ಪ್ರಧಾನಿ ನರೇಂದ್ರ ಮೋದಿ ಏಕೆ ಪತ್ರಿಕಾಗೋಷ್ಠಿ ನಡೆಸಲ್ಲ? ಮಿಲಿಯನ್ ಡಾಲರ್ ಪ್ರಶ್ನೆಗೆ ಸಂಸದ ತೇಜಸ್ವಿ ಸೂರ್ಯ ಉತ್ತರ
Student Questions MP Tejasvi Surya: ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕಾರಾವಧಿಯಲ್ಲಿ ಇಲ್ಲಿಯವರೆಗಿನ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸದೇ ಇರುವುದಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾರಣ ನೀಡಿದ್ದಾರೆ. ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಸಂಸದ ತೇಜಸ್ವಿ ಸೂರ್ಯ (ಸಂಗ್ರಹ ಚಿತ್ರ) -
ಬೆಂಗಳೂರು, ಜೂ. 20: ಪ್ರಧಾನಿ ನರೇಂದ್ರ ಮೋದಿ (PM Modi) ತಮ್ಮ ಅಧಿಕಾರಾವಧಿಯಲ್ಲಿ ಇಲ್ಲಿಯವರೆಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸದೇ ಇರುವುದಕ್ಕೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (MP Tejasvi Surya) ವಿವರವಾದ ಉತ್ತರ ನೀಡಿದ್ದಾರೆ. ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೊ ಕ್ಲಿಪ್‌ನಲ್ಲಿ, ಬೆಂಗಳೂರಿನ ಕಾಲೇಜೊಂದರ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ತೇಜಸ್ವಿ ಸೂರ್ಯ ಉತ್ತರಿಸುತ್ತಿರುವುದು ಕಂಡು ಬಂದಿದೆ. “ನನ್ನ ಪ್ರಶ್ನೆ ಏನೆಂದರೆ, ನಾವು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ, ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ 10 ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದಿರುವ ಬಗ್ಗೆ ನಿಮ್ಮ ನಿಲುವೇನು?” ಎಂದು ವಿದ್ಯಾರ್ಥಿ ಪ್ರಶ್ನಿಸಿದ್ದಾನೆ.
ಇದನ್ನು ಅತ್ಯುತ್ತಮ ಪ್ರಶ್ನೆ ಎಂದ ತೇಜಸ್ವಿ ಸೂರ್ಯ, “ನಾನು ಹೇಳಿದಂತೆ, ಭಾಷಣಗಳ ಯುಗ ಈಗ ಹಿಂದೆ ಉಳಿದಿದೆ ಎಂದು ನಿಮಗೆ ಅನಿಸುವುದಿಲ್ಲವೇ? 24x7 ಸಾಮಾಜಿಕ ಜಾಲತಾಣಗಳ ಯುಗದಲ್ಲಿ ನಾನು ನನ್ನ ಮತದಾರರೊಂದಿಗೆ ನೇರವಾಗಿ ಮಾತನಾಡಬಹುದು. ಪತ್ರಿಕಾಗೋಷ್ಠಿಯ ಉದ್ದೇಶವೇನು ಎಂದರೆ, ಅಲ್ಲಿ ನಾಯಕ ಮತ್ತು ಜನರ ನಡುವೆ ಒಂದು ರೀತಿಯ ಅಡೆತಡೆ ಇರುತ್ತದೆ. ಈಗ ಅದು ಅನಗತ್ಯವಾಗಿದೆ” ಎಂದು ಹೇಳಿದ್ದಾರೆ. ʼʼಪ್ರಧಾನಿ ಸಂವಹನ ನಡೆಸುತ್ತಿಲ್ಲ ಎಂದಲ್ಲ. ಪ್ರಧಾನಿ ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ಸಂವಹನ ನಡೆಸುತ್ತಾರೆʼʼ ಎಂದು ಅವರು ವಾದಿಸಿದ್ದಾರೆ.
ಇಲ್ಲಿದೆ ವಿಡಿಯೊ:
Gen Z stumped cerelac baby Tejasvi Surya!
