Dr Jayanti Manohar Column: ಜಪಾನ್‌ನಲ್ಲಿ ಸರಸ್ವತಿ !
ಭಾರತದಿಂದ ಜಪಾನಿಗೆ ಪ್ರಯಾಣ ಮಾಡಿದ ನಮ್ಮ ದೇವತೆಗಳು ಮೊದಲು ತಲುಪಿದ್ದು ಚೀನಾ ದೇಶ. ಹಾಗಾಗಿ, ಈ ದೇವತೆಗಳಿಗೆ ಜಪಾನಿನಲ್ಲಿ ಚೀನೀ ಪ್ರಭಾವದ ಹೆಸರುಗಳಿವೆ. ಇಂದ್ರ (ತೈಶಾಕು -ಟೆನ್), ವರುಣ (ಸೂಯಿ-ಟೆನ್), ಯಮ (ಎಮ್ಮ), ಅಗ್ನಿ (ಕಾಟೆನ್), ವಾಯು (ಹೂ-ಟೆನ್), ಮುಂತಾದ ದೇವತೆ ಗಳೊಂದಿಗೆ ನಮ್ಮ ಋಗ್ವೇದ ಮೂಲದ ಸರಸ್ವತಿ ದೇವಿ ಅಲ್ಲಿ ಬೆಂಜಟೇನ್ ಮುಂತಾದ ಹಲವಾರು ಹೆಸರುಗಳಲ್ಲಿ ಹಲವು ಶತಮಾನಗಳಿಂದಲೂ ವ್ಯಾಪಕವಾಗಿ ಪೂಜೆಗೊಳ್ಳುತ್ತಿದ್ದಾಳೆ.


ಆಧುನಿಕ ತಂತ್ರಜ್ಞಾನದಲ್ಲಿ ಮೇಲ್ಪಂಕ್ತಿಯಲ್ಲಿ ಕಾಣುವ ಜಪಾನ್‌ನಲ್ಲಿ ಇರುವ ನಮ್ಮ ದೇವತೆಗಳ ಅಧ್ಯಯನ ರೋಚಕವಾದುದು. ೨೦೦೯ ರಲ್ಲಿ ಜಪಾನಿನ ಕ್ಯೋಟೋ ನಗರದಲ್ಲಿ ನಡೆದ ‘ವಿಶ್ವ ಸಂಸ್ಕೃತ ಸಮ್ಮೇಳನ’ದಲ್ಲಿ ಭಾಗವಹಿಸಿದ ಲೇಖಕಿಯ ಅಧ್ಯಯನದ ವಿಚಾರ ಗಳು ಇಲ್ಲಿವೆ.
ಇಂದು ಜಪಾನಿನಲ್ಲಿ ಬೌದ್ಧ ಹಾಗೂ ಶಿಂಗಾನ್ ಪಂಥಗಳೆರಡೂ ಕಾಣುತ್ತದಾದರೂ ಅವೆರಡರ ನಡುವಿನ ಭೇದಗಳು ಇಂದು ಅಷ್ಟಾಗಿ ಕಾಣುವುದಿಲ್ಲ. ಶಿಂಟೋ ಪಂಥದ ಆಧ್ಯಾತ್ಮಿಕ ತತ್ತ್ವ ಚಿಂತನೆ ಗಳಲ್ಲಿ ವೇದಕಾಲೀನ ಚಿಂತನೆಗಳ ಸಾರವಿದೆ ಎಂದು ವಿದ್ವಾಂಸರು ಗುರುತಿಸುತ್ತಾರೆ. ಬೌದ್ಧ ಮತ ಹರಡುವ ಮೊದಲೇ ಜಪಾನ್ ತಲುಪಿ ನೆಲೆಗೊಂಡಿರುವ ಹಿಂದೂ ದೇವತಾರಾಧನೆಯ ಪರಿಕಲ್ಪನೆ ಗಳು ಅಲ್ಲಿ ರೂಪುಗೊಂಡಿದೆ.
