ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಪ್ರಧಾನಿ ಯಾರೇ ಇರಲಿ, ಪತ್ರಿಕಾಗೋಷ್ಠಿ ನಡೆಯೋದೇ ಹೀಗೆ !

ಮೋದಿಯವರು ಪ್ರಧಾನಿಯಾದಂದಿನಿಂದ ಇಲ್ಲಿ ತನಕ ಒಂದೇ ಒಂದು ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತಾಡದೇ ಇರುವುದನ್ನು ಅನೇಕರು ಆಕ್ಷೇಪಿಸಿದ್ದಾರೆ. ಅನೇಕರ ಕಣ್ಣಿಗೆ ಅದು ಒಂದು ‘ಮಹಾಪರಾಧ’ವಾಗಿ ಕಂಡಿದೆ. ಪತ್ರಕರ್ತರನ್ನು ಎದುರಿಸದ ಹೇಡಿ ಪ್ರಧಾನಿ ಎಂದೂ ಅನೇಕರು ಮೋದಿಯವರನ್ನು ಜರೆದಿದ್ದಾರೆ.

ಪ್ರಧಾನಿ ಯಾರೇ ಇರಲಿ, ಪತ್ರಿಕಾಗೋಷ್ಠಿ ನಡೆಯೋದೇ ಹೀಗೆ !

-

ಇದೇ ಅಂತರಂಗ ಸುದ್ದಿ

ಪತ್ರಿಕಾಗೋಷ್ಠಿಗಳು ‘ಫಿಕ್ಸ್’ ಆಗಿರುತ್ತವೆ ಎಂದರೆ ಅದು ಪ್ರಜಾಪ್ರಭುತ್ವದ ಅಣಕ ಎಂದು ಭಾವಿಸಬೇಕಿಲ್ಲ. ಬದಲಿಗೆ ಇದು ದೇಶದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯು ಯಾವುದೇ ಪ್ರಮಾದ ಮಾಡದಂತೆ ನೋಡಿಕೊಳ್ಳುವ ಒಂದು ಸುರಕ್ಷತಾ ಕವಚವಷ್ಟೇ. ‘ಸ್ಲಿಪ್ ಆಫ್ ದಿ ಟಂಗ್’ ತಪ್ಪಿಸಲು ಮಾಧ್ಯಮ ಸಲಹೆಗಾರರು ಪ್ರತಿಯೊಂದು ನಡೆಯನ್ನು ಮೊದಲೇ ಪ್ಲಾನ್ ಮಾಡಿರುತ್ತಾರೆ. ಇದು ಪ್ರಧಾನಿ‌ ಯವರ ಬೌದ್ಧಿಕ ಸಾಮರ್ಥ್ಯದ ಪ್ರಶ್ನೆಯಲ್ಲ, ಬದಲಿಗೆ ಸಾಂಸ್ಥಿಕ ಎಚ್ಚರಿಕೆಯ ಭಾಗ.

ಮೊನ್ನೆಯ ಗುರುವಾರದ ನನ್ನ ‘ನೂರೆಂಟು ವಿಶ್ವ’ ಅಂಕಣದಲ್ಲಿ ‘ಪ್ರಧಾನಿಯಾದವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಲೇಬೇಕಾ?’ ಎಂಬ ಶೀರ್ಷಿಕೆಯಲ್ಲಿ ಬರೆದಿದ್ದನ್ನು ಫೇಸ್‌ಬುಕ್ʼನಲ್ಲೂ ಷೇರ್ ಮಾಡಿದ್ದೆ. ಅದಕ್ಕೆ ಆರು ನೂರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ.

ಮೋದಿಯವರು ಪ್ರಧಾನಿಯಾದಂದಿನಿಂದ ಇಲ್ಲಿ ತನಕ ಒಂದೇ ಒಂದು ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತಾಡದೇ ಇರುವುದನ್ನು ಅನೇಕರು ಆಕ್ಷೇಪಿಸಿದ್ದಾರೆ. ಅನೇಕರ ಕಣ್ಣಿಗೆ ಅದು ಒಂದು ‘ಮಹಾಪರಾಧ’ವಾಗಿ ಕಂಡಿದೆ. ಪತ್ರಕರ್ತರನ್ನು ಎದುರಿಸದ ಹೇಡಿ ಪ್ರಧಾನಿ ಎಂದೂ ಅನೇಕರು ಮೋದಿಯವರನ್ನು ಜರೆದಿದ್ದಾರೆ.

ಪತ್ರಿಕಾಗೋಷ್ಠಿಯನು ಕರೆಯದ ಮೋದಿಯವರನ್ನು ಸಮರ್ಥಿಸಿದ್ದೇನೆ ಎಂದು ಅನೇಕರು ನನ್ನನ್ನೂ ಕಟುವಾಗಿ ಟೀಕಿಸಿದ್ದಾರೆ. ನನ್ನ ಮೂಗಿನ ನೇರಕ್ಕೆ ನಡೆಯದವರು ‘ವಕ್ರ’ ಎಂದೇ ಅನೇಕರು ಭಾವಿಸುತ್ತಾರೆ. ಅದು ಅವರ ಜಾಯಮಾನ. ಅಂಥವರಿಗೆ ವಸ್ತುಸ್ಥಿತಿ, ವಾಸ್ತವ ಕ್ಕಿಂತ ತಮ್ಮ ವಿತ್ತಂಡವಾದವೇ ಮುಖ್ಯವಾಗುತ್ತದೆ. ಇರಲಿ. ನಾನು ರಾಷ್ಟ್ರಪತಿ ಡಾ. ಅಬ್ದುಲ್ ಕಾಲಂ ಅವರ ಜತೆ ನಾಲ್ಕು ದೇಶಗಳಿಗೆ, ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಎರಡು ದೇಶಗಳಿಗೆ, ಡಾ. ಮನಮೋಹನ ಸಿಂಗ್ ಅವರೊಂದಿಗೆ ಎರಡು ಬಾರಿ ಆರು ದೇಶಗಳಿಗೆ ಮತ್ತು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರೊಂದಿಗೆ ನಾಲ್ಕು ದೇಶಗಳಿಗೆ ಪ್ರವಾಸ ಮಾಡಿದ್ದೇನೆ.

ಇದನ್ನೂ ಓದಿ: Vishweshwar Bhat Column: ಎಲ್ಲ ದೇಶಗಳಲ್ಲೂ ಅಲ್ಪಸಂಖ್ಯಾತರೇಕೆ ಉಳಿದವರ ಮೇಲೆ ಸವಾರಿ ಮಾಡುತ್ತಾರೆ ?