— Supriya Shrinate (@SupriyaShrinate) June 20, 2026
A simple question was asked: “Why is our Honorable PM not attending any Press conferences in over 10 years”
🤐🤐🤐🤐 pic.twitter.com/Dfx5FSC0lE
“ಕೆಲವು ದಿನಗಳಿಂದ, ಇಂತಹ ಹಲವು ಸಂವಾದಗಳಲ್ಲಿ ವಿದ್ಯಾರ್ಥಿಗಳೊಂದಿಗೆ ತೊಡಗಿಸಿಕೊಳ್ಳಲು ನನಗೆ ಅವಕಾಶ ಸಿಕ್ಕಿದೆ. ನಮ್ಮ ರಾಷ್ಟ್ರದ ಪ್ರಗತಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ನಮ್ಮ ಯುವಕರ ಉದ್ದೇಶ, ಮಹತ್ವಾಕಾಂಕ್ಷೆ ಮತ್ತು ಸಂಕಲ್ಪವು ನಿಸ್ಸಂದಿಗ್ಧವಾಗಿ ಎದ್ದು ಕಾಣುತ್ತದೆ” ಎಂದು ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಪ್ರಧಾನಿ ಯಾರೇ ಇರಲಿ, ಪತ್ರಿಕಾಗೋಷ್ಠಿ ನಡೆಯೋದೇ ಹೀಗೆ !
ಪ್ರಧಾನಿ ಮೋದಿ ಹಿಂದೆ ಪತ್ರಕರ್ತರಿಗೆ ಸಂದರ್ಶನಗಳನ್ನು ನೀಡಿದ್ದಾರೆ. ಆದರೆ 2014ರ ಮೇಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಪತ್ರಿಕಾಗೋಷ್ಠಿಗಳಿಂದ ದೂರವೇ ಉಳಿದಿದ್ದಾರೆ. ಅದಾಗ್ಯೂ ಅವರು 2019ರಲ್ಲಿ ನಡೆದ ಪತ್ರಿಕಾಗೋಷ್ಠಿ ನಡೆದಿದ್ದರು. ಆ ವೇಳೆ ಮೋದಿ ಅವರಿಗೆ ಕೇಳಲಾದ ಪ್ರಶ್ನೆಗಳನ್ನು ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉತ್ತರಿಸಿದ್ದರು. ಮೋದಿ ಅವರ ಕಡೆಗೆ ನೇರವಾಗಿ ಕೇಳಲಾದ ಪ್ರಶ್ನೆಗಳಿಗೆ ಅಮಿತ್ ಶಾ ಉತ್ತರಿಸಿ, ಅವುಗಳನ್ನು ತಮ್ಮತ್ತ ತಿರುಗಿಸಿಕೊಂಡಿದ್ದರು.
ಇತ್ತೀಚೆಗೆ ಮೇಯಲ್ಲಿ ಪ್ರಧಾನಿ ಮೋದಿ ನಾರ್ವೆಯ ಓಸ್ಲೋಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೂಡ ಈ ವಿಷಯ ಚರ್ಚೆಗೆ ಬಂದಿತ್ತು. ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸದೇ ಮೋದಿ ಹಿಂತಿರುಗಿದ್ದರು. ಇದನ್ನು ಅಲ್ಲಿನ ಪತ್ರಕರ್ತರು ಪ್ರಶ್ನಿಸಿದ್ದರು. ದಿನಪತ್ರಿಕೆ ʼಡಾಗ್ಸಾವಿಸೆನ್ʼನ ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸೆನ್ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
“ಭಾರತದ ಪ್ರಧಾನಿ ಮೋದಿ, ನೀವು ವಿಶ್ವದ ಅತ್ಯಂತ ಮುಕ್ತ ಪತ್ರಿಕಾ ಮಾಧ್ಯಮದಿಂದ ಕೆಲವು ಪ್ರಶ್ನೆಗಳನ್ನು ಏಕೆ ಕೇಳಬಾರದು?” ಎಂದು ಪ್ರಶ್ನಿಸಿದ್ದರು. ಅವರು ಪ್ರತಿಕ್ರಿಯಿಸದೆ ಅಲ್ಲಿಂದ ಹೊರನಡೆದಿದ್ದರು. ನಂತರ ಭಾರತೀಯ ಅಧಿಕಾರಿಗಳು, ಆ ಕಾರ್ಯಕ್ರಮವು ಮುಂಚಿತವಾಗಿ ನಿಗದಿಪಡಿಸಲಾದ ಜಂಟಿ ಮಾಧ್ಯಮ ಹೇಳಿಕೆ ಆಗಿದ್ದು, ಮುಕ್ತ ಪತ್ರಿಕಾಗೋಷ್ಠಿ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.