ಭಾರತದಿಂದ ಜಪಾನಿಗೆ ಪ್ರಯಾಣ ಮಾಡಿದ ನಮ್ಮ ದೇವತೆಗಳು ಮೊದಲು ತಲುಪಿದ್ದು ಚೀನಾ ದೇಶ. ಹಾಗಾಗಿ, ಈ ದೇವತೆಗಳಿಗೆ ಜಪಾನಿನಲ್ಲಿ ಚೀನೀ ಪ್ರಭಾವದ ಹೆಸರುಗಳಿವೆ. ಇಂದ್ರ (ತೈಶಾಕು -ಟೆನ್), ವರುಣ (ಸೂಯಿ-ಟೆನ್), ಯಮ (ಎಮ್ಮ), ಅಗ್ನಿ (ಕಾಟೆನ್), ವಾಯು (ಹೂ-ಟೆನ್), ಮುಂತಾ ದ ದೇವತೆಗಳೊಂದಿಗೆ ನಮ್ಮ ಋಗ್ವೇದ ಮೂಲದ ಸರಸ್ವತಿ ದೇವಿ ಅಲ್ಲಿ ಬೆಂಜಟೇನ್ ಮುಂತಾದ ಹಲವಾರು ಹೆಸರುಗಳಲ್ಲಿ ಹಲವು ಶತಮಾನಗಳಿಂದಲೂ ವ್ಯಾಪಕವಾಗಿ ಪೂಜೆಗೊಳ್ಳುತ್ತಿದ್ದಾಳೆ.
ಇದನ್ನೂ ಓದಿ: L P Kulkarni Column: ನಮ್ಮ ಜ್ಞಾಪಕ ಶಕ್ತಿ ಹೆಚ್ಚಿಸುವ ಐದು ವಿಶಿಷ್ಟ ಗಿಡಮೂಲಿಕೆಗಳು
ವೀಣೆ ಕೈಯಲ್ಲಿ ಹಿಡಿದು ದೇವವಾಣಿಯನ್ನು ಸಂಕೇತಿಸುವ ಸರಸ್ವತಿ ಅಲ್ಲಿ ‘ಬೆನ್‌ಟೆನ್’ ಅಂದರೆ ವಾಣಿಯ ದೇವತೆ. ಮೈಯೋ ಟೇನ್ ಮಧುರ ಸ್ವರದ ದೇವತೆ, ಡೈ ಬೆನ್ಜಟೇನ್ - ಬುದ್ಧಿ ಪ್ರದಾಯಿನಿ ದೇವತೆ ಹಾಗೂ ಸಾಮಾ ಬೆನ್ಜಮಿನಿಯಾಗಿ ಕವಿಗಳಿಗೆ ಹಾಗೂ ಕಲಾವಿದರಿಗೆ ಪ್ರೇರಣೆ ಕೊಡುತ್ತಾಳೆ ಎನ್ನುವ ಜಪಾನೀಯರ ನಂಬಿಕೆ ಚೋದಯಿತ್ರೀ ಸೂನೃತಾನಾಂ ..ಪ್ರಚೇತಯತಿ ಕೇತುನಾ (ಋ:1.3.12) ಎಂಬ ಋಗ್ವೇದದ ಮಂತ್ರಾರ್ಥವನ್ನು ಪ್ರತಿಬಿಂಬಿಸುತ್ತದೆ.