ನಮ್ಮ ದೇಶದಲ್ಲಿ ಮತ್ತು ವಿದೇಶಗಳಲ್ಲಿ ನಮ್ಮ ರಾಷ್ಟ್ರಪತಿ ಮತ್ತು ಪ್ರಧಾನಿಗಳು ಪತ್ರಕರ್ತ ರೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬುದಕ್ಕೆ ನಾನು ಪ್ರತ್ಯಕ್ಷದರ್ಶಿಯೂ ಹೌದು. ಪ್ರಧಾನ ಮಂತ್ರಿಗಳು ಯಾರೇ ಆಗಿರಲಿ, ಅವರು ಕರೆಯುವ ಪತ್ರಿಕಾಗೋಷ್ಠಿ ಮೊದಲೇ ‘ಫಿಕ್ಸ್’ ಆಗಿರುತ್ತವೆ ಎಂಬುದು ಅನೇಕರಿಗೆ ಗೊತ್ತಿಲ್ಲ ಎಂಬುದು ನನ್ನ ಫೇಸ್‌ಬುಕ್ ಪೋಸ್ಟಿಗೆ ಬಂದ ಕಾಮೆಂಟ್ಸ್ ನೋಡಿ ನನಗೆ ಮನದಟ್ಟಾಯಿತು.

ಪ್ರಧಾನಮಂತ್ರಿಗಳ ಪತ್ರಿಕಾಗೋಷ್ಠಿ ಎಂಬುದು ಕೇವಲ ಒಂದು ಪ್ರಶ್ನೋತ್ತರ ಕಲಾಪ ಅಲ್ಲ, ಅದು ಒಂದು ಸುಸಜ್ಜಿತ ‘ಸ್ಟೇಜ್ ಮ್ಯಾನೇಜ್ಡ್ ಇವೆಂಟ್’ ಎಂಬ ಸರಳ ಸತ್ಯ ಇನ್ನೂ ಅನೇಕರ ಅರಿವಿಗೆ ಬಾರದಿರುವುದು ಆಶ್ಚರ್ಯವೇ ಸರಿ. ಜವಾಹರಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ವಾಜಪೇಯಿ, ನರಸಿಂಹರಾವ್ ಮತ್ತು ಡಾ.ಮನಮೋಹನ್ ಸಿಂಗ್ ಪತ್ರಿಕಾಗೋಷ್ಠಿಗಳೂ ಇದಕ್ಕೆ ಹೊರತಾಗಿರಲಿಲ್ಲ.

ಪ್ರಧಾನಿಯವರ ಪತ್ರಿಕಾಗೋಷ್ಠಿಯ ಪ್ರಮುಖ ಸೂತ್ರದಾರರು ಅವರ ಮಾಧ್ಯಮ ಸಲಹೆಗಾರರು ಅರ್ಥಾತ್ ಮಾಧ್ಯಮ ಕಾರ್ಯದರ್ಶಿ. ಪತ್ರಿಕಾಗೋಷ್ಠಿಯನ್ನು ಯಾವಾಗ ಕರೆಯಬೇಕು, ಅದಕ್ಕೆ ವಾತಾವರಣ ಸೂಕ್ತವಾಗಿದೆಯಾ, ಗೋಷ್ಠಿಗೆ ಯಾವ ಪತ್ರಿಕೆಯನ್ನು ಆಹ್ವಾನಿಸಬೇಕು, ಆ ಪತ್ರಿಕೆಯ ಯಾವ ವರದಿಗಾರರನ್ನು ಕರೆಯಬೇಕು, ಅವರು ಯಾವ ಪ್ರಶ್ನೆಗಳನ್ನು ಕೇಳಬೇಕು, ಯಾವ ಪ್ರಶ್ನೆಗಳನ್ನು ಕೇಳಲೇಬಾರದು, ಗೋಷ್ಠಿಯಲ್ಲಿ ಎಷ್ಟು ಮಂದಿಗೆ ಪ್ರಶ್ನೆ ಕೇಳಲು ಅವಕಾಶ ನೀಡಬೇಕು, ಆಸನ ವ್ಯವಸ್ಥೆ ಹೇಗಿರಬೇಕು... ಮುಂತಾದ ಎಲ್ಲ ಸಂಗತಿಗಳ ಬಗ್ಗೆ ಪ್ರಧಾನಿಯವರ ಮಾಧ್ಯಮ ಕಾರ್ಯದರ್ಶಿ/ಸಲಹೆಗಾರರದೇ ಅಂತಿಮ ತೀರ್ಮಾನ.

ಮಾಧ್ಯಮ ಕಾರ್ಯದರ್ಶಿಗಳು ಸಾರ್ವಜನಿಕವಾಗಿ ಕೈಗೊಳ್ಳುವ ಅತಿ ದೊಡ್ಡ ಶೋ ಅಂದ್ರೆ ಪ್ರಧಾನಿಯವರ ಪತ್ರಿಕಾಗೋಷ್ಠಿ. ಹೀಗಾಗಿ ಇದಕ್ಕೆ ಅವರು ಎಲ್ಲಿಲ್ಲದ ಮಹತ್ವ ನೀಡುತ್ತಾರೆ. ಅಪ್ಪಿತಪ್ಪಿಯೂ ಸಣ್ಣ ಲೋಪವಾಗದಂತೆ ಎಚ್ಚರ ವಹಿಸುತ್ತಾರೆ.

Screenshot_2

ಸರಕಾರದ ಬಗ್ಗೆ ಮೃದು ಧೋರಣೆ ಹೊಂದಿರುವ ಅಥವಾ ತೀರಾ ಆಕ್ರಮಣಕಾರಿಯಲ್ಲದ ವರದಿಗಾರರಿಗೆ ಆದ್ಯತೆ. ಪತ್ರಿಕಾಗೋಷ್ಠಿ ‘ಫಿಕ್ಸ್’ ಆಗಿರುತ್ತದೆ ಅಂದ್ರೆ ಎಲ್ಲ ಪ್ರಶ್ನೆಗಳೂ ಮೊದಲೇ ಸಿದ್ಧವಾಗಿರುತ್ತವೆ ಎನ್ನುವುದಕ್ಕಿಂತ ಯಾರು ಯಾವ ಪ್ರಶ್ನೆ ಕೇಳಬಹುದು ಎಂಬ ಮುನ್ಸೂಚನೆ ಮಾಧ್ಯಮ ಸಲಹೆಗಾರರಿಗೆ ಇರುತ್ತದೆ.

