ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Government jobs: ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ, ಸೇವಾವಧಿ 10-15 ವರ್ಷ ಮಾತ್ರ; ಹೊಸ ಪ್ಲ್ಯಾನ್‌ ಬಿಚ್ಚಿಟ್ಟ ಎಚ್‌ಡಿಕೆ

ಕೆಪಿಎಸ್​​ಸಿ ಹಗರಣ ಸಂಬಂಧ ವಿಜಯನಗರದ ಬಂಟರ ಸಂಘದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳೊಂದಿಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸವಾಮಿ ಅವರು ಶುಕ್ರವಾರ ಸಂವಾದ ನಡೆಸಿದ್ದಾರೆ. ಈ ವೇಳೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ತಮ್ಮ ಹೊಸ ಚಿಂತನೆ ಬಗ್ಗೆ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಈ ಯೋಜನೆ ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಸರ್ಕಾರಿ ನೌಕರಿ ಅವಧಿ 10-15 ವರ್ಷ ಮಾತ್ರ; ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ

-

Prabhakara R
Prabhakara R Oct 16, 2026 8:31 PM

ಬೆಂಗಳೂರು: ಪ್ರತಿ ಕುಟುಂಬಕ್ಕೆ ಒಂದು ಸರ್ಕಾರಿ ಉದ್ಯೋಗ (Government jobs) ಕಲ್ಪಿಸುವ ಉದ್ದೇಶದಿಂದ 35 ವರ್ಷದ ಸೇವಾವಧಿ ಬದಲಿಗೆ 10 ರಿಂದ 15ಕ್ಕೆ ಇಳಿಸಬೇಕು. ಆ ಮೂಲಕ ಸರ್ಕಾರಿ ಉದ್ಯೋಗಗಳನ್ನು ಎಲ್ಲರಿಗೂ ಕೊಡುವ ಆಲೋಚನೆಯಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (H.D. Kumaraswamy) ತಿಳಿಸಿದ್ದಾರೆ.

ಕೆಪಿಎಸ್​​ಸಿ ಹಗರಣ ಸಂಬಂಧ ವಿಜಯನಗರದ ಬಂಟರ ಸಂಘದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಕೆಲಸದಿಂದ ನಿವೃತ್ತಿಯಾಗುವ ಉದ್ಯೋಗಿಯು ಬಳಿಕ ದೊರೆಯುವ ಪಿಂಚಣಿ ಸೇರಿ ಎಲ್ಲಾ ಸೌಲಭ್ಯಗಳಿಗೆ ಅರ್ಹನಾಗಿರುತ್ತಾನೆ. ಇದರಿಂದ ಉದ್ಯೋಗ ಸಿಗದೇ ಇರುವವರಿಗೆ ಅವಕಾಶ ದೊರೆಯುತ್ತದೆ. ಹಾಗೂ ನಿರುದ್ಯೋಗ ನಿವಾರಣೆಯಲ್ಲಿ ದೊಡ್ಡ ಪ್ರಯತ್ನ ಮಾಡಿದಂತೆ ಆಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ನಾನು ಈ ಯೋಜನೆ ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದಿದ್ದೇನೆ. ಯುವ ಜನರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಇಂತಹ ಯೋಚನೆ ಕಾರ್ಯರೂಪಕ್ಕೆ ಬಂದರೆ ಹೇಗೆ ಎಂದು ನಾನು ಆಲೋಚನೆ ಮಾಡುತ್ತಿದ್ದೇನೆ. ನನ್ನ ಪ್ರಕಾರ ಪ್ರತಿ ಮನೆಗೂ ಕನಿಷ್ಠ ಒಂದು ಸರ್ಕಾರಿ ಕೆಲಸವಾದರೂ ದೊರೆಯಬೇಕು. ನನ್ನ ಆಲೋಚನೆಯನ್ನು ಜನರ ಮುಂದೆ ಇರಿಸಿದ್ದೇನೆ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯಲಿ ಎಂದು ಹೇಳಿದರು.