ಭಾರತದಲ್ಲಿ, ಹಿಂದೆ ಬೃಹತ್ತಾಗಿ ಹರಿಯುತ್ತಿದ್ದ ನದಿಯನ್ನು ದೇವಿ ಸರಸ್ವತಿ ಎಂದು ಕರೆದ ವೇದ ಕಾಲೀನ ಋಷಿಗಳು ಅತ್ಯಂತ ಬೃಹತ್ತಾದ ನದಿ ಅಂಬಿತಮೇ ಎಂದು ವರ್ಣಿಸುತ್ತಾರೆ. ಈ ನಂಬಿಕೆ ಯಂತೆ, ಜಪಾನಿನಲ್ಲಿ ಸರಸ್ವತಿಯನ್ನು ನದಿ ದೇವತೆ ಎಂದೂ ಪೂಜಿಸುತ್ತಾರೆ. ಅಲ್ಲಿ ಅವಳ ಮಂದಿರಗಳೆಲ್ಲವೂ ನದಿಯ ದಡದಲ್ಲಿ ಅಥವಾ ಕೆರೆಗಳ ಬಳಿ ನಿರ್ಮಿಸಿದ್ದಾರೆ.
ಸರಸ್ವತಿ ಮೂರ್ತಿಯೊಂದಿಗೆ ಅವಳ ದೂತರೆಂದು ಅಲ್ಲಿ ಭಾವಿಸುವ ಸರ್ಪಗಳ ಮೂರ್ತಿಗಳೂ ಕಾಣುತ್ತವೆ. ಜ್ಞಾನ, ಐಶ್ವರ್ಯ, ಆನಂದ, ಸಂಗೀತ - ನೃತ್ಯ ಮುಂತಾದ ಕಲೆಗಳ ಅಧಿದೇವತೆಯಾದ ಬೆಂಜಟೈನ್ ಸೌಂದರ್ಯದ ಖನಿಯಾಗಿ ಅಲ್ಲಿನ ಚಿತ್ರಗಳಲ್ಲಿ, ಶಿಲ್ಪಗಳಲ್ಲಿ ಕಂಗೊಳಿಸುತ್ತಾಳೆ. ಹೆಣ್ಣುಮಗುವನ್ನು ಪಡೆಯಲು ನವ ದಂಪತಿಗಳು ಅವಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಸರಸ್ವತಿ ಕುರಿತ ನಾಟಕಗಳು ಅಲ್ಲಿ ಪ್ರಯೋಗಗೊಳ್ಳುತ್ತವೆ.
ಸರಸ್ವತಿ ನದೀತೀರದಲ್ಲಿ ಪಲ್ಲವಿಸಿದ ವೇದ ಸಂಸ್ಕೃತಿಯಲ್ಲಿ ಸರಸ್ವತಿ ಅತ್ಯುನ್ನತ ದೇವಿ (ದೇವಿತ ಮೇ). ಬುದ್ಧಿಶಕ್ತಿಯನ್ನು ಕೊಡುವ, ಒಳ್ಳೆಯ ಆಲೋಚನೆಗಳನ್ನು ಪ್ರೇರೇಪಿಸುವ ಅವಳು ಜ್ಞಾನದ ಅಧಿದೇವತೆ. ವಿದ್ಯಾದಾಯಿನಿ, ಒಳ್ಳೆಯ ಮಾತನ್ನಾಡಲು ಸೂರ್ತಿಕೊಡುವವಳು, ಯಜ್ಞವನ್ನು ಅಂದರೆ, ಒಳ್ಳೆಯ ಕೆಲಸವನ್ನು ರಕ್ಷಿಸುವವಳು ಎಂದೆಲ್ಲಾ ಹೇಳುವುದರೊಂದಿಗೆ, ಸರಸ್ವತಿಯನ್ನು “ವೃತ್ರ್ನ - ವೃತ್ರಾಸುರನ ವಧೆಮಾಡಿದವಳು" (ಋ:6.61.7) ಎಂದು ಋಗ್ವೇದದಲ್ಲಿ ಹೇಳುವಲ್ಲಿ, ಅವಳ ಶಕ್ತಿ ಸ್ವರೂಪದ ವರ್ಣನೆಯೂ ಕಾಣಿಸುತ್ತದೆ.
ದುರ್ಗೆಯಂತೆ ಕಾಣುವ ಕ್ರೋಧ ಸರಸ್ವತಿ - ಬೆಂಜಟೇನ್ ವಿಚಾರ ವಿಶೇಷ ಎನಿಸಿದೆ. ಜಪಾನಿನಲ್ಲಿ ಅವಳ ಶಕ್ತಿಸ್ವರೂಪದ ಆರಾಧನೆ ವಿಶೇಷವಾದದು. ಅಲ್ಲಿ ಅವಳು ಎಂಟು ಕೈಗಳಲ್ಲಿ ಬಿಲ್ಲು-ಬಾಣ, ಕತ್ತಿ, ತ್ರಿಶೂಲ, ವಜ್ರಾಯುಧ, ಶಂಖ, ಮುಸಲ ಹಾಗೂ ಚಕ್ರಾಯುಧಗಳನ್ನು ಹಿಡಿದು ದುರ್ಗಿ ಸ್ವರೂಪದಲ್ಲಿ ಯುದ್ಧದಲ್ಲಿ ಯೋಧರನ್ನು ರಕ್ಷಿಸುತ್ತಾಳೆ ಎನ್ನುವ ನಂಬಿಕೆಯಿದೆ.
ಎಂಟನೇ ಶತಮಾನದಲ್ಲಿದ್ದ ಚಕ್ರವರ್ತಿ ಶೋಮು ಜಪಾನಿನ ಎಲ್ಲಾ ಪ್ರದೇಶಗಳಲ್ಲಿ ಈ ಸೂತ್ರದ ಪಠಣ ಮಾಡಲು ಆದೇಶಿಸಿದ್ದ. ಸ್ವಾಹಾ ? ನಮೋ ಸರಸ್ವತ್ಯೈ ಮಹಾ ದೇವ್ಯೈ ಸ್ವಾಹಾ? ನಮೋ ಭಗವತಿ ಮಹಾ ದೇವಿ ಸರಸ್ವತಿ? ಸಿಧ್ಯಂತು ಮಂತ್ರಪದಾನಿ ಸ್ವಾಹಾ? (ಶಿಕಾಕು 12ನೇ.ಶ.) ಯುದ್ಧ ರಂಗದಲ್ಲಿ ಸರಸ್ವತಿ ನಮ್ಮನ್ನು ರಕ್ಷಿಸಲಿ ಎನ್ನುವ ಈ ಪ್ರಭಾವಿ ಮಂತ್ರವನ್ನು ಜಪಾನಿನ ಮಹಾ ದಂಡನಾಯಕರು ಯುದ್ಧರಂಗದಲ್ಲಿ ಪಠಿಸುತ್ತಿದ್ದ ಉಲ್ಲೇಖ ಅಲ್ಲಿನ ಕಾವ್ಯಗಳಲ್ಲಿ ಕಾಣುತ್ತದೆ.
ಸುವರ್ಣಭಾಷೋತ್ತಮ ಸೂತ್ರ ಎನ್ನುವುದು ಬೌದ್ಧಮತದ ಪ್ರಸಿದ್ಧ ಸೂತ್ರ. ಅದರ ಏಳನೇ ಅಧ್ಯಾಯದಲ್ಲಿ ಸಂಪೂರ್ಣ ವಾಗಿ ದೇವಿ ಸರಸ್ವತಿಯ ಆರಾಧನೆಯ ವಿವರಗಳು ಕಾಣುತ್ತವೆ. ಇಲ್ಲಿ ಅವಳು ವಿವೇಕದಾಯಿಯಾದ ಪ್ರಭಾವಿ ಶಕ್ತಿದೇವತೆಯಾಗಿ ತೋರುತ್ತಾಳೆ. ಷೋಶೊ (1205-82) ಬರೆದಿರುವ ಅಸಬಶೊ ಎನ್ನುವ ಬೃಹತ್ ಗ್ರಂಥದಲ್ಲಿ ದೇವಿ ಸರಸ್ವತಿಯನ್ನು ಕುರಿತು ವಿಸ್ತೃತ ಮಾಹಿತಿ ಇದೆ.