ಕೆಲವು ಸಂದರ್ಭಗಳಲ್ಲಿ, ಮಾಧ್ಯಮ ಸಲಹೆಗಾರರು ಆಪ್ತ ಪತ್ರಕರ್ತರಿಗೆ ‘ನೀವು ಈ ವಿಷಯದ ಬಗ್ಗೆ ಪ್ರಶ್ನೆ ಕೇಳಿ’ ಎಂದು ಮೊದಲೇ ಸೂಚನೆ ನೀಡಿರುತ್ತಾರೆ. ಇದರಿಂದ ಪ್ರಧಾನಿ ತಾನು ಹೇಳಬೇಕೆಂದಿರುವ ವಿಷಯವನ್ನು ಅಧಿಕೃತವಾಗಿ ಹೇಳಲು ಸಹಾಯ‌ ವಾಗುತ್ತದೆ. ಒಂದು ವೇಳೆ ಕಠಿಣ ಅಥವಾ ಅನಿರೀಕ್ಷಿತ ಪ್ರಶ್ನೆ ಎದುರಾದರೆ ಅದನ್ನು ಹೇಗೆ ದಾಟಿಸಬೇಕು ಅಥವಾ ಹಾಸ್ಯ ಚಟಾಕಿಯ ಮೂಲಕ ಹೇಗೆ ಹಾದಿ ತಪ್ಪಿಸಬೇಕು ಎಂಬ ತರಬೇತಿ (Briefing) ಪ್ರಧಾನಿಯವರಿಗೆ ಮೊದಲೇ ನೀಡಲಾಗಿರುತ್ತದೆ.

ಪತ್ರಿಕಾಗೋಷ್ಠಿಯು ಒಂದು ವೇದಿಕೆಯ ಪ್ರದರ್ಶನದಂತೆ ಇರುತ್ತದೆ. ಸೂತ್ರಧಾರನ ಅಣತಿ ಯಂತೆ ಎಲ್ಲವೂ ಕರಾರುವಾಕ್ಕಾಗಿ ನಡೆಯುತ್ತದೆ. ಎಷ್ಟು ಜನರಿಗೆ ಪ್ರಶ್ನೆ ಕೇಳಲು ಬಿಡಬೇಕು, ಎಷ್ಟು ಸಮಯವನ್ನು ವ್ಯಯಿಸಬೇಕು ಎಂಬುದು ಮಾಧ್ಯಮ ಸಲಹೆಗಾರರ ಸನ್ನೆಗಳ ಮೇಲೆ ನಡೆಯುತ್ತದೆ. ಗೋಷ್ಠಿ ಹಳಿ ತಪ್ಪುತ್ತಿದೆ ಎಂದೆನಿಸಿದಾಗ ‘ಕಡೆಯ ಪ್ರಶ್ನೆ’ ಎಂದು ಘೋಷಿಸಿ ಸಭೆಯನ್ನು ಮುಕ್ತಾಯಗೊಳಿಸುವ ಅಧಿಕಾರ ಸಲಹೆಗಾರರಿಗೆ ಇರುತ್ತದೆ.

ಸಾಮಾನ್ಯವಾಗಿ ಪ್ರಧಾನಿಯವರ ಮಾಧ್ಯಮ ಸಲಹೆಗಾರರಾಗಿರುವವರು ದಿಲ್ಲಿಯ ಪ್ರತಿಷ್ಠಿತ ಹಿರಿಯ ಪತ್ರಕರ್ತರೇ ಆಗಿರುತ್ತಾರೆ. ಅವರು ದಿಲ್ಲಿಯ ಮತ್ತು ದೇಶದ ಪ್ರಮುಖ ಪತ್ರಿಕೆಗಳ ಸಂಪಾದಕರು, ಮುಖ್ಯ ವರದಿಗಾರರ ಜತೆ ಉತ್ತಮ ಸಂಬಂಧ ಹೊಂದಿದವರಾಗಿರುತ್ತಾರೆ. ಪ್ರಧಾನಿ ಮಾಧ್ಯಮ ಸಲಹೆಗಾರ ಹುದ್ದೆಗೆ ನಿಯುಕ್ತರಾಗುತ್ತಿದ್ದಂತೆ ಎಲ್ಲ ಪತ್ರಕರ್ತರೂ ಅವರ ಸಾಮೀಪ್ಯ, ಒಡನಾಟ, ಸಂಪರ್ಕ ಹೊಂದಲು ಬಯಸುತ್ತಾರೆ.

ಪ್ರಧಾನಿ ಮತ್ತು ಮಾಧ್ಯಮ ಮಧ್ಯೆ ಇವರು ಸಂಪರ್ಕ ಸೇತುವೆಯಾಗಿರುತ್ತಾರೆ. ಪ್ರಧಾನಿ ಯವರ ಜತೆ ವಿದೇಶ ಪ್ರವಾಸಕ್ಕೆ ಯಾರನ್ನು ಕರೆದುಕೊಂಡು ಹೋಗಬೇಕು ಎಂಬುದರಿಂದ ಹಿಡಿದು ಸರಕಾರದ ದೊಡ್ಡ-ಸಣ್ಣ ಕೆಲಸಗಳಿಗೂ ಪತ್ರಕರ್ತರಿಗೆ ಇವರೇ ಮೊದಲ ಮತ್ತು ಕೊನೆಯ ಆಸರೆ.

ಹೀಗಾಗಿ ಮಾಲೀಕರು, ಸಂಪಾದಕರು ಮತ್ತು ಪತ್ರಕರ್ತರ ವಲಯದಲ್ಲಿ ಪ್ರಧಾನಿ ಮಾಧ್ಯಮ ಸಲಹೆಗಾರರು ಅತ್ಯಂತ ಪ್ರಭಾವಿ ವ್ಯಕ್ತಿ. ಇವರನ್ನು ಯಾರೂ ಎದುರು ಹಾಕಿ ಕೊಳ್ಳುವುದಿಲ್ಲ. ಹೀಗಿರುವಾಗ, ಇವರೇ ಸೂತ್ರಧಾರರಾಗಿರುವ ಪ್ರಧಾನಿಯವರ ಪತ್ರಿಕಾಗೋಷ್ಠಿ ಹೇಗೆ ನಡೆಯಬಹುದು ಎಂಬುದನ್ನು ಊಹಿಸಿ.

