗೆ ಸಂಬಂಧಿಸಿದ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದ ಶಶಿಕಲಾ ಅವರು ಈ ಬಾರಿಯ ಚುನಾವಣೆಯಲ್ಲಿ ನೇರವಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇಲ್ಲ. ಆದರೆ ಅವರು ತಮ್ಮ ರಾಜಕೀಯ ಸಂದೇಶದಲ್ಲಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಅವರ ಸೋದರಳಿಯ ಟಿಟಿವಿ ದಿನಕರನ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಇವರಿಬ್ಬರೂ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.
ಜಯಲಲಿತಾ ಅವರ ಬಳಿಕ ಅಧಿಕಾರಕ್ಕೆ ಬರಲು ಪ್ರಯತ್ನಿಸಿದ ಶಶಿಕಲಾ ಅವರನ್ನು ಓ. ಪನ್ನೀರ್‌ಸೆಲ್ವಂ ಪದಚ್ಯುತಗೊಳಿಸಿ, ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದರು. ಬಳಿಕ ಅವರು ಜೈಲು ಶಿಕ್ಷೆ ಅನುಭವಿಸುತ್ತಿದ್ದಾಗ ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಸೇರಿಕೊಂಡು ಪಕ್ಷ ಮತ್ತು ಸರ್ಕಾರದ ಮೇಲೆ ಹಿಡಿತ ಸಾಧಿಸಿ ಅವರನ್ನು ಪಕ್ಷದಿಂದಲೇ ಹೊರಹಾಕಿದರು. ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೆ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ. ಇದರಿಂದ ಶಶಿಕಲಾ ತೀವ್ರವಾಗಿ ಕೋಪಗೊಂಡಿದ್ದಾರೆ ಎನ್ನಲಾಗುತ್ತಿದೆ.
ದಿನಕರನ್ ಕೂಡ ಎಐಎಡಿಎಂಕೆ ಜೊತೆ ರಾಜಿ ಮಾಡಿಕೊಂಡು ಎನ್‌ಡಿಎ ಸೇರಿದ ಬಳಿಕ ಶಶಿಕಲಾ ಅವರ ಅಸಮಾಧಾನ ಹೆಚ್ಚಾಗಿದೆ. ಹಿಂದಿನ ಚುನಾವಣೆಗಳಲ್ಲಿ ತೇವರ್ ಮತಗಳು ವಿಭಜನೆಯಾಗಿವೆ. ಇದು 2019 ರಿಂದ ಎಐಎಡಿಎಂಕೆ ಸೋಲಿಗೆ ಪ್ರಮುಖ ಕಾರಣವಾಗಿದೆ. ಇದೀಗ ಹೊಸ ಮೈತ್ರಿಕೂಟದ ಮೂಲಕ ಅವರ ಮರುಪ್ರವೇಶವು ಮತ್ತಷ್ಟು ಮತವಿಭಜನೆಗೆ ಕಾರಣವಾಗಬಹುದು.
ಪಿಎಂಕೆ ಸಂಸ್ಥಾಪಕ ರಾಮದಾಸ್ ಅವರು ವೈಯಕ್ತಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಅವರ ಮಗ ಅನ್ಬುಮಣಿ ರಾಮದಾಸ್ ಎನ್ ಡಿಎ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಅವರೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗಿದೆ.