ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊರ್ಮುಜ್ ತೆರೆಯದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದಿದ್ದ ಟ್ರಂಪ್‌ಗೆ ಇರಾನ್‌ ತಿರುಗೇಟು; ಗಲ್ಫ್‌ನಲ್ಲಿ ದಾಳಿ ತೀವ್ರಗೊಳಿಸುವ ಎಚ್ಚರಿಕೆ

Middle East Crisis: ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಪುನಃ ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಬೆನ್ನಲ್ಲೇ ಇರಾನ್‌ ಕೂಡ ಗುಡುಗಿದೆ. ಅಂತಹ ಯಾವುದೇ ಕ್ರಮವು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ವಿರುದ್ಧ ಪ್ರತೀಕಾರವನ್ನು ಪ್ರಚೋದಿಸುತ್ತದೆ ಎಂದು ಎಚ್ಚರಿಸಿದೆ.

ಪರಿಣಾಮ ನೆಟ್ಟಗಿರಲ್ಲ ಎಂದಿದ್ದ ಟ್ರಂಪ್‌ಗೆ ಇರಾನ್‌ ತಿರುಗೇಟು

ಸಾಂದರ್ಭಿಕ ಚಿತ್ರ -

Priyanka P
Priyanka P Mar 22, 2026 9:34 PM

ಟೆಹರಾನ್, ಮಾ. 22: 48 ಗಂಟೆಗಳ ಒಳಗೆ ಇರಾನ್, ಹೊರ್ಮುಜ್ ಜಲಸಂಧಿಯನ್ನು (Strait of Hormuz crisis) ಸಂಪೂರ್ಣವಾಗಿ ಪುನಃ ತೆರೆಯದಿದ್ದರೆ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೇರ ಬೆದರಿಕೆ ಹಾಕಿದ ಬೆನ್ನಲ್ಲೇ ಇರಾನ್‌ ಕೂಡ ಗುಡುಗಿದೆ. ಇದರಿಂದ ಮಧ್ಯಪ್ರಾಚ್ಯ ಸಂಘರ್ಷವು (middle east crisis) ಮತ್ತಷ್ಟು ತೀವ್ರಗೊಳ್ಳುವ ಸೂಚನೆ ಸಿಕ್ಕಿದೆ. ಅಂತಹ ಯಾವುದೇ ಕ್ರಮವು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ವಿರುದ್ಧ ಪ್ರತೀಕಾರವನ್ನು ಪ್ರಚೋದಿಸುತ್ತದೆ ಎಂದು ಇರಾನ್‌ ಎಚ್ಚರಿಸಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಬೆದರಿಕೆಯನ್ನು ಅನುಷ್ಠಾನಗೊಳಿಸಿದರೆ, ಅಮೆರಿಕ ನೆಲೆಗಳನ್ನು ಹೊಂದಿರುವ ದೇಶಗಳಲ್ಲಿನ ಇಂಧನ ತಾಣಗಳು ಗುರಿಯಾಗಿ ದಾಳಿ ನಡೆಸುತ್ತೇವೆ. ಅಲ್ಲದೆ, ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚುತ್ತೇವೆ ಎಂದು ಎಚ್ಚರಿಸಿದೆ.

ಇರಾನ್ ಹೊರ್ಮುಜ್ ಜಲಸಂಧಿಯನ್ನು 48 ಗಂಟೆಗಳೊಳಗೆ ಸಂಪೂರ್ಣವಾಗಿ ತೆರೆಯದಿದ್ದರೆ, ಅಮೆರಿಕವು ಇರಾನ್‌ನ ವಿವಿಧ ವಿದ್ಯುತ್ ಘಟಕಗಳನ್ನು ಗುರಿಯಾಗಿಸಿ ಸಂಪೂರ್ಣವಾಗಿ ನಾಶಮಾಡುತ್ತದೆ ಎಂದು ಟ್ರಂಪ್ ಬೆದರಿಕೆ ಹಾಕಿದ್ದರು.

ಇರಾನ್ ಯುದ್ಧದ ನಡುವೆ ಅರಬ್ಬಿ ಸಮುದ್ರದಲ್ಲಿ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ ನಿಯೋಜಿಸಿದ ಇಂಗ್ಲೆಂಡ್‌

ಟ್ರಂಪ್ ಮಾತಿಗೆ ಇರಾನ್ ಖಡಕ್ ಪ್ರತಿಕ್ರಿಯೆ ನೀಡಿದೆ. ಇರಾನ್‌ನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡರೆ, ಮಿತ್ರ ರಾಷ್ಟ್ರದಲ್ಲಿನ ಅಮೆರಿಕದ ನೆಲೆಗಳು ಬದಲಾಯಿಸಲಾಗದಂತೆ ನಾಶವಾಗಬಹುದು ಎಂದು ಸಂಸತ್ತಿನಲ್ಲಿ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಬೆದರಿಕೆ ಒಡ್ಡಿದ್ದಾರೆ.

ಇರಾನ್ ಮಿಲಿಟರಿ ಅಧಿಕಾರಿಗಳು ಸಹ ಕೊಲ್ಲಿಯಲ್ಲಿ ಅಮೆರಿಕ-ಸಂಬಂಧಿತ ಇಂಧನ, ತಂತ್ರಜ್ಞಾನ ಮತ್ತು ನೀರಿನ ಮೂಲಸೌಕರ್ಯವನ್ನು ಗುರಿಯಾಗಿಸಿ ದಾಳಿ ನಡೆಸಬಹುದು ಎಂದು ಎಚ್ಚರಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಸಾಗರ ಸಂಸ್ಥೆಯ ಇರಾನಿನ ಪ್ರತಿನಿಧಿ ಅಲಿ ಮೌಸಾವಿ, ಇರಾನ್‌ನ ಶತ್ರುವಲ್ಲದ ದೇಶದ ಹಡಗುಗಳು ಟೆಹರಾನ್‌ನೊಂದಿಗೆ ಸಮನ್ವಯ ಸಾಧಿಸುವ ಮೂಲಕ ಜಲಸಂಧಿಯನ್ನು ಹಾದುಹೋಗಬಹುದು ಎಂದು ಹೇಳಿದ್ದಾರೆ.