ಇಂದಿರಾ ಗಾಂಧಿ ಮತ್ತು ರಾಜೀವ ಗಾಂಽಯವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಎಚ್.ವೈ. ಶಾರದಾ ಪ್ರಸಾದ ಅವರು ಇಂಥ ಪತ್ರಿಕಾಗೋಷ್ಠಿ ನಡೆಸುವುದರಲ್ಲಿ ನಿಸ್ಸೀಮ ರಾಗಿದ್ದರು. ಅವರು ದಿಲ್ಲಿಯ ಎಲ್ಲ ಪತ್ರಿಕೆಗಳ ಸಂಪಾದಕರು ಮತ್ತು ಮುಖ್ಯ ವರದಿಗಾರರ ಜತೆ ಉತ್ತಮ ಸಂಬಂಧ ಹೊಂದಿದ್ದರು.

ಇಂದಿರಾ ಪತ್ರಿಕಾಗೋಷ್ಠಿಗೆ ಅವರು ಬಯಸಿದ ವರದಿಗಾರರನ್ನೇ ಸಂಪಾದಕರು ಕಳಿಸಿ ಕೊಡುತ್ತಿದ್ದರು. ಹೀಗೆ ಬರುವ ವರದಿಗಾರರು ಶಾರದಾ ಪ್ರಸಾದರು ಬಯಸುವ ಪ್ರಶ್ನೆಗಳನ್ನೇ ಕೇಳುತ್ತಿದ್ದರು. ಕೆಲವು ಸಲ ಶಾರದಾ ಪ್ರಸಾದರೇ ಇಂಥದೇ ಪ್ರಶ್ನೆಗಳನ್ನು ಕೇಳುವಂತೆ ಸೂಚಿಸುತ್ತಿದ್ದರು. ಇದೇ ‘ಮಹಾಪ್ರಸಾದ’ ಎಂದು ಭಾವಿಸುತ್ತಿದ್ದ ಪತ್ರಕರ್ತರು, ಅವರು ಬರೆದುಕೊಟ್ಟ ಪ್ರಶ್ನೆಗಳನ್ನೇ ಕೇಳುತ್ತಿದ್ದರು.

ಪ್ರಧಾನಿಯವರ ಪತ್ರಿಕಾಗೋಷ್ಠಿಯ ಯಶಸ್ಸಿನ ಸಿಂಹಪಾಲು ಹೋಗುವುದು ಅವರ ಮಾಧ್ಯಮ ಕಾರ್ಯದರ್ಶಿಗೆ. ಸಣ್ಣ ಯಡವಟ್ಟಾದರೂ ತಲೆ ಹೋಗುವುದೂ ಅವರದ್ದೇ. ಯಾವನೋ ಒಬ್ಬ, ಅಸಡ್ಡಾಳ ಅಥವಾ ಕಿರಿಕ್ಕು ಪ್ರಶ್ನೆ ಕೇಳಿ ಬಿಟ್ಟರೆ, ಪ್ರಧಾನಿ ಮುಂದೆ ತಲೆ ತಗ್ಗಿಸಬೇಕಾದವನು ಇದೇ ಮಾಧ್ಯಮ ಕಾರ್ಯದರ್ಶಿಯೇ.

ಹೀಗಾಗಿ ಪ್ರಧಾನಿಯವರ ಪತ್ರಿಕಾಗೋಷ್ಠಿಗೆ ಒಂದೆರಡು ತಿಂಗಳ ಮೊದಲೇ ಅವರು ಸಿದ್ಧತೆ ಆರಂಭಿಸುತ್ತಾರೆ. ಇಡೀ ಪತ್ರಿಕಾಗೋಷ್ಠಿ ತನ್ನ ಮೂಗಿನ ನೇರಕ್ಕೆ ನಡೆಯುವಂತೆ ಅತ್ಯಂತ ಕಾರಾರುವಾಕಾಗಿ ಪ್ಲಾನ್ ಮಾಡಿರುತ್ತಾರೆ. ಆ ಹುzಯಲ್ಲಿ ಯಾರೇ ಇರಲಿ, ಅವರು ಕಾರ್ಯ ನಿರ್ವಹಿಸುವುದೇ ಹಾಗೆ. ಹುzಯ ರೀತಿ-ರಿವಾಜುಗಳೂ ಹಾಗೆಯೇ.

ಯಾವ ಪತ್ರಕರ್ತ ಯಾವ ಪ್ರಶ್ನೆ ಕೇಳುತ್ತಾನೆ, ಅದಕ್ಕೆ ಯಾವ ಉತ್ತರ ನೀಡಬೇಕು, ಮುಂದಿನ ಪ್ರಶ್ನೆ ಸರದಿ ಯಾರದ್ದು... ಹೀಗೆ ಎಲ್ಲವೂ ಒಂದು ಶಿಸ್ತುಬದ್ಧ ರನ್ ‘ಆರ್ಡರ್’ ನಂತೆ ನಡೆಯುತ್ತದೆ. ಪತ್ರಿಕಾಗೋಷ್ಠಿಗಳು ‘ಫಿಕ್ಸ್’ ಆಗಿರುತ್ತವೆ ಎಂದರೆ ಅದು ಪ್ರಜಾಪ್ರ ಭುತ್ವದ ಅಣಕ ಎಂದು ಭಾವಿಸಬೇಕಿಲ್ಲ.

ಬದಲಿಗೆ ಇದು ದೇಶದ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯು ಯಾವುದೇ ಪ್ರಮಾದ ಮಾಡದಂತೆ ನೋಡಿಕೊಳ್ಳುವ ಒಂದು ಸುರಕ್ಷತಾ ಕವಚವಷ್ಟೇ. ದೇಶದ ಪ್ರಧಾನ ಮಂತ್ರಿಯವರು ನೀಡುವ ಒಂದು ಸಣ್ಣ ತಪ್ಪು ಹೇಳಿಕೆ ಅಥವಾ ಒಂದು ಅಸಂಬದ್ಧ ಉತ್ತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪರಿಣಾಮ ಬೀರಬಹುದು.

ಷೇರು ಮಾರುಕಟ್ಟೆಯಲ್ಲಿ ಏರುಪೇರಾಗಬಹುದು ಅಥವಾ ವಿದೇಶಿ ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ‘ಸ್ಲಿಪ್ ಆಫ್ ದಿ ಟಂಗ್’ ತಪ್ಪಿಸಲು ಮಾಧ್ಯಮ ಸಲಹೆಗಾರರು ಪ್ರತಿಯೊಂದು ನಡೆಯನ್ನು ಮೊದಲೇ ಪ್ಲಾನ್ ಮಾಡಿರುತ್ತಾರೆ. ಇದು ಪ್ರಧಾನಿಯವರ ಬೌದ್ಧಿಕ ಸಾಮರ್ಥ್ಯದ‌ ಪ್ರಶ್ನೆಯಲ್ಲ, ಬದಲಿಗೆ ಸಾಂಸ್ಥಿಕ ಎಚ್ಚರಿಕೆಯ ಭಾಗ. ಪ್ರಧಾನಿಯವರು ಮುಕ್ತವಾಗಿ ಎಲ್ಲ ಪ್ರಶ್ನೆಗಳಿಗೆ ಸಮರ್ಥ ಉತ್ತರ ನೀಡಿದರು ಎಂಬ ಭಾವನೆ ಬರುವಂತೆ ಮಾಡುವುದೇ ಈ ಗೋಷ್ಠಿಯ ಉದ್ದೇಶ.

ಇದು ಒಂದು ರೀತಿಯ ‘ಪರ್ಸೆಪ್ಷನ್ ಮ್ಯಾನೇಜ್ಮೆಂಟ್ ಇವೆಂಟ್’ (ಅಭಿಪ್ರಾಯ ನಿರ್ವಹಣೆ ಕಾರ್ಯಕ್ರಮ). ಪತ್ರಿಕಾಗೋಷ್ಠಿಯ ಅಸಲಿ ಯಶಸ್ಸು ಇರುವುದೇ ಇಲ್ಲಿ. ಎಲ್ಲವೂ ಮೊದಲೇ ನಿರ್ಧಾರವಾಗಿದ್ದರೂ, ಅದು ಪತ್ರಿಕಾಗೋಷ್ಠಿಯ ಸ್ಥಳದಲ್ಲಿ ಅತ್ಯಂತ ಸಹಜವಾಗಿ ನಡೆಯುತ್ತಿದೆ ಎಂದು ಜನರಿಗೆ ಅನಿಸಬೇಕು. ಗೋಷ್ಠಿಗೆ ನೈಜತೆ ತರಲು ಒಂದೆರಡು ಕಟುವಾದ ಪ್ರಶ್ನೆ ಕೇಳುವ ಪತ್ರಕರ್ತರಿಗೂ ಅವಕಾಶ ನೀಡಲಾಗುತ್ತದೆ. ಆದರೆ, ಆ ಪ್ರಶ್ನೆಗಳಿಗೆ ಉತ್ತರವನ್ನು ಮೊದಲೇ ಸಿದ್ಧಪಡಿಸಿಕೊಳ್ಳಲಾಗಿರುತ್ತದೆ.

ಪ್ರಧಾನಿಯವರು ನಗುತ್ತಾ ಅಥವಾ ಚಾತುರ್ಯದಿಂದ ಆ ಪ್ರಶ್ನೆಯನ್ನು ಎದುರಿಸಿದಾಗ, ನೋಡುವ ಜನರಿಗೆ ‘ನಮ್ಮ ಪ್ರಧಾನಿ ಎಷ್ಟು ಸಮರ್ಥವಾಗಿ ಉತ್ತರಿಸಿದರು’ ಎಂಬ ಭಾವನೆ ಮೂಡುತ್ತದೆ. ಅಂತಿಮವಾಗಿ, ಈ ಇಡೀ ‘ಫಿಕ್ಸಿಂಗ್’ ಹಿಂದಿರುವ ಗುರಿ ಒಂದೇ - ‘ನಾಯಕನ ವರ್ಚಸ್ಸನ್ನು ಹೆಚ್ಚಿಸುವುದು.’ ಪ್ರಧಾನಿಯವರು ಯಾವುದೇ ಪೇಚಿಗೆ ಸಿಲುಕದೇ, ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ ಮತ್ತು ದೇಶದ ಸಮಸ್ಯೆಗಳಿಗೆ ಅವರ ಬಳಿ ಉತ್ತರವಿದೆ ಎಂಬ ಸಂದೇಶವನ್ನು ಜನಸಾಮಾನ್ಯರಿಗೆ ರವಾನಿಸುವುದೇ ಈ ವ್ಯವಸ್ಥಿತ ನಾಟಕದ ಪರಮ ಉದ್ದೇಶ. ಇದು ಕೇವಲ ಒಂದು ಸಂವಾದವಲ್ಲ, ಅದು ಅತ್ಯಂತ ನೈಪುಣ್ಯದಿಂದ ರೂಪಿಸಲಾದ ಒಂದು ‘ಪಬ್ಲಿಕ್ ರಿಲೇಶನ್ಸ್’ (PR) ತಂತ್ರ.

ಡಾ.ಮನಮೋಹನ ಸಿಂಗ್ ವಿಮಾನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡು ತ್ತಿದ್ದರು. ಅದಕ್ಕೂ ಒಂದು ಗಂಟೆ ಮೊದಲು ನಾವು ಕೇಳುವ ಪ್ರಶ್ನೆಗಳನ್ನು ಬರೆದು, ಅವರ ಮಾಧ್ಯಮ ಕಾರ್ಯದರ್ಶಿ (ಪಂಕಜ್ ಪಚೌರಿ)ಯವರಿಗೆ ಕೊಡಬೇಕಿತ್ತು. ಈ ಪ್ರಶ್ನೆಗಳನ್ನು ಅವರು ಪ್ರಧಾನಿಯವರಿಗೆ ತೋರಿಸಿ ಅವರ ಸಮ್ಮತಿ ಪಡೆಯುತ್ತಿದ್ದರು. ಅನಂತರವೇ ನಾವು ಆ ಪ್ರಶ್ನೆ ಕೇಳಬಹುದಿತ್ತು. ಕಾಗದದಲ್ಲಿ ಬರೆದುಕೊಟ್ಟ ಪ್ರಶ್ನೆ ಹೊರತಾಗಿ ಮತ್ತೇನನ್ನೂ ಕೇಳುವಂತಿರಲಿಲ್ಲ. (ಅಪ್ಪಿತಪ್ಪಿ ಕೇಳಿಬಿಟ್ಟರೆ, ಅಂಥವರನ್ನು ಮಾಧ್ಯಮ ಕಾರ್ಯದರ್ಶಿ ನಂತರ ವಿಚಾರಿಸಿಕೊಳ್ಳುತ್ತಿದ್ದರು.

