ಚಾಪೇಕರ್ ಸಹೋದರರ ಬಲಿದಾನ
ಚಾಪೇಕರ್ ಸಹೋದರರ ಬಲಿದಾನ
Vishwavani News
January 23, 2022
ಡಾ.ಉಮೇಶ್ ಪುತ್ರನ್
ಸ್ವಾತಂತ್ರ‍್ಯದ ಆ ಕ್ಷಣಗಳು (ಭಾಗ - 26)
ಜನಜಂಗುಳಿ ಮತ್ತು ಕಾಯಿಲೆಗಳ ತಾಣವಾಗಿರುವ ಮುಂಬಯಿಯ ಮಸ್ಜಿದ್ ಬಂದರ್ ಪ್ರದೇಶದಲ್ಲಿ 1896ರ ಸೆಪ್ಟೆಂಬರ್ ತಿಂಗಳಲ್ಲಿ ಪ್ಲೇಗ್ ರೋಗ ಕಾಣಿಸಿ ಕೊಂಡಿತು.
ಪ್ಲೇಗಿನ ಮೊದಲ ಅಲೆ ಪ್ರಾರಂಭವಾದದ್ದು ಕ್ರಿಸ್ತ ಶಕ 541-542 ರಲ್ಲಿ. ಕ್ರಿಸ್ತ ಶಕ ಎಂಟನೇ ಶತಮಾನದವರೆಗೂ ಮುಂದುವರಿದ ಇದು ಪೂರ್ವ ಯುರೋಪಿನ ಇಡೀ ಬೈಝಾಟಿನ್ ಸಾಮ್ರಾಜ್ಯವನ್ನು ನಾಶ ಮಾಡಿತ್ತು. ಭಯಾನಕವಾದ ಪ್ಲೇಗಿನ ಎರಡನೇ ಅಲೆಯು 14ನೇ ಶತಮಾನದಲ್ಲಿ ಪ್ರಾರಂಭವಾಗಿ, ಇದು 1346-1353 ರಲ್ಲಿ ಉತ್ತುಂಗಕ್ಕೇರಿತು. ಇದಕ್ಕೆ ಬ್ಲಾಕ್ ಡೆತ್ ಎಂದು ಕರೆಯುತ್ತಾರೆ. ಸುಮಾರು 18ನೇ ಶತಮಾನದವರೆಗೆ ಮುಂದುವರಿದ ಈ ಪ್ಲೇಗ್ ಯುರೋಪ್, ಏಷ್ಯಾ ಹಾಗೂ ಉತ್ತರ ಆಫ್ರಿಕಾ ಖಂಡಗಳಲ್ಲಿ 20 ಕೋಟಿಗೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು.
1855 ರಲ್ಲಿ ಪ್ಲೇಗಿನ ಮೂರನೇ ಅಲೆ ಪ್ರಪಂಚದಾದ್ಯಂತ ಎದ್ದಿತ್ತು. ಇದರ ಪ್ರಭಾವ 1960ರ ತನಕವೂ ಮುಂದುವರಿಯಿತು. ಭಾರತವೊಂದರ ಈ ಅವಧಿ ಯಲ್ಲಿ ಪ್ಲೇಗಿನಿಂದ ಸತ್ತವರ ಸಂಖ್ಯೆ ಸುಮಾರು ಒಂದು ಕೋಟಿ ಜನರು. ಮುಂಬೈಗೆ ಬಂದ ಪ್ಲೇಗ್ ಇದರ ಒಂದು ಭಾಗವಾಗಿತ್ತು. ಸಾಮಾನ್ಯವಾಗಿ ಇಲಿಗಳ ಮೈ ಮೇಲೆ ಇರುವ ಚಿಗಟಗಳಿಂದ ಬರುವ ರೋಗ ಇದು. ಈ ಚಿಗಟಗಳ ದೇಹದಲ್ಲಿ ಯೇರ್ಸಿನಿಯ ಪೆಸ್ಟಿಸ್ ಎನ್ನುವ ರೋಗಾಣು ಇರುತ್ತದೆ. ಚಿಗಟಗಳು ನಮಗೆ ಕಚ್ಚಿದಾಗ ರೋಗವು ನಮಗೆ ಬರುತ್ತದೆ.
ರೋಗಿಗೆ ಜ್ವರ, ತಲೆನೋವು, ವಾಂತಿ ಉಂಟಾಗುತ್ತದೆ. ಕಚ್ಚಿದ ಜಾಗದ ಹತ್ತಿರವಿರುವ ದುಗ್ಧ ಗ್ರಂಥಿಗಳು (ಲಿಂಫ್ ನೋಡ್ಸ್) ಊದಿಕೊಳ್ಳುತ್ತದೆ. ಕಾಯಿಲೆ ಉಲ್ಬಣ ಗೊಂಡಾಗ ಶ್ವಾಸಕೋಶದ ನ್ಯೂಮೋನಿಯ ಪ್ರಾರಂಭವಾಗಿ, ರಕ್ತಕ್ಕೆ ನಂಜು ಏರಿ ರೋಗಿ ಸಾವನ್ನಪ್ಪಬಹುದು. ಸರಿಯಾದ ಸಮಯದಲ್ಲಿ ಔಷಧೋ ಪಚಾರ ಮಾಡದೇ ಇದ್ದರೆ 90 ಶೇಕಡಾ ಜನರು ಸಾಯುತ್ತಾರೆ. ಆದ್ದರಿಂದ ಜನರು ಇಲಿಗಳಿಗೆ ಹೆದರುತ್ತಿದ್ದರು. ಮನೆಯ ಮಹಡಿಯಿಂದ ಒಂದು ಇಲಿ ಸತ್ತು ಬಿದ್ದಿದೆ ಎಂದರೆ ಆ ಪರಿಸರದ ಅಷ್ಟೂ ಜನರು ಮನೆಗಳನ್ನು ಖಾಲಿ ಮಾಡಿ ಹೋಗುತ್ತಿದ್ದರು.
ಕಾಯಿಲೆ ಪ್ರಾರಂಭವಾದ ನಂತರ ಒಂದು ವರ್ಷದವರೆಗೆ ಮುಂಬೈಯಲ್ಲಿ ಪ್ರತಿವಾರ ಸುಮಾರು 2000 ಜನರು ಸಾವನ್ನಪ್ಪುತ್ತಿದ್ದರು. ಲಕ್ಷಾಂತರ ಜನರು
ನಗರ ಪ್ರದೇಶವನ್ನು ಬಿಟ್ಟು ವಲಸೆ ಹೋದರು. ಹಿಂದಿನ 1891 ಜನಗಣತಿಯ ಪ್ರಕಾರ ಮುಂಬೈಯ ಜನಸಂಖ್ಯೆ 8.2 ಲಕ್ಷ ಇದ್ದರೆ, 1901 ರ ಜನಗಣತಿ ಯಲ್ಲಿ ಜನಸಂಖ್ಯೆ 7.8ಲಕ್ಷಕ್ಕೆ ಇಳಿಯಿತು.
ಆಗಷ್ಟೇ ಕಾಲರಾ ರೋಗಕ್ಕೆ ಲಸಿಕೆ ಕಂಡು ಹಿಡಿದು ಪ್ರಪಂಚದಾದ್ಯಂತ ಸುದ್ದಿಯಾದ ಯುಕ್ರೇನ್ ದೇಶದ ಡಬ್ಲ್ಯೂ. ಎಂ. ಹಾಫ್ಕಿನ್ ರವರನ್ನು ಪ್ಲೇಗ್ ರೋಗಕ್ಕೆ ಲಸಿಕೆ ಕಂಡು ಹಿಡಿಯಲು ಭಾರತಕ್ಕೆ ಕರೆಸಲಾಯಿತು. ಮುಂಬೈಯ ಜೆಜೆ ಹಾಸ್ಪಿಟಲ್ ನಲ್ಲಿ ಹಾಫ್ಕಿನ್ ನೇತೃತ್ವದಲ್ಲಿ ಪ್ರಯೋಗಾಲಯವನ್ನು ಸ್ಥಾಪಿಸಲಾಯಿತು. ಮುಂದೆ ಇದೇ ಹಾಫ್ಕಿನ್ ಇನ್ಸ್ಟಿಟ್ಯೂಟ್ ಆಯಿತು. ಜೆಮ್ ಸೇಟ್ಜಿ ಟಾಟಾ ರವರ ನೇತೃತ್ವದಲ್ಲಿ ಮುಂಬೈಯ ಹೊರವಲಯದಲ್ಲಿ ವಲಸೆ ಹೋಗುವವರನ್ನು ತಡೆದು
ವಸತಿ ಕಲ್ಪಿಸಿಕೊಡಲಾಯಿತು. ಪೊಲೀಸರು ಮನೆ ಮನೆಗೆ ದಾಳಿಮಾಡಿ ರೋಗಿಗಳನ್ನು ಹುಡುಕಿದರು. ಔಷಧ ಸಿಂಪಡಿಸಿದರು.
