Astro Tips: ‘ಶುಕ್ರವಾರದ ಪೂಜೆಯ ವೇಳೆಗೆ..’ : ಲಕ್ಷ್ಮೀ ದೇವಿಯನ್ನು ಸುಪ್ರಸನ್ನಗೊಳಿಸಲು ಹೀಗಿರಲಿ ನಿಮ್ಮ ಆರಾಧನೆ
ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಶುಕ್ರವಾರ ತುಂಬಾನೇ ಪ್ರಶಸ್ತವಾದ ದಿನ. ಈ ದಿನ ಶ್ರದ್ಧಾ, ಭಕ್ತಿಯಿಂದ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಹಣ ಮತ್ತು ಸಮೃದ್ಧಿ ನಮ್ಮದಾಗುತ್ತದೆ. ಜ್ಯೋತಿಷ್ಯ ಶಾಸ್ತ್ರವು ಕೆಲವೊಂದು ನಿಯಮಗಳನ್ನು ಉಲ್ಲೇಖಿಸಿದೆ. ಈ ನಿಯಮಗಳನ್ನು ಶುಕ್ರವಾರದಂದು ಲಕ್ಷ್ಮಿ ಪೂಜೆಯಲ್ಲಿ ರೂಢಿಸಿಕೊಂಡರೆ ದೇವಿಯ ಆಶೀರ್ವಾದವನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ಸಾಂದರ್ಭಿಕ ಚಿತ್ರ -
ಬೆಂಗಳೂರು: ‘ಯಾ ದೇವಿ ಸರ್ವ ಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ..’ ಜಗನ್ಮಾತೆಯು ಲಕ್ಷ್ಮೀ ಸ್ವರೂಪಿಯಾಗಿದ್ದುಕೊಂಡು ತನ್ನ ಭಕ್ತರಿಗೆ ಅಷ್ಟ ಐಶ್ವರ್ಯಗಳನ್ನು ಕರುಣಿಸುತ್ತಾಳೆಂಬುದು ನಮ್ಮ ಧರ್ಮದ ನಂಬಿಕೆ. ಹಾಗೆಯೇ ಶುಕ್ರವಾರ(Friday) ಲಕ್ಷ್ಮೀ ದೇವಿಯ(lakshmi Devi) ದಿನವಾಗಿ ಪ್ರಸಿದ್ಧಿಯನ್ನು ಪಡೆದಿದೆ. ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಧನ-ಕನಕ-ಸಂಪತ್ತುಗಳನ್ನು ಖಂಡಿತವಾಗಿಯೂ ಬಯಸುತ್ತಾನೆ ಮತ್ತು ಅದಕ್ಕಾಗಿಯೇ ತನ್ನ ಜೀವಮಾನವೆಲ್ಲಾ ಸಂಪಾದನೆಯಲ್ಲಿ ತೊಡಗಿಸಿಕೊಳ್ಳುತ್ತಾನೆ. ಕೆಲವರಿಗೆ ಲಕ್ಷ್ಮೀ ಒಲಿದರೆ ಇನ್ನು ಕೆಲವರಿಗೆ ಅವರು ಮಾಡುವ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲವೆಂಬ ಕೊರಗಿರುತ್ತದೆ.
ಹಾಗೆಯೇ ಲಕ್ಷ್ಮೀ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾದರೆ ಆಕೆಯನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಂದರ್ಭದಲ್ಲಿ ಆರಾಧನೆ ಮಾಡುವುದೂ ಸಹ ಅಷ್ಟೇ ಅವಶ್ಯಕ. ಹಾಗಾದರೆ ಲಕ್ಷ್ಮೀ ದೇವಿಯ ದಿನವಾಗಿರುವ ಶುಕ್ರವಾರದಂದು ಸಂಪತ್ತಿನ ಒಡತಿಯನ್ನು ಮೆಚ್ಚಿಸಲು ಆಕೆಯನ್ನು ಹೇಗೆ ಆರಾಧಿಸಬೇಕೆಂಬುದರ(Astro Tips) ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ಈ ದಿನದಂದು ಪ್ರಾತಃಕಾಲದಲ್ಲಿ ಶುಚಿರ್ಭೂತರಾಗಿ ಮೊದಲಿಗೆ ಲಕ್ಷ್ಮೀ ದೇವಿಯನ್ನು ಆರಾಧಿಸಿ ಬಳಿಕ ಶ್ರೀ ಸೂಕ್ತ ಅಥವಾ ಕನಕಧಾರಾ ಸ್ತೋತ್ರವನ್ನು ಪಠಿಸುವುದರಿಂದ ನಾವು ಲಕ್ಷ್ಮೀ ಕೃಪೆಗೆ ಪಾತ್ರರಾಗಲು ಸಾಧ್ಯವಿದೆ.
