ಮಹಾಶಿವರಾತ್ರಿ ವ್ರತ: ಉಪವಾಸ, ಜಾಗರಣೆಯ ಮೂಲಕ ಶಿವಕೃಪೆ ಪಡೆಯುವ ಪರ್ವ ಕಾಲ
Maha Shivaratri: ಮಹಾಶಿವರಾತ್ರಿ ಅಂಧಕಾರದಿಂದ ಬೆಳಕಿನೆಡೆಗೆ ಸಾಗುವ ಆಧ್ಯಾತ್ಮಿಕ ಪರ್ವ. ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲ್ಪಡುವ ಈ ಹಬ್ಬವು ಉಪವಾಸ, ಜಾಗರಣೆ ಮತ್ತು ಶಿವಪೂಜೆಯ ಮೂಲಕ ಮನಸ್ಸಿನ ಶುದ್ಧೀಕರಣಕ್ಕೆ ದಾರಿ ತೋರಿಸುತ್ತದೆ. ಶಿವ–ಪಾರ್ವತಿ ವಿವಾಹ ಹಾಗೂ ಹಾಲಾಹಲ ವಿಷಪಾನದ ಪೌರಾಣಿಕ ಹಿನ್ನೆಲೆಯೊಂದಿಗೆ, ಭಕ್ತರು ನಾಲ್ಕು ಯಾಮಗಳ ಪೂಜೆಯಲ್ಲಿ ಭಾಗವಹಿಸಿ ಶಿವನ ಕೃಪೆ ಪಡೆಯುತ್ತಾರೆ.
ಶಿವರಾತ್ರಿ ಉಪವಾಸ -
ಬೆಂಗಳೂರು, ಫೆ. 15: ಭಾರತೀಯ ಸಂಸ್ಕೃತಿಯಲ್ಲಿ(Hindu Traditions) ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲಿಯೂ ಶಿವಭಕ್ತರಿಗೆ ಅತ್ಯಂತ ಪ್ರಿಯವಾದ ಮತ್ತು ಶ್ರದ್ಧಾ-ಭಕ್ತಿಯಿಂದ ಆಚರಿಸುವ ಹಬ್ಬವೆಂದರೆ ಅದು ಮಹಾಶಿವರಾತ್ರಿ (Shivarathri). ಪಂಚಾಂಗದ ಪ್ರಕಾರ ಪ್ರತಿ ತಿಂಗಳೂ ಬರುವ ಕೃಷ್ಣ ಪಕ್ಷದ ಚತುರ್ದಶಿಯನ್ನು 'ಮಾಸ ಶಿವರಾತ್ರಿ' ಎನ್ನಲಾಗುತ್ತದೆ. ಆದರೆ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸುವ ಶಿವರಾತ್ರಿಯನ್ನು 'ಮಹಾ ಶಿವರಾತ್ರಿ' ಎಂದು ಕರೆಯಲಾಗುತ್ತದೆ. ಇದು ಕೇವಲ ಧಾರ್ಮಿಕ ಆಚರಣೆಯಲ್ಲ, ಪ್ರಕೃತಿಯಲ್ಲಿನ ಬದಲಾವಣೆಯ ಸಂಕೇತವೂ ಹೌದು.
ಪೌರಾಣಿಕ ಹಿನ್ನೆಲೆ ಮತ್ತು ಮಹತ್ವ
ಮಹಾಶಿವರಾತ್ರಿಯ ಹಿಂದೆ ಅನೇಕ ರೋಚಕ ಪೌರಾಣಿಕ ಕಥೆಗಳಿವೆ. ಪ್ರಮುಖವಾಗಿ ಈ ದಿನದಂದು ಬ್ರಹ್ಮಾಂಡದ ಶಕ್ತಿಗಳಾದ ಶಿವ ಮತ್ತು ಪಾರ್ವತಿಯರ ವಿವಾಹ ಮಹೋತ್ಸವ ನಡೆಯಿತು ಎಂಬ ನಂಬಿಕೆಯಿದೆ. ಮತ್ತೊಂದೆಡೆ, ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ ಭೀಕರ 'ಹಾಲಾಹಲ' ವಿಷವನ್ನು ಸೇವಿಸಿ, ಜಗತ್ತನ್ನು ವಿನಾಶದಿಂದ ರಕ್ಷಿಸಿದ ಮಹಾದೇವನ ತ್ಯಾಗದ ಸ್ಮರಣೆಯೇ ಈ ಹಬ್ಬ ಎಂದು ಹೇಳಲಾಗುತ್ತದೆ. ಈ ವಿಷವನ್ನು ಶಿವನು ತನ್ನ ಗಂಟಲಲ್ಲೇ ಉಳಿಸಿಕೊಂಡಿದ್ದರಿಂದ ಆತನ ಕಂಠವು ನೀಲಿಯಾಯಿತು, ಹೀಗಾಗಿ ಆತನನ್ನು 'ನೀಲಕಂಠ' ಎಂದು ಕರೆಯಲಾಗುತ್ತದೆ.