ಅಂತೆಯೇ, ಸರಸ್ವತಿ ಆರಾಧನೆಯಲ್ಲಿ ಪ್ರಚಲಿತವಿರುವ ಪಾರಂಪರಿಕ ಆಚರಣೆಗಳ ದೀರ್ಘ ವಿವರಣೆಯನ್ನು ರೈಸನ್ (1279-1349) ಬರೆದಿರುವ ಬೈಕು- ಹೊಕ್ಕು-ಶೊ (ಭಾರತೀಯ ಶ್ವೇತ ರತ್ನ) ಎನ್ನುವ ಗ್ರಂಥದಲ್ಲಿ ದಾಖಲಾಗಿದೆ. ಸರಸ್ವತಿ ಮಂತ್ರಗಳು ಹಾಗೂ ಅದನ್ನು ಪಠಿಸಿದಾಗ ದೊರಕುವ ಸರಸ್ವತಿಯ ವಿಶೇಷ ಕೃಪೆಯನ್ನು ಅದು ಹೇಳುತ್ತದೆ.
ಐತಿಹ್ಯಗಳು
ಸರಸ್ವತಿಯ ಆರಾಧನೆಯೊಂದಿಗೆ ಹಲವಾರು ಪವಾಡಗಳ ಐತಿಹ್ಯಗಳು ಜಪಾನಿನಲ್ಲಿ ಇಂದಿಗೂ ಹೊಸ ಅಧ್ಯಾಯಗಳನ್ನು ಸೇರಿಸುತ್ತಿವೆ. ಕವಿ ಮಿಯಾಕೋ ಯೋಷಿಕ (824-879)ನಿಗೆ ಶಿಕುಬುಶಿಕ ಮಂದಿರದ ಬೆಂಜಟೈನ್ ಕನಸಿನಲ್ಲಿ ಬಂದು ಕವಿತೆಯ ಸಾಲೊಂದನ್ನು ಹೇಳಿ ಪ್ರೇರಣೆ ಕೊಟ್ಟಳು ಎನ್ನುವ ಒಂದು ಉಲ್ಲೇಖ ನಮ್ಮ ಕವಿ ಕಾಳಿದಾಸನಿಗೆ ಮಹಾಕಾಳಿ ನೀಡಿದ ವರವನ್ನು ನೆನಪಿಸು ತ್ತದೆ.
1934 ರಲ್ಲಿ ಶಿಬೋನ್ ಸೋನಿಯೋ ಎಂಬ ಪ್ರಭಾವಿ ಮಹಿಳೆ ಬೆನ್‌ಟೆನ್‌ಶು ಎಂಬ ನವೀನ ಸರಸ್ವತಿ ಪಂಥವನ್ನು ಪ್ರಾರಂಭಿಸಿದಳು. ದೇವಿ ತನ್ನ ದೇಹವನ್ನು ಸೇರಿದ್ದಾಳೆ ಎನ್ನುತ್ತಿದ್ದ ಅವಳು, ಅದು ವರೆಗೂ ಅವಳಿಗೆ ಅಪರಿಚಿತವಾಗಿದ್ದ ಸಂಸ್ಕೃತ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದಳು ಎಂಬ ಮಾಹಿತಿ ಸಿಗುತ್ತದೆ.
ಸುಮಾರು ಎಂಟನೇ ಶತಮಾನದಲ್ಲಿದ್ದ ವಿದ್ವಾಂಸ, ಕೊಬೊದೈಷಿಯಿಂದ ಅಲ್ಲಿ ಸಂಸ್ಕೃತ ಭಾಷೆಯ ಅಧ್ಯಯನ ಪ್ರಾರಂಭ ವಾಯಿತು. ಅವನು ಸಂಸ್ಕೃತ ಕಲಿತದ್ದು ಚೀನಾದಲ್ಲಿದ್ದ ಕಾಶ್ಮೀರಿ ಗುರು, ಪ್ರಾಜ್ಞ ನಿಂದ. ಅಧ್ಯಯನ ಮುಗಿಸಿ ಜಪಾನಿಗೆ ಮರಳಿದ ಕೊಬೊದೈಷಿ ವಿದ್ಯಾ ಕ್ಷೇತ್ರದಲ್ಲಿ ಮಾಡಿದ ಹಲವಾರು ಕಾರ್ಯಗಳನ್ನು ಅವರು ಗೌರವದಿಂದ ನೆನೆಯುತ್ತಾರೆ.
