ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

5 ವರ್ಷದ ಮೊಮ್ಮಗಳ ಕೈ ಕಾಲು ಕಟ್ಟಿ ಕಟ್ಟಿಹಾಕಿ ಬಿಸಿಲಿನಲ್ಲಿ ನಿಲ್ಲಿಸಿದ ಮಹಿಳಾ ಎಎಸ್‌ಐ

ಪಂಜಾಬ್‌ನ ಫರಿದ್‌ಕೋಟ್‌ನಲ್ಲಿ ನಡೆದ ಅಮಾನವೀಯ ಘಟನೆಯೊಂದು ದೇಶಾದ್ಯಂತ ಆಕ್ರೋಶ ಹುಟ್ಟುಹಾಕಿದೆ. ಎಎಸ್‌ಐ ಸರಬ್‌ಜಿತ್ ಕೌರ್ ತನ್ನ 5 ವರ್ಷದ ಮೊಮ್ಮಗಳನ್ನು ಬಿಸಿಲಿನಲ್ಲಿ ಗೇಟ್‌ಗೆ ಕಟ್ಟಿಹಾಕಿದ ವಿಡಿಯೋ ವೈರಲ್ ಆಗಿದೆ. ಮಗುವಿನ ಅಳುವಿನ ಶಬ್ದ ಕೇಳಿದ ನೆರೆಹೊರೆಯವರು ಆಕೆಯನ್ನು ರಕ್ಷಿಸಿದ್ದಾರೆ. ಈ ಮಗುವಿನ ಪೋಷಕರು ವಿದೇಶದಲ್ಲಿದ್ದಾರೆ. ಸದ್ಯ ಎಎಸ್‌ಐಯನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ.

5 ವರ್ಷದ ಮೊಮ್ಮಗಳನ್ನು ಬಿಸಿಲಿನಲ್ಲಿ ಕಟ್ಟಿಹಾಕಿದ ಮಹಿಳಾ ಎಎಸ್‌ಐ

ಹಲ್ಲೆಗೊಳಗಾದ ಮಗು -

Profile
Sushmitha Jain Apr 16, 2026 7:03 PM

ಚಂಡೀಗಢ, ಏ. 16: ಪಂಜಾಬ್‌ನ ಫರಿದ್‌ಕೋಟ್ (Faridkot) ಜಿಲ್ಲೆಯಲ್ಲಿ ಮಾನವೀಯತೆಯನ್ನೇ ನಾಚಿಸುವಂತಹ ಘಟನೆಯೊಂದು ನಡೆದಿದೆ. ಮಹಿಳಾ ಅಸಿಸ್ಟೆಂಟ್ ಸಬ್-ಇನ್ಸ್‌ಕ್ಟರ್ (ASI) ಸರಬ್‌ಜಿತ್ ಕೌರ್ (Sarabjit Kaur) ತನ್ನ ಐದು ವರ್ಷದ ಮೊಮ್ಮಗಳನ್ನು ಗೇಟ್‌ಗೆ ಕಟ್ಟಿಹಾಕಿ ಸುಡುವ ಬಿಸಿಲಿನಲ್ಲಿ ಬಿಟ್ಟ ಘಟನೆ ಬೆಳಕಿಗೆ ಬಂದಿದೆ. ಸದ್ಯ ಸರಬ್‌ಜಿತ್ ಕೌರ್‌ನನ್ನು ಅಮಾನತುಗೊಳಿಸಲಾಗಿದೆ. ಬುಧವಾರ ಈ ಆಘಾತಕಾರಿ ವಿಷಯವು ಸಾರ್ವಜನಿಕವಾಗಿ ಹೊರಬಿದ್ದಿದ್ದು, ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತಂದಿದೆ.

ಬಾಲಕಿಯ ಕೈಕಾಲುಗಳನ್ನು ಬಟ್ಟೆಯಿಂದ ಮನೆಯ ಕಬ್ಬಿಣದ ಗೇಟ್‌ಗೆ ಬಿಗಿಯಾಗಿ ಕಟ್ಟಿಹಾಕಲಾಗಿದ್ದು, ಆಕೆ ತೀವ್ರವಾದ ಬಿಸಿಲಿನಲ್ಲಿ ಅಸಹಾಯಕಳಾಗಿ ಚೀರಾಡುತ್ತಾ ಅಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಗುವಿನ ದಯನೀಯವಾದ ಚೀರಾಟ ಮತ್ತು ಅಳುವ ಶಬ್ದವನ್ನು ಕೇಳಿದ ನೆರೆಹೊರೆಯವರು ಕೂಡಲೇ ಸ್ಥಳಕ್ಕೆ ಧಾವಿಸಿ ಬಂಧನದಿಂದ ಮುಕ್ತಗೊಳಿಸಿ ರಕ್ಷಿಸಿದ್ದಾರೆ. ಕ್ರೌರ್ಯದ ದೃಶ್ಯವನ್ನು ಸ್ಥಳೀಯ ನಿವಾಸಿಗಳು ತಮ್ಮ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದು, ಈ ವಿಡಿಯೊ ಸಾಕ್ಷ್ಯವು ಆರೋಪಿ ಅಜ್ಜಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಮುಖ ಕಾರಣವಾಯಿತು.

ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್‌ ಅಧಿಕಾರಿ:



ಘಟನೆಯ ಹಿನ್ನೆಲೆ ಮತ್ತು ಪೊಲೀಸ್ ಕ್ರಮ

ಬಾಲಕಿಯ ಪೋಷಕರು ಪ್ರಸ್ತುತ ಪೋರ್ಚುಗಲ್‌ನಲ್ಲಿ ಉದ್ಯೋಗದ ನಿಮಿತ್ತ ವಾಸವಾಗಿದ್ದು, ಮಗುವಿನ ಭವಿಷ್ಯ ಮತ್ತು ಆರೈಕೆಯ ದೃಷ್ಟಿಯಿಂದ ಅಜ್ಜಿ ಸರಬ್‌ಜಿತ್ ಕೌರ್ ಬಳಿ ಬಿಟ್ಟಿದ್ದರು. ವಿಶೇಷವೆಂದರೆ, ಅಜ್ಜಿ ಸರಬ್‌ಜಿತ್ ಕೌರ್ ಫರಿದ್‌ಕೋಟ್ ಜಿಲ್ಲೆಯಲ್ಲಿ 'ಮಹಿಳಾ ಮಿತ್ರ' (ಮಹಿಳಾ ಸಹಾಯವಾಣಿ) ವಿಭಾಗದಲ್ಲಿ ಎಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಂದರೆ ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ವಿಭಾಗದಲ್ಲಿ ಅಧಿಕಾರಿಯಾಗಿದ್ದುಕೊಂಡೇ ಅವರು ತಮ್ಮ ಸ್ವಂತ ಮೊಮ್ಮಗಳ ಮೇಲೆ ಇಂತಹ ಅಮಾನವೀಯ ಮತ್ತು ಕ್ರೂರ ವರ್ತನೆ ತೋರಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಂದೇ ಮಾತರಂ ಹಾಡಲು ನಿರಾಕರಿಸಿದ ಇಂದೋರ್‌ನ ಇಬ್ಬರು ಮುಸ್ಲಿಂ ಕಾರ್ಪೊರೇಟರ್‌ಗಳು

ಫರಿದ್‌ಕೋಟ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಪ್ರಜ್ಞಾ ಜೈನ್ ವೈರಲ್ ವಿಡಿಯೊವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಎಎಸ್‌ಐ ಸರಬ್‌ಜಿತ್ ಕೌರ್ ಅವರನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಡಿಎಸ್‌ಪಿ ತರ್ಲೋಚನ್ ಸಿಂಗ್ ಮಾಧ್ಯಮಗಳೊಂದಿಗೆ ಮಾತನಾಡಿ, "ಸಮಾಜಕ್ಕೆ ಶಿಸ್ತು ಮತ್ತು ರಕ್ಷಣೆ ನೀಡಬೇಕಾದ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಸಣ್ಣ ಮಗುವನ್ನು ಈ ರೀತಿ ಸುಡುವ ಬಿಸಿಲಿನಲ್ಲಿ ಕಟ್ಟಿಹಾಕಿ ಶಿಕ್ಷಿಸಿರುವುದು ಅತ್ಯಂತ ಖಂಡನೀಯ ಮತ್ತು ಕಾನೂನುಬಾಹಿರ ಕೃತ್ಯ" ಎಂದು ತಿಳಿಸಿದ್ದಾರೆ.

ಸದ್ಯ ಈ ಪ್ರಕರಣವನ್ನು ತನಿಖೆಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ (CWC) ಹಸ್ತಾಂತರಿಸಲಾಗಿದ್ದು, ಬಾಲಕಿಯ ಸುರಕ್ಷತೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಘಟನೆಯು ಪಾಲಕರಿಲ್ಲದ ಸಮಯದಲ್ಲಿ ಮಕ್ಕಳ ಮೇಲಾಗುವ ದೌರ್ಜನ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ.