Basavaraj Bommai: ರೈಲ್ವೆ ಇಲಾಖೆಯಲ್ಲಿ ಕ್ರಾಂತಿ ಮಾಡಿರುವ ಪ್ರಧಾನಿ ಮೋದಿ: ಬಸವರಾಜ ಬೊಮ್ಮಾಯಿ
Basavaraj Bommai: ಹಾವೇರಿಯ ಶ್ರೀ ಮೈಲಾರ ಮಹಾದೇವಪ್ಪ ರೈಲ್ವೆ ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ವಲಯದ ವತಿಯಿಂದ ಇಂದು ಏರ್ಪಡಿಸಿದ್ದ ವಂದೇ ಭಾರತ್ ರೈಲು ನಿಲುಗಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಿದರು.


ಹಾವೇರಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈಲ್ವೆ ಇಲಾಖೆಯಲ್ಲಿ ಕ್ರಾಂತಿ ಮಾಡಿದ್ದು, ಕಳೆದ ಹತ್ತು ವರ್ಷದಲ್ಲಿ ರೈಲ್ವೆ ಆದಾಯ ನಾಲ್ಕು ಪಟ್ಟು ಹೆಚ್ಚಳವಾಗಿದ್ದು, ರೈಲ್ವೆ ಇಲಾಖೆ ಲಾಭದ ಹಳಿಗೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದರು. ಹಾವೇರಿಯ ಶ್ರೀ ಮೈಲಾರ ಮಹಾದೇವಪ್ಪ ರೈಲ್ವೆ ನಿಲ್ದಾಣದಲ್ಲಿ ಇಂದು ನೈಋತ್ಯ ರೈಲ್ವೆ ವಲಯದ ವತಿಯಿಂದ ಏರ್ಪಡಿಸಿದ್ದ ವಂದೇ ಭಾರತ್ ರೈಲು ನಿಲುಗಡೆ ಸಮಾರಂಭದಲ್ಲಿ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ವಂದೇ ಭಾರತ್ ರೈಲಿಗೆ (Vande Bharat Train) ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ಯಾವುದು ಅಸಾಧ್ಯವೋ ಅದನ್ನು ಸಾಧ್ಯ ಮಾಡುವುದೇ ಪ್ರಧಾನಿ ಮೋದಿಯವರ ಸಾಮರ್ಥ್ಯ, ಅವರು ರೈಲ್ವೆಯಲ್ಲಿ ಕ್ರಾಂತಿ ಮಾಡಿದ್ದಾರೆ. ರೈಲ್ವೆ ಲೈನು ಡಬ್ಲಿಂಗ್ ರೈಲ್ವೆ ಎಂಜಿನ್ ಯುನಿಫಿಕೇಶನ್ ಮಾಡಿದ್ದಾರೆ. ಕರ್ನಾಟಕದಲ್ಲಿ 2014 ರಿಂದ 3320 ಕಿ.ಮೀ ರೈಲ್ವೆ ಹಳಿ ಅಭಿವೃದ್ಧಿಯಾಗಿದೆ. ಇದಕ್ಕೂ ಮುಂಚೆ 900 ಕಿ.ಮೀ ಆಗಿತ್ತು. ಇನ್ನೊಂದು ಕ್ರಾಂತಿ ರೈಲ್ವೆ ಸಿಗ್ನಲ್ ವ್ಯವಸ್ಥೆ ಬದಲಾವಣೆ ಮಾಡಿದ್ದಾರೆ. ಮೂರನೆಯದ್ದು ಕಂಟ್ರೋಲ್ ರೂಮ್ ಎಲ್ಲ ಬದಲಾವಣೆ ಮಾಡಿದ್ದಾರೆ. ಅದರ ಜತೆಗೆ ರೈಲ್ವೆ ಸ್ಪೀಡ್ ಹೆಚ್ಚಳ ಮಾಡಿದ್ದಾರೆ. ರೈಲ್ವೆ ಆದಾಯ ನಾಲ್ಕು ಪಟ್ಟು ಹೆಚ್ಚಳ ಮಾಡಿದ್ದಾರೆ. ಕಳೆದ ಎರಡು ವರ್ಷದಲ್ಲಿ ಸಚಿವ ಸೋಮಣ್ಣ ಅವರು ಪಾದರಸದಂತೆ ತಿರುಗಾಡಿ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ. ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಹಾವೇರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆ ಮಾಡಬೇಕೆಂಬ ಬೇಡಿಕೆ ಇತ್ತು. ಅದರಂತೆ ಹಾವೇರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆಯಾಗುತ್ತಿದೆ ಎಂದು ಅವರು ತಿಳಿಸಿದರು. ಹಾವೇರಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಎಸ್ಕಲೇಟರ್ ಅಳವಡಿಕೆ, ರಾಣೇಬೆನ್ನೂರ ಬ್ಯಾಡಗಿ ನಿಲ್ದಾಣಗಳಲ್ಲಿ ಗೂಡ್ ಶೆಡ್ ನಿರ್ಮಾಣ, ಯಲವಿಗಿ-ಗದಗ ಮಾರ್ಗ, ರಾಣೇಬೆನ್ನೂರು-ಶಿಕಾರಿಪುರ ಮಾರ್ಗ, ಯಲವಿಗಿ ಮೇಲ್ಸೆತುವೆ, ನಾಗೇಂದ್ರಮಟ್ಟಿ ಆರ್‌ಒಬಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಆರ್‌ಒಬಿ ಹಾಗೂ ಆರ್‌ಯುಬಿ ಮಾಡಲು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸುದ್ದಿಯನ್ನೂ ಓದಿ | Pralhad Joshi: ರಾಜ್ಯ ಕಾಂಗ್ರೆಸ್ ಸರ್ಕಾರ ʼಭೀಮ ಹೆಜ್ಜೆʼ ಸಂಭ್ರಮ ಆಚರಿಸದೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಅವಮಾನಿಸಿದೆ: ಜೋಶಿ ಆರೋಪ
ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಡಿ.ಆರ್‌ಎಂ ಮುದಿತ್ ಮಿತ್ತಲ್, ಚೀಪ್ ಕಮರ್ಷಿಯಲ್ ಮ್ಯಾನೇಜರ್ ಅನುಪ ಸಾಧು, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಂಶುಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರುಚಿ ಬಿಂದಾಲ್, ನಗರಸಭೆಯ ಅಧ್ಯಕ್ಷೆ ಶಶಿಕಲಾ ಮಾಳಗಿ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.