ಮಹಾದೇವನ ಜನನದ ಹಿಂದೆ ಇರುವ ಪೌರಾಣಿಕ ಹಿನ್ನೆಲೆ ಏನು?
ಆಚರಣೆಯ ವಿಧಿವಿಧಾನಗಳು
ಈ ಪವಿತ್ರ ದಿನದಂದು ಭಕ್ತರು ಸೂರ್ಯೋದಯಕ್ಕೂ ಮುನ್ನ ಎದ್ದು ಪವಿತ್ರ ಸ್ನಾನ ಮಾಡಿ, ಉಪವಾಸ ಮತ್ತು ಜಾಗರಣೆಯ ಸಂಕಲ್ಪ ಮಾಡುತ್ತಾರೆ. ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ, ಬಿಲ್ವಪತ್ರೆ, ಶ್ರೀಗಂಧ ಮತ್ತು ಧೂಪ-ದೀಪಗಳ ಅರ್ಪಣೆ ಮಾಡಲಾಗುತ್ತದೆ.
ಶಿವರಾತ್ರಿಯಂದು ಪೂರ್ಣ ಪ್ರಮಾಣದ ಉಪವಾಸ ಮಾಡುವುದು ವಾಡಿಕೆ. ಅಸಕ್ತರು ಹಣ್ಣು-ಹಂಪಲು ಮತ್ತು ಸಾತ್ವಿಕ ಆಹಾರವನ್ನು ಸೇವಿಸಬಹುದು. ಆದರೆ ಅಕ್ಕಿ, ಗೋಧಿ, ಬೇಳೆಕಾಳುಗಳು ಹಾಗೂ ಈರುಳ್ಳಿ-ಬೆಳ್ಳುಳ್ಳಿಯಂತಹ ತಾಮಸಿಕ ಆಹಾರಗಳನ್ನು ತ್ಯಜಿಸುವುದು ಕಡ್ಡಾಯ.
ಯಾಮ ಪೂಜೆಯ ವಿಶೇಷತೆ
ಶಿವರಾತ್ರಿಯ ನಿಜವಾದ ಸೌಂದರ್ಯ ಅಡಗಿರುವುದು ರಾತ್ರಿಯ ಪೂಜೆಯಲ್ಲಿ. ಇದನ್ನು ನಾಲ್ಕು ಯಾಮಗಳಾಗಿ ವಿಂಗಡಿಸಲಾಗಿದೆ:
* ಮೊದಲ ಯಾಮ: ಸಂಜೆ 6 ರಿಂದ 9 ಗಂಟೆ (ರುದ್ರ ಪಠಣದ ಆರಂಭ).
* ಎರಡನೇ ಯಾಮ: ರಾತ್ರಿ 9 ರಿಂದ 12 ಗಂಟೆ.
* ಮೂರನೇ ಯಾಮ: ಮಧ್ಯರಾತ್ರಿ 12 ರಿಂದ 3 ಗಂಟೆ.
* ನಾಲ್ಕನೇ ಯಾಮ: ಮುಂಜಾನೆ 3 ರಿಂದ 6 ಗಂಟೆ ವರೆಗೆ.
ಪ್ರತಿ ಯಾಮದಲ್ಲೂ ರುದ್ರ ಪಠಣವು ದ್ವಿಗುಣಗೊಳ್ಳುತ್ತಾ ಸಾಗುತ್ತದೆ. ಸತತ 14 ವರ್ಷಗಳ ಕಾಲ ನಿಯಮಬದ್ಧವಾಗಿ ಈ ವ್ರತವನ್ನು ಆಚರಿಸಿದರೆ ಸಕಲ ಸಿದ್ಧಿಗಳು ಲಭಿಸುತ್ತವೆ ಎಂಬುದು ಭಕ್ತರ ದೃಢ ನಂಬಿಕೆ.
ಈ ಶುಭದಿನದಂದು ದಕ್ಷಿಣದ ರಾಮೇಶ್ವರಂನಿಂದ ಉತ್ತರದ ಕಾಶ್ಮೀರದವರೆಗೆ ದೇಶದ ಮೂಲೆ ಮೂಲೆಯಲ್ಲೂ ಶಿವನಾಮ ಸ್ಮರಣೆ ಮೊಳಗುತ್ತದೆ. ಇದು ಕೇವಲ ಹಬ್ಬವಲ್ಲ, ಮನುಷ್ಯನ ಅಹಂಕಾರವನ್ನು ಅಳಿಸಿ, ಮನಸ್ಸನ್ನು ಶಿವಮಯವಾಗಿಸುವ ದಿವ್ಯ ಸಾಧನೆ. 24 ಗಂಟೆಗಳ ಕಾಲ ಭಕ್ತಿಯಲ್ಲಿ ಮಿಂದೇಳುವ ಭಕ್ತರು ಮಾರನೆಯ ದಿನ ಪಾರಣೆ ಮಾಡುವ ಮೂಲಕ ವ್ರತವನ್ನು ಮುಕ್ತಾಯಗೊಳಿಸುತ್ತಾರೆ.