ಅಂಥವರು ಬ್ಲ್ಯಾಕ್ ಲಿಸ್ಟ್ ಗೆ ಸೇರುತ್ತಿದ್ದರು ಬಿಡಿ.) ಹೀಗಾಗಿ ವಿಮಾನದಲ್ಲಿ ನಡೆಯುವ ಪತ್ರಿಕಾಗೋಷ್ಠಿಯೂ ಭಿನ್ನವಾಗೇನೂ ಇರುತ್ತಿರಲಿಲ್ಲ. ವಾಜಪೇಯಿ ಅವರೂ ಇದಕ್ಕೆ ಹೊರತಾಗಿರಲಿಲ್ಲ. ಅವರು ಕರೆಯುತ್ತಿದ್ದ ಪತ್ರಿಕಾಗೋಷ್ಠಿಗಳೂ ಪೂರ್ವ ನಿರ್ಧರಿತ ವಾಗಿಯೇ ಇರುತ್ತಿದ್ದವು.

ಡಾ.ಕಲಾಂ ಅವರ ಜತೆ ವಿಮಾನದಲ್ಲಿ ಮುಕ್ತವಾಗಿ ಮಾತಾಡಬಹುದಿತ್ತು. ಆದರೆ, ‘ಯಾವು ದನ್ನೂ ವರದಿ ಮಾಡಬಾರದು’ ಎಂದು ಮೊದಲೇ ಅವರ ಅಧಿಕಾರಿಗಳು ಕಟ್ಟುನಿಟ್ಟಾಗಿ ಹೇಳಿರುತ್ತಿದ್ದರು. ಡಾ.ಕಲಾಂ ಜತೆ ಯಾವುದೇ ರಾಜಕೀಯ, ವಿವಾದದ ವಿಷಯಗಳನ್ನು ಪ್ರಸ್ತಾಪಿಸಕೂಡದು ಎಂದು ಮೊದಲೇ ನಮಗೆ ಸೂಚನೆ ನೀಡಿರುತ್ತಿದ್ದರು.

ಡಾ.ಕಲಾಂ ಶಾಲಾ-ಕಾಲೇಜುಗಳಿಗೆ ಹೋದಾಗ ವಿದ್ಯಾರ್ಥಿಗಳೊಂದಿಗೆ ನಡೆಸುತ್ತಿದ್ದ ಸಂವಾದ ಬಹುಜನಪ್ರಿಯವಾಗಿತ್ತು. ಆಗಲೂ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳು ಮೊದಲೇ ‘ಫಿಕ್ಸ್’ ಆಗಿರುತ್ತಿದ್ದವು ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.

ದೇಶದ ಮಹಾಜನರ ಒತ್ತಾಯಕ್ಕೆ ಮಣಿದು, ನಾಳೆ ಪ್ರಧಾನಿ ಮೋದಿಯವರೇನಾದರೂ ಪತ್ರಿಕಾಗೋಷ್ಠಿ ಕರೆದರೆನ್ನಿ, (ಅವರು ಎಂದೂ ಹಾಗೆ ಮಾಡುವುದಿಲ್ಲ ಎನ್ನುವುದು ಬೇರೆ ಮಾತು) ಅದು ಸಹ ಇವೆಲ್ಲಕ್ಕಿಂತ ಭಿನ್ನವಾಗಿರುವುದಿಲ್ಲ. ಹೆಚ್ಚೆಂದರೆ ಹಿಂದಿನ ವುಗಳಿಗಿಂತ ಹೆಚ್ಚು ‘ಹೈಟೆಕ್’ ಆಗಿರಬಹುದಷ್ಟೇ. ಆಗಲೂ ಎಲ್ಲವೂ ಮೊದಲೇ ಫಿಕ್ಸ್ ಆಗಿರುತ್ತವೆ.

ನನ್ನ ಪ್ರಶ್ನೆಗಳಿಂದ ಮೋದಿಯವರನ್ನು ಮಣಿಸುತ್ತೇನೆ ಎಂದು ಬಡಾಯಿ ಕೊಚ್ಚಿಕೊಂಡು ಬಂದಿದ್ದ ಪತ್ರಕರ್ತನಿಗೆ ಅಸಲಿಗೆ ಪ್ರಶ್ನೆ ಕೇಳುವ ಅವಕಾಶವೇ ಸಿಗದೇ ಹೋಗಬಹುದು ಅಥವಾ ಸಿಕ್ಕರೂ ಆ ಪ್ರಶ್ನೆ ಯಾರಿಗೂ ಕೇಳಿಸದೇ ಇರಬಹುದು. ಆ ‘ಬಡಾಯಿ’ ಕೊಚ್ಚಿಕೊಳ್ಳುವ ಪತ್ರಕರ್ತ ಪ್ರಶ್ನೆ ಕೇಳಲು ಎದ್ದಾಗ ಅವನ ಕೈಯಲ್ಲಿರುವ ಮೈಕ್ ಎಷ್ಟು ಸೆಕೆಂಡ್ ಚಾಲನೆಯಲ್ಲಿರಬೇಕು ಎಂಬುದು ಕಂಟ್ರೋಲ್ ರೂಮ್ ನಿರ್ಧರಿಸುತ್ತದೆ.

ಪ್ರಶ್ನೆ ಅತಿರೇಕಕ್ಕೆ ಹೋಗುತ್ತಿದೆ ಅಥವಾ ಅನಪೇಕ್ಷಿತ ತಿರುವು ಪಡೆಯುತ್ತಿದೆ ಎಂದ ತಕ್ಷಣ ಮೈಕ್ ಸಂಪರ್ಕ ಕಡಿತಗೊಳಿಸಬಹುದು. ಗದ್ದಲದ ನೆಪವೊಡ್ಡಿ ಅಥವಾ ‘ತಾಂತ್ರಿಕ ದೋಷ’ದ ಕಾರಣ ನೀಡಿ ಆ ಪ್ರಶ್ನೆಯ ತೀಕ್ಷ್ಣತೆಯನ್ನೇ ಅಡಗಿಸಿಬಿಡಬಹುದು. ಈ ರೀತಿಯ ಪ್ರಸಂಗಗಳು ಹಿಂದಿನ ಪ್ರಧಾನಿಗಳ ಪತ್ರಿಕಾಗೋಷ್ಠಿಗಳಲ್ಲೂ ನಡೆದಿವೆ.

ಮೋದಿಯವರ ಪತ್ರಿಕಾಗೋಷ್ಠಿಯ ಸೀಟಿಂಗ್ ಪ್ಲಾನ್ ಸುಮ್ಮನೆ ಮಾಡಿರುವುದಿಲ್ಲ. ಪ್ರಧಾನಿಯವರ ಕಣ್ಣಿಗೆ ಯಾರು ಸುಲಭವಾಗಿ ಬೀಳಬೇಕು ಮತ್ತು ಯಾರನ್ನು ಕಡೆಗಣಿಸ ಬೇಕು ಎಂಬುದು ಸಹ ಮೊದಲೇ ನಿರ್ಧಾರವಾಗಿರುತ್ತದೆ.

