ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಜೆಪಿ ಪ್ರತಿಭನೆಯ ಹಿಂದೆ ಎಲಾನ್ ಮಸ್ಕ್ ಕೈವಾಡ? ಬಿಜೆಪಿ ನಾಯಕ ಬ್ರಿಜ್ ಭೂಷಣ್ ಆರೋಪ

CJP Protest: ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದ ರಾಜಕೀಯ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಈ ಚಳವಳಿಯನ್ನು ವಿಶ್ವದ ಸಿರಿವಂತ ಉದ್ಯಮಿ ಎಲಾನ್ ಮಸ್ಕ್ ಅವರ ಸೂಚನೆಯ ಮೇರೆಗೆ ಆಯೋಜಿಸಲಾಗುತ್ತಿದೆ ಎಂದು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಆರೋಪಿಸಿದ್ದಾರೆ. ವಿದೇಶಿ ಹಿತಾಸಕ್ತಿಗಳು ಈ ಚಳವಳಿಗೆ ಕುಮ್ಮಕ್ಕು ನೀಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

"ಸಿಜೆಪಿ ಪ್ರತಿಭನೆಯ ಹಿಂದೆ ಎಲಾನ್ ಮಸ್ಕ್ ಕೈವಾಡ?"

ಬಿಜೆಪಿ ನಾಯಕ ಬ್ರಿಜ್ ಭೂಷಣ್ (ಸಂಗ್ರಹ ಚಿತ್ರ) -

Priyanka P
Priyanka P Oct 16, 2026 7:06 PM

ನವದೆಹಲಿ, ಅ.16: ಕಾಕ್ರೋಚ್ ಜನತಾ ಪಾರ್ಟಿ (Cockroach Janta Party) ಪ್ರತಿಭಟನೆಗೆ ಸಂಬಂಧಿಸಿದ ರಾಜಕೀಯ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಈ ಚಳವಳಿಯನ್ನು ವಿಶ್ವದ ಸಿರಿವಂತ ಉದ್ಯಮಿ ಎಲಾನ್ ಮಸ್ಕ್ (Elon Musk) ಅವರ ಸೂಚನೆಯ ಮೇರೆಗೆ ಆಯೋಜಿಸಲಾಗುತ್ತಿದೆ ಎಂದು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಆರೋಪಿಸಿದ್ದಾರೆ. ಕೇಂದ್ರ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಿ, ನಿರ್ಬಂಧಗಳನ್ನು ವಿಧಿಸಿರುವ ನಡುವೆಯೇ, ಸಿಜೆಪಿ ಶುಕ್ರವಾರ (ಅ.16) ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ‘ತ್ರಿವರ್ಣ ಧ್ವಜವನ್ನು ಹಾರಿಸೋಣ’ ಮೆರವಣಿಗೆ ನಡೆಸಲು ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಈ ಆರೋಪ ಮಾಡಿದ್ದಾರೆ.

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಮಯದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಪ್ರತಿಭಟನೆಗೆ ಕರೆ ನೀಡಿದೆ. ಪಕ್ಷದ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಜಂತರ್ ಮಂತರ್ ಪ್ರತಿಭಟನಾ ಪ್ರದೇಶಕ್ಕೆ ಪ್ರವೇಶಿಸಿದ ನಂತರ ಬಂಧಿಸಿ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನಂತರವೂ ಸಂಘಟನೆ ಪ್ರತಿಭಟನೆ ಮುಂದುವರೆಸಿದೆ.

“ಈ ಇಡೀ ಆಂದೋಲನವನ್ನು ಎಲಾನ್ ಮಸ್ಕ್ ಅವರ ಆದೇಶದ ಮೇರೆಗೆ ಆಯೋಜಿಸಲಾಗುತ್ತಿದೆ. ಇದು ನಮ್ಮ ದೇಶದ ವಿರುದ್ಧದ ದೊಡ್ಡ ಪಿತೂರಿಯಾಗಿದೆ. ನಮ್ಮ ದೇಶವನ್ನು ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಹೋಲಿಸಲಾಗುತ್ತಿದೆ. ಸುಪ್ರೀಂ ಕೋರ್ಟ್‌ಗೆ ಬೆದರಿಕೆ ಹಾಕುವ ಉದ್ದೇಶದೊಂದಿಗೆ ಮೆರವಣಿಗೆಯೊಂದನ್ನು ಆಯೋಜಿಸಲಾಗಿದೆ. ಈ ಹಿಂದೆ ಇಂತಹ ಘಟನೆ ಎಂದಿಗೂ ನಡೆದಿಲ್ಲ. ಭಾರತದಲ್ಲಿ ವ್ಯಾಪಾರ ಮಾಡಲು ಬಯಸುವ ಕೆಲವು ವಿದೇಶಿಗರು, ಭಾರತದ ನಿಯಮಗಳನ್ನು ಒಪ್ಪಿಕೊಳ್ಳದೆ ತಮ್ಮ ಇಷ್ಟದ ಷರತ್ತುಗಳ ಪ್ರಕಾರವೇ ವ್ಯಾಪಾರ ನಡೆಸಲು ಬಯಸುತ್ತಿದ್ದಾರೆ. ಅಂಥ ವಿದೇಶಿಗರೇ ಈ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ” ಎಂದು ಬಿಜೆಪಿ ನಾಯಕ ಆರೋಪಿಸಿದರು.

ʻನೀವು ದೇಶದ ನಿಜವಾದ ಭವಿಷ್ಯ, ತಪ್ಪು ಹಾದಿ ತುಳಿಯಬೇಡಿʼ: ಜೆನ್‌ ಝೀ ಪ್ರತಿಭಟನಾಕಾರರಿಗೆ ಕಪಿಲ್‌ ದೇವ್‌ ಕಿವಿ ಮಾತು!

ಶುಕ್ರವಾರದ ಮೆರವಣಿಗೆಗೆ ಮುನ್ನ, ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಅಕ್ಟೋಬರ್ 16 ಮತ್ತು 17ರಂದು ಸೆಂಟ್ರಲ್ ಪಾರ್ಕ್ ಅನ್ನು ಮುಚ್ಚಿದೆ. ಇದೇ ವೇಳೆ, ದೆಹಲಿ ಪೊಲೀಸರು ಕನ್ನಾಟ್ ಪ್ಲೇಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ವಿಧಿಸಿ, ಭದ್ರತೆಯನ್ನು ಹೆಚ್ಚಿಸಿದ್ದಾರೆ. ಪ್ರತಿಭಟನಾ ಸಭೆಯಿಂದ ದೂರವಿರುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಅನುಮತಿ ಪಡೆದ ಬಳಿಕ ನಿಗದಿತ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಬಹುದು ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ವಿದೇಶಿ ಹಿತಾಸಕ್ತಿಗಳು ಈ ಚಳವಳಿಗೆ ಕುಮ್ಮಕ್ಕು ನೀಡುತ್ತಿವೆ ಎಂದು ಬ್ರಿಜ್ ಭೂಷಣ್ ಆರೋಪಿಸಿದ್ದಾರೆ. ಈ ಪ್ರತಿಭಟನೆಯು ಭಾರತದ ವಿರುದ್ಧ ನಡೆಯುತ್ತಿರುವ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್‌ಗೆ ಬೆದರಿಕೆ ಹಾಕುವ ಉದ್ದೇಶದಿಂದ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದೂ ಆರೋಪಿಸಿದ್ದಾರೆ.