ರೋಗಿಗಳನ್ನು ಪ್ಲೇಗ್ ಕ್ಯಾಂಪಿಗೆ ಸೇರಿಸಿದರು. ಕಾಯಿಲೆ ಇರುವ ಬೀದಿಗಳ ಜನರನ್ನು ಬೇರೆಡೆ ಸ್ಥಳಾಂತರಿಸಿದರು. ಆಗ ಮುಂಬೈ ನಗರವನ್ನು 21 ದಿನಗಳ ವರೆಗೆ ಲಾಕ್‌ಡೌನ್ ಮಾಡಲಾಗಿತ್ತು. ಸಾರಿಗೆ ಸಂಚಾರವನ್ನು ನಿರ್ಬಂಧಿಸಿ, ಜನರು ಗುಂಪು ಗೂಡುವು ದನ್ನು ಲಾಠಿ ಪ್ರಹಾರ ಮಾಡಿ ಚದುರಿಸುತ್ತಿದ್ದರು. ಜನರು
ಇದನ್ನು ಬ್ರಿಟಿಷ್ ಪೊಲೀಸರ ದುರ್ನಡತೆ ಎಂದು ಭಾವಿಸಿದರು.
ಮುಂಬೈಗೆ ಬಂದ ಪ್ಲೇಗಿನ ಮೂಲ ಚೀನಾ ಎಂದು ಹೇಳಲಾಗುತ್ತಿತ್ತು. ಹಾಂಕಾಂಗ್ ನಿಂದ ಬಂದ ಹಡಗಿನ ಮೂಲಕ ಈ ಕಾಯಿಲೆ ಮುಂಬೈಗೆ ಬಂತು. ಮುಂಬಯಿಗೆ ಬರುವ ನಾಲ್ಕು ವರ್ಷಗಳ ಮೊದಲು ಚೀನಾದಲ್ಲಿ ಪ್ಲೇಗ್ ಪ್ರಾರಂಭವಾಗಿತ್ತು. ಆಗಿನ ಅಲ್ಲಿಯ ಕ್ಕಿಂಗ್ ರಾಜವಂಶವು ರೋಗಿಗಳನ್ನು ಪ್ರತ್ಯೇಕಿಸಲು ಒಪ್ಪಿರಲಿಲ್ಲ. ರೋಗಿಗಳನ್ನು ಅವರ ಕುಟುಂಬದಿಂದ ಪ್ರತ್ಯೇಕಿಸುವುದು ಕನ್ಯೂಷಿಯಸ್ ತತ್ವಕ್ಕೆ ವಿರುದ್ಧ ಎಂದು ನಂಬಲಾಗಿತ್ತು. ಮುಂಬೈ ಗವನರ್ರ ಜನರಲ್ ಪ್ಲೇಗ್ ರೋಗವನ್ನು ನಿಯಂತ್ರಿಸಲು ಸಾಂಕ್ರಾಮಿಕ ರೋಗ ಕಾಯಿದೆ 1897 ನ್ನು ಜಾರಿಗೆ ತಂದನು. ಸುಮಾರು 123 ವರ್ಷಗಳ ನಂತರ ಅಂದರೆ 2019ರ ಕೋವಿಡ್-19 ಸಾಂಕ್ರಾಮಿಕ ರೋಗ ಬಂದ ಮೇಲೆ ಈ ಕಾಯ್ದೆಗೆ ಬದಲಾವಣೆಯನ್ನು ತರಲಾಯಿತು.