ಟೀಕಾತ್ಮಕ ಪತ್ರಕರ್ತರನ್ನು ಪ್ರಧಾನಿಯವರ ನೇರ ದೃಷ್ಟಿಗೆ ಸಿಗದ ಅಥವಾ ಕೆಮರಾ ಫ್ರೇಮ್‌ನಿಂದ ಹೊರಗಿರುವ ಮೂಲೆಗಳಲ್ಲಿ ಕೂರಿಸಲಾಗುತ್ತದೆ. ಕೆಮರಾ ಯಾವಾಗಲೂ ಪ್ರಧಾನಿಯವರ ಮುಖದ ಮೇಲಿರುತ್ತದೆ ಅಥವಾ ಪ್ರಶ್ನೆ ಕೇಳುವ ‘ಅನುಕೂಲಕರ’ ಪತ್ರಕರ್ತನ ಮೇಲಿರುತ್ತದೆ. ಸವಾಲು ಹಾಕುವ ಪತ್ರಕರ್ತನ ದೃಶ್ಯಕ್ಕೆ ಕತ್ತರಿಬಿದ್ದಿರುತ್ತದೆ. ಯಾರಾದರೂ ಒಬ್ಬ ಪತ್ರಕರ್ತ ಕಠಿಣ ಪ್ರಶ್ನೆ ಕೇಳಲು ಮುಂದಾದರೆ, ತಕ್ಷಣವೇ ಬೇರೆ ಪತ್ರಕರ್ತರಿಗೆ ಅವಕಾಶ ನೀಡಿ ಆ ವಿಷಯವನ್ನು ದಿಕ್ಕು ತಪ್ಪಿಸಲಾಗುತ್ತದೆ.

ಒಂದೇ ಸಮಯದಲ್ಲಿ ಮೂರ್ನಾಲ್ಕು ಜನರನ್ನು ಎದ್ದು ನಿಲ್ಲಲು ಪ್ರೇರೇಪಿಸಲಾಗುತ್ತದೆ. ಇದರಿಂದ ಸಭೆಯಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಆಗ ಮಾಡರೇಟರ್ (ಮಾಧ್ಯಮ ಸಲಹೆಗಾರ) ‘ದಯವಿಟ್ಟು ಒಬ್ಬೊಬ್ಬರೇ ಕೇಳಿ, ಶಿಸ್ತು ಕಾಪಾಡಿ’ ಎನ್ನುತ್ತಾ ತಮಗೆ ಬೇಕಾದವರಿಗೆ ಮೈಕ್ ಹಸ್ತಾಂತರಿಸುತ್ತಾರೆ. ಕೊನೆಗೆ ಸಮಯ ಮುಗಿಯಿತು ಎಂಬ ನೆಪದೊಂದಿಗೆ ಗೋಷ್ಠಿ ಅಂತ್ಯವಾಗುತ್ತದೆ. ಗೊತ್ತಿರಲಿ, ಈ ರೀತಿಯ ಪ್ರಸಂಗಗಳು ಹಿಂದಿನ ಪ್ರಧಾನಿಗಳ ಪತ್ರಿಕಾಗೋಷ್ಠಿಗಳಲ್ಲೂ ನಡೆದಿವೆ.

ಪ್ರಧಾನಿ ಪತ್ರಿಕಾಗೋಷ್ಠಿ ಎಂಬುದು ಸತ್ಯದ ಹುಡುಕಾಟಕ್ಕಿಂತ ಹೆಚ್ಚಾಗಿ ‘ಇಮೇಜ್ ಪ್ರೊಜೆಕ್ಷನ್’ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನೆಹರು ಪ್ರಧಾನಿ ಇದ್ದಾಗಲೂ ಹೀಗೆಯೇ ಇತ್ತು, ಈಗಲೂ ಹಾಗೇ ಇದೆ. ಮುಂದೆಯೂ ಹಾಗೇ ಇರುತ್ತದೆ. ಕಾರಣ ಅದು ಇರುವುದೇ ಹಾಗೆ. ಇರಬೇಕಾದುದೇ ಹಾಗೆ. ಪ್ರಧಾನಿಯವರು ಮೈತುಂಬ ಎಣ್ಣೆ ಹಚ್ಚಿಕೊಂಡೇ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುತ್ತಾರೆ.

ಸ್ವತಂತ್ರ ಭಾರತದಲ್ಲಿ ಇಲ್ಲಿ ತನಕ ನಡೆದ ಪತ್ರಿಕಾಗೋಷ್ಠಿಗಳ ಪೈಕಿ ಎಂಥೆಂಥ ಘಟಾನು ಘಟಿ ಪತ್ರಕರ್ತರು ಬಂದು ಹೋಗಿದ್ದಾರಲ್ಲ.. ಆ ಪೈಕಿ ಎಷ್ಟು ಮಂದಿ ಪ್ರಧಾನಿಗಳ ಬೆವರಿಳಿಸಿದ್ದಾರೆ? ನೆಹರು ಪ್ರಧಾನಿಯಾಗಿzಗ ಜನಸಮೂಹದ ಮಧ್ಯೆ ಮುಕ್ತವಾಗಿ ನಡೆಯುತ್ತಾ ಎಲ್ಲರ ಕೈಕುಲುಕುತ್ತಿದ್ದರು ಎಂಬ ಕತೆ ಕೇಳಿದ್ದೇವೆ. ಆದರೆ, ಹಾಗೆ ಕೈಕುಲುಕಿ ದವರೆಲ್ಲ ಮಫ್ತಿಯಲ್ಲಿದ್ದ ಅವರ ಭದ್ರತಾ ಸಿಬ್ಬಂದಿಯೇ ಆಗಿರುತ್ತಿದ್ದರು ಎಂಬುದು ಯಾರಿಗೂ ಗೊತ್ತಿರುತ್ತಿರಲಿಲ್ಲ.

