ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಿಜಾಬ್‌ ನಿಷೇಧ ಆದೇಶ ರದ್ದು; ನಮಗೆ ಯಾರನ್ನೂ ಓಲೈಸುವ ಉದ್ದೇಶವಿಲ್ಲ ಎಂದ ಸಿಎಂ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಅಪರಾಧದಲ್ಲಿ ಬಿಜೆಪಿಯ ನಾಯಕರೇ ಭಾಗಿಯಾಗಿದ್ದಾರೆಂಬ ಗಂಭೀರ ಆರೋಪಗಳಿದ್ದರೂ ಎಲ್ಲ ಬಿಜೆಪಿ ನಾಯಕರು ತಮ್ಮ ಪ್ರಧಾನಿ ಮತ್ತು ಶಿಕ್ಷಣ ಸಚಿವರನ್ನು ಸಮರ್ಥಿಸಲು ಹೊರಟಿದ್ದಾರೆ. ಇದು ನೀಟ್ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಬಲಿಯಾಗಿರುವ ದೇಶದ 22 ಲಕ್ಷ ವಿದ್ಯಾರ್ಥಿಗಳಿಗೆ ಬಗೆಯುವ ದ್ರೋಹ ಅಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಹಿಜಾಬ್‌ ವಿವಾದ; ನಮಗೆ ಯಾರನ್ನೂ ಓಲೈಸುವ ಉದ್ದೇಶವಿಲ್ಲ ಎಂದ ಸಿಎಂ

ಸಿಎಂ ಸಿದ್ದರಾಮಯ್ಯ -

Prabhakara R
Prabhakara R May 14, 2026 7:46 PM

ಬೆಂಗಳೂರು, ಮೇ 14: ಸಂವಿಧಾನದ ಆಶಯವಾಗಿರುವ ಸರ್ವಧರ್ಮ ಸಮಭಾವದ ಆಶಯಕ್ಕೆ ಅನುಗುಣವಾಗಿಯೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಪರಿಷ್ಕೃತ ವಸ್ತ್ರಸಂಹಿತೆಯನ್ನು (Karnataka Hijab Row) ಜಾರಿಗೊಳಿಸಲಾಗಿದೆ. ಇದು ಯಾರನ್ನಾದರೂ ಓಲೈಸುವ ಇಲ್ಲವೇ ನೋಯಿಸುವ ಉದ್ದೇಶದ ವಸ್ತ್ರಸಂಹಿತೆ ಅಲ್ಲ, ಎಲ್ಲ ಜಾತಿ-ಧರ್ಮಗಳ ಆಚರಣೆ, ಸಂಪ್ರದಾಯಗಳನ್ನು ಗೌರವಿಸುವ ವಸ್ತ್ರಸಂಹಿತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಮಾಧ್ಯಮ ಪ್ರಕಟಣೆ ನೀಡಿರುವ ಸಿಎಂ ಅವರು, ಜಾತಿ, ಧರ್ಮಗಳ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಿರುವವರಿಗೆ ಇದರಿಂದ ನೋವಾಗಿರುವುದು ಸಹಜವೇ ಆಗಿದೆ. ಅವರು ಮೊದಲು ತಮ್ಮೊಳಗೆ ಇಣುಕಿ ಆತ್ಮವಿಮರ್ಶೆ ಮಾಡಲಿ ಎಂದು ಟೀಕಿಸಿದ್ದಾರೆ.

ನೀಟ್ ಪರೀಕ್ಷೆ ಬಗ್ಗೆ ಬಿಜೆಪಿಯವರು ಚಕಾರ ಎತ್ತುತ್ತಿಲ್ಲ

ಇಂದು ದೇಶಾದ್ಯಂತ ಚರ್ಚೆಯಾಗುತ್ತಿರುವುದು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ರದ್ದಾಗಿರುವ ನೀಟ್ ಪರೀಕ್ಷೆಗಳ ಬಗ್ಗೆ. ಅಮಾಯಕ ವಿದ್ಯಾರ್ಥಿಗಳ ಭವಿಷ್ಯವನ್ನೇ ಮುರುಟಿ ಹಾಕಿರುವ ಇಂತದ್ದೊಂದು ಗಂಭೀರ ಅಪರಾಧದ ಬಗ್ಗೆ ಪರೀಕ್ಷಾ ಪೇ ಚರ್ಚಾ ನಡೆಸಿ ಮಕ್ಕಳನ್ನು ಮುದ್ದು ಮಾಡುವ ಪ್ರಧಾನಿ ನರೇಂದ್ರ ಮೋದಿಯವರಾಗಲಿ, ರಾಜ್ಯದ ಬಿಜೆಪಿ ನಾಯಕರಾಗಲಿ ಚಕಾರ ಎತ್ತುತ್ತಿಲ್ಲ.