ಮುಂಬೈಯಿಂದ ಪುಣೆಗೂ ಪ್ಲೇಗ್ ರೋಗ ಹರಡಿತು. ಪ್ಲೇಗ್ ನಿಯಂತ್ರಣಕ್ಕಾಗಿ ಅಲ್ಲಿ ಸೈನ್ಯವನ್ನು ಕರೆಸಲಾಯಿತು. ಸೈನಿಕರ ದುರ್ನಡತೆ ಹಾಗೂ ಕ್ರೂರತನವನ್ನು ಜನ ಸಹಿಸದಾದರು. ದುರ್ವರ್ತನೆಗೆ ಕುಖ್ಯಾತರಾಗಿದ್ದ ಪ್ಲೇಗ್ ಅಧಿಕಾರಿ ಚಾಲ್ಸ್ ರಾಂಡ್ ಹಾಗೂ ಲೆಫ್ಟಿನೆಂಟ್ ಚಾಲ್ಸ್ ಅಯಾಸ್ಟ್‌ರ್ ಅವರನ್ನು ಚಾಪೆಕರ್
ಸಹೋದರರು 1897ರ ಜೂನ್ 22ರಂದು ಗುಂಡು ಹೊಡೆದು ಸಾಯಿಸಿದರು. ಚಾಪೆಕರ್ ಸಹೋದರರನ್ನು ಬೆಂಬಲಿಸಿ ತಮ್ಮ ಕೇಸರಿ ಪತ್ರಿಕೆಯಲ್ಲಿ ಬಾಲಗಂಗಾ ಧರ ತಿಲಕರು ಬರೆದ ಲೇಖನಕ್ಕಾಗಿ ಅವರಿಗೆ ಒಂದೂವರೆ ವರ್ಷ ಜೈಲು ಶಿಕ್ಷೆ ಲಭಿಸಿತು. ಬ್ರಿಟಿಷ್ ಅಧಿಕಾರಿಗಳನ್ನು ಗುಂಡಿಟ್ಟು ಸಾಯಿಸಿದ ಚಾಪೆಕರ್
ಸಹೋದರರನ್ನು ಬ್ರಿಟಿಷರು ಬಂಧಿಸಿ, ವಿಚಾರಣೆ ನಡೆಸಿ, ಗಲ್ಲಿಗೇರಿಸಿದರು.
ಆಗಿನ ಕಾಲದಲ್ಲಿ ಜಾತಿ ಪದ್ಧತಿ ಆಳವಾಗಿ ಬೇರು ಬಿಟ್ಟಿತ್ತು. ಮೇಲು ವರ್ಗದ ವೈದ್ಯರು ಕೆಳ ವರ್ಗದ ರೋಗಿ ಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದರು. ಇದನ್ನು
ಗಂಭೀರವಾಗಿ ಪರಿಗಣಿಸಿದ ಬ್ರಿಟಿಷ್ ಸರಕಾರ ಆಜ್ಞೆ ಹೊರಡಿಸಿತು. ಖ್ಯಾತ ಸಮಾಜ ಸೇವಕ ಜ್ಯೋತಿರಾವ್ ಫುಲೆ ಅವರ ಪತ್ನಿ ಸಾವಿತ್ರಿಬಾಯಿ ಫುಲೆ, ತಮ್ಮ ಸಾಕು ಮಗನಾದ ವೈದ್ಯ ಡಾಕ್ಟರ್ ಯಶವಂತರಾವ್ ಜೊತೆಗೆ ಹಗಲಿರುಳು ಪೂನಾದಲ್ಲಿ ಪ್ಲೇಗ್ ರೋಗಿಗಳ ಆರೈಕೆ ಮಾಡಿದರು. ಇವರಿಬ್ಬರು ಪ್ಲೇಗ್ ರೋಗಿಗಳ ಸೇವೆ ಮಾಡುತ್ತಾ ಮಾಡುತ್ತಾ ಅದೇ ಖಾಯಿಲೆಯಿಂದಲೇ ಮರಣವನ್ನಪ್ಪಿದರು.
ಮುಂಬೈ ನಗರವನ್ನು ಆರೋಗ್ಯಕರ ನಗರವನ್ನಾಗಿ ಮಾಡಲು ೧೮೯೮ರಲ್ಲಿ ಬ್ರಿಟಿಷ್ ಸಂಸತ್ತು ಬಾಂಬೆ ನಗರ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಅನುಮೋದನೆ
ನೀಡಿತು.
(ಮುಂದುವರಿಯುವುದು).