ಅವನು ಸಂಸ್ಕೃತ ಮಂತ್ರಗಳನ್ನು ಬರೆಯಲು ಭಾರತೀಯ ಲಿಪಿಮಾಲೆಯನ್ನು ಬಳಕೆಗೆ ತಂದು, ಸಾಮಾನ್ಯ ಜನರಿಗಾಗಿ ಶಾಲೆ ಆರಂಭಿಸಿದವನು.ಜಪಾನಿನ ಪ್ರಸಿದ್ಧ ವಿದ್ವಾಂಸರಾದ ಹಜಿಮ ನಾಕ ಮುರ (1912 -1999), ಭಾರತದ ಪ್ರಭಾವವಿಲ್ಲದಿದ್ದರೆ, ಜಪಾನಿನ ಸಂಸ್ಕೃತಿ ಈಗಿರುವಂತೆ ಇರುತ್ತಿರ ಲಿಲ್ಲ. ಇಂದು ಬೌದ್ಧ ಮತವನ್ನು ಅನುಸರಿಸುವ ಜಪಾನೀಯರು ಭಾರತದ ವಿಚಾರಗಳಿಂದ ಬಹುವಾಗಿ ಪ್ರಭಾವಿತರಾಗಿದ್ದಾರೆ ಎನ್ನುತ್ತಾ, ಭಾರತ ಸಾಂಸ್ಕೃತಿಕವಾಗಿ, ಜಪಾನಿನ ಮಾತೆ ಎಂದು ಹೇಳುತ್ತಾರೆ.
ಜಪಾನಿನಲ್ಲಿ ಸಂಸ್ಕೃತ ಭಾಷೆ
ಜಪಾನಿನಲ್ಲಿ ಸಂಸ್ಕೃತ ಭಾಷೆಯಅಧ್ಯಯನ 1500 ವರ್ಷಗಳಿಗೂ ಹಿಂದಿನಿಂದಲೂ ನಡೆಯು ತ್ತಿದೆ. ಅಲ್ಲಿನ ಹಲವಾರು ವಿಶ್ವವಿದ್ಯಾಲಯ ಗಳಲ್ಲಿ ಹಾಗೂ ದೇವಾಲಯಗಳಲ್ಲಿ ಈಗಲೂ ಸಂಸ್ಕೃತ ಭಾಷೆ ಯಲ್ಲಿರುವ ಗ್ರಂಥಗಳ ಅಧ್ಯಯನ ನಡೆಯುತ್ತಿದೆ. ಸಂಸ್ಕೃತ ಭಾಷೆ ಜಪಾನ್ ತಲುಪಿದ್ದು ಚೀನಾ ಮೂಲಕವೇ. ಅಲ್ಲಿ ಭಾರತದಲ್ಲಿರುವುದಕ್ಕಿಂತಲೂ ಹಿಂದಿನ ಕೈ ಬರಹದ ಸಂಸ್ಕೃತ ಗ್ರಂಥ ಗಳಿವೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ಅವೆಲ್ಲವೂ ಅಲ್ಲಿನ ದೇವಾಲಯಗಳಲ್ಲಿ ಸುರಕ್ಷಿತ ವಾಗಿವೆ. ಅವುಗಳಲ್ಲಿ ಚೀನೀ ಭಾಷೆಯಲ್ಲಿರುವ ಸಂಸ್ಕೃತ ಗ್ರಂಥಗಳ ಸಂಖ್ಯೆಯೂ ದೊಡ್ಡದೇ.