ಈ ಅಪರಾಧದಲ್ಲಿ ಬಿಜೆಪಿಯ ನಾಯಕರೇ ಭಾಗಿಯಾಗಿದ್ದಾರೆಂಬ ಗಂಭೀರ ಆರೋಪಗಳಿದ್ದರೂ ಎಲ್ಲ ಬಿಜೆಪಿ ನಾಯಕರು ತಮ್ಮ ಪ್ರಧಾನಿ ಮತ್ತು ಶಿಕ್ಷಣ ಸಚಿವರನ್ನು ಸಮರ್ಥಿಸಲು ಹೊರಟಿದ್ದಾರೆ. ಇದು ನೀಟ್ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಬಲಿಯಾಗಿರುವ ದೇಶದ 22 ಲಕ್ಷ ವಿದ್ಯಾರ್ಥಿಗಳಿಗೆ ಬಗೆಯುವ ದ್ರೋಹ ಅಲ್ಲವೇ? ಎಂದು ಸಿಎಂ ಪ್ರಶ್ನಿಸಿದ್ದಾರೆ.

ಕೆಮಿಸ್ಟ್ರಿ ಶಿಕ್ಷಕನಿಂದ ಬಯಲಾಯ್ತು ನೀಟ್ ಪೇಪರ್ ಸೋರಿಕೆ ವಿಚಾರ; ಪೊಲೀಸರು ಹೇಳಿದ್ದೇನು?

ನಮ್ಮ ಸರ್ಕಾರ ನಡೆಸಿದ್ದ ಸಿಇಟಿ ಪರೀಕ್ಷೆಯಲ್ಲಿ ಒಂದೆರಡು ಕೇಂದ್ರಗಳಲ್ಲಿ ಲೋಪಗಳು ಕಂಡುಬಂದಾಗ ಹಾರಾಟ-ಹೋರಾಟ ನಡೆಸಿದ್ದ ರಾಜ್ಯದ ಬಿಜೆಪಿ ನಾಯಕರು, ಕರ್ನಾಟಕದ ಒಂದು ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಬಾಯಿಗೆ ಬೀಗಹಾಕಿಕೊಂಡು ಕೂತಿದ್ದಾರೆ. ಕನಿಷ್ಠ ರಾಜ್ಯದ ವಿದ್ಯಾರ್ಥಿಗಳ ಬಗ್ಗೆಯಾದರೂ ಇವರಿಗೆ ಕಾಳಜಿ ಬೇಡವೇ?

ಒಂದೆರಡು ಕಡೆಗಳಲ್ಲಿ ಜನಿವಾರ ತೆಗೆಸಿದಾಗ, ಉಡುಪಿಯ ಒಂದೆರಡು ಶಾಲೆಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಾಗ ಇಡೀ ಕರ್ನಾಟಕಕ್ಕೆ ಕೋಮುದ್ವೇಷದ ಬೆಂಕಿ ಹಚ್ಚಲು ಹೊರಟ ಈ ಬಿಜೆಪಿ ನಾಯಕರಿಗೆ ನೀಟ್ ಪರೀಕ್ಷೆಯ ರದ್ದತಿಯಿಂದ ರೋದಿಸುತ್ತಿರುವ ವಿದ್ಯಾರ್ಥಿಗಳ ಕಣ್ಣೀರು ಕಾಣಿಸುತ್ತಿಲ್ಲವೇ? ಎಂದು ಕಿಡಿಕಾರಿದ್ದಾರೆ.

ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೊಳಿಸಿರುವ ವಸ್ತ್ರಸಂಹಿತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರಿಯ ವಿದ್ಯಾಲಯಗಳ ವಸ್ತ್ರಸಂಹಿತೆಗೆ ಅನುಗುಣವಾಗಿಯೇ ಇದೆ. ರಾಜ್ಯ ಸರ್ಕಾರ ಹೊರಡಿಸಿರುವ ವಸ್ತ್ರ ಸಂಹಿತೆಯನ್ನು ವಿರೋಧಿಸುವವರು ಕೇಂದ್ರೀಯ ವಿದ್ಯಾಲಯಗಳ ವಸ್ತ್ರಸಂಹಿತೆಯನ್ನೂ ವಿರೋಧಿಸಬೇಕಲ್ವಾ? ಯಾಕೆ ಈ ಹಿಪಾಕ್ರಸಿ? ಹಿಜಾಬ್ ಧರಿಸಲು ಅವಕಾಶ ನೀಡಿರುವುದು ಮುಸ್ಲಿಮರ ಓಲೈಕೆಯಾದರೆ ಜನಿವಾರ, ಪೇಟ/ಟರ್ಬನ್ ಧರಿಸಲು ಅವಕಾಶ ನೀಡಿರುವುದು ಆಯಾಧರ್ಮಗಳ ಓಲೈಕೆಯಾಗುವುದೇ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದಿಂದ ಕ್ರಾಂತಿಕಾರಿ ಕ್ರಮ

ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಸಿಇಟಿ ಪರೀಕ್ಷೆಗಳು ಕ್ರಾಂತಿಕಾರಿ ಕ್ರಮವಾಗಿತ್ತು. ಅದರಿಂದಾಗಿ ಸಾವಿರಾರು ಬಡವಿದ್ಯಾರ್ಥಿಗಳು ಕೂಡಾ ಎಂಜನಿಯರ್, ಡಾಕ್ಟರ್ ಗಳಾಗಿದ್ದರು. ಬಿಜೆಪಿ ಸರ್ಕಾರ ಅದನ್ನು ವ್ಯವಸ್ಥಿತವಾಗಿ ನಾಶಮಾಡಿದೆ. 2024ರಲ್ಲಿ ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತಂದಾಗ ನಮ್ಮ ಸರ್ಕಾರ ಅದನ್ನು ವಿರೋಧಿಸಿತ್ತು. ನೀಟ್‌ನಿಂದಾಗಿ ರಾಜ್ಯದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ವ್ಯವಸ್ಥೆ ಮೂಲಕ ಕೇಂದ್ರ ಸರ್ಕಾರ ರಾಜ್ಯದ ಶಿಕ್ಷಣದ ಹಕ್ಕನ್ನು ಕಳೆದುಕೊಂಡಿದೆ.

ದಶಕಗಳಿಂದ ಸಿಇಟಿ ಪರೀಕ್ಷೆಗಳನ್ನು ನಮ್ಮ ಸರ್ಕಾರಗಳು ಸುರಕ್ಷಿತವಾಗಿ ನಡೆಸಿಕೊಂಡು ಬಂದಿವೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಕನಿಷ್ಠ ಒಂದು ನೀಟ್ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ಯೋಗ್ಯತೆ ಇಲ್ಲದಂತಾಗಿದೆ. ಇದು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈ ಲೋಪಕ್ಕೆ ನಾನು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಣೆ ಮಾಡುತ್ತೇನೆ. ಅವರು ದೇಶದ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು ಮತ್ತು ಅಸಮರ್ಥ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣದಿಂದ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳು ವೈಚಾರಿಕತೆ, ವೈಜ್ಞಾನಿಕತೆ, ಸಮಾನತೆ, ಭ್ರಾತೃತ್ವ, ಘನತೆ, ಪರಸ್ಪರ ಗೌರವ ಮತ್ತು ಜಾತ್ಯತೀತ ದೃಷ್ಟಿಕೋನವನ್ನು ಉತ್ತೇಜಿಸಬೇಕು. ಸಾಂವಿಧಾನಿಕ ಅರ್ಥದಲ್ಲಿ ಜಾತ್ಯತೀತತೆ ಎಂದರೆ ವೈಯಕ್ತಿಕ ನಂಬಿಕೆಗಳಿಗೆ ವಿರುದ್ಧವಲ್ಲ, ಬದಲಾಗಿ ಎಲ್ಲರಿಗೂ ಸಮಾನ ಗೌರವ ನೀಡುವಿಕೆ, ಸಾಂಸ್ಥಿಕ ನಿಷ್ಪಕ್ಷಪಾತತೆ ಮತ್ತು ತಾರತಮ್ಯ ರಹಿತ ವರ್ತನೆಯಾಗಿದೆ. ಸರ್ಕಾರವು ಸಾಂವಿಧಾನಿಕ ತತ್ವಗಳಿಗೆ ಅನುಗುಣವಾಗಿ ಎಲ್ಲಾ ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ತಟಸ್ಥ ಮತ್ತು ಸಮಾನ ನಿಲುವು ಹೊಂದಿರಬೇಕಿದೆ. ಅದೇ ರೀತಿ ಯಾರಿಗೂ ತೊಂದರೆಯಾಗದಂತಹ ಸೀಮಿತ ಸಾಂಪ್ರದಾಯಿಕ ಅಥವಾ ನಂಬಿಕೆ ಆಧಾರಿತ ಆಚರಣೆಗಳಿಂದಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಹಕ್ಕು ನಿರಾಕರಣೆ ಆಗದಂತೆ ನೋಡಿಕೊಳ್ಳಬೇಕಾಗಿದೆ.

NEET-UG 2026 Paper Leak: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಸಿಎಂ ಆಗ್ರಹ

ಈ ಹಿನ್ನೆಲೆಯಲ್ಲಿ ನಿಗದಿತ ಸಮವಸ್ತ್ರಕ್ಕೆ ಪೂರಕವಾಗಿ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಸೀಮಿತ ಸಾಂಪ್ರದಾಯಿಕ ಅಥವಾ ನಂಬಿಕೆ ಆಧಾರಿತ ಗುರುತುಗಳನ್ನು ಧರಿಸಲು ಅವಕಾಶ ಕಲ್ಪಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಸಾರ್ವಜನಿಕ ಸುವ್ಯವಸ್ಥೆ, ಸುರಕ್ಷತೆ, ತರಗತಿಯ ವಾತಾವರಣ ಮತ್ತು ಶಿಕ್ಷಣ ಸಂಸ್ಥೆಗಳ ಜಾತ್ಯತೀತ ಸ್ವರೂಪಕ್ಕೆ ಧಕ್ಕೆಯಾಗದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು, ಸಮಾನತೆ ಮತ್ತು ಘನತೆಯನ್ನು ಮರುಸ್ಥಾಪಿಸಲು ನಾವು ಬದ್ಧರಿದ್ದೇವೆ ಎಂದು ಸಿಎಂ ಹೇಳಿದ್ದಾರೆ.