ಕೆಪಿಎಸ್​​ಸಿ ಶುದ್ದೀಕರಣ ಆಗಬೇಕು

ಕೆಪಿಎಸ್​​ಸಿಯಲ್ಲಿ ನಡೆಸಿದ ಪಿಡಿಓ, ವಿಲೇಜ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಅಪ್ಪಯ್ಯ ಎಂಬವರ ಪ್ರಶ್ನೆಗೆ ಉತ್ತರಿಸಿದ ಎಚ್​ಡಿಕೆ, ಇತ್ತೀಚಿನ ದಿನಗಳಲ್ಲಿ ಓಎಂಆರ್ ಶೀಟ್ ತಿದ್ದುವುದು, ಸಿಸಿಟಿವಿ ತಿರುಚುವ ಕೆಲಸವಾಗಿದೆ. ಆಭ್ಯರ್ಥಿಗಳ ಹೋರಾಟದಿಂದಲೇ ಪಶು ವೈದ್ಯಾಧಿಕಾರಿ ನೇಮಕಾತಿ ಅಕ್ರಮ ಬೆಳಕಿಗೆ ಬಂದಿದೆ. ಕೆಪಿಎಸ್​​ಸಿಯಲ್ಲಿ ನಡೆಯಲಿರುವ ಪ್ರಕ್ರಿಯೆ ಆರಂಭದಿಂದ ಅಂತ್ಯದವರೆಗೂ ಕೆಪಿಎಸ್​​ಸಿ ಕಾರ್ಯದರ್ಶಿಯ ಹೊಣೆಯಾಗಿರಲಿದೆ‌. ಲಿಖಿತ ಪರೀಕ್ಷೆ ಬಳಿಕ ಮೌಖಿಕ ಸಂದರ್ಶನ‌ ಮಾಡುವ ಕೆಪಿಎಸ್​​ಸಿ ಸದಸ್ಯರ ಸಂಖ್ಯೆ ಮೂವರಿಂದ ಇಂದು 16ಕ್ಕೆ ಹೋಗಿದೆ. ಈ ನಿಟ್ಟಿನಲ್ಲಿ ಕೆಪಿಎಸ್​​ಸಿ ಶುದ್ದೀಕರಿಸಲು ಹಲವು ರೀತಿಯ ಮಾರ್ಪಾಡುಗಳನ್ನು ಮಾಡಬೇಕಿದೆ‌. ಅಕ್ರಮ ಸಂಬಂಧ ಕಾಟಾಚಾರಕ್ಕೆ ತನಿಖೆ ನಡೆಲಾಗುತ್ತಿದೆ. ಕಠಿಣವಾದ ಶಿಕ್ಷೆ ಆಗದಿದ್ದರೆ ಅಕ್ರಮ ಮುಂದುವರಿಯಲಿದೆ ಎಂದರು.

ಕೆಪಿಎಸ್​​ಸಿ ಮುಚ್ಚುವ ಬಗ್ಗೆ ಸರ್ಕಾರ ಮಾತನಾಡುತ್ತಿದೆ, ಇದು ಎಷ್ಟರ ಮಟ್ಟಿಗೆ ಸರಿ? ಎಂಬ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗುರುಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಅವರು, ಸಾಂವಿಧಾನಿಕವಾಗಿ ಮುಚ್ಚಲು ಸಾಧ್ಯವಿಲ್ಲ.‌ ಕೆಪಿಎಸ್​​ಸಿ ಸ್ವತಂತ್ರ್ಯ ಸಂಸ್ಥೆಯಾಗಿದೆ‌.‌ ಕೆಪಿಎಸ್​​ಸಿ ಕೆಟ್ಟಿಲ್ಲ. ನಾವು ಅದನ್ನು ಕೆಡಿಸಿದ್ದೇವೆ. ಸದಸ್ಯರ ನೇಮಿಸುವಾಗ ಅವರ ಹಿನ್ನೆಲೆ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿಯೇ ನೇಮಿಸಬೇಕು. ಜಾತಿ, ಹಣದ ಪ್ರಭಾವ ಬಳಸಿ ಇಂದು ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತಿದೆ‌ ಎಂದರು.

ಕೆಪಿಎಸ್​​ಸಿ ಸದಸ್ಯರ ನೇಮಕ ಮಾಡಲು ಸ್ವಾಯತ್ತ ಹಾಗೂ ನಿಷ್ಪಕ್ಷಪಾತ ಆಗಬೇಕಿದೆ. ಅಡಳಿತ ನಡೆಸುವವರಿಗೆ ಭಯ ಭಕ್ತಿ ಇಲ್ಲದಂತಾಗಿದೆ. ಸುಲಭವಾಗಿ ಹಣ ಸಂಪಾದನೆ ಮಾಡಲು ಮುಂದಾಗುತ್ತಿದ್ದಾರೆ. ಬೆಕ್ಕಿಗೆ ಗಂಟೆ ಕಟ್ಟೋರು ಯಾರು ಎಂಬ ವ್ಯವಸ್ಥೆಗೆ ತಲುಪಿದ್ದೇವೆ. ಸದ್ಯ‌ ಕೆಇಎ ಪರೀಕ್ಷೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಕೆಪಿಎಸ್​​ಸಿ ರೀತಿಯಲ್ಲಿ ಅಕ್ರಮವೆಸಗುವ ಸಾಧ್ಯತೆಯಿದೆ ಎಂದು ಆರೋಪಿಸಿದರು.