ಇನ್ನು, ಶುಕ್ರವಾರದ ದಿನ ಯಾವ ಹೂವುಗಳಿಂದ ಲಕ್ಷ್ಮೀ ದೇವಿಯನ್ನು ಅರ್ಚಿಸಬೇಕೆಂಬುದರ ಬಗ್ಗೆ ನೋಡುವುದಾದರೆ, ಈ ದಿನ ಲಕ್ಷ್ಮೀ ದೇವಿಗೆ ಪ್ರಿಯವಾದ ಕಮಲದ ಹೂ ಅಥವಾ ಗುಲಾಬಿ ಹೂಗಳನ್ನು ಅರ್ಪಿಸಬೇಕು. ನಿಮ್ಮ ಕೈಯಲ್ಲಿ ಕಮಲ ಅಥವಾ ಗುಲಾಬಿ ಹೂವುಗಳನ್ನು ಹಿಡಿದು ಅದನ್ನು ಲಕ್ಷ್ಮೀ ದೇವಿಯ ಪಾದಗಳಿಗೆ ಸಮರ್ಪಿಸುವುದರಿಂದ ನಾವು ಲಕ್ಷ್ಮೀ ಕಟಾಕ್ಷಕ್ಕೆ ಸುಲಭವಾಗಿ ಪಾತ್ರರಾಗಬಹುದು. ಮಾತ್ರವಲ್ಲದೇ ಈ ರೀತಿ ಮಾಡಿಕೊಂಡು ಬರುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಗಳು ನೆಲೆಸಿ ಆ ಮನೆ ಲಕ್ಷ್ಮೀ ನಿಲಯವಾಗುವುದರಲ್ಲಿ ಸಂಶಯವಿಲ್ಲ.
ಈ ಸುದ್ದಿಯನ್ನು ಓದಿ: Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಈ ಪಪ್ಪಾಯ ಗಿಡ ಇದ್ದರೆ ಒಳ್ಳೆಯದೇ..? ಇಲ್ಲಿದೆ ಉತ್ತರ
ಲಕ್ಷ್ಮೀ ದೇವಿಯನ್ನು ಪೂಜಿಸುವ ಸಂದರ್ಭದಲ್ಲಿ ನಾಲ್ಕು ಕರ್ಪೂರ ಮತ್ತು ಲವಂಗವನ್ನು ಉಪಯೋಗಿಸಬೇಕು. ಈ ನಾಲ್ಕು ಕರ್ಪೂರಗಳನ್ನು ಸುಟ್ಟ ನಂತರ ಲವಂಗವನ್ನು ಹಾಕಿ ಲಕ್ಷ್ಮೀ ದೇವಿಯ ವಿಗ್ರಹ ಅಥವಾ ಫೊಟೋಗೆ ಆರತಿಯನ್ನು ಬೆಳಗಬೇಕು. ಇದರಿಂದ ಲಕ್ಷ್ಮೀ ದೇವಿಯ ಕೃಪೆಗೆ ನಾವು ಪಾತ್ರರಾಗಲು ಸಾಧ್ಯವಿದೆ. ಮತ್ತು ಇದರಿಂದ ನಮ್ಮ ಮನೆಯಲ್ಲಿ ಇರಬಹುದಾದ ನಕಾರಾತ್ಮಕ ಶಕ್ತಿಗಳು ಅಥವಾ ನೆಗೆಟಿವ್ ಎನರ್ಜಿ ದೂರವಾಗುತ್ತದೆ.
ಪೂಜೆ ಆರಾಧನೆ ಜೊತೆಗೆ ದಾನಕ್ಕೂ ವಿಶೇಷವಾದ ಮಹತ್ವವಿದೆ. ಹಾಗಾಗಿ, ಶುಕ್ರವಾರದಂದು ಉಪವಾಸ ಮಾಡುವುದು ಶ್ರೇಯಸ್ಕರ ಮಾತ್ರವಲ್ಲದೇ, ಪಾಯಸವನ್ನು ತಯಾರಿಸಿ ಲಕ್ಷ್ಮೀ ದೇವಿಗೆ ನೈವೇದ್ಯವನ್ನು ಮಾಡಿ ಆರು ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಈ ಪಾಯಸವನ್ನು ಪ್ರಸಾದವಾಗಿ ನೀಡಬೇಕು. ಇದರ ಜೊತೆಗೆ ಹಣ್ಣುಗಳನ್ನು ದಾನವಾಗಿ ನೀಡುವುದರಿಂದಲೂ ಲಕ್ಷ್ಮೀ ಕಟಾಕ್ಷ ನಿಮಗೊಲಿಯಲು ಸಾಧ್ಯ. ಸತತ 21 ಶುಕ್ರವಾರ ಈ ವಿಧಾನವನ್ನು ಮಾಡಿಕೊಂಡು ಬರುವುದರಿಂದ ಲಕ್ಷ್ಮೀ ದೇವಿ ಸುಪ್ರಸನ್ನಳಾಗಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಹಾಗೂ ನೀವು ನಿಮ್ಮ ಸಾಲಬಾಧೆಗಳಿಂದ ಮುಕ್ತಿ ಹೊಂದಲು ಸಾಧ್ಯವಿದೆ.
ಇದಲ್ಲದೇ ಮುಖ್ಯವಾಗಿ ಶುಕ್ರವಾರದಂದು ಲಕ್ಷ್ಮೀ ದೇವಿಯನ್ನು ಪೂಜಿಸುವ ಸಂದರ್ಭದಲ್ಲಿ ಸುಮಂಗಲಿಯರು ಬಳಸುವ ವಸ್ತುಗಳನ್ನು ಆಕೆಯ ಮುಂದಿಟ್ಟು ಪೂಜಿಸುವುದನ್ನು ಮರೆಯದಿರಿ. ಪೂಜೆಯ ಬಳಿಕ ಮುತ್ತೈದೆಯರಿಗೆ ಈ ವಸ್ತುಗಳನ್ನು ನೀಡಬೇಕು. ಇದರಿಂದ ಆಯುರ್ ಆರೋಗ್ಯ ವೃದ್ಧಿಯಾಗಿ, ನಿಮ್ಮ ಮನೆಯಲ್ಲಿ ಸದಾಕಾಲ ಸಂಪತ್ತು ಮತ್ತು ಅನ್ನಕ್ಕೆ ಕೊರತೆ ಬಾರದು.