ಪ್ರಧಾನಿಯವರ ಪತ್ರಿಕಾಗೋಷ್ಠಿ ಎಂಬ ಪ್ರಹಸನವೂ ಹೀಗೆಯೇ. (ನ್ಯೂಸ್ ಚಾನೆಲ್‌ಗಳ ನಿರೂಪಕ ಏರಿದ ದನಿಯಲ್ಲಿ ಹೇಳ್ತಾನಲ್ಲ, ‘ಪ್ರಿಯ ವೀಕ್ಷಕರೇ, ಪ್ರಧಾನಿಯವರ ಪತ್ರಿಕಾ ಗೋಷ್ಠಿ ಹೇಗೆ ನಡೆಯುತ್ತದೆ ಗೊತ್ತಾ? ಅಸಲಿ ವಿಷಯ ಗೊತ್ತಾದರೆ ಶಾಕ್ ಆಗ್ತೀರಾ! ನಿಜ ಸಂಗತಿ ತಿಳಿದರೆ ಬೆಚ್ಚಿಬೀಳ್ತೀರಾ!’) ಈಗ ಹೇಳಿ, ನನ್ನ ಮೊನ್ನೆಯ ಅಂಕಣದ ಶೀರ್ಷಿಕೆ ಯನ್ನು ಇನ್ನೊಮ್ಮೆ ಹೇಳುತ್ತೇನೆ - ‘ಪ್ರಧಾನಿಯಾದವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಲೇಬೇಕಾ?’

ಜಪಾನಿನ ಕಾಗೆಗಳು

ಜಪಾನ್‌ನಲ್ಲಿ ಕಾಗೆಗಳೂ ಅದ್ಭುತ ಬುದ್ಧಿವಂತಿಕೆ ಕಲಿತಿವೆಯಂತೆ. ಅವು ಕಠಿಣವಾದ ವಾಲ್‌ನಟ್ ಬೀಜಗಳನ್ನು ಒಡೆಯಲು ಕಾರುಗಳನ್ನು ಬಳಸಲು ಕಲಿತುಕೊಂಡಿವೆಯಂತೆ. ಇದು ಅವುಗಳ ಪ್ರಯೋಗ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಎತ್ತಿ ತೋರಿಸು ತ್ತದೆ.

ಕಾಗೆಗಳು ವಾಲ್‌ನಟ್‌ಗಳನ್ನು ಎತ್ತಿಕೊಂಡು ಹಾರುತ್ತವೆ. ನಂತರ ಚಲಿಸುತ್ತಿರುವ ಕಾರುಗಳ ಮುಂದೆ ರಸ್ತೆಗೆ ಬೀಳಿಸುತ್ತವೆ. ಕಾರುಗಳು ಬೀಜದ ಮೇಲೆ ಹಾಯ್ದು ಹೋದಾಗ, ಅವು ಪುಡಿಪುಡಿಯಾಗುತ್ತವೆ. ನಂತರ ಟ್ರಾಫಿಕ್ ಲೈಟ್ ಕೆಂಪಾದಾಗ, ವಾಹನಗಳು ನಿಂತ ನಂತರ, ಕಾಗೆಗಳು ರಸ್ತೆಗೆ ಇಳಿದು ಪುಡಿಯಾದ ಬೀಜಗಳನ್ನು ತಿನ್ನುತ್ತವೆ. ಈ ವರ್ತನೆಯು ಕೇವಲ ಒಂದು ಪ್ರವೃತ್ತಿಯಲ್ಲ.

ಇದು ಸರಿಯಾಗಿ ಯೋಚಿಸುವ, ಸರಿಯಾದ ಸಮಯವನ್ನು ನಿರೀಕ್ಷಿಸುವ ಮತ್ತು ಮಾನವ ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಸೂಚಿಸುತ್ತದೆ. ಅಪಾಯ ತಪ್ಪಿಸಲು ಟ್ರಾಫಿಕ್ ಲೈಟ್‌ಗಳನ್ನು ಬಳಸಿ, ಅವುಗಳು ತಮ್ಮ ಪರಿಸರದಲ್ಲಿ ಇರುವ ನಿಯಮಗಳನ್ನು ಅರ್ಥಮಾಡಿಕೊಂಡಿವೆ.

ಕಾಗೆಗಳ ಈ ಬುದ್ಧಿವಂತಿಕೆಯನ್ನು ಪ್ರೈಮೇಟ್‌ಗಳ (ಮಂಗಗಳು, ಚಿಂಪಾಂಜಿಗಳು) ಬುದ್ಧಿ ವಂತಿಕೆಗೆ ಹೋಲಿಸುತ್ತಾರೆ. ಅವುಗಳ ಈ ಚಾತುರ್ಯ ವಿಜ್ಞಾನಿಗಳನ್ನು ಮತ್ತು ಸಾಮಾನ್ಯ ಜನರನ್ನು ಆಶ್ಚರ್ಯಗೊಳಿಸುವಂತಿದೆ. ಈ ಕೌಶಲವು ಕೇವಲ ಒಂದು ಕಾಗೆಗೆ ಸೀಮಿತ ವಾಗಿಲ್ಲ. ಕಾಗೆಗಳು ತಮ್ಮ ಗುಂಪಿನ ಇತರ ಸದಸ್ಯರನ್ನು ನೋಡಿ ಈ ವಿದ್ಯೆಯನ್ನು ಕಲಿಯುತ್ತವೆ.

ಅಂದರೆ, ಒಂದು ಕಾಗೆ ಕಾರನ್ನು ಬಳಸುವುದನ್ನು ಕಂಡರೆ, ಉಳಿದವು ಅದನ್ನು ಅನುಕರಿಸು ತ್ತವೆ. ಇದು ಅವುಗಳಲ್ಲಿರುವ ‘ಸಾಮಾಜಿಕ ಕಲಿಕೆ’ (Social Learning) ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.

ಕಾಗೆಗಳಿಗೆ ಮನುಷ್ಯರ ಮುಖಗಳನ್ನು ಗುರುತಿಸುವ ಅದ್ಭುತ ಶಕ್ತಿಯಿದೆ. ತಮಗೆ ಉಪಕಾರ ಮಾಡಿದವರನ್ನು ಮತ್ತು ತೊಂದರೆ ಕೊಟ್ಟವರನ್ನು ಅವು ವರ್ಷಗಟ್ಟಲೆ ನೆನಪಿನಲ್ಲಿಟ್ಟು ಕೊಳ್ಳುತ್ತವೆ. ಅಷ್ಟೇ ಅಲ್ಲ, ಅಪಾಯಕಾರಿ ವ್ಯಕ್ತಿಯ ಬಗ್ಗೆ ತಮ್ಮ ಮುಂದಿನ ಪೀಳಿಗೆಗೂ ‘ಎಚ್ಚರಿಕೆ’ ನೀಡುವ ಸಂವಹನ ಕಲೆ ಅವುಗಳಿಗೆ ಕರಗತವಾಗಿದೆ.