ಹೊರ್ಮುಜ್ ಜಲಸಂಧಿಯು ವಿಶ್ವದ ಪ್ರಮುಖ ಹಡಗು ಮಾರ್ಗಗಳಲ್ಲಿ ಒಂದಾಗಿದ್ದು, ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯ ದೊಡ್ಡ ಪಾಲನ್ನು ಹೊಂದಿದೆ. ಫೆಬ್ರವರಿ 28ರಂದು ಇರಾನ್ ಈ ಪ್ರಮುಖ ಇಂಧನ ಪೂರೈಕೆ ಮಾರ್ಗವನ್ನು ಮುಚ್ಚಿತು. ಈ ಕಿರಿದಾದ ಜಲಮಾರ್ಗದಲ್ಲಿನ ಅಡಚಣೆಗಳಿಂದಾಗಿ ಜಾಗತಿಕವಾಗಿ ಇಂಧನ ಬೆಲೆಗಳನ್ನು ಹೆಚ್ಚಿಸಿವೆ ಮತ್ತು ಜಾಗತಿಕ ಮಾರುಕಟ್ಟೆಗಳನ್ನು ಅಲುಗಾಡಿಸಿವೆ.

ಇಸ್ರೇಲ್‌ನ ಲಿಟಲ್ ಇಂಡಿಯಾ ಮೇಲೆ ದಾಳಿ: ಭಾರತ ಸೇರಿದಂತೆ ವಿಶ್ವಕ್ಕೆ ಆಘಾತ ನೀಡಿದ ಇರಾನ್

ಇನ್ನು ಯುದ್ಧ ಪರಿಸ್ಥಿತಿ ಮಾತ್ರ ಇನ್ನೂ ಅಸ್ಥಿರವಾಗಿದೆ. ಹೊಸ ಕ್ಷಿಪಣಿ ದಾಳಿ ನಡೆದ ಬಳಿಕ ಇಸ್ರೇಲ್‌ನ ಕೆಲವು ಪ್ರದೇಶಗಳಲ್ಲಿ ಏರ್ ರೇಡ್ ಸೈರನ್‌ಗಳು ಮೊಳಗಿದವು. ಮಾರ್ಚ್ 21ರಂದು ದಾಳಿಗಳು ತೀವ್ರಗೊಂಡಿದ್ದು, ಅಮೆರಿಕ-ಇಸ್ರೇಲ್ ದಾಳಿಗಳು ಮುಖ್ಯವಾಗಿ ಟೆಹರಾನ್ ಸುತ್ತಮುತ್ತ ಹಾಗೂ ಮಧ್ಯ ಮತ್ತು ದಕ್ಷಿಣ ಇರಾನ್ ಪ್ರದೇಶಗಳಲ್ಲಿ, ಹೊರ್ಮುಜ್ ಜಲಸಂಧಿ ಸಮೀಪವೂ ವ್ಯಾಪಿಸಿವೆ. ಇದಕ್ಕೆ ಪ್ರತಿಯಾಗಿ ಇರಾನ್, ಇಸ್ರೇಲ್ ಮತ್ತು ಗಲ್ಫ್ ಪ್ರದೇಶಗಳ ಕೆಲವು ಭಾಗಗಳ ಮೇಲೆ ದಾಳಿಗಳನ್ನು ನಡೆಸಿದೆ.

ಐಡಿಎಫ್ ಪ್ರಕಾರ, ಯುದ್ಧ ಆರಂಭವಾದ ನಂತರ ಇರಾನ್‌ನ ಮೇಲೆ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಆದರೆ ಅವುಗಳಲ್ಲಿ ಬಹುತೇಕವನ್ನು ರಕ್ಷಣಾ ವ್ಯವಸ್ಥೆಗಳು ಆಕಾಶದಲ್ಲೇ ತಡೆದಿವೆ. ಅಧಿಕಾರಿಗಳ ಪ್ರಕಾರ, ಸುಮಾರು ಶೇ. 92ರಷ್ಟು ಕ್ಷಿಪಣಿಗಳನ್ನು ಗುರಿಯನ್ನು ತಲುಪುವ ಮೊದಲೇ ತಡೆಗಟ್ಟಲಾಗಿದೆ.

ಇತ್ತೀಚಿನ ದಿನದಲ್ಲಿ, ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಗಳ ಸಂಖ್ಯೆ ಕಳೆದ ವಾರದ ಸರಾಸರಿಗಿಂತ ಹೆಚ್ಚಾಗಿದೆ. ಇರಾನ್‌ನಲ್ಲಿ, ಅಮೆರಿಕ-ಇಸ್ರೇಲಿ ದಾಳಿಯಲ್ಲಿ 81,000ಕ್ಕೂ ಹೆಚ್ಚು ನಾಗರಿಕ ಮನೆಗಳು ಮತ್ತು ಕಟ್ಟಡಗಳು ಹಾನಿಗೊಳಗಾಗಿವೆ. ಇಸ್ರೇಲ್‌ನಲ್ಲಿ, ಇರಾನಿನ ದಾಳಿಯಿಂದಾಗಿ 2,700 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು.